ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ದಿಢೀರ್ ಗುಡುಗು ಸಹಿತ (Rain News) ಭಾರಿ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ (Karnataka Weather Forecast) ಇತ್ತು. ಮಧ್ಯಾಹ್ನದ ಹೊತ್ತು ಬಿಸಿಲ ಧಗೆ ಕೊಂಚ ಹೆಚ್ಚಾಗಿತ್ತು. ಸಂಜೆ ಆಗುತ್ತಿದ್ದಂತೆ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ.
ಮೆಜೆಸ್ಟಿಕ್, ಕೆಆರ್‌ವೃತ್ತ, ಕಾರ್ಪೋರೇಶನ್ ಸರ್ಕಲ್, ಕೆಆರ್ ಮಾರ್ಕೆಟ್, ಶೇಷಾದ್ರಿಪುರಂ, ಗಾಂಧಿನಗರ, ಶಿವಾಜಿನಗರ. ವಿಧಾನಸೌಧ ಸುತ್ತಮುತ್ತ ಮಳೆಯಾಗಿದೆ. ಇತ್ತ ದಿಢೀರ್ ಬಂದ ಮಳೆಗೆ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯುಂಟಾಯಿತು. ಆಫೀಸ್‌ನಿಂದ ಮನೆಗೆ ತೆರಳುತ್ತಿದ್ದವರು ಒದ್ದೆಯಾಗುವಂತಾಯಿತು. ಬೈಕ್ ಸವಾರರು ಮಳೆಯಿಂದ ಬಸ್ ನಿಲ್ದಾಣದ ಮೊರೆ ಹೋದರು.
ಬೆಳಗಾವಿಯಲ್ಲಿ ನೆರೆಗೆ ರೈತರ ಬದುಕು ಅತಂತ್ರ
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಬೆಳಗಾವಿಯಲ್ಲಿ ಮಳೆ ಪ್ರಮಾಣ ತಗ್ಗಿದೆ. ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಜಲಾಶಯಗಳು ಶೇಕಡಾ 90 ರಷ್ಟು ಭರ್ತಿಯಾಗಿದೆ. ಮಳೆ ತಗ್ಗಿದ್ದರೂ, ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ರೈತರು, ನೆರೆ ಸಂತ್ರಸ್ತರ ಬದುಕು ಅತಂತ್ರವಾಗಿದೆ.
ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಹಾನಿಯಾಗಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಮಾರ್ಕಂಡೇಯ, ಹೀರಣ್ಯಕೇಶಿ ನದಿಗಳಿಂದ ಪ್ರವಾಹ ನಿರ್ಮಾಣವಾಗಿದೆ. ಸಪ್ತ ನದಿಗಳ ಪಾತ್ರದ ಗ್ರಾಮಗಳಲ್ಲಿ ಯಥಾಸ್ಥಿತಿ ಪ್ರವಾಹ ಸ್ಥಿತಿ ಇದೆ. ಜಿಲ್ಲೆಯ 7 ತಾಲೂಕಿನಲ್ಲಿ 50ಕ್ಕೂ ಅಧಿಕ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ.
