Site icon Vistara News

ಹುಬ್ಬಳ್ಳಿ ಗಲಭೆ | AIMIM ಕಾರ್ಪೊರೇಟರ್‌ ಪತಿ ಸೇರಿ 85 ಜನರ ಬಂಧನ: ಪೂರ್ವನಿಯೋಜಿತ ಶಂಕೆ

ಹುಬ್ಬಳ್ಳಿ ಗಲಭೆ

ಹುಬ್ಬಳ್ಳಿ: ಯುವಕನೊಬ್ಬನ ವಾಟ್ಸಾಪ್‌ ಸ್ಟೇಟಸ್‌ (WhatsApp Status) ಅನ್ನೇ ನೆಪವಾಗಿಸಿಕೊಂಡು ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ ಹಾಗೂ ಸಾರ್ವಜನಿಕರ ಮೇಲೆ ಶನಿವಾರ ನಡೆದ ಗಲಭೆಯ (Hubli Riots) ಸಂಬಂಧ 85ಕ್ಕೂ ಹೆಚ್ಚು ಜನರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹನುಮಾನ್‌ ಜಯಂತಿ ಸಲುವಾಗಿ ನವದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳ ಗುಂಪು ಕಲ್ಲು ತೂರಾಟ ನಡೆಸಿದ ಘಟನೆ ನಡೆದ ದಿನವೇ ಹುಬ್ಬಳ್ಳಿಯಲ್ಲೂ ದುರ್ಘಟನೆ ಸಂಭವಿಸಿತ್ತು.

ಮಸೀದಿಯ ಮೇಲೆಯೂ ಭಗವಾಧ್ವಜವನ್ನು ಹಾರಿಸಬೇಕಾಗುತ್ತದೆ ಎಂದು ದ್ವಿತೀಯ ಪಿಯು ವಿದ್ಯಾರ್ಥಿ ಅಭಿಷೇಕ ಹಿರೇಮಠ ತನ್ನ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ. ಈ ವಿಚಾರದಲ್ಲಿ ತಬೀಬ್‌ ಲ್ಯಾಂಡ್‌ನ ಮೊಹಮ್ಮದ್‌ ಅಜರ್‌ ಬೇಲೇರಿ ಎನ್ನುವವರು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದರು. ಆದರೆ ರಾತ್ರಿ ವೇಳೆಗೆ ಇದ್ದಕ್ಕಿದ್ದಂತೆ ಪೊಲೀಸ್‌ ಠಾಣೆಯತ್ತ ಆಗಮಿಸಿದ ದೊಡ್ಡ ಗುಂಪೊಂದು ಕಲ್ಲು ಮತ್ತಿತರ ವಸ್ತುಗಳಿಂದ ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿತು.

ಗಲಭೆ ಪೂರ್ವನಿಯೋಜಿತ ?

ಗಲಭೆ ನಡೆದ ಸಂದರ್ಭದಲ್ಲಿ ಇಂಡಿ ಪಂಪ್‌ಹೌಸ್‌ ವೃತ್ತದಲ್ಲಿರುವ ಬೃಹತ್‌ ಬೀದಿ ದೀಪ ಆರಿಸಲಾಗಿತ್ತು. ಗಲಭೆ ನಂತರ ದೀಪವನ್ನು ಮತ್ತೆ ಉರಿಸಲಾಗಿದೆ. ಗಲಭೆ ನಿಯಂತ್ರಿಸಲು ಮುಂದಾದ ಮುಸ್ಲಿಂ ಮುಖಂಡರ ಮೇಲೆಯೂ ಕಲ್ಲು ತೂರಾಟ ನಡೆದಿದೆ. ಗಲಭೆಯಲ್ಲಿ 20-25 ವರ್ಷದೊಳಗಿನ ವಿದ್ಯಾರ್ಥಿಗಳೇ ಹೆಚ್ಚಿದ್ದರು. ಪವಿತ್ರ ರಂಜಾನ್‌ ಸಮಯದಲ್ಲೆ ಈ ಗಲಭೆ ನಡೆದಿದ್ದು, ಎರಡು ಟ್ರ್ಯಾಕ್ಟರ್‌ನಷ್ಟು ಕಲ್ಲುಗಳು ಇದ್ದವು. ಹಾಗಾಗಿ ದು ಪೂರ್ವನಿಯೋಜಿತ ಕೃತ್ಯವೇ ಆಗಿದೆ ಎಂದು ಅಂಜುಮನ್‌ ಸಂಸ್ಥೆ ಅಧ್ಯಕ್ಷ ಯೂಸುಫ್‌ ಎ ಸವಣೂರ ತಿಳಿಸಿದ್ದಾರೆ. ಗಲಭೆಯ ವಿಡಿಯೋಗಳನ್ನು ಎಲ್ಲಿಯೂ ಹಂಚಬೇಡಿ ಎಂದು ಗಲಭೆಕೋರರಿಗೆ ವ್ಯಕ್ತಿಯೊಬ್ಬ ಮನವಿ ಮಾಡುವ ಆಡಿಯೋ ಸಹ ಬಹಿರಂಗವಾಗಿದ್ದರಿಂದ, ಈ ಕೃತ್ಯ ಪೂರ್ವನಿಯೋಜಿತ ಎಂಬ ಅನುಮಾನ ಬಲವಾಗಿದೆ.

