Site icon Vistara News

ಪಬ್ಲಿಕ್‌ ಎದುರೇ ಮರ್ಡರ್‌ ಮಾಡೋ ಪ್ಲಾನ್‌ ʼಎʼ ಫ್ಲಾಪ್‌ ಆದ್ರೂ, ಪ್ಲಾನ್‌ ʼಬಿʼಯಲ್ಲಿ ಗುರೂಜಿಯ ಕೊಂದರು!

sarala vasthu

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆಯು ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿತ್ತು. ಜೊತೆಯಲ್ಲಿ ಇದ್ದವರೇ ಗುರೂಜಿ ಹತ್ಯೆಗೆ ಮಾಸ್ಟರ್‌ ಪ್ಲಾನ್‌ ಮಾಡಿದ್ದರು. ಆಸ್ತಿ-ಪಾಸ್ತಿ ಕಾರಣಕ್ಕೆ ನೆತ್ತರು ಹರಿದಿತ್ತು. ಆದರೆ, ಸಾರ್ವಜನಿಕರೆದುರೇ ಬೆಂಗಳೂರಿನಲ್ಲಿ ಕೊಲೆ ಮಾಡುವ ಬಗ್ಗೆ ಹಂತಕರಿಂದ ಪ್ಲಾನ್‌ ʼಎʼ ಸಿದ್ಧವಾಗಿತ್ತು ಎಂಬ ಅಂಶ ತನಿಖೆ ವೇಳೆ ಬಹಿರಂಗವಾಗಿದೆ.

ಗುರೂಜಿ ಹತ್ಯೆಯಾದ ದಿನವೇ ಹಂತಕರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕೆಲ ಸತ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಹಂತಕ ಮಹಾಂತೇಶ್ ಶಿರೂರ್ ಮಾಡಿದ್ದ ಪ್ಲಾನ್ ಕೇಳಿ ಖಾಕಿ ಪಡೆಯೇ ದಂಗಾಗಿದೆ. ಏಕೆಂದರೆ ಗುರೂಜಿ ಹತ್ಯೆಯನ್ನು ಜುಲೈ 3ರಂದು ಬೆಂಗಳೂರಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲೇ ಮುಗಿಸಲು ಪ್ಲಾನ್‌ ಮಾಡಿದ್ದರಂತೆ. ಆದರೆ, ಅಂದು ಗುರೂಜಿ ಮೊಮ್ಮಗ ತೀರಿಕೊಂಡಿದ್ದರಿಂದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಪಡಿಸಿ ಹುಬ್ಬಳ್ಳಿಗೆ ಆಗಮಿಸಿದ್ದರು.

ಸಾರ್ವಜನಿಕವಾಗಿಯೇ ಹತ್ಯೆ ಮಾಡುವ ಪ್ಲಾನ್ ಫ್ಲಾಪ್‌ ಅದ ಮೇಲೂ, ಚಂದ್ರಶೇಖರ್‌ ಗುರೂಜಿಯವರನ್ನು ಮಹಾಂತೇಶ್‌ ಎರಡು ಬಾರಿ ಭೇಟಿಯಾಗಿದ್ದ. ಜುಲೈ 3ರಂದು ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್‌ನಲ್ಲಿ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಸುಮಾರು 20 ನಿಮಿಷ ಮಾತನಾಡಿದ್ದ. ಆದರೆ, ಆ ಸಂದರ್ಭದಲ್ಲಿ ಗುರೂಜಿಗೆ ಆಗಲಿ, ಅವರ ಕುಟುಂಬಸ್ಥರಿಗೆ ಆಗಲಿ ಕೊಲೆಗಡುಕರ‌ ಸಂಚಿನ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಹಾಗಾಗಿ ಅವರು ಪ್ಲಾನ್‌ ʼಬಿʼ ಸಿದ್ಧಪಡಿಸಿದ್ದರು.

