ರಮೇಶ ದೊಡ್ಡಪುರ ಬೆಂಗಳೂರು
ಈ ರಾಜಕೀಯ ಪಟ್ಟುಗಳು ಅನೇಕ ಬಾರಿ ಅರ್ಥ ಆಗುವುದು ಬಹುಕಷ್ಟ. ಯಾರು ಯಾರ ಜತೆ ಚೆನ್ನಾಗಿರುತ್ತಾರೆ, ಯಾರು ಯಾರನ್ನು ಧ್ವೇಷಿಸುತ್ತಾರೆ, ಮತ್ತು ಏಕೆ ಎಂದು ತಿಳಿಯಲು ಜನ್ಮವೇ ಬೇಕು. ಈಗಲೂ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಈಗ ಮೈಸೂರು ರಾಜಕಾರಣದಲ್ಲಿ ಪ್ರಧಾನಿ ಮೋದಿ ಹೆಚ್ಚಾಗಿ ಯಾರನ್ನು ಪ್ರೀತಿಸ್ತಾರೆ ಎನ್ನುವುದೇ ಪ್ರಶ್ನೆ. ಯಂಗ್ ನಾಯಕ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನೋ ಅಥವಾ ಹಿರಿಯ ಕಾರ್ಯಕರ್ತ, ಕೆ.ಆರ್. ಕ್ಷೇತ್ರದ ಶಾಸಕ ರಾಮದಾಸ್ ಅವರನ್ನೋ ಎಂಬ ಗೊಂದಲ ಮೈಸೂರು ಕ್ಷೇತ್ರದ ಜನರದ್ದು.
ಮೈಸೂರಿನಲ್ಲಿ ಸೋಮವಾರ(ಜೂನ್ ೨೦) ಸಂಜೆ ಪ್ರಧಾನಿ ಮೋದಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮ ಅದು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅದಾಗಲೇ ವೇದಿಕೆ ಮೇಲಿದ್ದರು. ಪ್ರಧಾನಿ ಸಾಲಿನಲ್ಲಿ ಸಂಸದ ಪ್ರತಾಪ್ ಸಿಂಹ ಇದ್ದರೆ, ಹಿಂದಿನ ಸಾಲಿನಲ್ಲಿ ರಾಮದಾಸ್ ಕುಳಿತಿದ್ದರು. ನಿರೂಪಕರು ಕಾರ್ಯಕ್ರಮದ ವಿವರಣೆ ನೀಡುತ್ತ ಇರುವಾಗಲೇ ಮೋದಿ ತಮ್ಮ ಬಲಗಡೆಗೆ ತಿರುಗಿ ಯಾರನ್ನೋ ಕರೆದರು. ಅವರು ತಿರುಗಲಿಲ್ಲ ಎನ್ನಿಸುತ್ತೆ, ಮತ್ತೆ ಕರೆದರು. ಅಲ್ಲಿಂದ ಒಬ್ಬ ವ್ಯಕ್ತಿ ಓಡಿ ಬಂದರು. ಅವರೇ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್.
ರಾಮದಾಸ್ ಅವರನ್ನು ಹತ್ತಿರ ಕರೆದವರೇ ಪ್ರೀತಿಯಿಂದ ಮಾತನಾಡಿಸಿದರು. ಮೋದಿಯವರ ಜತೆ ಮಾತನಾಡಲು ಬಗ್ಗಿದ ರಾಮದಾಸ್ ಬೆನ್ನಿನ ಮೇಲೆ ಮುಷ್ಠಿ ಕಟ್ಟಿ ಪ್ರೀತಿಯಿಂದ ಎರಡು ಗುದ್ದು ಗುದ್ದಿದರು. ನಂತರವೂ ಮೋದಿ ಏನನ್ನೋ ಕೇಳಿದರು, ಮೋದಿ ಪ್ರೀತಿಗೆ ಕರಗಿಹೋದ ರಾಮದಾಸ್ ಸಂಕೋಚದಿಂದಲೇ ಏನೋ ಹೇಳಿದರು. ಕೈಮುಗಿದು ಅಲ್ಲಿಂದ ತೆರಳಿದರು.
