-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಹಬ್ಬಕ್ಕೆ ವರಮಹಾಲಕ್ಷ್ಮಿ (Varamahalaxmi Decoration) ದೇವಿಯನ್ನು ಆಕರ್ಷಕವಾಗಿ ಅಲಂಕರಿಸುವ ಪುಟ್ಟ ಪುಟ್ಟ ವಸ್ತ್ರಾಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ವರಮಹಾಲಕ್ಷ್ಮಿಯ ಸಿಂಗಾರಕ್ಕೆ ವಸ್ತ್ರಾಭರಣ
ವರಮಹಾಲಕ್ಷ್ಮಿ ದೇವಿಯನ್ನು ಸಿಂಗಾರಗೊಳಿಸುವಂತಹ ಬಣ್ಣ ಬಣ್ಣದ ರೇಷ್ಟೇ ಹಾಗೂ ಬ್ರೋಕೆಡ್‌ನ ಪುಟ್ಟ ಸೀರೆ, ಮಿನಿ ದಾವಣಿ ಹಾಗೂ ಲೆಹೆಂಗಾದಂತಹ ಗ್ರ್ಯಾಂಡ್ ಡಿಸೈನರ್‌ವೇರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವರವರ ಮನೆಯ ಡೆಕೋರೇಷನ್ ಥೀಮ್‌ಗೆ ತಕ್ಕಂತೆ ದೇವಿ ಲಕ್ಷ್ಮಿಯನ್ನು ಸುಂದರವಾಗಿ ಬಿಂಬಿಸಬಲ್ಲ, ಈ ದೇವಿ ವಸ್ತ್ರಗಳು, ಸಾಕಷ್ಟು ಶೇಡ್‌ಗಳಲ್ಲಿ ಹಾಗೂ ಡಿಸೈನ್‌ನಲ್ಲಿ ಸಿಗುತ್ತಿವೆ.
ವರಮಹಾಲಕ್ಷ್ಮಿಗೆ ಮಿನಿ ಆಭರಣಗಳು
ಇವುಗಳೊಂದಿಗೆ ಟ್ರೆಡಿಷನಲ್ ಲುಕ್ ನೀಡುವ ಕೇಶಾಲಂಕಾರದ ಪುಟ್ಟ ಜಡೆ, ಕುಚ್ಚು, ಜಡೆ ನಾಗರ, ಕತ್ತಿಗೆ ಪುಟ್ಟ ತಾಳಿ, ಕಾಸಿನ ಸರ, ಹರಳಿನ ಲೇಯರ್ ಹಾರ, ನೆಕ್ಲೇಸ್, ಮೂಗುತಿ, ಕಿವಿಯೊಲೆ, ಕಿವಿ ಸರಪಳಿ, ಡಾಬು, ಕಿರೀಟ ಸೇರಿದಂತೆ ಎಲ್ಲವೂ ಮಿನಿ ಸೈಝಿನಲ್ಲಿ, ಡಿಸೈನ್‌ಗಳಲ್ಲಿ ಬಂದಿವೆ.
ಹೆಚ್ಚಿದ ಮಾರಾಟ
ಪೂಜಿಸುವ ಬಿಂದಿಗೆಗೆ ಉಡಿಸುವ ಸೀರೆಗಳು, ದೇವಿಯ ಬೊಂಬೆಗೆ ಉಡಿಸುವ ಸೀರೆಗಳು ಅತಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಇನ್ನು, ದೇವಿಯ ತೋಳಿಗೆ ಸಿಕ್ಕಿಸುವ ಹರಳಿನ ಅಸ್ತ್ರಗಳು, ಮಾತಾಪಟ್ಟಿ, ಕಿರೀಟದ ಹಿಂದಿನ ಚಕ್ರ, ಮೊಗ್ಗಿನ ಜಡೆ, ರೆಡಿಮೇಡ್ ಹರಳಿನ ತುರುಬು, ಸೊಂಟದ ಪಟ್ಟಿ, ಕಾಲ್ಗೆಜ್ಜೆ ಎಲ್ಲವೂ ನಾನಾ ಕಲರ್‌ಗಳಲ್ಲಿ ಹಾಗೂ ಡಿಸೈನ್‌ಗಳಲ್ಲಿ ಬಂದಿದ್ದು, ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಗಾಂಧಿ ಬಜಾರ್ ಶಾಪ್‌ವೊಂದರ ಮಾರಾಟಗಾರರು.
ವೆರೈಟಿ ಅಲಂಕಾರಿಕ ವಸ್ತ್ರಾಭರಣಗಳು
ಆಯಾ ಮನೆಯಲ್ಲಿ ಕೂರಿಸುವ ಅಥವಾ ಪ್ರತಿಷ್ಠಾಪಿಸುವ ವರಮಹಾಲಕ್ಷ್ಮಿಯ ಆಕಾರಕ್ಕೆ ತಕ್ಕಂತೆಯೂ ಈ ವಸ್ತ್ರಾಭರಣಗಳು ದೊರಕುತ್ತಿವೆ. ಉದಾಹರಣೆಗೆ., ಪುಟ್ಟ ಚೊಂಬನ್ನು ದೇವಿಯಂತೆ ಕೂರಿಸಿ, ಆರಾಧಿಸುವವರಿಗೆಂದೇ ಚಿಕ್ಕ ಸೈಜಿನ ವಸ್ತ್ರಗಳು ದೊರೆಯುತ್ತಿವೆ. ಅವುಗಳಲ್ಲಿ ರೇಷ್ಮೆ, ಕಾಟನ್, ಬಾರ್ಡರ್‌ನವು, ಬ್ರೋಕೆಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. 100 ರೂ.ಗಳಿಂದಿಡಿದು 1000 ಸಾವಿರ ರೂ. ಗಳವರೆಗೂ ಅವುಗಳಿಗೆ ಬೆಲೆ ನಿಗಧಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.
- ಪೂಜಿಸುವ ದೇವಿಯ ಸೈಝಿಗೆ ತಕ್ಕಂತಹ ಮಿನಿ ಡಿಸೈನರ್ವೇರ್ ಕೊಳ್ಳಿ.
- ವಸ್ತ್ರಾಭರಣಗಳನ್ನು ಬಳಸುವಾಗ ತೆಗೆದು ನಂತರ ಹಾಗೆಯೇ ಇಟ್ಟು ಪ್ಯಾಕಿಂಗ್ ಮಾಡಿ. ವರ್ಷಗಟ್ಟಲೇ ಬಣ್ಣ ಮಾಸುವುದಿಲ್ಲ.
- ಹೆಚ್ಚಿನ ಬಿಲ್ಗೆ ಉಚಿತ ಹೋಮ್ ಡಿಲಿವೆರಿ ಸೌಲಭ್ಯ ನೀಡುವುದನ್ನು, ಬಳಸಿಕೊಳ್ಳಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್; ಶುರುವಾಗಿದೆ ಶಾಪಿಂಗ್ ಭರಾಟೆ