Site icon Vistara News

ವಿಸ್ತಾರ TOP 10 NEWS | PFI ಮೇಲೆ ಆಕ್ಟೋಪಸ್‌ ಹಿಡಿತದಿಂದ ಫೆಡರರ್‌ ಕಣ್ಣೀರ ವಿದಾಯದವರೆಗೆ ಪ್ರಮುಖ ಸುದ್ದಿಗಳಿವು

Top 10 sep24

ಬೆಂಗಳೂರು: ಸೆಪ್ಟೆಂಬರ್‌ ೨೨ರಂದು ದೇಶದ ೧೫ ರಾಜ್ಯಗಳಲ್ಲಿ ಪಿಎಫ್‌ಐ ವಿರುದ್ಧ ಏಕಕಾಲದಲ್ಲಿ ನಡೆದ ದಾಳಿಗೆ ಆಪರೇಷನ್‌ ಆಕ್ಟೋಪಸ್ ಎಂದು ಹೆಸರಿಡಲಾಗಿತ್ತು. ಈ ಮಿಂಚಿನ ದಾಳಿಯಲ್ಲಿ ಪಿಎಫ್‌ಐನ್ನು ಬಿಗಿಮುಷ್ಟಿಯಲ್ಲಿ ಹಿಡಿದ ಕಥೆ ರೋಚಕವಾಗಿದೆ. ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಆನ್‌ಲೈನ್‌ ಮೂಲಕ ಹಂಚಿಕೆ ಮಾಡುವ ಬೃಹತ್‌ ಜಾಲವನ್ನು ಸಿಬಿಐ ಭೇದಿಸಿದೆ. ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಆರಂಭಿಸಿರುವ PAYCM ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲು ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿದ್ದರೆ, ಇತ್ತ ಬಿಜೆಪಿ ೨೦೨೩ರಲ್ಲಿ ʻಹಿಂದʼ ಮತಗಳ ಮೇಲೆ ಕಣ್ಣಿಟ್ಟು ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಭರ್ಜರಿಯಾಗಿ ಸಿದ್ಧಗೊಳ್ಳುತ್ತಿದೆ. ಶಿಕ್ಷಣ ಇಲಾಖೆ ೨೫೦೦ ಪ್ರೌಢ ಶಾಲೆ ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆಸಿದ್ದು ಒಂದು ಖುಷಿ ಸುದ್ದಿಯಾದರೆ, ಪುತ್ತೂರಿನ ಜೇನು ಕೃಷಿಕರೊಬ್ಬರು ಗುಜರಾತ್‌ನಲ್ಲಿ ಜೇನು ಪಾಠ ಮಾಡುವ ಸವಿ ಸುದ್ದಿ ಇನ್ನೊಂದು ಕಡೆ. ರೋಜರ್‌ ಫೆಡರರ್‌ ಅವರ ವಿದಾಯದ ಕಣ್ಣೀರಿನೊಂದಿಗೆ ಟಾಪ್‌ ೧೦ ಸುದ್ದಿ ಸಂಚಯ ಮುಕ್ತಾಯ.

1. ಪಿಎಫ್‌ಐ ವಿರುದ್ಧ ನಡೆದ ಆಕ್ಟೋಪಸ್‌ ಕಾರ್ಯಾಚರಣೆಯ ಹಿಂದಿನ ರಹಸ್ಯ ಸ್ಫೋಟ: ಸೂತ್ರಧಾರರು ಯಾರು?
ಆ ಒಂದು ಕಾರ್ಯಾಚರಣೆಗೆ ತಿಂಗಳ ಹಿಂದೆಯೇ ಸೀಕ್ರೆಟ್​ ರೂಮ್​ ರೆಡಿಯಾಗಿತ್ತು. ನಾಲ್ಕು ಗೋಡೆಗಳ ಆಚೆ ಮಾಹಿತಿ ಸೋರಿಕೆ ಆಗಬಾರದೂ ಅಂತ ಗೌಪ್ಯ ರಣತಂತ್ರ ಹಣೆಯಲಾಗಿತ್ತು. ಮನೆ, ಮಠ ಬಿಟ್ಟು ಗೌಪ್ಯ ಕೊಠಡಿ ಸೇರಿದ್ದ ಅಧಿಕಾರಿಗಳು ಊಟ, ನಿದ್ರೆ ಬಿಟ್ಟು ದೇಶ ವಿರೋಧಿಗಳಿಗೆ ಖೆಡ್ಡಾ ತೋಡಿದರು. ಕೊನೆಗೂ ಅವರ ಬೆವರಿನ ಶ್ರಮ ವ್ಯರ್ಥವಾಗಲಿಲ್ಲ. ಇದು ಎನ್​ಐಎ (NIA Raid) ಸೆ.೨೨ರಂದು ದೇಶಾದ್ಯಂತ ಪಿಎಫ್‌ಐ ವಿರುದ್ಧ ನಡೆಸಿದ ಆಪರೇಷನ್​​​ ಆಕ್ಟೋಪಸ್​​ ಕಾರ್ಯಾಚರಣೆ ಹಿಂದಿನ ಸೀಕ್ರೆಟ್‌​​ ಸ್ಟೋರಿ. ಅದರ ಹಿಂದೆ ನಿಂತಿದ್ದವರೆಂದರೆ ಅಮಿತ್‌ ಶಾ ಮತ್ತು ಅಜಿತ್‌ ದೋವಲ್‌. ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

