Site icon Vistara News

Amir Sarfaraz: ಪಾಕ್‌ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ವ್ಯಕ್ತಿ ಅಪರಿಚಿತರಿಂದ ಖತಂ!

Amir Sarfaraz

Amir Sarfaraz

ಲಾಹೋರ್: ಪ್ರಮುಖ ಬೆಳವಣಿಗೆಯೊಂದರಲ್ಲಿ, ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ (Sarabjit Singh) ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ (Amir Sarfaraz) ಅಲಿಯಾಸ್ ತಾಂಬಾ (Tamba) ಎಂಬಾತನನ್ನು ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಭಾನುವಾರ (ಏಪ್ರಿಲ್‌ 14) ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಭಾರತ ವಿರೋಧಿಗಳು ಹೀಗೆ ಅಪರಿಚಿತರಿಂದ ಹತ್ಯೆಯಾಗುತ್ತಿರುವ ಮತ್ತೊಂದು ಪ್ರಕರಣ ಇದಾಗಿದೆ.

ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿದ್ದ (Kot Lakhpat Jail) ಸರಬ್ಜಿತ್ ಸಿಂಗ್ ಅವರ ಮೇಲೆ ಇಟ್ಟಿಗೆ, ಚೂಪಾದ ಲೋಹದ ಹಾಳೆಗಳು, ಕಬ್ಬಿಣದ ರಾಡ್‌ ಮತ್ತು ಬ್ಲೇಡ್‌ನಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು 2013ರ ಮೇ 2ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ದಾಳಿಯ ಹಿಂದೆ ಅಮೀರ್ ಸರ್ಫರಾಜ್ ಕೈವಾಡವಿದೆ ಎಂದು ಹೇಳಲಾಗಿದೆ. ಇದೀಗ ಆತನನ್ನು ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆ ಮಾಡಿರುವುದು ಅನುಮಾನ ಮೂಡಿಸಿದೆ.

ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಸರ್ಫರಾಜ್ ನನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ.

ಗುಪ್ತಚರ ಆರೋಪದ ಮೇಲೆ ಬಂಧಿಯಾಗಿದ್ದ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಈ ಹಿಂದೆ ಭಾರತ ಧ್ವನಿ ಎತ್ತಿದ್ದರೂ ಪಾಕಿಸ್ತಾನ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದೀಗ ಸುಮಾರು 11 ವರ್ಷಗಳ ಬಳಿಕ ಅಂಡರ್‌ವರ್ಲ್ಡ್ ಡಾನ್ ಅಮೀರ್ ಸರ್ಫರಾಜ್‌ನನ್ನು ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆ ಮಾಡಿರುವುದು ಕುತೂಹಲ ಮೂಡಿಸಿದೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂದು ಅಮೀರ್ ಸರ್ಫರಾಜ್ ಐಎಸ್‌ಐ ಸೂಚನೆಯ ಮೇರೆಗೆ ಸರಬ್ಜಿತ್ ಸಿಂಗ್ ಅವರನ್ನು ಕೊಲೆ ಮಾಡಿದ್ದ ಎನ್ನಲಾಗಿದೆ.

ಸರಬ್ಜಿತ್ ಸಿಂಗ್ ಮೇಲಿದ್ದ ಆರೋಪವೇನು?

ಭಾರತ ಮೂಲದ ಸರಬ್ಜಿತ್‌ ಸಿಂಗ್‌ ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ್ದ ಎನ್ನುವ ಆರೋಪದ ಮೇಲೆ ಪಾಕ್‌ ಸೇನೆ ಅವರನ್ನು ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ 1990ರಲ್ಲಿ ಪಾಕಿಸ್ತಾನದ ಪಂಜಾಬ್‌ನಲ್ಲಿ ನಡೆದ ಹಲವು ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಎನ್ನುವ ಆರೋಪದ ಮೇಲೆ ಮರಣ ದಂಡನೆ ವಿಧಿಸಲಾಗಿತ್ತು. ಸರಬ್ಜಿತ್‌ 1964ರಲ್ಲಿ ಭಾರತದ ಪಂಜಾಬ್‌ನ ಭಿಖಿವಿಂಡ್‌ನಲ್ಲಿ ಜನಿಸಿದ್ದರು.

ಪಾಕಿಸ್ತಾನಕ್ಕೆ ತೆರಳಿದ್ದೇಕೆ?

ರೈತನಾಗಿದ್ದ ಸರಬ್ಜಿತ್‌ ಸಿಂಗ್‌ 1990ರಲ್ಲಿ ಗೊತ್ತಿಲ್ಲದೆ ಗಡಿ ದಾಟಿ ಪಾಕಿಸ್ತಾನ ತಲುಪಿದ್ದರು. ಈ ವೇಳೆ ಪಾಕಿಸ್ತಾನದ ಸೇನೆ ಅವರನ್ನು ಬಂಧಿಸಿ ಭಯೋತ್ಪಾದನೆಯ ಆರೋಪ ಹೊರಿಸಿ ಜೈಲಿಗೆ ಕಳಿಸಿತ್ತು. ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅವರನ್ನು ಲಾಹೋರ್‌ನ ಕೋಟ್‌ ಲಖ್‌ಪತ್‌ ಜೈಲಿನಲ್ಲಿ ಇರಿಸಲಾಗತ್ತು. ಇವರನ್ನು ಕೊಲೆ ಮಾಡಲಾಗಿದ್ದರೂ ಪಾಕಿಸ್ತಾನ ಮಾತ್ರ ಬ್ರೈನ್‌ ಡೆಡ್‌ ಆಗಿ ಸರಬ್ಜಿತ್‌ ಮೃತಪಟ್ಟಿದ್ದಾರೆ ಎಂದೇ ವಾದಿಸಿತ್ತು. ಸರಬ್ಜಿತ್‌ ಸಿಂಗ್‌ ಬಿಡುಗಡೆಗಾಗಿ ಭಾರತ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ.

ಇದನ್ನೂ ಓದಿ: Sarabjit Singh | ರಸ್ತೆ ಅಪಘಾತದಲ್ಲಿ ಸರಬ್ಜಿತ್ ಸಿಂಗ್ ಪತ್ನಿ ಸುಖ್‌ಪ್ರೀತ್ ಕೌರ್ ಸಾವು

Exit mobile version