Site icon Vistara News

Job Cuts: ಏಐ ಏಟು; ಗೂಗಲ್‌, ಅಮೆಜಾನ್‌ ಮುಂತಾದ ಟೆಕ್‌ ಕಂಪನಿಗಳಲ್ಲಿ 7,500 ಉದ್ಯೋಗ ಕಡಿತ

amazon google microsoft

ಸ್ಯಾನ್‌ಫ್ರಾನ್ಸಿಸ್ಕೋ: ಗೂಗಲ್‌ (Google), ಅಮೆಜಾನ್‌ (Amazon) ಸೇರಿದಂತೆ ದೈತ್ಯ ಟೆಕ್‌ ಕಂಪನಿಗಳು ಕೃತಕ ಬುದ್ಧಿಮತ್ತೆಯಲ್ಲಿ (Artificial Intelligence) ಹೆಚ್ಚಿನ ಹೂಡಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಗಳನ್ನು ಕಡಿತ (Job Cuts, Lay off) ಮಾಡುತ್ತಿರುವುದಾಗಿ ಸೂಚಿಸಿವೆ. ಸುಮಾರು 7,500 ಉದ್ಯೋಗಗಳು ಹೀಗೆ ಕಡಿತಗೊಳ್ಳುತ್ತಿವೆ.

AI ರೇಸ್‌ನಲ್ಲಿ ಮುಂಚೂಣಿಯಲ್ಲಿರಲು ಯತ್ನಿಸುತ್ತಿರುವ ಸಂಸ್ಥೆಗಳು ನೂತನ ತಂತ್ರಜ್ಞಾನಕ್ಕಾಗಿ ಶತಕೋಟಿ ಡಾಲರ್‌ಗಳನ್ನು ವ್ಯಯಿಸುತ್ತಿದ್ದು, ಅದನ್ನು ಸರಿದೂಗಿಸಲು ಉದ್ಯೋಗ ಕಡಿತ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಗೂಗಲ್‌ ಮಾತೃಸಂಸ್ಥೆಯಾದ ಆಲ್ಫಾಬೆಟ್ ಹೊಸ ಸಾಹಸವಾಗಿ ತನ್ನ ʼಅತಿದೊಡ್ಡ ಆದ್ಯತೆʼಯ ಹೂಡಿಕೆ ಮಾಡಲು ಯೋಜಿಸಿದೆ ಎಂದು ಕಳೆದ ವಾರ ಹೇಳಿದೆ. ಇದಕ್ಕಾಗಿ ತನ್ನ ವಾಯಿಸ್‌ ಅಸಿಸ್ಟೆಂಟ್‌ ನಿರ್ವಹಣೆ ತಂಡ, ಪಿಕ್ಸೆಲ್ ಮತ್ತು ಫಿಟ್‌ಬಿಟ್ ತಂಡಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಸುಮಾರು ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಅದು ತನ್ನ ಜಾಹೀರಾತು ವಿಭಾಗವನ್ನೂ ಬಿಟ್ಟಿಲ್ಲ. ಈ ಘಟಕದಲ್ಲಿ ನೂರಾರು ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಗೂಗಲ್‌ ಮಂಗಳವಾರ ತಿಳಿಸಿದೆ.

ಅಮೆಜಾನ್‌ ಸಂಸ್ಥೆ (Amazon) ಕಳೆದ ವಾರ ತನ್ನ ಸ್ಟ್ರೀಮಿಂಗ್ ಮತ್ತು ಸ್ಟುಡಿಯೋ ಕಾರ್ಯಾಚರಣೆಗಳಲ್ಲಿ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ ಅದರ ಟ್ವಿಚ್ ಲೈವ್-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮತ್ತು ಆಡಿಬಲ್ ಆಡಿಯೊಬುಕ್ ಘಟಕದಲ್ಲಿ ನೂರಾರು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ.