ಕಂಡಕಂಡಲ್ಲಿ ಕಲ್ಲು ತೂರಾಟ

ಪೊಲೀಸ್‌ ಠಾಣೆಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸುತ್ತಿದ್ದಂತೆಯೇ ಪೊಲೀಸರು ಲಾಠೀ ಪ್ರಯಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಈ ವೇಳೆ ಅಲ್ಲಿಂದ ತೆರಳಿದ ಗುಂಪು ದಿಡ್ಡಿ ಹನುಮಂತ ದೇಗುಲ ಸೇರಿದಂತೆ ಅನೇಕ ಹಿಂದುಗಳ ದೇವಸ್ಥಾ, ಶಾಲೆಗಳು, ಮನೆಗಳನ್ನು ಗುರಿಯಾಗಿಸಿ ಕಲ್ಲು, ಇಟ್ಟಿಗೆ, ಹೆಂಚುಗಳಿಂದ ದಾಳಿ ನಡೆಸಿದ್ದಾರೆ. ಠಾಣೆಯ ಸುತ್ತಮುತ್ತ ಚಪ್ಪಳಿಗಳು, ಕಲ್ಲುಗಳ ರಾಶಿಯೇ ಸಿಕ್ಕಿ ಇಡೀ ಪ್ರದೇಶ ರಣರಂಗದಂತೆ ಭಾಸವಾಗುತ್ತಿತ್ತು. ಘಟನೆಯಿಂದಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ನೀರವ ಮೌನ ಆವರಿಸಿದ್ದು, ಜನರು ಭಯಭೀತಗೊಂಡಿದ್ದಾರೆ. ಹುಬ್ಬಳ್ಳಿ ಪ್ರದೇಶದಲ್ಲಿ ಸದ್ಯ 144 ಸೆಕ್ಷನ್‌ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾರ್ವಜನಿಕರಲ್ಲಿ ಭಯವನ್ನು ಹೋಗಲಾಡಿಸುವ ಸಲುವಾಗಿ ಸೋಮವಾರ ಬೆಳಗ್ಗೆ ಕರ್ನಾಟಕ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿ ಹುಬ್ಬಳ್ಳಿ ಪ್ರದೇಶದಲ್ಲಿ ಪಥ ಸಂಚಲನ ನಡೆಸಿದ್ದಾರೆ. ಈ ಕುರಿತ ವಿಡಿಯೋವನ್ನು KSRP DGP ಅಲೋಕ್‌ ಕುಮಾರ್‌ ಹಂಚಿಕೊಂಡಿದ್ದಾರೆ.