ಇದಿಷ್ಟೂ ನಡೆದದ್ದು ಈಗ ಮೈಸೂರು ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ವಿಷಯ ಯಾರಿಗೂ ಗೊತ್ತಿಲ್ಲದೇ ಇರೋದೇನಲ್ಲ. ಮೈಸೂರಿನಲ್ಲಿ ಮನೆಗಳಿಗೆ ಕೊಳವೆ ಮೂಲಕ ಗ್ಯಾಸ್ ಸರಬರಾಜು ಮಾಡುವ ಕೇಂದ್ರ ಸರ್ಕಾರದ ಯೋಜನೆ ಕುರಿತು ಇದೇ ವರ್ಷದ ಜನವರಿಯಲ್ಲಿ ರಾಮದಾಸ್ ಮತ್ತು ಪ್ರತಾಪ್ ಸಿಂಹ ನಡುವೆ ಜಟಾಪಟಿ ನಡೆದಿತ್ತು. ಯೋಜನೆಯನ್ನು ಶಾಸಕ ರಾಮದಾಸ್ ವಿರೋಧಿಸಿದ್ದರು. ಕೆ.ಆರ್. ಕ್ಷೇತ್ರದಲ್ಲಿ ಉತ್ತಮ ರಸ್ತೆ ಮಾಡಿದ್ದೇವೆ. ಈಗ ಅದನ್ನು ಅಗೆದು ಅನಿಲ ಪೈಪ್‍ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಗ್ಯಾಸ್ ಪೈಪ್‍ಲೈನ್‍ಗೆ ಅನುಮತಿ ಕೊಡಬಾರದು ಅಂತ ಮೈಸೂರು ಪಾಲಿಕೆ ಆಯುಕ್ತರಿಗೆ ರಾಮದಾಸ್ ಪತ್ರ ಬರೆದಿದ್ದರು. ಇದೇ ಅಭಿಪ್ರಾಯವನ್ನು ಬಿಜೆಪಿಯ ಮತ್ತೊಬ್ಬ ಶಾಸಕ ನಾಗೇಂದ್ರ ಸಹ ವ್ಯಕ್ತಪಡಿಸಿದ್ದರು.
ಇದಕ್ಕೆ ಕೋಪಗೊಂಡಿದ್ದ ಪ್ರತಾಪ್ ಸಿಂಹ, ಕಾಂಗ್ರೆಸ್-ಜೆಡಿಎಸ್‍ನವರೇ ವಿರೋಧಿಸಿಲ್ಲ. ನಮ್ಮದೇ ಶಾಸಕರು ವಿರೋಧಿಸ್ತಾರೆ. ರಾಮದಾಸ್ ಮೋದಿಗಿಂತ ಸೀನಿಯರ‍್ರಾ..? ಬುದ್ದಿವಂತರು, ಜ್ಞಾನಿಗಳಾ..? ಬ್ಯಾನರ್‌ನಲ್ಲಿ ಮೋದಿ ಫೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಸಾಲುವುದಿಲ್ಲ, ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಹೇಳಿದ್ದರು. ಕೌನ್ಸಿಲ್ ಸಭೆಯಲ್ಲೂ ಇದೇ ಜಟಾಪಡಿ ನಡೆದು ಸಭೆಯನ್ನು ಮುಂದೂಡಲಾಗಿತ್ತು. ಎಲ್ಲ ಕೆಲಸ ಬಿಟ್ಟು ಮೀಟಿಂಗ್‌ಗೆ ಬಂದರೆ ಕ್ಯಾನ್ಸಲ್ ಮಾಡುತ್ತೀರ ಎಂಬ ಪ್ರತಾಪ್ ಸಿಂಹ ಮಾತಿಗೆ ಮೇಯರ್ ಸುನಂದಾ ಫಾಲನೇತ್ರ ಕಣ್ಣೀರು ಸುರಿಸಿದ್ದರು.