ಗೋಕಾಕ್, ಮೂಡಲಗಿ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ ತಾಲೂಕಿನಲ್ಲಿ 46 ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. 5,700ಕ್ಕೂ ಅಧಿಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಜಿಲ್ಲಾಡಳಿತ ಶಿಫ್ಟ್ ಮಾಡಿದ್ದಾರೆ. ಪ್ರವಾಹಕ್ಕೆ ಇಪ್ಪತ್ತು ಸಾವಿರಕ್ಕೂ ಅಧಿಕ ನೆರೆ ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ಸದ್ಯ ಜಿಲ್ಲೆಯಲ್ಲಿ 38 ಸೇತುವೆಗಳು ಜಲಾವೃತಗೊಂಡಿದೆ. ಮಳೆ ಹೊಡೆತಕ್ಕೆ 950 ಮನೆಗಳಿಗೆ ಹಾನಿಯಾಗಿದೆ. ಜೂನ್ 1 ರಿಂದ ಈವರೆಗೂ 6 ಜನರು ಬಲಿಯಾಗಿದ್ದಾರೆ. 50 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಉಜನಿ ಜಲಾಶಯ ಭರ್ತಿ; ಭೀಮಾ ನದಿಗೆ ಬಿಡುಗಡೆ
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಿಂದ ಬಾರಿ ಪ್ರಮಾಣದ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಉಜನಿ ಜಲಾಶಯದಿಂದ 40,000 ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಿದೆ. ಬಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದರಿಂದ ಕಲಬುರಗಿ ಜಿಲ್ಲಾಡಳಿತದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ನದಿಯ ಕಡೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಜಾನುವಾರುಗಳನ್ನು ಕೂಡ ನದಿಯ ಕಡೆ ಬಿಡದಂತೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಡಕಾದ ಕೃಷ್ಣಾ ನದಿ ನೀರು
ಶಾಲೆ ಅಂಗನವಾಡಿ ದೇವಸ್ಥಾನ ಎಲ್ಲವನ್ನು ಕೃಷ್ಣಾ ನದಿ ನೀರು ಆವರಿಸಿದೆ. ಎಸ್ ಎಸ್‌ಎಲ್‌ಸಿ ಮಕ್ಕಳ ಕುರಿತು ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲೆಗೆ ನಿರಂತರ ರಜೆಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಹಿನ್ನಡೆ ಆಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕೃಷ್ಣಾ ನದಿ ನೀರು ಆವರಿಸಿದೆ.
ಶಿಕ್ಷಕರು ಬೇರೆ ಕಡೆ ಒಂದು ರೂಮ್ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ಕಳೆದ ಒಂದು ವಾರದಿಂದಿಲೂ ಶಾಲಾ ಆವರಣದಲ್ಲಿ ಜಲಾವೃತಗೊಂಡಿದೆ. 180 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಪ್ರೌಢ ಶಾಲೆಗೆ ಸೋಮವಾರ ರಜೆ ನೀಡಲಾಗಿತ್ತು.
ಇದನ್ನೂ ಓದಿ: Drowned in Water: ನೀರುಪಾಲಾದ ವ್ಯಕ್ತಿಯ ಶವ ಹುಡುಕಾಟಕ್ಕೆ ಕೆರೆ ನೀರನ್ನೇ ಖಾಲಿ ಮಾಡಲು ಹೋದ ಗ್ರಾಮಸ್ಥರು
ನದಿ ನೀರು ರಭಸಕ್ಕೆ ಕೊಚ್ಚಿ ಹೋದ ಜಮೀನು
ರೈತರ ಜಮೀನನ್ನು ತುಂಗಭದ್ರಾ ನದಿ ಆಪೋಷಣೆ ಮಾಡಿದೆ. ನದಿ ಕೊರತಕ್ಕೆ ಗದಗ ಜಿಲ್ಲೆಯ ಹಮ್ಮಿಗಿ ಬ್ಯಾರೇಜ್ ಪಕ್ಕದ ನೂರಾರು ಎಕರೆ ಜಮೀನು ಕೊಚ್ಚಿ ಹೋಗಿದೆ. ಸಿಂಗಟಾಲೂರು ಬ್ಯಾರೇಜ್‌ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಬೃಹತ್ ಮಾವಿನ ಮರ, ತೆಂಗಿನಗಿಡ, ಭತ್ತದ ಗದ್ದೆಗಳು ನೀರುಪಾಲಾಗಿವೆ.
ನೇತ್ರಾವತಿ ಹಾಗೂ ಪಲ್ಗುಣಿ ನದಿ ತೀರ ಪ್ರದೇಶದಲ್ಲಿ ನೆರೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜೀವನದಿ ನೇತ್ರಾವತಿ ಹಾಗೂ ಪಲ್ಗುಣಿ ನದಿ ತೀರ ಪ್ರದೇಶದಲ್ಲಿ ನೆರೆ ಸೃಷ್ಟಿಯಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಮುಲ್ಲೈ ಮಹಿಲನ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ನೇತ್ರಾವತಿ ಹಾಗೂ ಪಲ್ಗುಣಿ ನದಿಯ ಪ್ರವಾಹಕ್ಕೆ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ತೀರ ಪ್ರದೇಶದ ಜನರಿಗೆ ನಷ್ಟ ಉಂಟಾಗಿದೆ. ತುಂಬಾ ಅಪಾಯದ ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ.