ಪೊಲೀಸರಿಗೇ ಬೆದರಿಕೆ

ರಾತ್ರಿ ಇದ್ದಕ್ಕಿದ್ದಂತೆ ನೂರಾರು ಸಂಖ್ಯೆಯಲ್ಲಿ ಕೇಶ್ವಾಪುರ ಠಾಣೆಯತ್ತ ಆಗಮಿಸುತ್ತಿದ್ದ ಗಲಭೆಕೋರರ ಮನವೊಲಿಸಲು ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ್‌ ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ. ಈವೇಳೆ ಪೊಲೀಸ್‌ ಅಧಿಕಾರಿಗಳನ್ನು ಗಲಭೆಕೋರರು ಸುತ್ತುವರಿದಿದ್ದಾರೆ. “ಆರೋಪಿಯನ್ನು ಇನ್ನೂ ಏಕೆ ಬಂಧಿಸಿಲ್ಲ? ಬಂಧಿಸದಿದ್ದರೆ ಎಲ್ಲ ಪೊಲೀಸರನ್ನೂ ಕೊಲ್ಲುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ಆರೋಪಿಗಳನ್ನು ಬಂಧಿಸಲಾಗುತ್ತದೆ, ಶಾಂತಿ ಕಾಪಾಡಿ ಎಂದು ಮನವಿ ಮಾಡಿದರೂ ಕೇಳದೆ ಪೊಲೀಸ್‌ ಜೀಪಿನ ಗಾಜು ಒಡೆದು ಪುಂಡಾಟ ಮೆರೆದಿದ್ದಾರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಜಗದೀಶ್‌ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿದ್ದ ವಿಜಯಪುರ ಶಾಸಕ ಹಾಗೂ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌, ವ್ಯವಸ್ಥಿತವಾಗಿ ಆ ಗುಂಪುಗಳು ದಾಳಿ ನಡೆಸುತ್ತಿವೆ. ಮೊದಲು ಕೆ.ಜಿ. ಹಳ್ಳಿ, ಶಿವಮೊಗ್ಗದಲ್ಲಿ ಹಿಂದು ಕಾರ್ಯಕರ್ತ, ಬೆಂಗಳೂರಿನಲ್ಲಿ ಹುಡುಗನ ಹತ್ಯೆ ಮಾಡಲಾಯಿತು. ಅವರ ಜನಸಂಖ್ಯೆ ಹೆಚ್ಚಿರುವ ಸ್ಥಳದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಾರೆ. ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆ ಹೊರತು ಪರಿಶೀಲಿಸುತ್ತೇವೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಮಾತುಗಳಿಂದ ಏನೂ ಉಪಯೋಗವಿಲ್ಲ ಎಂದಿದ್ದರು.

ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಈಗಾಗಲೆ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯ ಹಿಂದೆ ಯಾವ್ಯಾವ ನಾಯಕರಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಿ ಬಂಧಿಸಲಾಗುತ್ತದೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಹೆಚ್ಚಿನ ಓದಿಗಾಗಿ: Delhi Riots: ಪುಷ್ಪಾ ಸ್ಟೈಲಲ್ಲಿ ಸನ್ನೆ ಮಾಡಿದ ಜಹಾಂಗೀರ್‌ಪುರಿ ಗಲಭೆ ಪ್ರಮುಖ ಆರೋಪಿ: 20 ಜನರ ಬಂಧನ

ಕಾರ್ಪೊರೇಟರ್‌ ಪತಿ ಬಂಧನ

ಗಲಭೆಗೆ ಸಂಬಂಧಿಸಿದಂತೆ 85ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ, ಹುಬ್ಬಳ್ಳಿ ಧಾರವಾಡ ಪಾಲಿಕೆಯ, ಎಐಎಂಐಎಂ (AIMIM) ಸದಸ್ಯೆ ಹುಸೇನ್‌ ಬೀ ಪತಿ ಇರ್ಫಾನ್‌ ನಾಲತವಾಡ ಸಹ ಇದ್ದಾರೆ. ತಮ್ಮ ಪತಿ ಗಲಭೆಕೋರರನ್ನು ನಿಯಂತ್ರಿಸಲು ಮುಂದಾಗಿದ್ದರು, ಆದರೆ ಪೊಲೀಸರು ಅವರನ್ನೇ ಬಂಧಿಸಿ ಕರೆದೊಯ್ದಿದ್ದಾರೆ ಎಂದು ಕಾರ್ಪೊರೇಟರ್‌ ತಿಳಿಸಿದ್ದಾರೆ. ಇದೇ ವೇಳೆ ಅನೇಕ ಆರೋಫಿಗಳ ಪೋಷಕರು ಬೀದಿಗೆ ಬಂದಿದ್ದು, ತಮ್ಮ ಪುತ್ರ ಗಲಭೆ ಸಮಯದಲ್ಲಿ ಮನೆಯಲ್ಲೇ ಇದ್ದ. ಪೊಲೀಸರು ಅಮಾಯಕರನ್ನು ಬಂಧಿಸಿ ಕರೆತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯ ನೀಡಿದ್ದಾರೆ. ಕಿಡಿಗೇಡಿಗಳ ಜತೆಗೆ ಕೆಲ ಅಮಾಯಕರನ್ನೂ ಪೊಲೀಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಉದ್ರಿಕ್ತ ಮತಿಗೇಡಿ ಯುವಕರು ಎಸಗಿದ ಕೃತ್ಯಕ್ಕೆ ಸಂಬಂಧವಿಲ್ಲದವರನ್ನೂ ವಶಕ್ಕೆ ಪಡೆಯಲಾಗಿದೆ. ಕೆಲ ಕುಟುಂಬಗಳ ತಂದೆ-ತಾಯಂದಿರು ನನಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಪೊಲೀಸ್ ಠಾಣೆ, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ಹೊಡೆದವರನ್ನು ಬಿಡಬೇಡಿ, ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

Exit mobile version