ಬೆಂಗಳೂರು: ಈ ವರ್ಷದ ಮೊದಲ ಸೂರ್ಯಗ್ರಹಣ (Solar Eclipse 2024) ಏಪ್ರಿಲ್ 8ರಂದು ಸೋಮವಾರ ನಡೆಯಲಿದೆ. ಆದರೆ ಇದು ಭಾರತದಲ್ಲಿ (india) ಗೋಚರವಾಗುವುದಿಲ್ಲ. ನಾಸಾ (NASA) ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಸೂರ್ಯಗ್ರಹಣವು ಉತ್ತರ ಅಮೆರಿಕ (north america) ಖಂಡದಾದ್ಯಂತ ಕಾಣಿಸುತ್ತದೆ. ಮೆಕ್ಸಿಕೋ (Mexico), ಯುನೈಟೆಡ್ ಸ್ಟೇಟ್ಸ್ (United States) ಮತ್ತು ಕೆನಡಾದಲ್ಲಿ (Canada) ಸ್ಥಳೀಯ ಕಾಲಮಾನ ಬೆಳಗ್ಗೆ 11.07ರ ಸುಮಾರಿಗೆ ಸೂರ್ಯಗ್ರಹಣ ಪ್ರಾರಂಭವಾಗಲಿದೆ. ಪೆಸಿಫಿಕ್ ಕರಾವಳಿಯ ಪ್ರದೇಶದ ಮೆಕ್ಸಿಕೋದಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಲಿದೆ.
ಚಂದ್ರನ ನೆರಳು ಪೂರ್ತಿಯಾಗಿ ಸೂರ್ಯನ ಮೇಲೆ ಬಿದ್ದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಇದರ ಪರಿಣಾಮವಾಗಿ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದನ್ನು ತಡೆಯುತ್ತದೆ. ಚಂದ್ರನ ನೆರಳು ಭೂಮಿಯ ಮೇಲ್ಮೈಯಲ್ಲಿ ವೇಗವಾಗಿ ಚಲಿಸುವಾಗ ಸೂರ್ಯಗ್ರಹಣ ಗೋಚರವಾಗುತ್ತದೆ. ಸೂರ್ಯನ ಹೊರ ಪದರ ಚಂದ್ರನ ಮೇಲೆ ಸುತ್ತುವರಿದು ಸುಂದರವಾದ ಪ್ರಭಾವಲಯದಂತೆ ಹೊಳೆಯುತ್ತದೆ. ಇದು ನಿರ್ದಿಷ್ಟ ಅವಧಿಯವರೆಗೆ ಮಾತ್ರ ಸಂಭವಿಸುತ್ತದೆ.
ಭಾರತದಲ್ಲಿ ಗೋಚರಿಸುವುದಿಲ್ಲ
ಈ ಬಾರಿ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗುವುದಿಲ್ಲ. ಯಾಕೆಂದರೆ ಸೂರ್ಯಗ್ರಹಣ ಸಂಭವಿಸಿದಾಗ ಭಾರತದಲ್ಲಿ ಮಧ್ಯರಾತ್ರಿಯಾಗಿರುತ್ತದೆ.
ಇದನ್ನೂ ಓದಿ: Ugadi 2024: ವೀಕೆಂಡ್‌ನಲ್ಲಿ ಶುರುವಾದ ಯುಗಾದಿ ಶಾಪಿಂಗ್; ದುಬಾರಿ ಬೆಲೆಯಲ್ಲೂ ಜೋರಾದ ಖರೀದಿ
ಎಲ್ಲಿ ಕಾಣಿಸುತ್ತದೆ?
ಸೂರ್ಯ ಗ್ರಹಣವು ಈ ಬಾರಿ ಉತ್ತರ ಅಮೆರಿಕ ಖಂಡದಾದ್ಯಂತ ಕಾಣಿಸುತ್ತದೆ. ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಕಾಣಿಸುತ್ತದೆ. ಟೆಕ್ಸಾಸ್, ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವರ್ಮೊಂಟ್, ನ್ಯೂ ಹ್ಯಾಂಪ್‌ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದು.
ಹೇಗೆ ನೋಡಬೇಕು?:
ಸೂರ್ಯಗ್ರಹಣವನ್ನು ನೇರವಾಗಿ ನೋಡಬಾರದು. ಇದರಿಂದ ಶಾಶ್ವತ ಕಣ್ಣಿನ ಹಾನಿ ಅಥವಾ ಕುರುಡುತನಕ್ಕೆ ಕಾರಣವಾಗಬಹುದು. ಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಸೌರ ವೀಕ್ಷಣಾ ಕನ್ನಡಕ ಅಥವಾ ಸೋಲಾರ್ ಫಿಲ್ಟರ್ ಗಳನ್ನು ಬಳಸಬೇಕು.
ಕೆಮರಾ, ದೂರದರ್ಶಕ ಮತ್ತು ಸ್ಮಾರ್ಟ್‌ಫೋನ್‌ಗಳು ಗ್ರಹಣ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ. ಆದರೂ ಈ ಸಂದರ್ಭದಲ್ಲಿ ಕಣ್ಣುಗಳಿಗೆ ನೇರವಾಗಿ ಸೂರ್ಯನ ಕಿರಣ ಬೀಳುವ ಸಾಧ್ಯತೆ ಇದೆ. ಹೀಗಾಗಿ ಇದರಲ್ಲಿ ಸೂರ್ಯಗ್ರಹಣ ನೋಡದೇ ಇರುವುದು ಉತ್ತಮ.
ಕಳೆದ ವರ್ಷವೂ ಸಂಭವಿಸಿತ್ತು
2023ರ ಅಕ್ಟೋಬರ್‌ನಲ್ಲಿ ಭಾರತ ಹೊರತುಪಡಿಸಿ ಜಗತ್ತಿನ ಹಲವೆಡೆ ಸೂರ್ಯಗ್ರಹಣ ಗೋಚರವಾಗಿತ್ತು. ಆಗಸದಲ್ಲಿ ಸೂರ್ಯನು ಮಿನುಗುವ ಅನೇಕ ಫೋಟೊಗಳು ಲಭ್ಯವಾಗಿತ್ತು. ಸೂರ್ಯನು ಕೆಂಪು ಆಕಾರ ತಳೆದಿರುವ, ಅರ್ಧ ಚಂದ್ರದ ರೀತಿ ಗೋಚರವಾಗಿತ್ತು.
ಟೆಕ್ಸಾಸ್‌ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾದಲ್ಲಿ ಗೋಚರಿಸಿತ್ತು. ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲೂ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಿತ್ತು. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಿದೆ. ಭಾರತದಲ್ಲಿ ಇದರ ಪರಿಣಾಮ ಇರುವುದಿಲ್ಲ.