ಮೈಸೂರು ಮಹಾರಾಜರನ್ನು ಬಿಟ್ಟರೆ ಅತಿ ಹೆಚ್ಚು ಮತಗಳಿಂದ ಗೆದ್ದಿರೋದು ನಾನು. ನನ್ನಿಂದಲೇ ಮೈಸೂರಿನ ಅಭಿವೃದ್ಧಿ ಆಗುತ್ತಿದೆ. ನಿಮ್ಮ ಕ್ಷೇತ್ರಗಳಲ್ಲೆ ಸಾಕಷ್ಟು ಸಮಸ್ಯೆಗಳಿವೆ. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ, ಅದುಬಿಟ್ಟು ಕ್ಷೇತ್ರವೇ ತಮ್ಮದು ಎನ್ನುವುದು ಬೇಡ ಎಂದು ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು. ಆನಂತರ ಕೆಲಕಾಲ ತಣ್ಣಗಾಗಿದ್ದ ಶೀತಲ ಸಮರ ಕಳೆದ ವಾರ ಮತ್ತೆ ಚಿಗುರೊಡೆದಿತ್ತು. ಅದೂ ಪ್ರಧಾನಿ ಮೋದಿ ಆಗಮಿಸುವ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಸಲುವಾಗಿಯೇ.
ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಪ್ರಧಾನಿ ಮೋದಿ ಜೂನ್ ೨೧ರಂದು ಭಾಗವಹಿಸಲಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಸಂಬಂಧ ಅನೇಕ ದಿನಗಳಿಂದ ತಾಲೀಮು ನಡೆಯುತ್ತಿತ್ತು. ಸಾರ್ವಜನಿಕರು ಹಾಗೂ ಯೋಗ ಆಸಕ್ತರು ನೋಂದಣಿಯನ್ನೂ ಮಾಡುತ್ತಿದ್ದರು. ತಾಲೀಮಿನ ನಂತರ ಜೂನ್ ೧೨ರ ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಪ್ರತಾಪ್ ಸಿಂಹ ಹಾಗೂ ರಾಮದಾಸ್ ನಡುವೆ ಭಿನ್ನಾಭಿಪ್ರಾಯ ಬಹಿರಂಗಗೊಂಡಿತ್ತು.
ತಾಲೀಮಿನ ಕುರಿತು ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಒಬ್ಬ ಯೋಗಪಟು ನಿಲ್ಲಬೇಕಾದರೆ 6X6 ಅಡಿ ಸ್ಥಳಾವಕಾಶ ಬೇಕು. ಅದರ ಆಧಾರದಲ್ಲಿ 7-8 ಸಾವಿರ ಜನರು ಭಾಗವಹಿಸಬಹುದು ಎಂದು ತಿಳಿಸಿ ಮಾತನಾಡುತ್ತಿದ್ದರು. ಪಕ್ಕದಲ್ಲೆ ಇದ್ದ ರಾಮದಾಸ್ ಮಧ್ಯಪ್ರವೇಶಿಸಿ, ಈಗಾಗಲೆ 13 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಲು ಮುಂದಾದರು. ತಕ್ಷಣವೇ ಕೋಪಗೊಂಡ ಪ್ರತಾಪ್ ಸಿಂಹ, “ರಾಮದಾಸ್‌ಜಿ, ನಾನು ಮಾತನಾಡುತ್ತಿದ್ದೇನೆ. ದಯವಿಟ್ಟು ಸಮಾಧಾನದಲ್ಲಿರಬೇಕು” ಎಂದು ಮಾತು ಮುಂದುವರಿಸಿದ್ದರು. ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಗೊಳಿಸಿತು. ನಂತರ ರಾಮದಾಸ್ ಈ ಕುರಿತು ಸ್ಪಷ್ಟನೆ ನೀಡಿದರು.
