Site icon Vistara News

ಭಾರತ ಸೇರಿ ಐದು ದೇಶದ ರಾಯಭಾರಿಗಳ ವಜಾ ಮಾಡಿದ ಉಕ್ರೇನ್‌ ಅಧ್ಯಕ್ಷ

vlodymir zelenskyy

ಕೀವ್:‌ ಯುದ್ಧಗ್ರಸ್ತ ಉಕ್ರೇನ್‌ನ ಅಧ್ಯಕ್ಷ ವ್ಲಾದಿಮಿರ್‌ ಝೆಲೆನ್ಸ್ಕಿ ಅವರು ಭಾರತ ಸೇರಿದಂತೆ 5 ರಾಷ್ಟ್ರಗಳಿಗೆ ತಮ್ಮ ರಾಯಭಾರಿಗಳನ್ನು ವಜಾಗೊಳಿಸಿದ್ದಾರೆ.

ಭಾರತ, ಜರ್ಮನಿ, ಜೆಕ್ ರಿಪಬ್ಲಿಕ್, ನಾರ್ವೆ ಮತ್ತು ಹಂಗೇರಿಗೆ ನೇಮಿಸಲಾದ ಉಕ್ರೇನ್‌ನ ಉನ್ನತ ವಿದೇಶಿ ರಾಯಭಾರಿಗಳನ್ನು ಅಧ್ಯಕ್ಷರು ಶನಿವಾರ ವಜಾಗೊಳಿಸಿದ್ದಾರೆ ಎಂದು ಅಧ್ಯಕ್ಷರ ವೆಬ್‌ಸೈಟ್‌ ತಿಳಿಸಿದೆ. ಈ ಕ್ರಮಕ್ಕೆ ಯಾವುದೇ ಕಾರಣವನ್ನು ಅಧ್ಯಕ್ಷರು ನೀಡಿಲ್ಲ. ರಾಯಭಾರಿಗಳಿಗೆ ಬೇರೆ ಹೊಣೆ ವಹಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಫೆಬ್ರವರಿ 24ರಿಂದ ಉಕ್ರೇನ್‌ ಮೇಲೆ ರಷ್ಯಾ ಆರಂಭಿಸಿರುವ ಸೇನಾ ಆಕ್ರಮಣವನ್ನು ಹಿಮ್ಮೆಟ್ಟಿಸಲು ಉಕ್ರೇನ್‌ ಪ್ರಯತ್ನಿಸುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಕೋರಿತ್ತು. ಅಂತಾರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ಸಹಾಯವನ್ನು ಪಡೆಯಲು ಝೆಲೆನ್ಸ್ಕಿ ತಮ್ಮ ರಾಜತಾಂತ್ರಿಕರನ್ನು ಒತ್ತಾಯಿಸಿದ್ದಾರೆ.

ಭಾರತ ಈ ವಿಷಯದಲ್ಲಿ ಅಲಿಪ್ತ ನೀತಿಯನ್ನು ಹೊಂದಿದೆ. ಜರ್ಮನಿಯು ರಷ್ಯಾದ ಇಂಧನ ಪೂರೈಕೆಯ ಮೇಲೆ ಅವಲಂಬಿತವಾಗಿದೆ. ಇತರ ಮೂರು ದೇಶಗಳು ಕೂಡ ಉಕ್ರೇನ್‌ ಪರವಾಗಿ ಸ್ಪಂದಿಸಿಲ್ಲ.

ಇದನ್ನೂ ಓದಿ: ರಷ್ಯಾ ಉತ್ಪಾದನೆ ಕಡಿತಗೊಳಿಸಿದರೆ ತೈಲ ದರ 380 ಡಾಲರ್‌ಗೆ ಏರಲಿದೆ ಎಂದು ಎಚ್ಚರಿಸಿದ ಜೆಪಿ ಮೋರ್ಗಾನ್

Exit mobile version