Site icon Vistara News

Chandra Grahan 2022 | ದೇಗುಲಗಳಿಗೆ ಹಿಡಿದ ಚಂದ್ರ ಗ್ರಹಣ; ದೇವರಿಗೆ ದರ್ಬಾಬಂಧನ

Chandra Grahan 2022

ಬೆಂಗಳೂರು: ಮಂಗಳವಾರ ಹುಣ್ಣಿಮೆಯ ಜತೆಗೆ ರಾಹುಗ್ರಸ್ತ ಚಂದ್ರ ಗ್ರಹಣ (Chandra Grahan 2022) ಸಂಭವಿಸುತ್ತಿದೆ. ಮಧ್ಯಾಹ್ನ 2.39ಕ್ಕೆ ಚಂದ್ರಗ್ರಹಣ ಆರಂಭವಾಗಿ ಸಂಜೆ 6.19ಕ್ಕೆ ಗ್ರಹಣ ಮೋಕ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನದ ಬಾಗಿಲು ಬಂದ್‌ ಮಾಡಲಾಗಿದೆ. ಗ್ರಹಣ ಮೋಕ್ಷ ಸಮಯದ ಬಳಿಕ ದೇವಸ್ಥಾನಗಳಲ್ಲಿ ಶುಚಿತ್ವ ಕಾರ್ಯ ಚಾಲನೆಗೊಳ್ಳಲಿದ್ದು, ನಂತರ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಲಿವೆ.

ಯಾವ್ಯಾವ ದೇಗುಲ ಬಂದ್‌
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಶ್ರೀ ದಕ್ಷಿಣ ಮುಖ ನಂದಿ ತೀರ್ಥ ಕಲ್ಯಾಣ ಕ್ಷೇತ್ರದಲ್ಲಿ ನಿತ್ಯದ ಪೂಜೆಗಳನ್ನು ನಡೆಸಿ ದೇವಸ್ಥಾನಕ್ಕೆ ಬೀಗ ಹಾಕಲಾಯಿತು. ಸಂಜೆ ಗ್ರಹಣ ಕಳೆದ ಬಳಿಕ 6.30ಕ್ಕೆ ದೇವಸ್ಥಾನಗಳ ಶುಚಿತ್ವ ಕಾರ್ಯ ಆರಂಭಿಸಿ, ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲೂ ದರ್ಬೆ ಹಾಕಿ ಬಾಗಿಲು ಬಂದ್ ಮಾಡಲಾಗಿದೆ. ಇತ್ತ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ದರ್ಬಾಬಂಧನಕ್ಕೂ ಮೊದಲು ಶಿವನಿಗೆ ಅಭಿಷೇಕ, ಮಹಾಮಂಗಳಾರತಿ ಮುಗಿಸಿ ಬಾಗಿಲು ಮುಚ್ಚಿದ್ದಾರೆ. ಗ್ರಹಣ ಮುಗಿದ ನಂತರ ಸಂಜೆ 7 ಗಂಟೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಭೋಗನಂದೀಶ್ವರನಿಗೂ ತಟ್ಟಿದ ರಾಹುಗ್ರಸ್ಥ ಚಂದ್ರಗ್ರಹಣ
ಚಿಕ್ಕಬಳ್ಳಾಪುರದ ಭೋಗನಂದೀಶ್ವರನಿಗೂ ರಾಹುಗ್ರಸ್ಥ ಚಂದ್ರಗ್ರಹಣ ತಟ್ಟಿದ್ದು, ಮಧ್ಯಾಹ್ನ ಒಂದು ಗಂಟೆವರೆಗೆ ಮಾತ್ರ ದರ್ಶನ ವ್ಯವಸ್ಥೆಯನ್ನು ಮಾಡಲಾಗಿತ್ತು. ಗ್ರಹಣ ಸ್ಪರ್ಶಕಾಲ ಬಳಿಕ ದೇಗುಲದ ಬಾಗಿಲನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗುವುದು. ಬೆಳಗ್ಗೆಯಿಂದ ಅಭಿಷೇಕ ಸೇರಿದಂತೆ ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿತ್ತು.

