ಅಮೆರಿಕದ ನ್ಯೂಯಾರ್ಕ್‌ನ ಸಬ್‌ವೇಯಲ್ಲಿ ತಿಕ್ಕಲನೊಬ್ಬ ಯದ್ವಾತದ್ವಾ ಗುಂಡು ಹಾರಿಸಿ ಇಪ್ಪತ್ತಮೂರು ಮಂದಿ ಗಾಯಗೊಳ್ಳಲು ಕಾರಣನಾಗಿದ್ದಾನೆ. ಕಳೆದ ಒಂದು ವಾರದಲ್ಲೇ ಅಮೆರಿಕದಲ್ಲಿ ಬೇರೆ ಬೇರೆ ಕಡೆ ನಡೆದ ಗುಂಡಿನ ದಾಳಿಗಳಲ್ಲಿ ಮೂವರು ಸತ್ತಿದ್ದಾರೆ. ಅಮೆರಿಕದಲ್ಲಿ ಗನ್ ಹಿಂಸೆ ( Gun violence in USA ) ಮಿತಿ ಮೀರಿ ಬೆಳೆದಿದೆ. ಅಕ್ರಮ ಬಂದೂಕುಗಳನ್ನು ನಿಷೇಧಿಸುತ್ತೇವೆ ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ ಮರುದಿನವೇ ನ್ಯೂಯಾರ್ಕ್ ದಾಳಿ ನಡೆದಿದೆ. ಚುನಾವಣೆ ಪ್ರಚಾರದ ವೇಳೆ, ಗನ್ ಬಳಕೆಗೆ ತಡೆ ಹಾಕುವುದಾಗಿ ಬೈಡೆನ್ ಹೇಳಿದ್ದರು. ಅದು ಆಗಿಲ್ಲ.
ಅಮೆರಿಕದಲ್ಲಿ ಗನ್ ದಾಳಿ: 33 ಸುತ್ತು ಗುಂಡು ಹಾರಿಸಿ 23 ಜನರಿಗೆ ಗಂಭೀರ ಗಾಯ
ಎಷ್ಟು ಜನ ಸಾಯುತ್ತಿದ್ದಾರೆ?
2020ರಲ್ಲಿ ಅಮೆರಿಕಾದ್ಯಂತ ಗುಂಡೇಟು ತಿಂದು 45,000 ಮಂದಿ ಸತ್ತಿದ್ದಾರೆ. ಅಂದರೆ ಪ್ರತಿದಿನದ ಸರಾಸರಿ ಸುಮಾರು 123 ಜನ. ಇದರಲ್ಲಿ 24,200 ಆತ್ಮಹತ್ಯೆಗಳು. ಇತರ ರೀತಿಯಲ್ಲಿ ಸತ್ತವರು 19,800. ಇವರಲ್ಲಿ ಸಾಮೂಹಿಕ ಗುಂಡಿನ ದಾಳಿ ಮತ್ತು ಉದ್ದೇಶಿತ ಹತ್ಯೆಗಳು ಸೇರಿವೆ. ಇಲ್ಲಿ ಸಂಭವಿಸುವ ಹತ್ಯೆಗಳಲ್ಲಿ 79%ದಷ್ಟು ಗನ್ ಬಳಸಿಯೇ ಆಗುತ್ತಿವೆ.
ಸಾಮೂಹಿಕ ಗುಂಡಿನ ದಾಳಿಗಳು ಮಾತ್ರ ಸುದ್ದಿಯಾಗುತ್ತವೆ. ಲಾಸ್‌ವೆಗಾಸ್‌ನಲ್ಲಿ 2017ರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 56 ಜನ ಸತ್ತು 500 ಮಂದಿ ಗಾಯಗೊಂಡದ್ದು ಇದುವರೆಗಿನ ಅತಿ ಘೋರ ದುರಂತ.
2020ರಲ್ಲಿ ದೊಡ್ಡ ದೇಶಗಳಲ್ಲಿ ಗುಂಡಿನ ದಾಳಿಯಲ್ಲಿ ಸತ್ತವರ ದಾಖಲೆಗಳು ಹೀಗಿವೆ:
ಅಮೆರಿಕ- 79%
ಕೆನಡಾ- 37%
ಆಸ್ಟ್ರೇಲಿಯಾ- 13%
ಬ್ರಿಟನ್- 4%
ಯಾರಲ್ಲಿ ಎಷ್ಟು ಗನ್ ಇವೆ?
