Site icon Vistara News

ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್‌ ಮಾಡಿದರೂ ವೇಸ್ಟ್‌: ಡಾ. ಸಿ.ಎನ್‌. ಅಶ್ವತ್ಥನಾರಾಯಣ

Ashwath Narayan Interview

ರಮೇಶ ದೊಡ್ಡಪುರ, ಬೆಂಗಳೂರು
ರಾಜ್ಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ರಾಜಕಾರಣಿಗಳಲ್ಲಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರೂ ಪ್ರಮುಖರು. ಬೆಂಗಳೂರಿನ ಮಲ್ಲೇಶ್ವರ ಶಾಸಕರಾಗಿ ಕೈಗೊಂಡಿದ್ದ ಕಾರ್ಯಗಳ ಅನುಭವವನ್ನು ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಯಾಗಿ, ಉನ್ನತ ಶಿಕ್ಷಣ- ಐಟಿಬಿಟಿ ಸಚಿವರಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಗೆ ನೆಲೆಯೇ ಇಲ್ಲದ ರಾಮನಗರ ಭಾಗದಲ್ಲೂ ರಾಜಕೀಯ ಸಂಚಲನ ಮೂಡಿಸುತ್ತಿರುವ ಅಶ್ವತ್ಥನಾರಾಯಣ ಅವರು, ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂಭ್ರಮದ ಸಂದರ್ಭದಲ್ಲಿ ಸ್ವಾತಂತ್ರ್ಯ, ಅಮೃತ ಕಾಲ, ರಾಜಕೀಯ ವಿಚಾರಗಳ ಕುರಿತು ʻವಿಸ್ತಾರ ನ್ಯೂಸ್‌ʼ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಡೆಸುತ್ತಿದ್ದೇವೆ. ಈ ಹಿಂದೆಂದೂ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸದಷ್ಟು ಸಂಭ್ರಮ ಜನಸಾಮಾನ್ಯರಲ್ಲಿದೆ. ಈ ಸಂಭ್ರಮಕ್ಕೆ ಏನು ಕಾರಣ?

-ಈ ವರ್ಷ ವಿಶೇಷವಾಗಿ ಅಮೃತಮಹೋತ್ಸವವಾಗಿರುವುದರಿಂದ, ದೇಶಭಕ್ತಿ ಹೆಚ್ಚಿಸುವ ಹಾಗೂ ದೇಶಕ್ಕೆ ಮರು ಸಮರ್ಪಣೆ ಮಾಡಿಕೊಳ್ಳಬೇಕಾದ ಸಮಯ ಇದು. ಜಾತಿ, ಧರ್ಮ, ಮೀರಿ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸ್ವತಃ ಪ್ರಧಾನಿಯವರು ಸಂಪೂರ್ಣ ಮೇಲುಸ್ತುವಾರಿ ವಹಿಸಿ ತೊಡಗಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಇಷ್ಟೊಂದು ಜನರು ಏಕೆ ಭಾಗವಹಿಸಿದರು? ಅವರಿಗೂ ಸ್ವಂತ ಜೀವನ ಇತ್ತಲ್ಲವೇ? ಅದೆಲ್ಲವನ್ನೂ ಇಂದು ನೆನೆಯಬೇಕು. ಇಂದು ಯಾವುದೇ ಸ್ವಾತಂತ್ರ್ಯ ಹೋರಾಟ ಇಲ್ಲ. ಆದರೆ ಹಿಂದಿನವರ ತ್ಯಾಗ, ಬಲಿದಾನಗಳನ್ನು ನೆನೆಯುವುದಕ್ಕಿಂತಲೂ ಹೆಚ್ಚಿನ ಮಹತ್ವವಾದ ಕೆಲಸ ಇನ್ನೇನಿದೆ? ಇದೆಲ್ಲ ವಿಚಾರಗಳನ್ನೂ ಹಿನ್ನೆಲೆಯಾಗಿಟ್ಟುಕೊಂಡು ರೂಪಿಸಿದ ಕಾರ್ಯಕ್ರಮವಾದ್ಧರಿಂದ ಈ ಜನಮನ್ನಣೆ ಲಭಿಸಿದೆ. ಅಮೃತ ಕಾಲವನ್ನು ನಾವೆಲ್ಲರೂ ಸಂಭ್ರಮಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವಕ್ಕೆ ಈ ಜನೋತ್ಸಾಹ ಲಭಿಸಿದೆ.

ಮುಂದಿನ 25 ವರ್ಷವನ್ನು ಅಮೃತ ಕಾಲ ಎಂದು ಪ್ರಧಾನಿ ಕರೆದಿದ್ದಾರೆ. ಈ ಅಮೃತ ಕಾಲಕ್ಕೆ ಜನರು ಸಿದ್ಧವಾಗಿದ್ದಾರೆ. ಆದರೆ ಸರ್ಕಾರಗಳು, ರಾಜಕಾರಣಿಗಳು ತಮ್ಮ ಎಂದಿನ ಭ್ರಷ್ಟಾಚಾರ, ಕುಟುಂಬ ರಾಜಕಾರಣದಿಂದ ಹೊರಬರಲು ತಯಾರಾಗಿದ್ದಾರೆಯೇ?

