Site icon Vistara News

PFI | ಮುಂಜಾನೆ ಪೊಲೀಸರ ವಶಕ್ಕೆ; ಮಧ್ಯಾಹ್ನ ನ್ಯಾಯಾಂಗ ಬಂಧನಕ್ಕೆ ಪಿಎಫ್‌ಐ ಅಧ್ಯಕ್ಷರು, ಕಾರ್ಯಕರ್ತರು

ಬೆಂಗಳೂರು: ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಮಂಗಳವಾರ ಮುಂಜಾನೆ ಏಕಕಾಲಕ್ಕೆ ಪಿಎಫ್‌ಐ (PFI) ಸಂಘಟನೆಯ ಜಿಲ್ಲಾಧ್ಯಕ್ಷರು, ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಆಯಾ ಜಿಲ್ಲೆಯ ಸಮೀಪದ ತಹಸೀಲ್ದಾರ್‌ ಹಾಗೂ ದಂಡಾಧಿಕಾರಿಗಳ ಎದುರು ಹಾಜರುಪಡಿಸಿ ಮುಂಜಾಗ್ರತ ಕ್ರಮವಾಗಿ ಅನೇಕ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯಾವ್ಯಾವ ಜಿಲ್ಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ?

ರಾಯಚೂರು

ಬಂಧಿತ ಪಿಎಫ್‌ಐ ಮಾಜಿ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಯಚೂರು ತಹಸೀಲ್ದಾರ್‌ ಹಾಗೂ ತಾಲೂಕು ದಂಡಾಧಿಕಾರಿ ಎದುರು ಹಾಜರುಪಡಿಸಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ಇಸ್ಮಾಯಿಲ್‌ರನ್ನು ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.

ಇಸ್ಮಾಯಿಲ್‌ರನ್ನು ವಶಕ್ಕೆ ಪಡೆಯುತ್ತಿದ್ದಂತೆ ತಹಸೀಲ್ದಾರ್‌ ‌ಕಚೇರಿ ಮುಂಭಾಗ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಏಕಾಏಕಿ ದಾಳಿ ಖಂಡಿಸಿ ಪೊಲೀಸ್ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆಯಲ್ಲೇ ಮಲಗಿಕೊಂಡು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಚಾಮರಾಜನಗರ

ಸ್ಥಳೀಯ ಪೊಲೀಸರು ಪಿಎಫ್ಐ ಜಿಲ್ಲಾಧ್ಯಕ್ಷ ಕಫೀಲ್ ಅಹಮದ್, ಕಾರ್ಯಕರ್ತ ಸುಹೇಬ್‌ರನ್ನು ಬಂಧಿಸಿ, ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರು ಪಡಿಸಿದರು. ಬಂಧಿತರ ವಿಚಾರಣೆ ನಡೆಸಿ, ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕದಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 107,151 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿಗಳ ಪರ ವಕೀಲ ವಸೀಂ ಉಲ್ಲಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸೂಕ್ತ ಬಾಂಡ್ ಸಲ್ಲಿಸುವಂತೆ ತಹಸೀಲ್ದಾರ್‌ ಹೇಳಿದ್ದಾರೆ. ಬೆಳಗ್ಗೆ ಆದ ಕಾರಣ ಬಾಂಡ್ ಒದಗಿಸಲು ಸಾಧ್ಯವಾಗಿಲ್ಲ. ಇಬ್ಬರ ಮೇಲೂ ಗುರುತರ ಆರೋಪಗಳಿಲ್ಲ, ಶಾಂತಿ ಭಂಗ ಮಾಡುವ ಸಾಧ್ಯತೆಯಿದೆ ಎಂದು ಬಂಧಿಸಿದ್ದಾರೆ. ಮುಂದೆ ಸೂಕ್ತ ಬಾಂಡ್ ಒದಗಿಸಿ ಅವರನ್ನು ಜಾಮೀನಿನ ಮೇಲೆ ಹೊರ ತರುತ್ತೇವೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಏಳು ಮಂದಿ ನ್ಯಾಯಾಂಗ ಬಂಧನ

ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಬಾಗಲಕೋಟೆಯಲ್ಲಿಯೂ ಹಲವರನ್ನು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಯಿತು. ಜಮಖಂಡಿಯ ನಾಲ್ವರು, ಮಹಾಲಿಂಗಪುರದ ಓರ್ವ ಹಾಗೂ ಬನಹಟ್ಟಿಯ ಓರ್ವ ಬಂಧಿತರನ್ನು ಅಕ್ಟೋಬರ್ 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಳಕಲ್ಲ ನಗರದ ಓರ್ವ ಆರೋಪಿ ಅಕ್ಟೋಬರ್ 3 ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

ಆರೋಪಿತರ ವಿರುದ್ಧ ಸಿಆರ್‌ಪಿಸಿ 107, 151 ಅಡಿ ದೂರು ದಾಖಲಾಗಿದೆ. ಅಸ್ಗರ್ ಅಲಿ- (ಪಿಎಫ್ಐ ಜಿಲ್ಲಾ ಅಧ್ಯಕ್ಷ, ಜಮಖಂಡಿ), ಇಮ್ರಾನ್ ಮಳಲಿ- (ಪಿಎಫ್ ಐ ಸದಸ್ಯ-ಜಮಖಂಡಿ), ಮಹ್ಮದ್ ಗೌಸ್ ( ಪಿಎಫ್ ಐ ಸದಸ್ಯ ಜಮಖಂಡಿ), ರಾಜೇಸಾಬ ತಾಳಿಕೋಟಿ (ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಮಖಂಡಿ) ಬಂಧಿತ ಆರೋಪಿಗಳು.

ಬಂಧಿತರ ಬ್ಯಾಂಕ್ ದಾಖಲಾತಿಗಳು, ಲ್ಯಾಪ್ ಟಾಪ್ ಪರಿಶೀಲನೆ ನಡೆಸಿದ್ದಾರೆ. ಬೆಳಗಿನ ಜಾವ 3 ಗಂಟೆಗೆ ಆಯಾ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಎಲ್ಲ ಏಳು ಜನರು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಕೊಪ್ಪಳದಲ್ಲಿ ಮೂವರಿಗೆ ನ್ಯಾಯಾಂಗ ಬಂಧನ

ಕೊಪ್ಪಳ ಜಿಲ್ಲೆಯಲ್ಲಿ ಪಿಎಫ್ಐ ಸಂಘಟನೆಯ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಉಪವಿಭಾಗಾಧಿಕಾರಿಗಳ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿ, ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸರ್ಫರಾಜ್ ಹಾಗೂ ರಸೂಲ್‌ರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಉಪವಿಭಾಗಾಧಿಕಾರಿ ಕಳಿಸಿ ಆದೇಶಿಸಿದ್ದಾರೆ.

ರಾಮನಗರದಲ್ಲಿ ಶ್ಯೂರಿಟಿ ಪಡೆದು ಕಾರ್ಯಕರ್ತರ ಬಿಡುಗಡೆ

ಚನ್ನಪಟ್ಟಣದ 6 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ 2 ಲಕ್ಷ ರೂ ಬಾಂಡ್ ಶ್ಯೂರಿಟಿ ಪಡೆದುಕೊಂಡು ಬಿಡುಗಡೆ ಮಾಡಲಾಯಿತು.

ಉಡುಪಿಯ ಇಲಿಯಾಸ್‌ ಹೂಡೆ, ಅಶ್ರಫ್‌ಗೆ ನ್ಯಾಯಾಂಗ ಬಂಧನ

ಉಡುಪಿಯಲ್ಲಿ ನಾಲ್ವರು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಉಡುಪಿ ಕುಂದಾಪುರ ಬೈಂದೂರು ತಹಸೀಲ್ದಾರ್‌ ಮುಂದೆ ನಾಲ್ವರುನ್ನು ಹಾಜರುಪಡಿಸಿ, ವಿಚಾರಣೆ ಬಳಿಕ ರಜಬ್ ಗಂಗೊಳ್ಳಿ ಮತ್ತು ಆಶಿಕ್ ಕೋಟೇಶ್ವರಗೆ ಅಕ್ಟೋಬರ್2 ವರೆಗೆ ಹಾಗೂ ಇಲಿಯಾಸ್ ಹೂಡೆ, ಅಶ್ರಫ್‌ಗೆ ಸೆ.29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ | NIA Raid | ಮುಂಜಾನೆಯಿಂದಲೇ ಎನ್‌ಐಎ ದಾಳಿ; ಬೆಚ್ಚಿ ಬಿದ್ದ ಪಿಎಫ್‌ಐ, ವಿಚಾರಣೆ ತೀವ್ರ

Exit mobile version