ಇದನ್ನೂ | ಸರಳ ವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ: ಎದೆಯ ಮೇಲಿಟ್ಟು ಮೆರೆಸುತ್ತಿದ್ದವನು ಅರವತ್ತು ಕಡೆ ಇರಿದ

ಹತ್ಯೆ ಪ್ಲಾನ್‌ ಬೆಂಗಳೂರು ಟು ಹುಬ್ಬಳಿ ಶಿಫ್ಟ್‌

ಕೊಲೆಗೂ ಒಂದು ದಿನ ಮುಂಚೆ ಗುರೂಜಿಯವರನ್ನು ಹುಬ್ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ನ ಲಾಂಜ್‌ನಲ್ಲೇ ಹಂತಕ ಮಹಾಂತೇಶ್ ಹಾಗೂ ಮಂಜುನಾಥ ಭೇಟಿಯಾಗಿದ್ದರು. ಈ ವೇಳೆ ತನಗೆ ಕೊಡುವುದಾಗಿ ಹೇಳಿದ್ದ 60 ಲಕ್ಷ ರೂಪಾಯಿ ಹಾಗೂ ಫ್ಲ್ಯಾಟ್ ಕೊಡುವಂತೆ ಗುರೂಜಿ ಬಳಿ ಮಹಾಂತೇಶ್‌ ಕೇಳಿದ್ದ. ಆದರೆ, ಗುರೂಜಿ ಹಣ ಕೊಡುವುದಿಲ್ಲ ಎಂದು ಏಕವಚನದಲ್ಲಿ‌ ನಿಂದಿಸಿದ್ದರಂತೆ. ಜುಲೈ ನಾಲ್ಕರಂದು ಕೊನೆಯ ಪ್ರಯತ್ನ ಎಂಬಂತೆ ನಿರಾಶೆಯಿಂದ ಬಂದು ಹೋಗಿದ್ದರು.

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ

ಚಂದ್ರಶೇಖರ ಗುರೂಜಿ ಸಂಸ್ಥೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ನಾವು ಶ್ರಮಿಸಿದ್ದೇನೆ. ವೈಸ್ ಪ್ರೆಸಿಡೆಂಟ್ ಆಗಿ ಕೆಲಸ‌ ಮಾಡಿ ಯುವಕರ ತಂಡ ಕಟ್ಟಿ ಸಂಸ್ಥೆ ಬೆಳೆಸಿದ್ದ ನಮ್ಮನ್ನು ಸಂಸ್ಥೆಯಿಂದ ದೂರ ಇಟ್ಟು, ಲಾಭ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರ ಮುಂದೆ ಆರೋಪಿಗಳು ಹೇಳಿಕೊಂಡಿದ್ದಾರೆ. ಜತೆಗೆ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಮಹಾಂತೇಶ್ ಸೂಚಿಸಿದ ವ್ಯಕ್ತಿಗಳ ಹೆಸರಲ್ಲಿ ಗುರೂಜಿ ಬೇನಾಮಿ‌ ಆಸ್ತಿ ಮಾಡಿದ್ದರಂತೆ. ಅದನ್ನು ಮರಳಿ‌ ಕೊಡಿಸುವಂತೆ ಗುರೂಜಿ ಬೆನ್ನು ಬಿದ್ದಿದ್ದರು ಎಂದು ಸಹ ವಿಚಾರಣೆ ವೇಳೆ ಮಹಾಂತೇಶ್‌ ಹೇಳಿದ್ದಾನೆನ್ನಲಾಗಿದೆ.