– ಸಮಾಜ ಹೊಸತನವನ್ನು ಬಯಸುತ್ತಿದೆ. ಈ ಕಾಲಕ್ಕೆ ಪ್ರಸ್ತುತವಾದ ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜನರು ಆಶಾದಾಯಕವಾಗಿದ್ದಾರೆ. ಇನ್ನೊಂದೆಡೆ ಅದೇ ಜನರು ತಮ್ಮ ಪ್ರೀತಿ, ನಂಬಿಕೆಯನ್ನು, ಅನೇಕ ಯೋಗ್ಯವಲ್ಲದ ವ್ಯಕ್ತಿಗಳ ಮೇಲೆಯೂ ತೋರಿದ್ದಾರೆ. ಅಂಥವರನ್ನೂ ಗೆಲ್ಲಿಸಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಸನ್ನಿವೇಶವನ್ನು ಬದಲಾವಣೆ ಮಾಡುತ್ತಿದ್ದಾರೆ. ಡಿಜಿಟಲ್‌ ಎಕಾನಮಿ ಮೂಲಕ ಹಣವನ್ನು ಎಲ್ಲಿಂದ ಎಲ್ಲಿಯವರೆಗೆ ಬೇಕಾದರೂ ವರ್ಗಾವಣೆ ಮಾಡುವ ವಾತಾವರಣ ತಂದಿದ್ದಾರೆ. ಎಷ್ಟೇ ಭ್ರಷ್ಟಾಚಾರ ನಡೆಸಿದ್ದರೂ ಅದರ ಸಂಪೂರ್ಣ ಮೂಲವನ್ನು ಹುಡುಕಿ ಮಟ್ಟ ಹಾಕಬಹುದು ಎಂಬ ವಾತಾವರಣ ಇಂದು ಇದೆ. ಹಿಂದೆಲ್ಲ ಒಬ್ಬರೇ ಹತ್ತು ಪ್ಯಾನ್‌ ಕಾರ್ಡ್‌ ಹೊಂದಿದ್ದರು, ಇಂದು ಅದು ಸಾಧ್ಯವಿಲ್ಲ. ಡಿಜಿಟಲ್‌ ಪೇಮೆಂಟ್‌ ಮೂಲಕ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ.

ಆದರೆ ಇಷ್ಟೆಲ್ಲದರ ನಡುವೆಯೂ ಕೊಳಕು ಜನರು, ಕೊಳಕು ರಾಜಕಾರಣಿಗಳು, ಭ್ರಷ್ಟ ವ್ಯವಸ್ಥೆ ಇನ್ನೂ ಇದೆ. ಈ ಸಂಸ್ಕೃತಿಯನ್ನು ಕೆಲವರು ಬಯಸುತ್ತಿದ್ದಾರೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದರೆ ಜನರೂ ಜಾತಿ, ವ್ಯಕ್ತಿ, ಭಾಷೆಯನ್ನು ಮೀರಿ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಅದನ್ನು ಸರಿಪಡಿಸುವ ಪ್ರಯತ್ನಗಳು ದಿಟ್ಟವಾಗಿ ನಡೆಯುತ್ತಿವೆ. ಜಾತಿ, ಮತ ಮೀರಿ ಜನಮನ್ನಣೆ ಗಳಿಸಬಹುದು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಉದಾಹರಣೆ. ಅಮೃತ ಕಾಲದ ಸನ್ನಿವೇಶದಲ್ಲಿ ನಾವೆಲ್ಲರೂ ಈ ನಿಟ್ಟಿನಲ್ಲಿ ನೋಡಲೇಬೇಕಿದೆ.

ಪ್ರಧಾನಿ ನರೇಂದ್ರ ಮೋದಿಯವರು ಚೆನ್ನಾಗಿ ಮಾರ್ಕೆಟಿಂಗ್‌ ಮಾಡುತ್ತಾರೆ ಎಂದು ಪ್ರತಿಪಕ್ಷಗಳು ಹೇಳುತ್ತವೆ. ಆಧಾರ್‌ ತಮ್ಮ ಯೋಜನೆ, ಅದರ ಕ್ರೆಡಿಟ್‌ ಬಿಜೆಪಿ ಪಡೆಯಿತು ಎಂದರು. ತ್ರಿವರ್ಣ ಧ್ವಜದ ಮೇಲೆ ಹಕ್ಕು ಕಾಂಗ್ರೆಸ್‌ಗೆ ಇದೆ, ಬಿಜೆಪಿಯವರು ಮಾರ್ಕೆಟಿಂಗ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆಯಲ್ಲ?

-ಆಧಾರ್‌ ಬಗ್ಗೆ ಜನರಿಗೆ ಏನು ತಿಳಿಸಲಾಗಿತ್ತು? ಅದನ್ನು ಸ್ಪಷ್ಟವಾಗಿ ಜನರಿಗೆ ತಿಳಿಸದೆ, ಜನರಲ್ಲಿ ನಂಬಿಕೆ ಮೂಡಿಸದೆ ನಾವೇ ಮಾಡಿದೆವು ಎನ್ನುತ್ತಾರೆ. ನರೇಂದ್ರ ಮೋದಿಯವರು ಅದನ್ನು ಕಡ್ಡಾಯ ಮಾಡಿದಾಗ ಇದೇ ಕಾಂಗ್ರೆಸ್‌ನವರು ಏಕೆ ವಿರೋಧಿಸಿದರು? ಇವರಲ್ಲಿ ಸ್ಪಷ್ಟತೆ ಇಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಮ್ಮ ಅಧಿಕಾರದ ಸಮಯದಲ್ಲಿ ಪರಿಣಾಮಕಾರಿಯಾಗಿ ವಿಚಾರಗಳನ್ನು ಜನರಿಗೆ ತಿಳಿಸುತ್ತಿದ್ದೇವೆ. ಈ ಬದ್ಧತೆ, ನಾಯಕತ್ವ, ಸ್ಥೈರ್ಯ, ಕಾಳಜಿ ಅವರಿಗೆ ಇರಲಿಲ್ಲ, ನಮಗೆ ಇದೆ.

