Site icon Vistara News

ವಿಸ್ತಾರ TOP 10 NEWS | ಅಮೃತ್‌ ಪಾಲ್‌ ಡೇಟಾ ಡಿಲೀಟ್‌ನಿಂದ ಗೊಟಬಯ ಎಕ್ಸಿಟ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-srilanka-gotabaya-escape-amrit-paul-custody-booster-dose-national-emblem-kanpur-riots-financial-education-hijab-controversy

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಹಿರಿಯ ಪೊಲೀಸ್‌ ಅಧಿಕಾರಿ ಅಮೃತ್‌ ಪಾಲ್‌ ತಮ್ಮ ಮೊಬೈಲ್‌ ಡೇಟಾವನ್ನು ಡಿಲೀಟ್‌ ಮಾಡಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಇವರ ಸಿಐಡಿ ಕಸ್ಟಡಿ ಅವಧಿಯನ್ನು ನ್ಯಾಯಾಲಯ ಮತ್ತೆ ಮೂರು ದಿನ ವಿಸ್ತರಿಸಿದೆ. ನೆರೆಯ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಹೊತ್ತಿ ಉರಿಯುತ್ತಿರುವ ದೇಶವನ್ನು ತೊರೆದು ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ಹಾರಿದ್ದಾರೆ. 18 ವರ್ಷ ದಾಟಿದ ಎಲ್ಲ ನಾಗರಿಕರಿಗೂ ಕೋವಿಡ್‌ ಲಸಿಕೆಯ ಉಚಿತ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕರ್ನಾಟಕದ ಡಿಗ್ರಿ ವಿದ್ಯಾರ್ಥಿಗಳು ಇನ್ನು ಷೇರು ಹೂಡಿಕೆ ಶಿಕ್ಷಣ ಪಡೆಯಲಿದ್ದಾರೆ ಎಂಬುದು ಸೇರಿದಂತೆ ದಿನದ ಪ್ರಮುಖ ಘಟನೆಗಳ ಗುಚ್ಛ ವಿಸ್ತಾರ TOP 10 NEWS.

1. PSI Scam | ಮೊಬೈಲ್‌ ಡೇಟಾ ಡಿಲೀಟ್‌ ಮಾಡಿರುವ ಅಮೃತ್‌ ಪಾಲ್‌: ಮತ್ತೆ 3 ದಿನ ಕಸ್ಟಡಿಗೆ
ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ನೇಮಕ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ತಮ್ಮ ಮೇಲಿನ ಆರೋಪ ಸಾಬೀತಾಗಬಾರದು ಎಂದು ಮೊಬೈಲ್‌ ದತ್ತಾಂಶವನ್ನು ಅಳಿಸಿ ಹಾಕಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಕಂಡು ಬಂದಿದೆ. ಈ ವಿಚಾರವನ್ನು ಸ್ವತಃ ಸಿಐಡಿ ಬುಧವಾರ ನ್ಯಾಯಾಲಯಕ್ಕೆ ತಿಳಿಸಿದೆ. ದತ್ತಾಂಶಗಳನ್ನು ಹೊರತೆಗೆಯಲು ಮೊಬೈಲ್‌ ಪಾಸ್‌ವರ್ಡ್‌ ನೀಡದೆ ಸತಾಯಿಸಿದ ಅಮೃತ್‌ ಪಾಲ್‌ ಹತ್ತನೇ ದಿನ ಇದನ್ನು ನೀಡಿದ್ದಾರೆ. ಅಮೃತ್‌ ಪಾಲ್‌ರನ್ನು ಇನ್ನಷ್ಟು ವಿಚಾರಣೆ ನಡೆಸುವ ಅವಶ್ಯಕತೆ ಇದ್ದು, ಮೂರು ದಿನ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಬೇಕೆಂಬ ಸಿಐಡಿ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. ರಾಜೀನಾಮೆಗೆ ಮುನ್ನ ಶ್ರೀಲಂಕಾದಿಂದ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡಿವ್ಸ್‌ಗೆ ಪಲಾಯನ
ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಷ ಬುಧವಾರ ಮುಂಜಾನೆ ದೇಶ ತೊರೆದಿದ್ದಾರೆ. ಅಧ್ಯಕ್ಷರು ದೇಶ ಬಿಟ್ಟು ಹೋಗುತ್ತಿದ್ದಂತೆ ಪ್ರತಿಭಟನಾಕಾರರು ಸಂಭ್ರಮಾಚರಿಸಿದ್ದಾರೆ. ಅಧ್ಯಕ್ಷ ಗೊಟಬಯ ಅವರು ಪತ್ನಿ ಹಾಗೂ ಇಬ್ಬರು ಅಂಗ ರಕ್ಷಕರೊಂದಿಗೆ ಶ್ರೀಲಂಕಾವನ್ನು ತೊರೆದಿದ್ದಾರೆ. ವಾಯುಪಡೆಯ ವಿಮಾನದ ಮೂಲಕ ಮಾಲ್ಡಿವ್ಸ್‌ ರಾಜಧಾನಿ ಮಾಲೆಗೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ, ರಾಜಪಕ್ಸ ಪಲಾಯನದ ಬೆನ್ನಲ್ಲೇ ಭುಗಿಲೆದ್ದ ಪ್ರತಿಭಟನೆ