ಉದ್ಯೋಗ ಕಡಿತಗಳ ಮೇಲೆ ನಿಗಾ ಇಟ್ಟಿರುವ ಲೇಆಫ್ಸ್‌ ವೆಬ್‌ಸೈಟ್‌ (Layoffs.fyi) ಪ್ರಕಾರ ಟೆಕ್‌ ದೈತ್ಯ ಕಂಪನಿಗಳು 7500ಕ್ಕೂ ಅಧಿಕ ಕೆಲಸಗಳನ್ನು ಕಡಿತಗೊಳಿಸಿವೆ. ಎಐ ಕ್ರಾಂತಿಯಲ್ಲಿ ಹಿಂದುಳಿಯಲು ಯಾವ ಕಂಪನಿಯೂ ಇಚ್ಛಿಸುತ್ತಿಲ್ಲ. ಎಐಯನ್ನೇ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತಿವೆ.

ಗೂಗಲ್‌ ಹಾಗೂ ಅಮೆಜಾನ್‌ ಎರಡೂ ಎಐ ಅನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿವೆ. ಎಐ ರೇಸ್‌ನಲ್ಲಿ ಮೈಕ್ರೋಸಾಫ್ಟ್‌ ಅನ್ನು ಹಿಂದಿಕ್ಕಲು ಬಯಸುತ್ತಿರುವ ಗೂಗಲ್‌, ತನ್ನ ಬಹುನಿರೀಕ್ಷಿತ ʼಜೆಮಿನಿʼ ಮಾಡೆಲ್‌ ಅನ್ನು ಅನಾವರಣ ಮಾಡಿದೆ. ಅಮೆಜಾನ್‌ ʼಒಲಿಂಪಸ್ʼ ಎಂಬ ಕೋಡ್‌ನೇಮ್‌ ಹೊಂದಿರುವ ತನ್ನ ಎಐ ಮಾದರಿಯನ್ನು ಬೆಳೆಸುತ್ತಿದೆ. ಇದು ಓಪನ್‌ಎಐಯ ಚಾಟ್‌ಜಿಪಿಟಿಗೆ ಸೆಡ್ಡು ಹೊಡೆಯುವ ಉದ್ದೇಶ ಹೊಂದಿದೆ.

ಕಳೆದ ವರ್ಷದ ಬೃಹತ್ ಉದ್ಯೋಗ ಕಡಿತಗಳಿಗೆ ಹೋಲಿಸಿದರೆ ವಜಾಗೊಳಿಸುವಿಕೆಯ ಒಟ್ಟು ಗಾತ್ರ ಈ ಬಾರಿ ಚಿಕ್ಕದಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಹೆಚ್ಚು ಸ್ಥಿರವಾದ ಆರ್ಥಿಕತೆಯ ಹಿನ್ನೆಲೆಯಲ್ಲಿ ಟೆಕ್ ವೆಚ್ಚ ಹೆಚ್ಚಾಗುತ್ತದೆ. ಈ ತಿಂಗಳ ಆರಂಭದಲ್ಲಿ ಟೆಕ್ ವಲಯವು 168,032 ಉದ್ಯೋಗಗಳನ್ನು ಕಳೆದುಕೊಂಡಿತು.

ಆಲ್ಫಾಬೆಟ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಮೆಟಾ ಸೇರಿದಂತೆ ಟೆಕ್ ದೈತ್ಯ ಕಂಪನಿಗಳು ಕಡಿತ ಮಾಡಿದವು. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಬಡ್ಡಿದರಗಳ ಹಿನ್ನೆಲೆಯಲ್ಲಿ ಗೂಗಲ್ ಕಳೆದ ವರ್ಷ ಸುಮಾರು 12,000 ಜನರನ್ನು ವಜಾಗೊಳಿಸಿದೆ.

ಇದನ್ನೂ ಓದಿ: Google lays off: ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ; ಕೆಲಸ ಕಳೆದುಕೊಳ್ಳುವವರ ಸಂಖ್ಯೆ ಎಷ್ಟು?

Exit mobile version