ಅರಮನೆ ನಗರೀಯಲ್ಲಿ ಎರಡು ಪ್ರಮುಖ ದೇವಸ್ಥಾನಗಳಲ್ಲಿ‌ ಭಿನ್ನ ಆಚರಣೆ
ವರ್ಷದ ಕೊನೆಯ ಚಂದ್ರ ಗ್ರಹಣ ಹಿನ್ನೆಲೆ ಮೈಸೂರು ಜಿಲ್ಲೆಯ ಎರಡು ಪ್ರಮುಖ ದೇವಸ್ಥಾನಗಳಲ್ಲಿ‌ ಭಿನ್ನವಾಗಿ ಆಚರಿಸಲಾಗುತ್ತಿದೆ. ಗ್ರಹಣ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನ‌ ಬಾಗಿಲು ಮುಚ್ಚಿದ್ದರೆ, ಗ್ರಹಣಕ್ಕೆ‌ ಬಾಗಿಲು ಮುಚ್ಚದೆ ಎಂದಿನಂತೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ
ಚಿಕ್ಕಮಗಳೂರಿನ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಮಾತ್ರ ಪ್ರಸಾದ ಇರಲಿದೆ. ಮತ್ತೆ ಪ್ರಸಾದ ಇರುವುದಿಲ್ಲ. ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 4 ಗಂಟೆವರೆಗೆ ಅರ್ಚನೆ ಇರಲಿದೆ. ಗ್ರಹಣ ಮೋಕ್ಷವಾದಾಗ ಶುದ್ಧಿ ಕಾರ್ಯ ನಡೆದು ಬಳಿಕ ಪೂಜೆ-ಪ್ರಸಾದದ ವ್ಯವಸ್ಥೆ ಇರುತ್ತದೆ. ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ನಿರಂತರ ಅಭಿಷೇಕ ಇರಲಿದೆ. ಇತ್ತ ಗ್ರಹಣದ ಹಿನ್ನೆಲೆ ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ಪೂಜೆ ಎಂದಿನಂತೆ ಇರುತ್ತದೆ. ಮಧ್ಯಾಹ್ನದ ಊಟ ಇರುವುದಿಲ್ಲ. ಗ್ರಹಣದ ವೇಳೆಯೂ ದರ್ಶನಕ್ಕೆ ಅವಕಾಶ ಇರಲಿದ್ದು, ಪೂಜೆ-ಪ್ರಸಾದ ಸೇರಿದಂತೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಇರಲಿದೆ. ಗ್ರಹಣದ ಬಳಿಕ ಪೂಜೆ-ಪ್ರಸಾದ ಎಂದಿನಂತೆ ಇರಲಿದೆ ಎಂದು ಶ್ರೀಮಠ ತಿಳಿಸಿದೆ.

ಇದನ್ನೂ ಓದಿ | Bangalore Pot hole| ಎಲ್ಲರದ್ದೂ ಒಂದೇ ಬೇಡಿಕೆ, ಮೋದೀಜಿ ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಿ ಪ್ಲೀಸ್‌!

ಗ್ರಹಣಕ್ಕೂ ಮುನ್ನವೇ ಬಂದ್‌ ಆದ ಬೇಲೂರು ಚನ್ನಕೇಶವ ದೇಗುಲ
ಹಾಸನದಲ್ಲಿ ಸಂಜೆ 5:54 ರಿಂದ 6:20 ನಿಮಿಷದವರೆಗೆ ಚಂದ್ರ ಗ್ರಹಣ ಇರಲಿದೆ. ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ದೇಗುಲ ಚಂದ್ರ ಗ್ರಹಣ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ಬಂದ್ ಆಗಿದೆ. ಬೆಳಗ್ಗೆ 10 ಗಂಟೆಗೆ ಬಾಗಿಲು ಮುಚ್ಚಿದರೆ ಬುಧವಾರ ಬೆಳಗ್ಗೆ 10 ಗಂಟೆಗೆ ದೇಗುಲ ತೆರೆಯಲಿದೆ.