ತ್ರಿವರ್ಣ ಧ್ವಜ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದು ಎನ್ನುವುದು ಎಷ್ಟು ಚೀಪ್‌ ಆಲೋಚನೆ ಅಲ್ವ? ಹೀಗೆ ಹೇಳುವವರಿಗೆ ಬುದ್ಧಿ ಇದೆಯ? ತ್ರಿವರ್ಣ ಧ್ವಜವನ್ನು ಹಾರಿಸಲು ನಿರ್ಬಂಧ ವಿಧಿಸಿಕೊಂಡಿದ್ದರು ಇವರು. ನಿರ್ಬಂಧವನ್ನು ತೆರವುಗೊಳಿಸಿದ್ದರಿಂದ ಇಂದು ಜನರು ತಮ್ಮ ಮನೆಗಳ ಮೇಲೆ ಹಾರಿಸುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಒಂದೂಕಾಲು ಕೋಟಿ ಮನೆಗಳಲ್ಲಿ ಧ್ವಜ ಹಾರಿಸುತ್ತಿದೆ. ಸಮಾಜಕ್ಕೆ ಯಾರಿಂದ ಒಳ್ಳೆಯದಾದರೂ ಸಂತೋಷ, ನಾವು ಇವರಿಗಿಂತ ಉತ್ತಮವಾಗಿ ಕೆಲಸ ಮಾಡೋಣ ಎನ್ನಬೇಕೆ ಹೊರತು, ಕೇವಲ ದೂಷಾರೋಪಣೆ ರಾಜಕೀಯ ಮಾಡುತ್ತಿದ್ದಾರೆ. ಇಂಥವರು ನಿಧಾನವಾಗಿ ಸಮಾಜದಲ್ಲಿ ಅಪ್ರಸ್ತುತವಾಗುತ್ತಾರೆ.

ಪ್ರಧಾನಿ ಮೋದಿಯವರು ಖಾದಿಗೆ ರಾಯಭಾರಿಯಾಗಿದ್ದಾರೆ. ಆದರೆ ಇಂದು ಪಾಲಿಸ್ಟರ್‌ ಧ್ವಜ ಬಳಕೆಗೆ ಅನುಮತಿ ನೀಡಲಾಗಿದೆ. ಒಂದೆರಡು ವರ್ಷ ಮುಂಚೆ ಯೋಚಿಸಿದ್ದರೆ, ದೇಶದ ಎಲ್ಲ ಜನರಿಗೂ ಖಾದಿ ಧ್ವಜವೇ ಲಭಿಸುವಂತೆ ಮಾಡುವ ಸುವರ್ಣ ಅವಕಾಶ ತಪ್ಪಿಹೋಗುತ್ತಿರಲಿಲ್ಲ ಅಲ್ಲವೇ?

ಇಂದು ಎಲ್ಲ ವಸ್ತುಗಳನ್ನೂ ಬಳಸಿ ಧ್ವಜ ತಯಾರಿಸಲಾಗುತ್ತಿದೆ. ನನ್ನ ಇಲಾಖೆಯ ಸ್ವಸಹಾಯ ಸಂಘಗಳಿಂದಲೇ ಮೂವತ್ತು ಲಕ್ಷ ಧ್ವಜ ತಯಾರಿಸಲಾಗಿದೆ. ಯಾವುದರಿಂದ ತಯಾರಿಸಬೇಕು ಎಂಬುದು ಚರ್ಚೆಯಾಗುತ್ತದೆ. ಆದರೆ ಎಲ್ಲರೂ ಧ್ವಜ ಹಾರಿಸಬೇಕು ಎಂಬ ಉದ್ದೇಶದಲ್ಲಿ ನಾವು ಸ್ಪಷ್ಟವಾಗಿದ್ದೇವೆ.

ನೆಹರೂ ಭಾವಚಿತ್ರವನ್ನು ಜಾಹೀರಾತಿನಲ್ಲಿ ಬಳಸಿಲ್ಲ ಎಂಬುದು ಒಂದೆಡೆಯಾದರೆ, ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್‌ ಫೋಟೊ ಬೇಡ ಎಂದು ಕೆಲವರು ಹೇಳುತ್ತಾರೆ, ಕೆಲವರು ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹರಿಯುತ್ತಾರೆ. ಸ್ವಾತಂತ್ರ್ಯ ಲಭಿಸಿ 75 ವರ್ಷವಾದರೂ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಫೈನಲ್‌ ಮಾಡುವುದರಲ್ಲೇ ಇದ್ದೇವೆಯೇ?

