ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ (Modi in Karnataka) ಮೈಸೂರು ಅರಮನೆಯಲ್ಲಿ ರುಚಿರುಚಿಯಾದ ತಿನಿಸುಗಳನ್ನು ಸವಿದಿದ್ದಾರೆ. ಅದರಲ್ಲೂ ಕರ್ನಾಟಕದ ಜನಪ್ರಿಯ ಸಿಹಿತಿನಿಸು ಮೈಸೂರ್ ಪಾಕ್‌ನ ರುಚಿಯನ್ನು ಮೆಚ್ಚಿದ್ದಾರೆ.
ಮೈಸೂರು ಪಾಕ್ ಕರ್ನಾಟಕದ ಅತ್ಯಂತ ಜನಪ್ರಿಯ ಸಿಹಿ. ನಮ್ಮ ರಾಜ್ಯದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಊಟ ಹಾಗೂ ಭಕ್ಷಗಳ ಸಾಲಿನಲ್ಲಿ ಮೈಸೂರು ಪಾಕ್ ಇದ್ದೇ ಇರುತ್ತದೆ. ಗಿಫ್ಟ್ ಪ್ಯಾಕ್‌ಗಳ ನಡುವೆಯೂ ಮೈಸೂರ್ ಪಾಕ್‌ನ ಎರಡು ತುಣುಕುಗಳು ಇದ್ದೇ ಇರುತ್ತವೆ. ಇಂತಿಪ್ಪ ಸಿಹಿಯನ್ನು ಕರ್ನಾಟಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ಮೆಚ್ಚಿದ್ದಾರೆ. ಪ್ರಧಾನಿಯರು ಮೈಸೂರು ಪಾಕ್ ತಿಂದ ಬೆನ್ನಲ್ಲೆ ಈ ಸ್ವೀಟ್‌ನ ಜಿಐ ಟ್ಯಾಗ್ ಚರ್ಚೆಗೆ ಜೀವ ಬಂದಿದೆ. ಈ ಸಿಹಿ ತಿನಿಸು ಕರ್ನಾಟಕ ಮೂಲದ್ದು ಎಂಬುದಕ್ಕೆ ಐತಿಹಾಸಿಕ ಪುರಾವೆಗಳು ಇದ್ದರೂ ತಮಿಳುನಾಡು ಇತ್ತೀಚಿನ ದಿನಗಳಲ್ಲಿ ನಮ್ಮದು ಎಂಬುದಾಗಿ ಕ್ಯಾತೆ ತೆಗೆಯುತ್ತಿದೆ. ಇದೀಗ ನರೇಂದ್ರ ಮೋದಿಯವರು ಮೈಸೂರಿನಲ್ಲೇ ಬಂದು ಸಿಹಿ ತಿನ್ನುವ ಮೂಲಕ ಕರ್ನಾಟಕಕ್ಕೆ ಜಿಐ ಟ್ಯಾಗ್ ಸಿಗುವ ಸಾಧ್ಯತೆಗಳಿವೆ ಎಂಬುದಾಗಿ ಹೇಳಲಾಗುತ್ತಿದೆ. ಯಾವುದಾದರೂ ಒಂದು ವಸ್ತು ಆ ಪ್ರದೇಶಕ್ಕೆ ಸಂಬಂಧಿಸಿದ್ದು, ಆ ಪ್ರದೇಶದಲ್ಲಿ ಹುಟ್ಟಿಕೊಂಡಿದ್ದು ಎಂದು ಅಧಿಕೃತಗೊಳಿಸಲು ಭಾರತ ಸರಕಾರದಿಂದ ಜಿ.ಐ ಟ್ಯಾಗ್ ನೀಡಲಾಗುತ್ತದೆ. ಉದಾಹರಣೆಗೆ, ಡಾರ್ಜಿಲಿಂಗ್ ಟೀ, ಕಾಂಚೀಪುರಂ ಸಿಲ್ಕ್, ಮೈಸೂರು ಸ್ಯಾಂಡಲ್ ಸೋಪ್.
ಮೈಸೂರು ಪಾಕ್ ಎಲ್ಲಿಯದ್ದು?
ಮೈಸೂರ್ ಪಾಕ್ ಎಂಬ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಕರ್ನಾಟಕದ ಐತಿಹಾಸಿಕ ನಗರಿ ಮೈಸೂರು. ಹಾಗನ್ನಿಸುವುದರಲ್ಲಿ ತಪ್ಪೇನಿಲ್ಲ, ಮೈಸೂರ್ ಪಾಕ್ ಮೊದಲು ಸಿದ್ಧಗೊಂಡಿದ್ದು ಮೈಸೂರು ಅರಮನೆಯಲ್ಲಿ ಎಂದು ಇತಿಹಾಸ ಹೇಳುತ್ತದೆ. ಮೈಸೂರ್ ಪಾಕ್ ತಯಾರಿಯ ಹಿಂದೆ ಒಂದು ಸುಂದರ ಕಥೆಯೂ ಇದೆ.