ಈ ವೇಳೆ ಒಂದೊಂದೇ ಆಸ್ತಿ ಮರಳಿ ಕೊಡಿಸುವ ಕೆಲಸ ಮಾಡಿದ್ದ ಹಂತಕ ಮಹಾಂತೇಶ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇದರ ಮಧ್ಯೆ ಒಂದೆರಡು ಆಸ್ತಿಗಳನ್ನು ಗುರೂಜಿಗೆ ಗೊತ್ತಾಗದಂತೆ ಮಾರಾಟವನ್ನೂ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಬೇನಾಮಿ ಆಸ್ತಿಗಳನ್ನು ಮರಳಿ‌ ಕೊಡಿಸುವಾಗ ಪ್ರತಿ ತಿಂಗಳು 50 ಸಾವಿರ ರೂಪಾಯಿ ಹಾಗೂ ಒಂದು ಫ್ಲ್ಯಾಟ್ ಅನ್ನು ಪ್ರತಿಯಾಗಿ ನೀಡುವುದಾಗಿ ಮಾತುಕೊಟ್ಟಿದ್ದರು. ಆದರೆ, ಕೊಟ್ಟ ಮಾತಿಗೆ ತಪ್ಪಿ ಒಂದಿಷ್ಟು ಹಣ ಕೊಟ್ಟು ಸುಮ್ನನಾಗಿದ್ದರಂತೆ. ಈ ಮಧ್ಯೆ ಒಟ್ಟು ಆಸ್ತಿ‌ ಮರಳಿ ಕೊಡಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿಕೊಂಡಿದ್ದಾರೆ.

ಗುರೂಜಿಯನ್ನ ಸುಮ್ಮನೆ ಬಿಡುವುದಿಲ್ಲ

ಜುಲೈ 5 ಕ್ಕೆ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್‌ಗೆ ಬಂದಿದ್ದ ಮಹಾಂತೇಶ್ ಹಾಗೂ ಮಂಜುನಾಥ, ಆಸ್ತಿ ‌ವಿಚಾರ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಮಾತನಾಡಬೇಕು ಎಂದು ಗುರೂಜಿಯನ್ನು ಕರೆದಿದ್ದ. ಅದರಂತೆ ಹೋಟೆಲ್‌ ಲಾಂಜ್‌ಗೆ ಬಂದು ಕುಳಿತುಕೊಳ್ಳುತ್ತಿದ್ದಂತೆ ಏಕಾಏಕಿ ಚಾಕುವಿನಿಂದ ದಾಳಿ‌ ನಡೆಸಿ, ಕೊಲೆ ಮಾಡಿದ್ದಾರೆ. ಅಂದಹಾಗೇ, ಮಹಾಂತೇಶ್ ಸಿಟ್ಟು ನಿನ್ನೆ ಮೊನ್ನೆಯದ್ದಲ್ಲ.‌ ಚಂದ್ರಶೇಖರ ಗುರೂಜಿಯನ್ನು ಸುಮ್ಮನೆ ಬಿಡುವುದಿಲ್ಲವೆಂದು ತನ್ನ ಆಪ್ತರ ಬಳಿ ಮೂರು‌ ತಿಂಗಳಿಂದ ಹೇಳಿಕೊಂಡು ಓಡಾಡುತ್ತಿದ್ದ ಎಂಬುದು ತಿಳಿದು ಬಂದಿದೆ.

ಹೋಟೆಲ್ ಸಿಬ್ಬಂದಿ ವಿರುದ್ಧ ಗರಂ ಆದ ಎಡಿಜಿಪಿ ಅಲೋಕ್‌ಕುಮಾರ್

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಂದ್ರಶೇಖರ ಗುರೂಜಿ ಹತ್ಯೆಯಾದ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹತ್ಯೆಯ ಬಗ್ಗೆ ಮಾಹಿತಿ ಪಡೆದ ಅವರು, ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಹೋಟೆಲ್ ಭದ್ರತಾ ಲೋಪದ ಬಗ್ಗೆ ಅಲೋಕ್‌ಕುಮಾರ್ ಗರಂ ಆಗಿ, ಇಂತಹ ದೊಡ್ಡ ಹೋಟೆಲ್‌ನಲ್ಲಿ ಒಂದು ಮೆಟಲ್ ಡಿಟೆಕ್ಟರ್ ಇಟ್ಟುಕೊಳ್ಳಲು ಆಗುವುದಿಲ್ಲವೇ ಎಂದು ಗದರಿದ್ದಾರೆ.

ಇದನ್ನೂ ಓದಿ | ಮೊದಲು ಚಂದ್ರಶೇಖರ್‌ ಗುರೂಜಿ ಕಾಲಿಗೆ ಬಿದ್ದರು, ನಂತರ 60 ಬಾರಿ ಇರಿದು ಕೊಂದರು!

Exit mobile version