-ವಿಚಾರದಲ್ಲಿ ವ್ಯತ್ಯಾಸಗಳು ಸಮಾಜದಲ್ಲಿ ಇದ್ದೇ ಇರುತ್ತವೆ. ವೀರ ಸಾವರ್ಕರ್‌ ಬಗ್ಗೆ ಕಾಂಗ್ರೆಸ್‌ನವರಿಗೆ ಅಂತಹ ಅಭಿಪ್ರಾಯಗಳಿವೆ. ಸಾವರ್ಕರ್‌ ಅವರನ್ನು ಕೆಟ್ಟದಾಗಿ ಚಿತ್ರಿಸುವುದು, ಕಡೆಗಣಿಸುವುದು, ಅವಹೇಳನಕಾರಿ ಹೇಳಿಕೆ ನೀಡುವುದು ನಡೆದೇ ಇದೆ.

ನಾವು ಅಖಂಡ ಭಾರತದ ಬಗ್ಗೆ ಮಾತನಾಡುತ್ತೇವೆ. ಅಖಂಡ ಭಾರತವನ್ನು ವಿಭಜನೆ ಮಾಡಿದ ವ್ಯಕ್ತಿ ನೆಹರೂ ಅವರನ್ನು ಕೊಂಡಾಡುವ ಪ್ರಶ್ನೆಯೇ ಇಲ್ಲ. ಇದರಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಅಖಂಡ ಭಾರತ ವಿಭಜನೆ ಆದ ಸಂದರ್ಭದಲ್ಲಿ ಎಷ್ಟು ಜನ ಮಾನ, ಪ್ರಾಣ ಕಳೆದುಕೊಂಡರು, ಆ ಎಲ್ಲ ಸಾವು ನೋವುಗಳಿಗೆ ಯಾರು ಹೊಣೆ? ಅವರು ಸಾವರ್ಕರ್‌ ಕುರಿತು ಏನು ಬೇಕಾದರೂ ಹೇಳಬಹುದು, ನಾವು ನಿಜವಾದ ವಿಚಾರವನ್ನು ಜನರಿಗೆ ತಿಳಿಸಬಾರದೆ?

ಸಿದ್ದರಾಮೋತ್ಸವದ ಸಫಲತೆಯಿಂದ ಬಿಜೆಪಿಯಲ್ಲಿ ಆತಂಕ, ಎಚ್ಚರಿಕೆಯ ಲಕ್ಷಣಗಳೇನಾದರೂ ಇವೆಯೇ?

-ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ ಪಕ್ಷದ ಬಣ್ಣ ಸಂಪೂರ್ಣ ಬಯಲಾಯಿತು. ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟು ಇತಿಹಾಸ ಇದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ನಾಯಕರಿಲ್ಲ ಎನ್ನುವುದು ಸಿದ್ದರಾಮೋತ್ಸವದಿಂದ ಸಾಬೀತಾಯಿತು. 75 ವರ್ಷ ತುಂಬಿದ್ದಕ್ಕೆ ಬೀಳ್ಕೊಡುಗೆ ಮಾಡಬೇಕಿತ್ತು. ನಿಮಗೆ 75 ವರ್ಷ ತುಂಬಿದೆ ಎಂದು ಹೇಳಬೇಕಿತ್ತು. 65 ವರ್ಷ ಆದಾಗಲೇ ಇನ್ನೈದು ವರ್ಷಕ್ಕೆ ನಿವೃತ್ತಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅಲ್ಲಿಂದ ಇಲ್ಲಿಗೆ ಎಷ್ಟು ನಾಯಕರು ಆಗಿ ಹೋಗಿದ್ದಾರೆ, ಎಷ್ಟು ನೀರು ಹರಿದಿದೆ ಅಲ್ಲವೇ? ಈಗಿನ ಕಾಲಕ್ಕೆ ಇವರು ಎಷ್ಟು ಪ್ರಸ್ತುತವಾಗಿದ್ದಾರೆ ಎನ್ನುವುದನ್ನು ಅವರೇ ಯೋಚಿಸಬೇಕು.

ಕಾಂಗ್ರೆಸ್‌ನಿಂದ ಸಿದ್ದರಾಮೋತ್ಸವ, ಫ್ರೀಡಂ ಮಾರ್ಚ್‌. ಬಿಜೆಪಿಯಲ್ಲಿ ಕಾರ್ಯಕರ್ತರ ನಡುವೆ ಗೊಂದಲ, ನಾಯಕರುಗಳಿಂದ ಗೊಂದಲದ ಹೇಳಿಕೆಗಳು… 2023ರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿರುವ ರೀತಿ ಇದೇನಾ?

