ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಆದರೆ, ಅಷ್ಟರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಉದ್ಘಾಟನೆ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆಯ ಹೆದ್ದಾರಿ ಬಳಿ ಪ್ರತಿಭಟನೆ ನಡೆಸಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅನ್ನು ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ. ಹೆದ್ದಾರಿಗಾಗಿ ಜಮೀನು ಕೊಟ್ಟ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕಣಮಿಣಿಕೆ ಗ್ರಾಮದ ಬಳಿಯ ಟೋಲ್ ಪ್ಲಾಜಾ ಎದುರು ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು.
ಇದನ್ನೂ ಓದಿ: Modi in Karnataka: ದಶಪಥ ಹದ್ದಾರಿ ಲೋಕಾರ್ಪಣೆ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಆಗಿರುವ ಬದಲಾವಣೆಗಳೇನು?
ಇದುವರೆಗೆ ಕಾಮಗಾರಿಯನ್ನೇ ಪೂರ್ಣಗೊಳಿಸಿಲ್ಲ. ಅಷ್ಟರೊಳಗೇ ಹೆದ್ದಾರಿಯನ್ನು ಉದ್ಘಾಟನೆ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಂಬಳಗೂಡು ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.