“ನಾನು ಯಾಕೆ ಹಾಗೆ ಹೇಳಿದೆ ಎಂದರೆ, ಇವತ್ತು ಪ್ರತಾಪ್ ಸಿಂಹ ಅವರು ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಮಗೆ ಈಗಾಗಲೆ ಎಷ್ಟು ಜನಕ್ಕೆ ಅವಕಾಶ ನೀಡಲು ಆದೇಶ ಸಿಕ್ಕಿದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಅದಕ್ಕೇ ನಾನು ಕ್ಲಾರಿಫೈ ಮಾಡಿದೆ. ಅದು ಬಿಟ್ಟು ನಾನು ಈ ವಿಚಾರದಲ್ಲಿ ಮಾಧ್ಯಮಗಳ ಮುಂದೆ ಬಂದಿಲ್ಲ. ಹಿಂದೆ ನಿಂತು ಕೆಲಸ ಮಾಡುವವರು ನಾವು. ಉಳಿದಂತೆ ಎಲ್ಲ ಮಾಹಿತಿಗಳನ್ನೂ ಜಿಲ್ಲಾ ಉಸ್ತುವಾರಿ ಸಚಿವರೇ ಕೊಡುತ್ತಾರೆ” ಎಂದು ರಾಮದಾಸ್ ಹೇಳಿದ್ದರು.
ಪ್ರತಾಪ್ ಸಿಂಹರನ್ನು ಹೊಗಳಿದ್ದ ಮೋದಿ
ಇದರ ನಂತರ ಮೈಸೂರು ರಾಜಕಾರಣದಲ್ಲಿ, ವಿಶೇಷವಾಗಿ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. “201೯ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಮೈಸೂರಿನಲ್ಲಿ ರ‍್ಯಾಲಿ ನಡೆಸಿದ್ದರು. ಈ ಸಮಯದಲ್ಲಿ ಪ್ರತಾಪ್ ಸಿಂಹ ಅವರನ್ನು ಹಾಡಿ ಹೊಗಳಿದ್ದರು. ನಿಮ್ಮ ಸಂಸದರು ನಮ್ಮನ್ನು ಸುಮ್ಮನೆ ಕೂರಲು ಬಿಡುವುದೇ ಇಲ್ಲ” ಎಂದು ಪ್ರತಾಪ್ ಸಿಂಹ ಅವರನ್ನು ಹಾಡಿ ಹೊಗಳಿದ್ದರು. ಇನ್ನು ಕೆಲವು ಬಾರಿ, “ನನ್ನ ಯುವ ಮಿತ್ರ” ಎಂದು ಪ್ರತಾಪ್ ಸಿಂಹ ಅವರನ್ನು ಸಂಬೋಧಿಸಿದ್ದೂ ಉಂಟು. ಇಷ್ಟೆಲ್ಲ ನಂಟು ಹೊಂದಿರುವ ಪ್ರತಾಪ್ ಸಿಂಹ, ಮೈಸೂರು ರಾಜಕಾರಣದಲ್ಲಿ ತಾವೇ ಮುಂದು ಎಂದು ಅನೇಕ ಬಾರಿ ಹೇಳಿಕೊಂಡಿದ್ದುಂಟು. ಈ ಬಾರಿ ಮೈಸೂರಿನಲ್ಲಿ ಯೋಗ ದಿನ ಆಚರಣೆಗೂ ತಾವೇ ಕಾರಣ ಎಂಬಂತೆ ಹಾವಭಾವವಿತ್ತು.
ರಾಮದಾಸ್ ಹಾಗೂ ಸ್ಥಳೀಯ ನಾಯಕರು ಕಾರ್ಯಕ್ರಮದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದನ್ನು ನೋಡಿದ ಪ್ರತಾಪ್ ಸಿಂಹ, ಈ ಕಾರ್ಯಕ್ರಮ ಸಂಪೂರ್ಣ ಕೇಂದ್ರ ಸರ್ಕಾರದ್ದು. ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ ಮಾತ್ರ ಎಂದಿದ್ದರು. ಇದು ರಾಜ್ಯ ಸರ್ಕಾರವನ್ನು ಆಳುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೂ ಮೋದಿಯವರಿಗೇ ಹತ್ತಿರುವಿರುವ ಸಂಸದರ ಬಗ್ಗೆ ಮಾತನಾಡದೇ ಇರುವುದೇ ಲೇಸು ಎಂದು ಬಹಿರಂಗವಾಗಿ ಸುಮ್ಮನಿದ್ದರು.
