Site icon Vistara News

Nandi Hills: ಕರಾವಳಿಯ ಹಲವು ತಾಣಗಳಿಗೆ ನಿರ್ಬಂಧ; ನಂದಿ ಬೆಟ್ಟದತ್ತ ಪ್ರವಾಸಿಗರ ದಂಡು

Nandi Hills

Nandi Hills

ಚಿಕ್ಕಬಳ್ಳಾಪುರ: ರಾಜ್ಯದ ಹಲವೆಡೆ ಮಳೆ ಬಿರುಸು ಪಡೆದುಕೊಂಡಿದೆ. ಅದರಲ್ಲಿಯೂ ಕರಾವಳಿ ಮತ್ತು ಮಲೆನಾಡಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದಾಗಿ (Rain News) ಹೊಳೆ- ಹಳ್ಳಗಳು ತುಂಬಿಕೊಂಡಿದ್ದು, ಜಲಪಾತಗಳು (Falls) ಭೋರ್ಗರೆಯುತ್ತಿವೆ. ಅಪಾಯವೂ ಇರುವುದರಿಂದಾಗಿ, ಜಲಪಾತಗಳತ್ತ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ (No Entry) ವಿಧಿಸಲಾಗಿದೆ. ಹಲವೆಡೆ ಬೆಟ್ಟಗುಡ್ಡಗಳ ಟ್ರೆಕ್ಕಿಂಗ್‌ (Trekking) ಕೂಡ ನಿಷೇಧಿಸಲಾಗಿದೆ. ಹೀಗಾಗಿ ಪ್ರವಾಸಿಗರು ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ್ದಾರೆ. ಅದರಲ್ಲಿಯೂ ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಈಗ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ (Nandi Hills).

ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರಕೃತಿಪ್ರಿಯರ ಹಾಟ್‌ಸ್ಟಾಟ್‌. ಬೆಟ್ಟದ ಮೇಲೆ ನಿಂತು ಸುತ್ತಲಿನ ಹಸಿರು ನೋಟದ ಸೊಬಗು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ನಂದಿಬೆಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅದರಲ್ಲಿಯೂ ಭಾನುವಾರವಾಗಿರುವುದರಿಂದ ಮಂಜಾನೆ ಐದು ಗಂಟೆಯಿಂದಲೇ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಎಲ್ಲೆಲ್ಲ ನಿರ್ಬಂಧ?

ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಈಗಾಗಲೇ ಅರಣ್ಯ ಇಲಾಖೆ (Forest Department) ನಿರ್ಬಂಧ ವಿಧಿಸಿದೆ. ವನ್ಯಜೀವಿ (Wildlife) ವಲಯದ ವ್ಯಾಪ್ತಿಗೆ ಬರುವ ಕಾಡುಗಳು, ಬೆಟ್ಟಗಳು- ಜಲಪಾತಗಳ ಪ್ರವೇಶ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನರಸಿಂಹಗಡ (ಗಡಾಯಿಕಲ್ಲು) ಬೆಟ್ಟ, ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತಗಳತ್ತ ತೆರಳದಂತೆ ನಿರ್ಬಂಧಿಸಲು ಬೆಳ್ತಂಗಡಿ ಆರ್‌ಎಫ್‌ಒಗೆ ಕುದುರೆಮುಖ ಸಿಎಫ್ ಆದೇಶ ನೀಡಿದ್ದಾರೆ.

ಇನ್ನು ಉತ್ತರ ಕನ್ನಡದ ಗಂಗಾವಳಿ ನದಿ ನೀರಿ‌ನ ಪ್ರಮಾಣ ಹೆಚ್ಚಳದಿಂದ ತಾಲೂಕಿನ ಹಲವು ಫಾಲ್ಸ್‌ಗಳಿಗೆ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧ ಹಾಕಲಾಗಿದೆ. ಯಲ್ಲಾಪುರದ ಶಿರಲೆ ಫಾಲ್ಸ್, ಕಾನೂರು ಫಾಲ್ಸ್, ಕುಳಿ ಮಾಗೋಡು ಜಲಪಾತಗಳಲ್ಲಿ ಅರಣ್ಯ ಇಲಾಖೆ, ಸ್ಥಳೀಯ ಗ್ರಾಮ ಅರಣ್ಯ ಸಮಿತಿಯಿಂದ ಪ್ರವೇಶ ನಿಷೇಧ ಹೇರಲಾಗಿದೆ. ಹೀಗಾಗಿ ಪ್ರವಾಸಿಗರು ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: Karnataka Weather : ವೀಕೆಂಡ್‌ನಲ್ಲಿ ಮಂಜು ಮಿಶ್ರಿತ ಮಳೆಗೆ ಗಾಳಿ ಸಾಥ್‌

ಇಂದು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತ ವಿಪರೀತ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜತೆಗೆ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Exit mobile version