3. ನಿಮಗೆ 18 ವರ್ಷ ಆಗಿದೆಯೆ? ಜುಲೈ 15ರಿಂದ ಕೋವಿಡ್‌ ಲಸಿಕೆ ಬೂಸ್ಟರ್‌ ಡೋಸ್‌ ಉಚಿತ
ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ಬೂಸ್ಟರ್‌ ಡೋಸ್‌ ನೀಡಿಕೆ ಅಭಿಯಾನ ಶುರುವಾಗಿದೆ. ಆದರೆ ಮೂರನೇ ಡೋಸ್‌ ಲಸಿಕೆ, ೬೦ ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ 75ನೇ ವರ್ಷಾಚರಣೆ ಸಂಭ್ರಮದಲ್ಲಿ ಆ ನಿಯಮದಲ್ಲೀಗ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಜುಲೈ 15ರಿಂದ ೭೫ ದಿನಗಳವರೆಗೆ 18 ವರ್ಷ ಮೀರಿದ ಪ್ರತಿಯೊಬ್ಬರಿಗೂ ಮೂರನೇ ಡೋಸ್‌ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

. ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ 75ನೇ ವರ್ಷದ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮದ ಕುರಿತು ಕಾಂಗ್ರೆಸ್‌ನಲ್ಲಿ ದಿನೇದಿನೆ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಕಾರ್ಯಕ್ರಮದಿಂದ ದೂರ ಇಟ್ಟಿರುವುದು ಸ್ಪಷ್ಟವಾಗಿದೆ. ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮೋತ್ಸವವನ್ನು ಪಕ್ಷದ್ದೇ ಕಾರ್ಯಕ್ರಮ ಎಂದು ಹೇಳುತ್ತಿರುವುದರಿಂದ ಎಲ್ಲಿ ತಮ್ಮ ಪ್ರತ್ಯೇಕ ಗುರುತು ಮರೆಯಾಗಿಬಿಡುತ್ತದೆಯೋ ಎಂದು ಸಿದ್ದರಾಮಯ್ಯ ಆಪ್ತರು ಎಚ್ಚೆತ್ತಿದ್ದಾರೆ. ಇದೀಗ ಶಿವಕುಮಾರ್‌ ಸಹ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೫. Chief Minister Tour | ನೆರೆ ಹಾನಿ ಪರಿಹಾರಕ್ಕೆ ತುರ್ತು ₹500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಘೋಷಣೆ
ನೆರೆ ಹಾನಿ ಪರಿಹಾರ ಕಾರ್ಯಕ್ಕೆ ಮೊದಲ ಹಂತದಲ್ಲಿ ತುರ್ತಾಗಿ ರಾಜ್ಯ ಸರ್ಕಾರದಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬೊಮ್ಮಾಯಿ, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರವಾಸ ಮಾಡಿದ್ದು, ಮಳೆ ಹಾನಿಯ ಬಗ್ಗೆ ಮೂರು ಜಿಲ್ಲೆಗಳ ಸಮಗ್ರ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲ ಜಿಲ್ಲೆಗಳಿಂದ ಮಳೆ ಹಾನಿ ಸಮಗ್ರ ವರದಿ ಬಂದ ನಂತರ ನೆರೆ ಎದುರಿಸಲು ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ) ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗಿರುವ ವರದಿಯಾಗಿದೆ. ಜುಲೈ 15ರಂದು ಎಲ್ಲ ಕಡೆಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೬. ರಾಷ್ಟ್ರ ಲಾಂಛನದ ವಿನ್ಯಾಸ ಬದಲಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆಯಾ?; ಕಾಯಿದೆ ಹೇಳೋದೇನು?