ಅದ್ಯಪಾಡಿ, ಬಂಟ್ವಾಳ, ಪಡುಶೆಡ್ಡೆ ಪರಿಸರದಲ್ಲಿ ತುಂಬ ನೆರೆಯಿಂದ ತುಂಬಾ ಹಾನಿಯಾಗಿದೆ ಭಾಗಶಃ ಹಾನಿಯಾದ ಪ್ರದೇಶಗಳಲ್ಲಿ ಜನರಿಗೆ ಎಚ್ಚರಿಕೆ ಇರುವಂತೆ ಸೂಚನೆ ನೀಡಲಾಗಿದೆ. ಇನ್ನೂ ಬೆಳ್ತಂಗಡಿ ಭಾಗದಲ್ಲಿ ಅಪಾರ ಹಾನಿ ಸಂಭವಿಸಿದ್ದು, ಮರೋಡಿ, ಸವಣಾಲು ಭಾಗದ ಪ್ರದೇಶಗಳನಲ್ಲಿ ಸಂಪರ್ಕ ಸೇತುವೆ ಕುಸಿದಿದೆ. ಇದಕ್ಕೆ ಪರ್ಯಾಯವಾಗಿ ಕಾಲು ಸೇತುವೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕೆತ್ತಿಕಲ್ಲು ಪರಿಸರದಲ್ಲಿ ಭೂಕುಸಿತದ ಭೀತಿ ಇದೆ. ರಾಷ್ಟ್ರೀಯ ಅಧಿಕಾರಿಗಳು ಈ ಬಗ್ಗೆ ಮುಂದಿನ ವಾರ ಪರಿಶೀಲನೆ ಮಾಡಲಾಗುವುದು ಎಂದರು. ಕಡಲಕೊರೆತದ ಕುರಿತಾಗಿದೆ ಸಭೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸರಿಯಾದ ಪರಿಹಾರವನ್ನು ಮಾಡಲಾಗುತ್ತೆ.
ಮಳೆ ಬಂದರೆ ಚಿತ್ರದುರ್ಗದಲ್ಲಿ ಗುಡ್ಡ ಕುಸಿತ ಭೀತಿ
ಕೋಟೆ ನಾಡು ಚಿತ್ರದುರ್ಗದಲ್ಲಿ ಗುಡ್ಡ ಕುಸಿತದ ಭೀತಿ ಶುರುವಾಗಿದೆ. ಚಿತ್ರದುರ್ಗದ ಸುತ್ತ ಮುತ್ತಲಿನ ಗುಡ್ಡ ಕಡಿದು ಲೇಔಟ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ನಗರದ ಐಯುಡಿಪಿ ಲೇಔಟ್, ಟೀಚರ್ಸ್ ಕಾಲೋನಿ, ಧವಳಗಿರಿಯ ಬಡಾವಣೆ ಸೇರಿ ಹಲವೆಡೆ ಗುಡ್ಡ ಕಡಿತ ಉಂಟಾಗಿದೆ. ಹಣದಾಸೆಗೆ ನಗರಸಭೆ ಅಧಿಕಾರಿಗಳು ಪ್ರಕೃತಿಯ ನಾಶ ಮಾಡುತ್ತಿದ್ದಾರೆ. ಅಪಾಯದ ಮಟ್ಟಕ್ಕೆ ಗುಡ್ಡ ಕಡಿಯುತ್ತಿರುವುದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಮಳೆ ಬಂದ ಸಮಯದಲ್ಲಿ ಗುಡ್ಡದಲ್ಲಿ ಮಣ್ಣಿನ ಸವೆತ ಉಂಟಾಗುತ್ತಿದೆ. ಹೀಗೆ ಆದರೆ ಕೇರಳದ ರೀತಿಯಲ್ಲಿ ನಮಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಕಂಗಲಾದರು.
ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ
ಭೀಮಾನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್‌ನಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಭೀಮಾನದಿಗೆ ಒಳಹರಿವು ಹೆಚ್ಚಳ ಗೊಂಡಿದೆ. ಭೀಮಾನದಿ ಅಬ್ಬರಕ್ಕೆ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