Site icon Vistara News

ISIS Terrorists: ಕರ್ನಾಟಕದಲ್ಲೂ ಭಾರಿ ಸ್ಫೋಟದ ಪ್ಲಾನ್!‌ ಬಂಧಿತ ಉಗ್ರರಿಂದ ಹೊರಬಿತ್ತು ಸ್ಫೋಟಕ ರಹಸ್ಯ

suspected terrorists

ಬೆಂಗಳೂರು: ಕಳೆದ ಜುಲೈ ತಿಂಗಳಲ್ಲಿ ಪುಣೆ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದ್ದ 7 ಮಂದಿ ಶಂಕಿತ ಐಸಿಸ್ ಉಗ್ರರ (ISIS Terrorists)‌ ವಿಚಾರಣೆಯಲ್ಲಿ ಸ್ಫೋಟಕ ರಹಸ್ಯ ಹೊರಬಿದ್ದಿದೆ. ಕರ್ನಾಟಕದಲ್ಲೂ ಭಾರಿ ಸ್ಫೋಟಗಳನ್ನು ನಡೆಸಲು ಉಗ್ರರು ಯೋಜನೆ ಹಾಕಿದ್ದರು, ತರಬೇತಿ ಕೂಡ ನೀಡಿದ್ದರು ಎಂದು ಗೊತ್ತಾಗಿದೆ.

ಕಳೆದ ಜುಲೈನಲ್ಲಿ ಪುಣೆ ಬಳಿ 7 ಮಂದಿ ಶಂಕಿತ ಐಸಿಸ್ ಉಗ್ರರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ಮೇಲೆ 7 ಮಂದಿ ಮೇಲೆ ದಾಳಿ ನಡೆಸಿ ಬಂಧಿಸಲಾಗಿತ್ತು. ಈ ಬಂಧಿತ ಉಗ್ರರ (Terrorists) ವಿರುದ್ಧ ಎನ್‌ಐಎ ಕೋರ್ಟ್‌ಗೆ ಚಾರ್ಜ್‌ಶೀಟ್ (charge sheet) ಸಲ್ಲಿಸಿದೆ. ಈ ವೇಳೆ, ಬಂಧಿತ ಶಂಕಿತ ಉಗ್ರರು ಕರ್ನಾಟಕದಲ್ಲೂ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎನ್ನುವ ವಿಚಾರ ಪ್ರಸ್ತಾಪಿಸಲಾಗಿದೆ.

ಬಂಧಿತರನ್ನು ಮಧ್ಯಪ್ರದೇಶದ ರತ್ಲಾಮ್ನ ಮೊಹಮ್ಮದ್ ಇಮ್ರಾನ್, ಮೊಹಮ್ಮದ್‌ ಯೂಸುಫ್ ಖಾನ್ ಅಲಿಯಾಸ್ ಮಟ್ಕಾ ಅಲಿಯಾಸ್ ಅಮೀರ್ ಅಬ್ದುಲ್ ಹಮೀದ್ ಖಾನ್, ಮೊಹಮ್ಮದ್ ಯೂನಸ್, ಮೊಹಮ್ಮದ್‌ ಯಾಕೂಬ್ ಸಾಕಿ ಅಲಿಯಾಸ್ ಆದಿಲ್ ಅಲಿಯಾಸ್ ಆದಿಲ್ ಸಲೀಂ ಖಾನ್, ಮಹಾರಾಷ್ಟ್ರದ ಪುಣೆಯ ಕೊಂಡ್ವಾದ ಕದೀರ್ ದಸ್ತಗೀರ್ ಪಠಾಣ್ ಅಲಿಯಾಸ್ ಅಬ್ದುಲ್ ಕದೀರ್ ಮತ್ತು ಸೀಮಾಬ್ ನಾಸಿರುದ್ದೀನ್ ಕಾಜಿ, ಮಹಾರಾಷ್ಟ್ರ ದ ಥಾಣೆಯಲ್ಲಿರುವ ಪಾದ್ಘಾದ ಜುಲ್ಫಿಕರ್ ಅಲಿ ಬರೋಡಾವಾಲಾ ಅಲಿಯಾಸ್ ಲಾಲಾಭಾಯಿ ಅಲಿಯಾಸ್ ಸೈಫ್, ಶಾಮಿಲ್ ಸಾಕಿಬ್ ನಾಚನ್ ಮತ್ತು ಆಕಿಫ್ ಅತೀಕ್ ನಾಚನ್ ಎಂಬವರನ್ನು ಬಂಧಿಸಲಾಗಿತ್ತು.