ನೂತನ ಸಂಸತ್‌ ಭವನದ ಮೇಲೆ ನಿರ್ಮಾಣಗೊಂಡ ರಾಷ್ಟ್ರ ಲಾಂಛನದ ಬಗ್ಗೆ ವಿಧವಿಧದ ವಿವಾದ ಹುಟ್ಟುಕೊಂಡಿದೆ. “ಸರ್ಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ, ಸಂಸತ್‌ ಭವನದ ಮೇಲೆ ಈ ಲಾಂಛನ ಉದ್ಘಾಟನೆ ಮಾಡಿದ್ದೇ ಸರಿಯಲ್ಲʼ, ʼಭವ್ಯ ಲಾಂಛನ ಅನಾವರಣ ಸರ್ಕಾರ ಮತ್ತು ಬಿಜೆಪಿಯ ಸ್ವಂತ ಕಾರ್ಯಕ್ರಮವಲ್ಲ. ಹಾಗಿದ್ದಾಗ್ಯೂ ಈ ಸಮಾರಂಭದಲ್ಲಿ ಪ್ರತಿಪಕ್ಷಗಳ ಪ್ರಮುಖರನ್ನು ಆಹ್ವಾನಿಸಿಲ್ಲʼ, ʼಸಂಸತ್‌ ಭವನದ ಮೇಲೆ ನಿರ್ಮಿಸಲಾದ ಲಾಂಛನದಲ್ಲಿರುವ ಸಿಂಹಗಳು ಮೂಲ ಲಾಂಛನದಲ್ಲಿದ್ದಂತೆ ಇಲ್ಲ. ಈ ಸಿಂಹಗಳು ಶಾಂತವಾಗಿಲ್ಲದೆ, ಗರ್ಜಿಸುತ್ತಿರುವಂತೆ ಇವೆʼ ಎಂಬಿತ್ಯಾದಿ ಆಕ್ಷೇಪಗಳನ್ನು ಕಾಂಗ್ರೆಸ್‌, ಟಿಎಂಸಿ, ಎಐಎಂಐಎಂ ಸೇರಿ ಹಲವು ವಿರೋಧ ಪಕ್ಷಗಳು ಎತ್ತಿವೆ. ಮೋದಿ ಸರ್ಕಾರ ನಮ್ಮ ರಾಷ್ಟ್ರ ಲಾಂಛನದ ಸ್ವರೂಪವನ್ನೇ ಮಾರ್ಪಾಡುಗೊಳಿಸಿ, ವಿರೂಪಗೊಳಿಸಿದೆ ಎಂದೂ ಆರೋಪಿಸಿವೆ. ಈ ವಿಚಾರವನ್ನು ಅನೇಕರು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಹಾಗಾದರೆ ಲಾಂಛನದ ವಿನ್ಯಾಸ ಬದಲಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಇದೆಯೇ ಎಂಬ ಪ್ರಶ್ನೆಗಳೆದ್ದಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ಡಿಗ್ರಿ ವಿದ್ಯಾರ್ಥಿಗಳಿನ್ನು ಷೇರುಪೇಟೆ ಹೂಡಿಕೆದಾರರು: ಸರ್ಕಾರದಿಂದ ಮಹತ್ವದ ಒಪ್ಪಂದ
ಕರ್ನಾಟಕದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹತ್ತಾರು ವರ್ಷ ಕಲಿತರೂ ಇನ್ನೂ ಮುಗಿಯದಷ್ಟಿರುವ ಷೇರುಪೇಟೆ, ಫೈನಾನ್ಷಿಯಲ್‌ ಎಜುಕೇಷನ್‌ ಕುರಿತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿರುವ 5 ಲಕ್ಷ ವಿದ್ಯಾರ್ಥಿಗಳೂ ಇನ್ನು ತಿಳಿದುಕೊಳ್ಳಲಿದ್ದಾರೆ. ಕರ್ನಾಟಕದ ಎಲ್ಲ 20 ವಿಶ್ವವಿದ್ಯಾಲಯಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಹಣಕಾಸು ಶಿಕ್ಷಣ (ಫೈನಾನ್ಶಿಯಲ್ ಎಜುಕೇಶನ್) ಮತ್ತು