ವೇದಿಕೆಗೂ ಮುನ್ನವೂ ಮಾತು
ವೇದಿಕೆ ಮೇಲೆ ರಾಮದಾಸ್‌ರನ್ನು ಕರೆದು ಮಾತನಾಡಿದ್ದಷ್ಟೆ ಅಲ್ಲ, ವೇದಿಕೆ ಕಾರ್ಯಕ್ರಮಕ್ಕೂ ಮುನ್ನವೂ ಒಂದು ಬಾರಿ ರಾಮದಾಸ್ ಅವರೊಂದಿಗೆ ಮೋದಿ ಆತ್ಮೀಯವಾಗಿ ಮಾತನಾಡಿದ್ದಾರೆ. ರಾಮದಾಸ್ ಅವರೇ ಹೇಳಿರುವ ಪ್ರಕಾರ, ಈ ಸಂದರ್ಭದಲ್ಲಿ ತಮ್ಮ ತಾಯಿಯ ಕುರಿತು ಮೋದಿ ನೆನೆದರು. ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮುಂಚಿನಿಂದಲೇ ಇಬ್ಬರ ನಡುವೆ ಬಾಂಧವ್ಯ ಇದೆ. ಮೋದಿ ಮುಖ್ಯಮಂತ್ರಿ ಆಗುವುದಕ್ಕೂ ಮೊದಲಿನಿಂದಲೇ ಚಾಮುಂಡೇಶ್ವರಿ ಭಕ್ತರು. ಆಗಾಗ್ಗೆ ಅವರು ಮೈಸೂರಿಗೆ ಬಂದು ಹೋಗುತ್ತಿದ್ದರು.
ಇದನ್ನೂ ಓದಿ | Modi in Karnataka | ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮೈಸೂರಿಗೆ ಬಂದಿದ್ದೇನೆ : ಪ್ರಧಾನಿ ಮೋದಿ
ಆಗೆಲ್ಲ ರಾಮದಾಸ್ ಅವರ ಮನೆಯಲ್ಲೆ ಉಳಿಯುತ್ತಿದ್ದರು. ರಾಮದಾಸ್ ಅವರ ತಾಯಿ ತೋರುತ್ತಿದ್ದ ಪ್ರೀತಿ, ಅವರು ಉಣಬಡಿಸುತ್ತಿದ್ದ ಊಟವನ್ನು ಮೋದಿ ಮರೆತಿಲ್ಲ. ಹೇಳಿಕೇಳಿ ರಾಮದಾಸ್ ರಾಜಕೀಯ ಜೀವನ ಆರಂಭವಾಗಿದ್ದೇ ಬಿಜೆಪಿಯಿಂದ. ಹೀಗಾಗಿ ಇಬ್ಬರ ನಡುವೆ ದಶಕದ ಸ್ನೇಹವಿದೆ. ಸೋಮವಾರ ತಮ್ಮ ಬೆನ್ನಿಗೆ ಪ್ರಧಾನಿ ಗುದ್ದಿದ ಕುರಿತು ಪ್ರತಿಕ್ರಿಯಿಸಿರುವ ರಾಮದಾಸ್ ಇದನ್ನೇ ನೆನೆದಿದ್ದಾರೆ. ವೇದಿಕೆ ಮೇಲೆ ಅವರು ಕುಟುಂಬದವರ ಆರೋಗ್ಯದ ಕುರಿತು ವಿಚಾರಿಸಿದರು. ತಾಯಿ ಇರುವವರೆಗೂ ಆಗಾಗ್ಗೆ ತಿಂಡಿ ತಿನಿಸು ಕಳಿಸಿಕೊಡುತ್ತಿದ್ದೆ, ಈಗ ನನ್ನನ್ನು ಮರೆತುಬಿಟ್ಟೆ ಎಂದರು. ನಾನು ಮರೆತಿಲ್ಲ ಎಂದು ಹೇಳಿದೆ ಎಂದು ರಾಮದಾಸ್ ತಿಳಿಸಿದ್ದಾರೆ.
