Site icon Vistara News

ನಿತಿನ್‌ ಗಡ್ಕರಿ ಅಂಗಳಕ್ಕೆ ದಶಪಥ ಫೈಟ್‌: ತಾವೂ ಭೇಟಿಯಾಗುವುದಾಗಿ ತಿಳಿಸಿದ ಸಚಿವ ಕೆ. ಗೋಪಾಲಯ್ಯ

gopalaih

ಮಂಡ್ಯ: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ವಿಚಾರ ಇದೀಗ ಸಂಪೂರ್ಣ ರಾಜಕೀಯ ಜಿದ್ದಾಜಿದ್ದಿನ ಅಂಗಳವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯ ನಂತರ ವಾಹನ ಸವಾರರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಂಟಾದ ಹಾನಿಯಿಂದಾಗಿ ಮುಖ್ಯವಾಗಿ ಜೆಡಿಎಸ್‌- ಬಿಜೆಪಿ ನಡುವೆ ಫೈಟ್‌ ನಡೆಯುತ್ತಿದೆ.

ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದಷ್ಟೆ ಅಲ್ಲದೆ ಭೂಸ್ವಾಧೀನ ಪರಿಹಾರ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಗಡಿ ಜೆಡಿಎಸ್‌ ಶಾಸಕ ಮಂಜುನಾಥ್‌ ಆರೋಪಿಸಿದ್ದು, ಈ ಕುರಿತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿಯವರ ಜತೆಗೆ ಕೇಂದ್ರ ಸಚಿವರ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದರು. ಇದೀಗ ತಾವೂ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡುವುದಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ | ರಾಮನಗರ-ಚನ್ನಪಟ್ಟಣ 23 ಕಿ.ಮೀ ಬೈಪಾಸ್ ರೆಡಿ, ಬಂದು ನೋಡಿ ಎಂದು ಪ್ರತಾಪ್‌ ಸಿಂಹ ಟಾಂಗ್‌

ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರೂ ಸೇರಿ ಅಧಿಕಾರಿಗಳ ಜತೆಗೆ ಹೆದ್ದಾರಿಯನ್ನು ಗೋಪಾಲಯ್ಯ ಶನಿವಾರ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೆಪ್ಟೆಂಬರ್ 6 ರಿಂದ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ದಶಪಥ ರಸ್ತೆ ಅಭಿವೃದ್ಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸು. ಈ ರೀತಿಯ ರಸ್ತೆ ಆಗಲೇಬೇಕೆಂಬ ದೃಷ್ಟಿಯಿಂದ ಕೇಂದ್ರ ಹೆದ್ದಾರಿ ಸಚಿವರೇ ಜವಾಬ್ದಾರಿ ವಹಿಸಿರುವುದು ಶ್ಲಾಘನೀಯ.
ಇದೀಗ ನಡೆಯುತ್ತಿರುವ ಕಾಮಗಾರಿಯ ಸಂದರ್ಭದಲ್ಲಿ ಎಲ್ಲೆಲ್ಲಿ ಸಣ್ಣ ಪುಟ್ಟ ನ್ಯೂನತೆಗಳಿವೆಯೋ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಹೆದ್ದಾರಿಯಲ್ಲಿ ಯಾವುದೇ ನ್ಯೂನತೆಗಳಿಲ್ಲ. ಸರ್ವೀಸ್‌ ರಸ್ತೆಯಲ್ಲಿ ಕೆಲ ತೊಂದರೆಯಾಗಿದೆ. ನಿಡಘಟ್ಟ ಸೇರಿದಂತೆ ಕೆಲವಾರು ಹಳ್ಳಿಗಳ ಬಳಿ ಆಗಿರುವ ತೊಂದರೆ ನಿವಾರಣೆ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಲಾಗುವುದು ಎಂದರು.
ಅಧಿಕ ಮಳೆಯಿಂದ ಈ ಸಮಸ್ಯೆ ಕಂಡು ಬಂದಿದೆ. ಅದಕ್ಕಿಂತ ಮುಂಚೆ ಈ ಸಮಸ್ಯೆ ಆಗಿರಲಿಲ್ಲ. ಶೀಘ್ರವೇ ಇದನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | ದಶಪಥದಲ್ಲಿ ₹800 ಕೋಟಿ ಭ್ರಷ್ಟಾಚಾರ: ಸಂಸದ ಪ್ರತಾಪ್‌ ಸಿಂಹ ವಿರುದ್ಧ ಜೆಡಿಎಸ್‌ ಶಾಸಕ ಆರೋಪ

Exit mobile version