ಮೋಕ್ಷ ಕಾಲದವರೆಗೆ ಬಂದ್‌
ವಿಜಯಪುರದ ಸಿದ್ದೇಶ್ವರ ದೇಗುಲ, ಸುಂದರೇಶ್ವರ ದೇಗುಲ, ರಾಮ ಮಂದಿರ, ಶನಿಮಂದಿರ, ಐತಿಹಾಸಿಕ ಮಲ್ಲಿಕಾರ್ಜುನ ದೇಗುಲಗಳು ಬಂದ್ ಆಗಿವೆ. ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣ ಮೋಕ್ಷ ಕಾಲದವರೆಗೂ ಬಂದ್ ಆಗಲಿದೆ.

ಮಂಗಳವಾರ ಹುಣ್ಣಿಮೆಗೆ ಹುಲಿಗೆಮ್ಮದೇವಿಗೆ ಬಂದು ಭಕ್ತಸಾಗರ
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಪ್ರಸಿದ್ಧ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಮಧ್ಯಾಹ್ನ ನಂತರ ದೇವಸ್ಥಾನ ಬಂದ್ ಆಗುವ ಹಿನ್ನೆಲೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಹುಣ್ಣಿಮೆ ಹಾಗೂ ಮಂಗಳವಾರದಂದು ಹುಲಗಿಗೆ ಬರುವ ಅಧಿಕ ಸಂಖ್ಯೆಯ ಭಕ್ತರು ಬರಲಿದ್ದಾರೆ. ಗ್ರಹಣ ಹಿನ್ನೆಲೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ದೇವಸ್ಥಾನದ ಬಾಗಿಲು ಮುಚ್ಚಲಿದೆ.

ಇತ್ತ ಯಾದಗಿರಿಯ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ, ಸುರಪುರ ನಗರದ ವೇಣುಗೋಪಾಲಸ್ವಾಮಿ, ನಗರದ ಲಕ್ಷ್ಮಿನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಬಾಲಾಜಿ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳು ಬಂದ್‌ ಆಗಿವೆ.

ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ
ಗ್ರಹಣ ಕಾಲದಲ್ಲಿ ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಹಣ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಬೆಳಗ್ಗಿನಿಂದಲೇ ಅಷ್ಟಮಠಗಳ ಯತಿಗಳು ಜಪತಪದಲ್ಲಿ ನಿರತರಾಗಿದ್ದಾರೆ. ಭಕ್ತರಿಗೂ ಕೃಷ್ಣನ ಸನ್ನಿಧಿಯಲ್ಲಿ ಜಪತಪಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಅನ್ನ ಪ್ರಸಾದ ಇರುವುದಿಲ್ಲ ಎಂದೂ ಹೇಳಲಾಗಿದೆ.

ಇವೆಲ್ಲದರ ಜತೆಗೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಗರ್ಭಗುಡಿ, ಧಾರವಾಡದ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ಸೇರಿ ಕೋಲಾರದ ಕೋಲಾರಮ್ಮ, ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯ, ಕುರುಡುಮಲೆ‌ ವಿನಾಯಕ, ಬಂಗಾರತಿರುಪತಿ ಸೇರಿದಂತೆ ಎಲ್ಲ ದೇವಾಲಯಗಳು ಬಂದ್ ಆಗಲಿದೆ. ರಾಮನಗರದ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ, ಕನಕಪುರ ಕಬ್ಬಾಳಮ್ಮ ದೇವಾಲಯ, ಮಳೂರಿನ ಅಪ್ರಮೇಯ ಶ್ರೀಕೃಷ್ಣ ದೇವಾಲಯ, ಮಾಗಡಿಯ ರಂಗನಾಥ ದೇವಾಲಯ ಬಾಗಿಲು ಮುಚ್ಚಲಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನದಲ್ಲೂ ದರ್ಶನ ಭಾಗ್ಯ ಇರುವುದಿಲ್ಲ.

ಇದನ್ನೂ ಓದಿ | Pothole | ಯಮಸ್ವರೂಪಿ ರಸ್ತೆ ಗುಂಡಿಯಿಂದಾಗಿ ಕೋಮಾಗೆ ಹೋದ ಬೈಕ್‌ ಸವಾರ

Exit mobile version