ಹೂಡಿಕೆ ಜಾಗೃತಿ (ಇನ್ವೆಸ್ಟ್‌ಮೆಂಟ್ ಅವೇರ್ನೆಸ್‌) ಕಲಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ. ಈ ಎರಡೂ ಶಿಕ್ಷಣವನ್ನು ಎಲ್ಲ ಕೋರ್ಸ್‌ಗಳ ವಿದ್ಯಾರ್ಥಿಗಳೂ ಪಡೆಯಲಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. ಕಾನ್ಪುರ ಗಲಭೆ: ಕಲ್ಲು ಎಸೆದವರಿಗೆ 500 ರೂ., ಪೆಟ್ರೋಲ್‌ ಬಾಂಬ್‌ ಎಸೆದರೆ 5000 ರೂ! ಎಸ್‌ಐಟಿ ವರದಿಯಲ್ಲಿ ಬಹಿರಂಗ
ಬಿಜೆಪಿ ವಕ್ತಾರೆ ನೂಪುರ್‌ ಶರ್ಮ ವಿವಾದಾತ್ಮಕ ಹೇಳಿಕೆ ಖಂಡಿಸಿ ಜೂನ್‌ ೩ರಂದು ಕಾನ್ಪುರದಲ್ಲಿ ಭಾರಿ ಗಲಭೆಯೇ ನಡೆದಿತ್ತು. ಬಂದ್‌ಗೆ ಕರೆ ನೀಡಿದ ಕೆಲವೇ ನಿಮಿಷಗಳಲ್ಲಿ ದೊಡ್ಡ ಗುಂಪು ದಾಂಧಲೆ ಎಬ್ಬಿಸಿತ್ತು. ಕಲ್ಲು ತೂರಾಟ ಶುರುವಾಗಿತ್ತು. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಜನ ಹೇಗೆ ಕಲ್ಲು ತೂರಾಟಕ್ಕೆ ತಯಾರಾದರು, ಕಲ್ಲು ಎಲ್ಲಿಂದ ಬಂತು ಎನ್ನುವ ವಿಚಾರಗಳೆಲ್ಲ ಚರ್ಚೆಗೆ ಬಂದಿತ್ತು. ಈಗ ವಿಶೇಷ ತನಿಖಾ ತಂಡ ಸಲ್ಲಿಸಿದ ವರದಿ ಇವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಅಂದರೆ, ಇದೊಂದು ಅತ್ಯಂತ ವ್ಯವಸ್ಥಿತವಾದ ಗಲಭೆ, ಮೊದಲೇ ಎಲ್ಲವನ್ನೂ ಸಿದ್ಧಗೊಳಿಸಿ ಹಿಂಸೆಗೆ ಪ್ರಚೋದನೆ ನೀಡಲಾಗಿದೆ ಎಂದು ವರದಿ ಹೇಳಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೯. ಹಿಜಾಬ್‌ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಾರ ವಿಚಾರಣೆ ಆರಂಭ
ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್‌ ಇಸ್ಲಾಂ ಧಾರ್ಮಿಕ ಪದ್ಧತಿಯಲ್ಲಿ ಅನಿವಾರ್ಯ ಭಾಗವೇನೂ ಅಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದಿನ ವಾರದಿಂದ ಕೈಗೆತ್ತಿಕೊಳ್ಳಲಿದೆ. ಕರ್ನಾಟಕ ಹೈಕೋರ್ಟ್‌ ಕಳೆದ ಮಾರ್ಚ್‌ ೧೫ರಂದು ಈ ಕುರಿತು ತೀರ್ಪನ್ನು ನೀಡಿತ್ತು. ತಕ್ಷಣವೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ ಆಗ ಸರ್ವೋಚ್ಚ ನ್ಯಾಯಾಲಯ ಪ್ರಾಥಮಿಕ ವಿಚಾರಣೆಯನ್ನೂ ನಡೆಸಿರಲಿಲ್ಲ. ಬುಧವಾರ ವಕೀಲ ಪ್ರಶಾಂತ್‌ ಭೂಷಣ್‌ ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯ ನ್ಯಾಯಾಧೀಶರು ಹಿಜಾಬ್‌ ಕುರಿತ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಆಗ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರು ಈ ವಿಚಾರ ಮುಂದಿನ ವಾರ ಸೂಕ್ತವಾದ ಪೀಠದಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. ICC ODI Ranking : ಬುಮ್ರಾ ವರ್ಲ್ಡ್‌ ನಂಬರ್‌ 1, ಆರು ವಿಕೆಟ್‌ ಪಡೆದ ಮರುದಿನವೇ ಸಿಕ್ಕ ಸ್ಥಾನ
ಮಂಗಳವಾರ ನಡೆದ ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ೧೯ ರನ್‌ ವೆಚ್ಚದಲ್ಲಿ ೬ ವಿಕೆಟ್‌ ಕಬಳಿಸಿ ಸಾಧನೆ ಮಾಡಿದ್ದ ಭಾರತ ತಂಡದ ವೇಗದ ಬೌಲರ್‌ ಜಸ್‌ಪ್ರಿತ್‌ ಬುಮ್ರಾ ಮರು ದಿನವೇ ವರ್ಲ್ಡ್‌ ನಂಬರ್‌ ಒನ್‌ ಬೌಲರ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಸಿಸಿ ಏಕದಿನ ಬೌಲರ್‌ಗಳ Ranking ಪಟ್ಟಿಯನ್ನು ಬುಧವಾರ ಐಸಿಸಿ ಬಿಡುಗಡೆ ಮಾಡಿದ್ದು, ಅದರಲ್ಲಿ ಬುಮ್ರಾ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ ೭೧೮ ಅಂಕಗಳನ್ನು ಪಡೆದಿರುವ ಜಸ್‌ಪ್ರಿತ್‌ ಬುಮ್ರಾ, ೭೧೨ ಅಂಕಗಳನ್ನು ಗಳಿಸಿಕೊಂಡಿರುವ ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್‌ ಬೌಲ್ಟ್‌ ಅವರನ್ನು ಹಿಂದಿಕ್ಕಿದ್ದಾರೆ. ಪಾಕಿಸ್ತಾನದ ಶಹೀನ್‌ ಅಫ್ರಿದಿ ಕೂಡ ಒಂದು ಸ್ಥಾನ ಕಳೆದುಕೊಂಡಿದ್ದು, ೬೮೧ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್‌ ಹೇಜಲ್‌ವುಡ್‌ ೬೭೯ ಅಂಕ ಪಡೆದಿದ್ದು, ಒಂದು ಸ್ಥಾನ ಬಡ್ತಿ ಪಡೆದು ೪ ನೇ ಸ್ಥಾನಕ್ಕೆ ಏರಿದ್ದಾರೆ. ಅಫಘಾನಿಸ್ತಾನದ ಮುಜೀಬ್‌ ಉರ್‌ ರಹಮಾನ್‌ ಐದನೇ ಸ್ಥಾನದಲ್ಲಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version