-ದೇಶಭಕ್ತಿ ಎಂದ ಕೂಡಲೆ ಒಬ್ಬ ವ್ಯಕ್ತಿ, ನಂಬಿಕೆ, ನಾಯಕತ್ವ ಗುಣಗಳು, ಪಾರದರ್ಶಕತೆ ಎಲ್ಲವೂ ಇರಬೇಕು. ಈ ಉತ್ಸವಗಳನ್ನು ಮಾಡುತ್ತಿರುವವರಲ್ಲಿ ಅರ್ಹತೆ ಇದೆಯೇ? ನಂಬಿಕೆ ಇದೆಯೇ? ಒಮ್ಮೆ ಜನರಲ್ಲಿ ನಂಬಿಕೆಯನ್ನು ಕಳೆದುಕೊಂಡವರಿಂದ ಏನನ್ನು ಬಯಸುವುದು? ಇಂಥವರು ಎಂತಹ ಮಾರ್ಚ್‌, ರ‍್ಯಾಲಿ ಮಾಡಿದರೂ, ಅವರು ಹರಸಾಹಸಪಟ್ಟರೂ, ಪಲ್ಟಿ ಹೊಡೆದರೂ ಏನೂ ಆಗುವುದಿಲ್ಲ. ನಮ್ಮ ಬಳಿ ಹಣ, ಶಕ್ತಿ, ಏನೇ ಇದೆ ಎಂದು ಇವರು ಹೇಳಬಹುದು, ಇಂತಹ ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್‌, ರ‍್ಯಾಲಿ ಮಾಡಿದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ.

ಕಾರ್ಯಕರ್ತರ ಅಸಮಾಧಾನದ ಬಗ್ಗೆ ಹೇಳುವುದಾದರೆ, ಅವರ ಆಕ್ಷೇಪಣೆಯಲ್ಲಿ ಯಾವುದೇ ತಪ್ಪಿಲ್ಲ. ಎರಡೂ ಕಡೆ ನಮ್ಮದೇ ಸರ್ಕಾರ ಇದ್ದರೂ ಕಾರ್ಯಕರ್ತರು ಸಾವಿಗೀಡಾಗುತ್ತಾರೆ ಎನ್ನುವ ಪ್ರಶ್ನೆ ಕೇಳುವಂತದ್ದೇ. ಇಂತಹ ಪ್ರಶ್ನೆಯನ್ನು ಅವರು ನಮ್ಮ ಬಳಿ ಕೇಳದೆ ಸಿದ್ದರಾಮಯ್ಯ, ಶಿವಕುಮಾರ್‌ ಬಳಿ ಕೇಳುವುದಕ್ಕಾಗುತ್ತದೆಯೇ? ಮನೆಯಲ್ಲಿ ತಂದೆ ಮಗನನ್ನು, ಮಗ ತಂದೆಯನ್ನು ಪ್ರಶ್ನಿಸುವುದು ಇದ್ದೇ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಸರಿಪಡಿಸುವ ಪ್ರಯತ್ನಗಳು ನಡೆದಿವೆ.

ಪರೇಶ್‌ ಮೇಸ್ತಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದವರಿಗೆ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ಸಂಘಟನೆ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಎಲ್ಲಿದೆ ಹಾಗಾದರೆ?

ಇಂತಹ ಸೂಕ್ಷ್ಮ ವಿಚಾರಗಳನ್ನು ಪರಿಶೀಲನೆ ಮಾಡುತ್ತೇವೆ. ನಾವೆಲ್ಲರೂ ಕಾರ್ಯಕರ್ತರಾಗಿಯೇ ಬೆಳೆದಿರುವವರು. ಗೊತ್ತೋ ಗೊತ್ತಿಲ್ಲದೆಯೇ ಅಂತಹದ್ದು ಆಗಿದ್ದರೆ ಮುಂದೆ ಸರಿಯಾಗುತ್ತದೆ.

ಇಲ್ಲಿವರೆಗೆ ಅನೇಕ ಬಿಜೆಪಿ ನಾಯಕರು ರಾಮನಗರ, ಮಂಡ್ಯದಲ್ಲಿ ಬಿಜೆಪಿ ಪರವಾಗಿ ಚುನಾವಣೆಗಳನ್ನು ನಡೆಸಿದ್ದಾರೆ. ಆದರೆ ಈಗ ನಿಮ್ಮ ವಿರುದ್ಧ ಪ್ರತಿಪಕ್ಷಗಳು ನಡೆಸಿದಷ್ಟು ದಾಳಿಯನ್ನು ಈ ಹಿಂದೆ ನಡೆಸಿರಲಿಲ್ಲ. ಇದಕ್ಕೆ ಕಾರಣ ಏನು?

-ನಾವು ಯಾರನ್ನೂ ದ್ವೇಷಿಸಬೇಕು, ಅಸಡ್ಡೆಯಾಗಿ ನಡೆದುಕೊಳ್ಳಬೇಕು ಎಂಬ ಉದ್ದೇಶವಿಲ್ಲ. ನಮ್ಮ ಮುಖ್ಯಮಂತ್ರಿಯವರು ಮೂರು ವರ್ಷದ ನಂತರ ನಮ್ಮ ಜಿಲ್ಲೆಗೆ ಭೇಟಿ ನೀಡಿದಾಗ ಯಾವ ರೀತಿ ವರ್ತನೆ ಇರಬೇಕಿತ್ತೋ ಹಾಗೆ ಅವರ ವರ್ತನೆ ಇರಲಿಲ್ಲ. ಇವರು ಅಸಡ್ಡೆಯಾಗಿ ನಡೆದುಕೊಂಡರೂ ಮುಖ್ಯಮಂತ್ರಿಯವರು ಗೌರವಯುತವಾಗಿ ನಡೆದುಕೊಂಡರು. ನಾನು ಮಾತನಾಡಿದ ಮೇಲೆ ಎಂಪಿ ಮಾತನಾಡಿ, ನಂತರ ಮುಖ್ಯಮಂತ್ರಿ ಮಾತನಾಡಿದರು. ಇದಕ್ಕಿಂತ ಇನ್ನೇನು ಗೌರವ ಕೊಡಬೇಕು ಅವರಿಗೆ? ಪ್ರತಿಮೆಗೆ ಮಾಲಾರ್ಪಣೆ ಸಂದರ್ಭದಲ್ಲಿ ನಾನು ಕೆಳಗೆ ಇಳಿದು ಅವರನ್ನೇ ಮೇಲೆ ಹತ್ತಿಸಿದೆ. ಆದರೆ ವೇದಿಕೆಗೆ ಬಂದ ಮೇಲೆಯೂ ಹಿಂಬಾಲಕರನ್ನು ಕೂರಿಸಿಕೊಂಡು ಗಲಾಟೆ ಮಾಡಿದರು.