ಕಾಕಾಸುರ ಮಾದಪ್ಪ ಎಂಬುವವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯಲ್ಲಿ ಬಾಣಸಿಗರಾಗಿದ್ದರು. ರಾಜ ಕುಟುಂಬಕ್ಕೆ ಬೇಕಾದ ಎಲ್ಲ ಸಿಹಿ ತಿನಿಸನ್ನು ಅವರೇ ತಯಾರಿಸುತ್ತಿದ್ದರು. ಸಿಹಿ ತಿನಿಸು ತಯಾರಿಸುವಲ್ಲಿ ಅವರದ್ದು ಪಳಗಿದ ಕೈ. ಪಾಕಶಾಸ್ತ್ರದ ಬಗ್ಗೆ ಇವರಿಗಿದ್ದ ಜ್ಞಾನವೂ ಅಪಾರ. ಒಂದು ದಿನ ಕಾಕಾಸುರ ಮಾದಪ್ಪ ಅವರನ್ನು ಕರೆದು ಮಹಾರಾಜರು ʼಯಾವುದಾದರೂ ಒಂದು ಹೊಸ ಬಗೆಯ ಸಿಹಿ ತಿನಿಸು ತಯಾರಿಸುʼ ಎಂದು ಆಜ್ಞೆ ಮಾಡಿದರು. ಮಹಾರಾಜರು ಆಜ್ಞೆ ಮಾಡಿದ ಮೇಲೆ ಮಗಿಯಿತು. ಮರು ಮಾತನಾಡುವಂತಿಲ್ಲ, ತಿನಿಸು ತಯಾರಿಸಬೇಕಿತ್ತು ಅಷ್ಟೇ. ತಮ್ಮ ಪಾಕ ಜ್ಞಾನವನ್ನು ಬಳಸಿಕೊಂಡ ಅವರು ಕಡಲೆ ಹಿಟ್ಟು, ಸಕ್ಕರೆ ಹಾಗೂ ತುಪ್ಪ ಸೇರಿಸಿ ಪಾಕ ಬರಿಸಿ ಒಂದು ಸಿಹಿ ತಯಾರಿಸಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಬಡಿಸಿದರು. ತಿನಿಸಿನ ರುಚಿಯನ್ನು ಮಹಾರಾಜರು ಮೆಚ್ಚಿದರು. ಆದರೆ ಹೆಸರೇ ಇಲ್ಲದ ಆ ಸ್ವೀಟ್ ಅನ್ನು ಏನೆಂದು ಕರೆಯುವುದು ಎಂಬ ಚರ್ಚೆ ಅರಮನೆಯ ಪಾಕಶಾಲೆಯಲ್ಲಿ ಶುರುವಾಯಿತು. ಮೈಸೂರಿನಲ್ಲಿ ತಯಾರಾದ ಕಾರಣ ʼಮೈಸೂರು ಪಾಕʼ ಎಂದು ಹೆಸರಿಡಲು ಮಹಾರಾಜರು ನಿರ್ಧರಿಸಿದರು. ಅದೇ ಹೆಸರು ಮುಂದುವರಿದು ಮೈಸೂರ್ ಪಾಕ್ ಎಂದೇ ಜನಪ್ರಿಯವಾಯಿತು.
ಮಾದಪ್ಪನವರದ್ದೇ ಮೊದಲ ಅಂಗಡಿ
ಅರಮನೆಯ ಅಡುಗೆಮನೆಯಲ್ಲಿ ಇದರ ಆವಿಷ್ಕಾರವಾದ ನಂತರ, ಮಾದಪ್ಪನವರ ಕುಟುಂಬ ಇದನ್ನು ಅಂಗಡಿಯಲ್ಲಿ ಮಾರಾಟ ಮಾಡಲು ಶುರು ಮಾಡಿದರು. ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಅಂಗಡಿಯೊಂದನ್ನು ಶುರು ಮಾಡಿದರು.
ಮೈಸೂರ್ ಪಾಕ್ ತಯಾರಿಸಲು ಎರಡು ವಿಧಾನ:
ಮೈಸೂರು ಪಾಕ್ ಎರಡು ರೀತಿಯಲ್ಲಿ ಮಾಡಬಹುದು. ಹದವಾದ ಪಾಕದಲ್ಲಿ ಮಾಡಿದರೆ ಅತ್ಯಂತ ಮೃದುವಾಗಿರುತ್ತದೆ, ಬಾಯಲ್ಲಿ ಇಡುತ್ತಿದ್ದಂತೆ ಕರಗಿ ಹೋಗುತ್ತದೆ. ಇನ್ನೊಂದು ಬಗೆಯೆಂದರೆ, ಸ್ವಲ್ಪ ಏರು ಪಾಕದಲ್ಲಿ ಮಾಡಬಹುದು. ಆಗ ಅದು ಗಟ್ಟಿಯಾಗಿ ಇರುತ್ತದೆ. ಎರಡೂ ಬಗೆಯ ಮೈಸೂರ್ ಪಾಕ್ ಅದರದ್ದೇ ಆದ ರೀತಿಯಲ್ಲಿ ರುಚಿಯಾಗಿರುತ್ತದೆ.
ಇದನ್ನೂ ಓದಿ: Modi in Karnataka | ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮೈಸೂರಿಗೆ ಬಂದಿದ್ದೇನೆ : ಪ್ರಧಾನಿ ಮೋದಿ