ಶಂಕಿತ ಐಸಿಸ್ ಉಗ್ರರು ಕರ್ನಾಟಕದಲ್ಲೂ ಸಹ ಸ್ಫೋಟಕ್ಕೆ ಯೋಜಿಸಿದ್ದುದನ್ನು ಎನ್‌ಐಎ ವಿಚಾರಣೆ ಸಂದರ್ಭ ಬಾಯಿ ಬಿಟ್ಟಿದ್ದಾರೆ. ಶಂಕಿತ ಉಗ್ರರು ಸ್ಫೋಟಕ್ಕೂ ಸ್ಥಳ ಗುರುತು ಮಾಡಿದ್ದರು ಎನ್ನಲಾಗಿದೆ. ಹಲವು ರಾಜ್ಯಗಳಲ್ಲಿ ಸ್ಪೋಟಕ್ಕೆ ಸಂಚು ಹೂಡಲಾಗಿತ್ತು. ಕರ್ನಾಟಕದ ವಿವಿಧ ಜಾಗಗಳ ಜೊತೆಗೆ ಮಹಾರಾಷ್ಟ್ರ, ಗೋವಾ, ತೆಲಂಗಾಣ ಹಾಗೂ ಇತರೆಡೆ ಸ್ಫೋಟಕ್ಕೆ ಸ್ಥಳ ಗುರುತಿಸಿದ್ದರು.

ಫ್ಯಾಬ್ರಿಕೇಟೆಡ್ ಐಇಡಿ ಪ್ಲಾಂಟ್‌ ಮಾಡಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಭಾವಿ ಉಗ್ರರಿಗೆ ತರಬೇತಿಯನ್ನೂ ಇವರು ಆಯೋಜಿಸಿದ್ದರು. ಆರೋಪಿಗಳು ಐಸಿಸ್ ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಹಣವನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದ್ದರು. ಈ ಆರೋಪಿಗಳು ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದರು. ಇನ್ನೂ ಕೆಲ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಮತ್ತು ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ತಯಾರಿಕೆಗೆ ಪೂರ್ವಸಿದ್ಧತಾ ತರಬೇತಿ ನಡೆಸಿದ್ದರು ಎನ್ನಲಾಗಿದೆ.

ಶಂಕಿತ ಉಗ್ರರು ಸ್ಫೋಟದ ಬಳಿಕ ತಾವು ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಮಾಸ್ಟರ್ ಪ್ಲಾನ್‌ ಮಾಡಿದ್ದರು. ಸ್ಫೋಟದ ಬಳಿಕ ದೂರದ ಹಾಗೂ ದಟ್ಟವಾದ ಕಾಡುಗಳಲ್ಲಿ ಅಡಗಿಕೊಳ್ಳುವ ಬಗ್ಗೆ ಪ್ಲಾನ್‌ ಮಾಡಿದ್ದರು. ಅಲ್ಲದೇ ಓಡಿಹೋಗುವಾಗ ಸೂಕ್ತವಾದ ಕ್ಯಾಂಪಿಂಗ್ ಸ್ಥಳಗಳನ್ನು ಪತ್ತೆ ಹಚ್ಚಲು ವಿಚಕ್ಷಣಕ್ಕಾಗಿ ಡ್ರೋನ್‌ಗಳನ್ನು ಬಳಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಉಗ್ರರ ತನಿಖೆ ನಡೆಸಿರುವ ಎನ್ಐಎ ಅಧಿಕಾರಿಗಳು, ಮುಂಬೈಯ ಎನ್‌ಐಎ ಕೋರ್ಟ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಇದನ್ನೂ ಓದಿ: ISIS Link: ಐಸಿಸ್‌ ಉಗ್ರರ ನಂಟು, ದಾಳಿಗೆ ಸಂಚು; ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿ ಫೈಜನ್‌ ಅನ್ಸಾರಿ ಬಂಧನ

Exit mobile version