ಹೇಗೆ ಬೇಕಾದರೂ ವರ್ತನೆ ತೋರಲು ಇದು ಅವರ ಮನೆಯೇ? ಸರ್ಕಾರ ತನ್ನ ಶಕ್ತಿಯನ್ನು ಇಂತಹ ಸಂದರ್ಭದಲ್ಲಿ ಮುಲಾಜಿಲ್ಲದೆಯೇ ತೋರಿಸಲೇಬೇಕಾಗುತ್ತದೆ. ಈ ರೀತಿ ವರ್ತನೆಯನ್ನು ಸಹಿಸಲು ನಾನು ಸಿದ್ಧನಾಗಿಲ್ಲ. ಅಸಹಾಯಕನಾಗಿ ಬಾಳುವುದರಲ್ಲಿ ಏನೂ ಅರ್ಥ ಇಲ್ಲ. ಇದೆಲ್ಲವನ್ನೂ ಬಿಟ್ಟು ಕೆಲಸದ ಮೂಲಕ ಅವರೇನು ಮಾಡಿದ್ದಾರೆ ಎನ್ನುವ ಗಂಡಸ್ತನವನ್ನು ತೋರಿಸಲಿ. ಅದನ್ನು ಬಿಟ್ಟು ವೇದಿಕೆಯಲ್ಲೇ ಡ್ಯಾಷ್‌ ಹೊಡೀತೀವಿ ಎನ್ನುವುದನ್ನು ನೋಡಲು ನಾವಿದ್ದೇವೆಯೇ?

ಕುಮಾರಸ್ವಾಮಿ ಅವರ ಬಗ್ಗೆ ಹೇಳುವುದಾದರೆ, ಮಾತೆತ್ತಿದರೆ ಫೇಕ್‌ ಮಾರ್ಕ್ಸ್‌ ಕಾರ್ಡ್‌, ಬಿಬಿಎಂಪಿ ಫೈಲ್‌ ಸುಟ್ಟವರು ಎನ್ನುತ್ತಾರೆ. ಯಾವ ಆಧಾರ ಇಟ್ಟುಕೊಂಡು ಇವರು ಮಾತನಾಡುತ್ತಾರೆ? ಮುಖ್ಯಮಂತ್ರಿಯಾಗಿದ್ದವನು ಒಂದು ಹೇಳಿಕೆ ಕೊಡುವ ಮುನ್ನ ಆಧಾರ ಇರಬೇಕಲ್ವ? ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಇದನ್ನು ಏಕೆ ತನಿಖೆ ನಡೆಸಿಲ್ಲ? ನಾನು ಇವರ ರೀತಿ ರಾಜಕೀಯಕ್ಕೆ ಜೀವನೋಪಾಯಕ್ಕೆ ಬಂದಿಲ್ಲ. ಇನ್ನೊಬ್ಬರ ರಕ್ತ, ಹೆಸರಿನ ಮೇಲೆ ಬದುಕಬೇಕು ಎಂದು ಬಂದಿಲ್ಲ. ಸುಳ್ಳು ಹೇಳಿಕೊಂಡು ಅತ್ತು ಕರೆದು ಬದುಕುವಂತಹ ನೀಚ ನಾನಲ್ಲ. ಇದೆಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದೇನೆ. ತೀಕ್ಷ್ಣವಾಗಿಯೂ ಉತ್ತರ ನೀಡಿದ್ದೇನೆ. ಈಗಾಗಲೆ ಅವರಿಗೆ ಲೀಗಲ್‌ ನೋಟಿಸ್‌ ಕೊಟ್ಟಿದ್ದೇನೆ. ಇವರ ರೀತಿ ನಾವು ಆಕ್ಸಿಡೆಂಟ್‌ ಕೇಸ್‌ಗಳಲ್ಲ. ಸ್ಪಷ್ಟವಾದ ಉದ್ದೇಶವನ್ನು ಇಟ್ಟುಕೊಂಡು ಬಂದಿದ್ದೇವೆ.

ಡಿ.ಕೆ. ಶಿವಕುಮಾರ್‌ ಅವರನ್ನು ಮಣಿಸಲು ಕುಮಾರಸ್ವಾಮಿ ಅವರು ನಿಮಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತಿತ್ತಲ್ಲ, ಅದು ಈಗ ಬದಲಾಗಲು ಕಾರಣ?