ಮೋದಿ ನೀಡಿದ ಸಂದೇಶ ಏನು
ಮೋದಿ ಸಾಮಾನ್ಯವಾಗಿ ಯಾರೊಂದಿಗೂ ಹೆಚ್ಚಾಗಿ ಬೆರೆಯುವುದಿಲ್ಲ. ಎಷ್ಟೇ ದೊಡ್ಡ ವ್ಯಕ್ತಿ ಕಂಡರೂ ಕೈಮುಗಿದು ಸುಮ್ಮನಾಗುತ್ತಾರೆ. ಒಂದೆರಡು ಹಿತವಚನ ಹೇಳಿ ಮುನ್ನಡೆಯುತ್ತಾರೆ. ಆದರೆ ಮೋದಿ ರಾಮದಾಸ್ ಬಗ್ಗೆ ತೋರಿದ್ದು ಕೇವಲ ಪ್ರೀತಿಯೇ ಅಥವಾ ರಾಜಕೀಯ ಸಂದೇಶವೇ ಎಂಬ ಚರ್ಚೆಯನ್ನೂ ಹುಟ್ಟುಹಾಕಿದೆ. ಸಿಎಂ ಜತೆಗಿನ ಸಭೆಯಲ್ಲಿ ಅದಾಗಲೆ ಕುಟುಂಬದ ಬಗ್ಗೆ ವಿಚಾರಿಸಿದ್ದ ಮೋದಿ, ವೇದಿಕೆ ಮೇಲಿದ್ದಾಗ ರಾಮದಾಸ್ ಅವರನ್ನು ಮತ್ತೆ ಕರೆದು ಪ್ರೀತಿ ತೋರಿದ್ದಾರೆ. ಇಷ್ಟೂ ಸಾಲದೆಂಬಂತೆ, ಇಡೀ ಕಾರ್ಯಕ್ರಮ ಮುಗಿದ ನಂತರ ವೇದಿಕೆ ಮೇಲೆ ಇದ್ದ ಗಣ್ಯರ ಜತೆಗೆ ಮೋದಿ ಸಂಭಾಷಣೆ ನಡೆಸುತ್ತಿದ್ದರು. ಆಗ ಹತ್ತಿರದಲ್ಲೆ ಇದ್ದ ರಾಮದಾಸ್ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ಮತ್ತೊಮ್ಮೆ ಬೆನ್ನಿನ ಮೇಳೆ ಎಡಗೈಯಿಂದ ಗುದ್ದಿದರು.
ಮೋದಿಯಂತಹ ನಾಯಕರು ವೇದಿಕೆ ಮೇಲೆ ಇಂತಹ ಕೆಲಸವನ್ನು ಸುಖಾಸುಮ್ಮನೆ ಮಾಡುವುದಿಲ್ಲ. ತಮ್ಮ ಚಟುವಟಿಕೆ ಯಾವ ರೀತಿ ಸಂದೇಶ ನೀಡುತ್ತದೆ ಎಂಬ ಸಂಪೂರ್ಣ ಅರಿವು ಅವರಿಗಿರುತ್ತದೆ. ಈ ಹಿಂದೆ ಸಚಿವರಾಗಿ, ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿಯಾಗಿದ್ದ ರಾಮದಾಸ್, ಒಂದು ಪ್ರಕರಣದ ನಂತರ ಪವರ್ ಕಳೆದುಕೊಂಡರು. ಅಲ್ಲಿಂದ ಸೈಡ್‌ಲೈನ್ ಆಗುತ್ತ ಬಂದವರು ಮತ್ತೆ ಮೇಲೇರಲಾಗಿಲ್ಲ. ಈಗಲೂ ಮೇಲೇಳಲು ಪ್ರಯತ್ನಿಸುತ್ತಿರುವಾಗ ಸಂಸದ ಪ್ರತಾಪ್ ಸಿಂಹ ಎದುರಾಳಿಯಾಗಿ ನಿಲ್ಲುತ್ತಿದ್ದಾರೆ.
