ಬೆಂಗಳೂರು: ಒಂದು ವಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಬಾರಿಗೆ ನವದೆಹಲಿಗೆ ಹೊರಟು ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಮುಕ್ತಾಯಗೊಳಿಸಿ ತೆರಳಿದ ಬೆನ್ನಲ್ಲೆ ಬೊಮ್ಮಾಯಿ ನವದೆಹಲಿಗೆ ಹೊರಟು ನಿಂತಿರುವುದು ರಾಜ್ಯ ರಾಜಕೀಯದಲ್ಲಿ ಸದ್ಯದಲ್ಲೆ ಮಹತ್ವದ ಬದಲಾವಣೆ ಆಗುತ್ತದೆ ಎನ್ನುವುದನ್ನುಸ ೂಚಿಸಿದೆ.
ಬುಧವಾರ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಿದ್ದಾರೆ. ಮದ್ಯಾಹ್ನದ ನಂತರ ಯಾವುದೇ ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಂಡಿಲ್ಲ. ಈ ವೇಳೆಯಲ್ಲಿ ಅಧಿಕಾರಿಗಳ ಜತೆಗೆ ಸಭೆ ಎಂದಷ್ಟೆ ನಿಗದಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳ ಪ್ರಕಾರ ಬೊಮ್ಮಾಯಿ ಗುರುವಾರ ಬೆಳಗ್ಗೆ ನವದೆಹಲಿಗೆ ಹೊರಡಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೊಮ್ಮಾಯಿ ಅವರ ಹಾವಭಾವದಲ್ಲಿ ಸಾಕಷ್ಟು ಏರಿಳಿತ ಆಗಿದೆ. ರಾಜ್ಯಸಭೆ ಚುನಾವಣೆ ವೇಲೆ ಅಚ್ಚರಿಯೆಂಬಂತೆ ಒಂದು ಸ್ಥಾನ ಹೆಚ್ಚಿಗೆ ಗೆಲ್ಲಿಸಿಕೊಟ್ಟು ವರಿಷ್ಠರ ಪ್ರೀತಿಗೆ ಪಾತ್ರರಾಗಿದ್ದರು. ಸ್ವತಃ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ಆದರೆ ಒಂದೇ ವಾರದಲ್ಲಿ ಜೂನ್ 15ರಂದು ಹೊರಬಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಆಗಿತ್ತು. ಪಕ್ಷದ ಕಟ್ಟಾಳುಗಳಾದ ಅರುಣ್ ಶಹಾಪುರ ಹಾಗೂ ಮೈ.ವಿ. ರವಿಶಂಕರ್ ಅವರ ಸೋಲುಗಳು ಸಂಘಟನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ದಿಢೀರನೆ ದೆಹಲಿಗೆ ಪ್ರಯಾಣಿಸಿದರು.
ಅಲ್ಲಿಂದ ಬಂದ ನಂತರ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕಾರ್ಯಕ್ರಮಗಳು ನಡೆದವು. ಅಲ್ಲಿ ಶಹಬ್ಬಾಸ್‌ಗಿರಿ ಪಡೆದು ಸ್ವಲ್ಪ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಅದರ ನಂತರ ಜೂನ್ ೨೦ ಹಾಗೂ ೨೧ರಂದು ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ. ಪ್ರಧಾನಿ ಕರ್ನಾಟಕದಲ್ಲಿದ್ದ ಸುಮಾರು ೨೦ ಗಂಟೆ ಅವರ ಬೆಂಬಿಡದೆ ಇದ್ದ ಬೊಮ್ಮಾಯಿ, ಪ್ರಧಾನಿ ಕಾರ್ಯಕ್ರಮಗಳಲ್ಲಿ ಒಂದು ಸಣ್ಣ ದೋಷವೂ ಆಗದಂತೆ ನೋಡಿಕೊಂಡರು. ʼಬೊಮ್ಮಾಯಿ ನೇತೃತ್ವದಲ್ಲೆ ಕರ್ನಾಟಕದ ಅಭಿವೃದ್ಧಿʼ ಎಂದು ಮೋದಿಯವರಿಂದಲೇ ಶಹಬ್ಬಾಸ್‌ಗಿರಿ ಪಡೆದು ಬೊಮ್ಮಾಯಿ ಬೀಗಿದರು.
ಇಷ್ಟೆಲ್ಲದರ ನಂತರ ಕರ್ನಾಟಕದಲ್ಲಿ ʼಮುಖ್ಯಮಂತ್ರಿ ಬದಲಾವಣೆʼ ಎಂಬ ಅಪಸ್ವರ ಬಹುತೇಕ ನೆಲಕಚ್ಚಿದಂತಿದೆ. ಈ ಸುಳಿವನ್ನು ಅರಿತ ಬೊಮ್ಮಾಯಿ, ಸಚಿ ಸಂಪುಟ ವಿಸ್ತರಣೆ ಅಥವಾ ಪರಿಷ್ಕರಣೆಯತ್ತ ದೃಷ್ಟಿ ನೆಟ್ಟಿದ್ದಾರೆ. ಗುರುವಾರ ಬೆಳಗ್ಗೆ ನವದೆಹಲಿಗೆ ತೆರಳಿ ಮುಖ್ಯವಾಗಿ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲಿಂದ ಬರುವ ಸೂಚನೆಗಳ ಆಧಾರದಲ್ಲಿ ರಾಜ್ಯದಲ್ಲಿ ರಾಜಕೀಯ ಬಳವಣಿಗೆ ನಡೆಯುತ್ತದೆ. ಈ ಬೆಳವಣಿಗೆಗಳು ೨೦೨೩ರ ವಿಧಾನಸಭೆ ಚುನಾವಣೆಗೆ ಮುಖ್ಯ ಆಗಿರುವುದರಿಂದ ಇಡೀ ರಾಜ್ಯದ ಚಿತ್ತ ನವದೆಹಲಿಯತ್ತ ನೆಟ್ಟಿದೆ.
ಇದನ್ನೂ ಓದಿ | ಬೆಂಗಳೂರಲ್ಲಿ ಗೆದ್ದರು ಸಿಎಂ ಬಸವರಾಜ ಬೊಮ್ಮಾಯಿ: ಇನ್ನು ದೆಹಲಿ ದಂಡಯಾತ್ರೆ