-ಶತ್ರುವಿನ ಶತ್ರು ಮಿತ್ರ ಎಂಬ ಭಾವನೆಯನ್ನು ಅವರು ಇಟ್ಟುಕೊಂಡಿದ್ದರು. ಆದರೆ ಒಮ್ಮೆ ಕಾರ್ಯಕ್ರಮದಲ್ಲಿ, ವಿಶ್ವದ ಒಕ್ಕಲಿಗರೆಲ್ಲ ನನ್ನ ಬಂಧುಗಳೇ ಎಂದು ನಾನು ಹೇಳಿದ ಕೂಡಲೆ ಅವರಿಗೆ ಉರಿದುಹೋಯಿತು. ಆಗಲೇ ಪ್ಲೇಟ್‌ ಚೇಂಜ್‌ ಆಗಿ ಹೋಯಿತು. ನಾನು ಅವರಿಗಿಂತಲೂ(ಡಿ.ಕೆ. ಶಿವಕುಮಾರ್‌ ಬ್ರದರ್ಸ್‌) ಡೇಂಜರಸ್‌ ಎನ್ನುವುದು ಅವರಿಗೆ ತಿಳಿದು ಹೀಗೆ ಮಾತನಾಡಿದರು. ಇವರ ಸರ್ಟಿಫಿಕೇಟ್‌ ಯಾರಿಗೆ ಬೇಕು? ನನಗೆ ಪಕ್ಷ, ಜನರ ಬೆಂಬಲ ಸಾಕು.

ರಾಮನಗರದಲ್ಲಿ ಸಕ್ರಿಯವಾಗಿರುವುದನ್ನು ಕಂಡು, ಮಲ್ಲೇಶ್ವರದಿಂದ ರಾಮನಗರಕ್ಕೆ ತೆರಳುತ್ತೀರ ಎಂಬ ಚರ್ಚೆ ಇತ್ತಲ್ಲ?

-ಮಲ್ಲೇಶ್ವರದ ಜನರು ನನ್ನನ್ನು ಪ್ರೀತಿಸಿ ಗೆಲ್ಲಿಸಿದ್ದಾರೆ. ಅವರನ್ನು ಬಿಟ್ಟು ನಾನ್ಯಾಕೆ ಹೋಗಬೇಕು? ನಿಜ ಹೇಳಬೇಕೆಂದರೆ, ಜಿಲ್ಲಾ ಉಸ್ತುವಾರಿ ಸಚಿವನಾಗಿ ರಾಮನಗರದಲ್ಲಿ ಕೆಲಸ ಮಾಡುತ್ತಿದ್ದೇನೆ. ಜವಾಬ್ದಾರಿಯುತ ಸಚಿವನಾಗಿ ಆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು. ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಕೆಲಸ ಮಾಡಬೇಕು ಎಂದು ಹೋಗಿದ್ದೇನೆ. ನನಗೆ ಯಾವುದೇ ವೈಮನಸ್ಯ, ಧ್ವೇಷ ಭಾವನೆ ಇಲ್ಲ. ಕೆಲವು ಸಂದರ್ಭದಲ್ಲಿ ನಡೆದ ಘಟನೆಗಳು ವ್ಯತಿರಿಕ್ತವಾಗಿದ್ದವು ಅಷ್ಟೆ. ಉಳಿದಂತೆ ನಮ್ಮ ಕೆಲಸಗಳನ್ನು ಪಕ್ಷಾತೀತವಾಗಿ ನಡೆಸುತ್ತಿದ್ದೇವೆ. ಅಲ್ಲಿ ಸ್ಪರ್ಧಿಸಬೇಕು ಎಂಬ ರಾಜಕೀಯ ಸ್ವಾರ್ಥದಿಂದ ನಾನು ರಾಮನಗರಕ್ಕೆ ಹೋಗಿಲ್ಲ.

ಬಿಬಿಎಂಪಿ ಅಭಿವೃದ್ಧಿಯಲ್ಲಿ, ಬಿಬಿಎಂಪಿ ಚುನಾವಣೆಯಲ್ಲಿ ನಿಮಗೆ ಅಗತ್ಯ ಅವಕಾಶಗಳನ್ನು ನೀಡುತ್ತಿಲ್ಲ ಎಂಬ ಮಾತುಗಳಿವೆಯಲ್ಲ?

-ಬೆಂಗಳೂರು ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಯವರೇ ಇದ್ದಾರೆ. ಅದೇ ಜಿಲ್ಲೆಯ ಸಚಿವರು ಉಸ್ತುವಾರಿ ಆಗಿರಬಾರದು ಎನ್ನುವಂತಹ ನೀತಿಯಿಂದಾಗಿ ನಮಗೆ ಅವಕಾಶ ಸಿಕ್ಕಿಲ್ಲ. ಸಿಎಂ ಮಾರ್ಗದರ್ಶನದಲ್ಲಿ ಎಲ್ಲವೂ ನಡೆಯುತ್ತಿವೆ, ನಮ್ಮಿಂದ ಸಲಹೆಗಳನ್ನು ಪಡೆಯುತ್ತಾರೆ. ನಮ್ಮ ಪಾತ್ರ ಇಲ್ಲಿ ಸೀಮಿತವಾದದ್ದು.