ಈ ಕೆಳಗೆ ತೋರಿಸಿರುವುದು ಯಾವ ದೇಶದಲ್ಲಿ ಪ್ರತಿ 100 ಮಂದಿಗೆ ಸರಾಸರಿ ಎಷ್ಟು ಗನ್‌ಗಳು ಇವೆ ಎಂಬ ಲೆಕ್ಕಾಚಾರ.
ಅಮೆರಿಕ- 120.5
ಯೆಮೆನ್- 52.8
ಸೆರ್ಬಿಯಾ- 39.1
ಮಾಂಟೆನೆಗ್ರೊ- 39.1
ಉರುಗ್ವೆ- 34.7
ಕೆನಡಾ- 34.7
ಫಿನ್‌ಲ್ಯಾಂಡ್- 32.4
ಲೆಬನಾನ್- 31.9
ಐಸ್‌ಲ್ಯಾಂಡ್- 31.7
ಸಿಪ್ರಸ್- 34
ನಿಷೇಧಕ್ಕೆ ಏನು ಸಮಸ್ಯೆ?
ಆಗಾಗ ನಡೆಯುವ ಸಮೀಕ್ಷೆಗಳು, ಅಮೆರಿಕದ ಶೇಕಡ ಅರುವತ್ತಕ್ಕೂ ಅಧಿಕ ಮಂದಿ ಬಂದೂಕು ನಿಯಂತ್ರಣದ ಪರವಾಗಿದ್ದಾರೆ ಎಂದು ತೋರಿಸುತ್ತವೆ. ಹಿಂದಿನ ಅಧ್ಯಕ್ಷ ಟ್ರಂಪ್, ಈಗಿನ ಅಧ್ಯಕ್ಷ ಬೈಡೆನ್ ಕೂಡ ಗನ್ ಬ್ಯಾನ್ ಬಗ್ಗೆ ಮಾತಾಡಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಅವರ ಕೈ ಕಟ್ಟಿ ಹೋಗುತ್ತದೆ.
ಬಂದೂಕು ಲಾಬಿಗಳು ಇದರ ಹಿಂದಿವೆ ಎಂಬುದು ರಹಸ್ಯ ಏನಲ್ಲ. ನ್ಯಾಷನಲ್ ರೈಫಲ್ ಅಸೋಸಿಯೇಷನ್ (ಎನ್‌ಆರ್‌ಎ) ಎಂಬುದು ಅತ್ಯಂತ ಪ್ರಭಾವಿ ಗನ್ ಲಾಬಿ. ದೇಶದ 25 ಸ್ಟೇಟ್‌ಗಳು, ಬಂದೂಕು ಹೊಂದಲು ಯಾವುದೇ ಪರವಾನಗಿ ಬೇಕಿಲ್ಲ ಎಂಬ ಕಾನೂನನ್ನು ಹೊಂದಿವೆ. ಯಾವುದೇ ಬಗೆಯ ಗನ್ ಹೊಂದಲು ಯಾವುದೇ ಪರ್ಮಿಟ್ ಇಲ್ಲಿ ಬೇಕಿಲ್ಲ.
ದಾಳಿಗಳೇಕೆ?
ಇಲ್ಲಿನ ಬಂದೂಕು ಸಂಸ್ಕೃತಿ ಆಗಾಗ ಕಟುವಾಗಿ ಟೀಕೆಗೆ ಒಳಗಾಗುವುದು ಸಾಮೂಹಿಕ ಗುಂಡಿನ ದಾಳಿಗಳಾದಾಗ. ಸಾಮಾನ್ಯವಾಗಿ ಇಂಥ ದಾಳಿಗಳನ್ನು ನಡೆಸುವವರು ಪಾತಕ ಹಿನ್ನೆಲೆಯವರು, ಡ್ರಗ್ ಅಡಿಕ್ಟ್‌ಗಳು, ಅಪರಾಧಿ ಮನೋವಿಕೃತಿ ಹೊಂದಿರುವವರು ಇತ್ಯಾದಿ. ಇಂಥವರಿಗೆ ಗನ್ ಪರ್ಮಿಟ್ ಕೊಡಬಾರದು ಎಂದು ಪ್ರತಿಪಾದಿಸಲಾಗುತ್ತಿದೆ.