ಬಹುಶಃ ೨೦೨೩ರ ಚುನಾವಣೆಯಲ್ಲಿ ಅಥವಾ ಅದಕ್ಕೂ ಮೊದಲೇ ರಾಮದಾಸ್ ಅವರನ್ನು ಕಡೆಗಣಿಸಬೇಡಿ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ. ರಾಮದಾಸ್ ಅವರನ್ನು ರಾಜ್ಯ ನಾಯಕರು ಕಡೆಗಣಿಸಿರಬಹುದು, ಇಲ್ಲಿ ಏನೇನು ನಡೆಯುತ್ತಿದೆ ಎಂಬ ಮಾಹಿತಿ ತಮಗೆ ಇದೆ ಎಂಬ ತಣ್ಣನೆಯ ಎಚ್ಚರಿಕೆಯನ್ನು ಸಂಸದರಿಗೆ ನೀಡಿರಬಹುದು. ಇದೆಲ್ಲ ದೃಷ್ಟಿಕೋನದಲ್ಲಿ ನೋಡಿದರೆ, ಮೋದಿಯವರ ನಡವಳಿಕೆ ಯಾವ ಕಾರಣಕ್ಕೆ ಎಂಬುದು ಸದ್ಯದಲ್ಲೆ ಸ್ಪಷ್ಟವಾಗಲಿದೆ. ಇದು ರಾಮದಾಸ್ ಅವರಿಗೆ ನೀಡಿದ ಪ್ರೀತಿಯ ಗುದ್ದೋ ಅಥವಾ ಪ್ರತಾಪ್ ಸಿಂಹ ಅವರಿಗೆ ನೀಡಿದ ಎಚ್ಚರಿಕೆಯ ಗುದ್ದೋ ಎನ್ನುವುದು ಸದ್ಯ ಕೆಲ ದಿನಗಳವರೆಗಂತೂ ಮೈಸೂರು ರಾಜಕಾರಣದಲ್ಲಿ ಈ ಚರ್ಚೆ ಜೀವಂತವಾಗಿರಲಿದೆ.
ತಿದ್ದಿಕೊಂಡ ಪ್ರತಾಪ್ ಸಿಂಹ !
ಮೈಸೂರು ಅರಮನೆಯಲ್ಲಿ ೭-೮ ಸಾವಿರ ಜನರು ಸೇರಬಹುದು ಎಂದು ರಾಮದಾಸ್ ಜತೆಗೆ ಜಟಾಪಟಿ ಮಾಡಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ ಈಗ ಬದಲಾಗಿದ್ದಾರೆ. ಯೋಗ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಶನಿವಾರ ಮಾತನಾಡಿದ್ದ ಪ್ರತಾಪ್ ಸಿಂಹ, ೭-೮ ಸಾವಿರ ಶಬ್ದ ಬಳಸಲೇ ಇಲ್ಲ. ಮೈದಾನ ಹಾಗೂ ಅರಮನೆ ಆವರಣದಲ್ಲಿ ಒಟ್ಟು ಸುಮಾರು ೧೫ ಸಾವಿರ ಜನಕ್ಕೆ ಯೋಗ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ | ʼಪ್ರತಾಪ್ ಸಿಂಹ ಅವರಿಗೆ ಮಾಹಿತಿ ಇರಲಿಲ್ಲ ಅದಕ್ಕೆ ಹೇಳಿದೆʼ: ಮೈಸೂರಲ್ಲಿ ಮತ್ತೆ ಶಾಸಕ VS ಸಂಸದ