ಬೆಂಗಳೂರಿನಲ್ಲಿ ಸಾರಿಗೆ, ಮೆಟ್ರೊ, ಸಬ್‌ಅರ್ಬನ್‌, ವೈಟ್‌ ಟಾಪಿಂಗ್‌, ನೀರು ಸರಬರಾಜು, ನೈರ್ಮಲ್ಯ, ವಿದ್ಯಾಸಂಸ್ಥೆಗಳು, 13 ಸಾವಿರ ಕಿಲೋಮೀಟರ್‌ ರಸ್ತೆ ಅಭಿವೃದ್ಧಿ ಆಗುತ್ತಿದೆ. ಈ ನಡುವೆ ಕೋವಿಡ್‌ ಸಮಸ್ಯೆ ಎದುರಾಯಿತು. ಜನರ ಜೀವ ಉಳಿಸಿದರೆ ಸಾಕು ಎನ್ನುವ ಸ್ಥಿತಿ ಇತ್ತು, ಹಾಗಾಗಿ ಕೆಲಸದಲ್ಲಿ ಸ್ವಲ್ಪ ನಿಧಾನವಾಗಿದೆ. ಕಸ ನಿರ್ವಹಣೆಗೆ ಇಂದೋರ್‌ಗಿಂತಲೂ ಉತ್ತಮ ಯೋಜನೆಯನ್ನು ಈಗಾಗಲೆ ಆರಂಭಿಸಲಾಗಿದೆ, ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ತಂದಿದ್ದೇವೆ, ಭೂಸುಧಾರಣೆ ತಂದಿದ್ದೇವೆ, ವಿಶೇಷ ಹೂಡಿಕೆ ಪ್ರದೇಶಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆಯುತ್ತವೆ.

ಆಗಸ್ಟ್‌ 28ರಂದು ಜನೋತ್ಸವ ಮತ್ತೆ ನಿಗದಿ ಆಗಿದೆ. ಇದರ ನಂತರವಾದರೂ ಬಿಜೆಪಿ ಚುನಾವಣೆ ಮೂಡ್‌ಗೆ ಬರುತ್ತದೆಯೇ ಅಥವಾ ಈಗಿನಂತೆಯೇ ಗೊಂದಲಗಳು ಮುಂದುವರಿಯುತ್ತವೆಯೇ?

-ಸ್ಥಿರತೆ ಇರುವ ಪಕ್ಷ ಎಂದರೆ ಬಿಜೆಪಿ. ಪಕ್ಷಕ್ಕೆ ಆ ರೀತಿ ಶಕ್ತಿ, ಬದ್ಧತೆ ಇದೆ. ಗೊಂದಲ, ಸಮಸ್ಯೆಗಳು ಯಾವುದೂ ಇಲ್ಲ. ಬಿ.ಎಸ್‌. ಯಡಿಯೂರಪ್ಪನವರು ನಮ್ಮ ಸರ್ವೋಚ್ಚ ನಾಯಕರು. ವಯಸ್ಸಿನ ಕಾರಣಕ್ಕೆ ಸ್ವಯಿಚ್ಛೆಯಿಂದ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಜ್ಞಾನಿಗಳು, ತಿಳಿವಳಿಕೆ ಉಳ್ಳವರು, ಸುದೀರ್ಘ ರಾಜಕೀಯ ಅನುಭವ ಇರುವ ಬಸವರಾಜ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಇದೆಲ್ಲದರ ನಡುವೆ ಕೆಲವೇ ವ್ಯಕ್ತಿಗಳು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಇವರ ಹೇಳಿಕೆ ಹಿಂದೆ ಅಜೆಂಡಾ ಇರುತ್ತವೆ. ಯಾರಾದರೂ ಪಕ್ಷದ ಶಿಸ್ತಿನ ಸಿಪಾಯಿಗಳು ಇಂತಹ ಹೇಳಿಕೆ ಕೊಡುತ್ತಾರ? ಗೊಂದಲ ನಿರ್ಮಾಣ ಮಾಡಬೇಕು ಎಂಬ ದುರುದ್ದೇಶ ಹೊಂದಿರುವವರನ್ನು ಖಂಡಿಸುತ್ತೇವೆ, ಪಕ್ಷ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಇದು ನಮ್ಮ ಪ್ರೈವೇಟ್‌ ಕಂಪನಿಯಲ್ಲ, ಪಕ್ಷದ ಜತೆಯಲ್ಲಿ ಜೋಡಿಸಿಕೊಳ್ಳಬೇಕು. ವ್ಯತ್ಯಾಸಗಳಿದ್ದವರು ಪಕ್ಷದಿಂದ ಹೊರಹೋಗುವುದು ಉತ್ತಮ.

ಸರ್ಕಾರ ಮೂರು ವರ್ಷ ಪೂರೈಸುತ್ತಿರುವುದನ್ನು ಜನರ ವಿಶ್ವಾಸದೊಂದಿಗೆ ಆಯೋಜನೆ ಮಾಡುತ್ತಿದ್ದೇವೆ, ಆಗಸ್ಟ್‌ 28ರ ನಂತರ ಇನ್ನಷ್ಟು ಒಗ್ಗಟ್ಟಿನಲ್ಲಿ, ಬಲಿಷ್ಠವಾಗಿ ಹೆಜ್ಜೆಗಳನ್ನು ಇಡುತ್ತೇವೆ.

Exit mobile version