2. PayCm ಚುರುಕುಗೊಳಿಸಿದ ಕಾಂಗ್ರೆಸ್, ಬೂತ್ ಮಟ್ಟದಲ್ಲೂ ಅಭಿಯಾನ!
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಪೇಸಿಎಂ (PayCm) ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದು 40 ಪರ್ಸೆಂಟ್ ಸರ್ಕಾರ ಎಂದು ಬಿಂಬಿಸಲು ಕಾಂಗ್ರೆಸ್ ಆರಂಭಿಸಿರುವ ಪೇಸಿಎಂ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಈ ನಡುವೆ, ಸಿದ್ದು, ಡಿಕೆಶಿ ವಿರುದ್ದ ಕಾನೂನು ಕ್ರಮ ಖಚಿತ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೩. Operation Meghchakra | ಮಕ್ಕಳ ಅಶ್ಲೀಲ ವಿಡಿಯೊ ಹಂಚಿಕೆ ಜಾಲ ಭೇದಿಸಿದ ಸಿಬಿಐ, 20 ರಾಜ್ಯದಲ್ಲಿ ದಾಳಿ
ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಆನ್‌ಲೈನ್‌ ಮೂಲಕ ಹಂಚಿಕೆ ಮಾಡುವ ಬೃಹತ್‌ ಜಾಲವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭೇದಿಸಿದೆ. ದೇಶದ ೧೯ ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ೫೬ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ‘ಆಪರೇಷನ್‌ ಮೇಘಚಕ್ರ’ (Operation Meghchakra) ಹೆಸರಿನಲ್ಲಿ ಸಿಬಿಐ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಗೆ ಪೂರಕ ಮಾಹಿತಿ ಬಂದಿದ್ದು ಸಿಂಗಾಪುರದಿಂದ!
ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ | ಉಗ್ರ ಕೃತ್ಯ ಮೂಲಕ ಭಾರತದಲ್ಲಿ ಇಸ್ಲಾಂ ಆಳ್ವಿಕೆಗೆ ಪಿಎಫ್​ಐ ಸಂಚು: ಎನ್​ಐಎ, ಇಡಿ

4. ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಬಿಜೆಪಿ ತಯಾರಿ, ಸೆ. 27ರಿಂದಲೇ ಒಬಿಸಿ ನಾಯಕರ ರಾಜ್ಯ ಪ್ರವಾಸ
೨೦೨೩ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಬಿಜೆಪಿ, ಸಮುದಾಯಗಳ ಸಮಾವೇಶದ ಮೂಲಕ ವೋಟ್‌ ಬ್ಯಾಂಕ್‌ ಕ್ರಿಯೇಟ್‌ ಮಾಡಿಕೊಳ್ಳುವ, ಗಟ್ಟಿ ಮಾಡಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಕೇಂದ್ರದ ನಾಯಕರ ಸೂಚನೆ ಮೇರೆಗೆ ಹಲವು ಸಮಾವೇಶಗಳು ನಡೆಯಲಿದ್ದು, ಇದರ ಮೊದಲ ಹಂತವಾಗಿ ಅಕ್ಟೋಬರ್‌ ೧೫ರ ಬಳಿಕ ಹಿಂದುಳಿದ ವರ್ಗಗಳ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಮಾವೇಶವನ್ನು ಯಶಸ್ವಿಗೊಳಿಸುವುದಕ್ಕಾಗಿ ರಾಜ್ಯ ಬಿಜೆಪಿಯ ಒಬಿಸಿ ನಾಯಕ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿದೆ.
ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೫. 2,500 ಪ್ರೌಢಶಾಲಾ ಶಿಕ್ಷಕರ ನೇಮಕ: ಸದ್ಯವೇ ಅಧಿಸೂಚನೆ, ಡಿಸೆಂಬರ್‌ನಲ್ಲಿ ಪರೀಕ್ಷೆ
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು, 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಶಿಕ್ಷಣ ಇಲಾಖೆಯು, ನೇಮಕಾತಿಯನ್ನು ಕೂಡಲೇ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ನಿರೀಕ್ಷೆಯಂತೆಯೇ ದಸರಾದ ಸಂದರ್ಭದಲ್ಲಿ ಈ ನೇಮಕಾತಿಯ ಅಧಿಸೂಚನೆ ಪ್ರಕಟವಾಗಲಿದ್ದು, ಡಿಸೆಂಬರ್‌ ಕೊನೆಯ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೬. ಜೇನು ಕೃಷಿ ಪಾಠ ಬೆಟ್ಟಂಪಾಡಿ ಟು ಗುಜರಾತ್‌: ಮೋದಿ ತವರಿನಲ್ಲಿ ಕರುನಾಡ ಹವಾ
ಪ್ರಧಾನಿ ನರೇಂದ್ರ ಮೋದಿ ಕನಸಾದ ಮಧು ಕ್ರಾಂತಿಯನ್ನು ನನಸು ಮಾಡಲು ದೇಶದೆಲ್ಲೆಡೆ ಜೇನು ಕೃಷಿಯ ಮೇಲೆ ಒಲವು ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಧಾನಿ ತವರು ಗುಜರಾತ್‌ನ ರೈತರು ಜೇನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದ್ದಾರೆ. ಗುಜರಾತ್ ರೈತರಿಗೆ ಜೇನು ಸಾಕಾಣಿಕೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಯುವಕ ಮನಮೋಹನ್ ಆರಂಬ್ಯ ಗುಜರಾತ್‌ಗೆ ತೆರಳಲಿದ್ದಾರೆ.
ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

7. ವಾರದ ವ್ಯಕ್ತಿಚಿತ್ರ: ಫಾಲ್ಗುಣಿ ನಾಯರ್ ದೇಶದ ಶ್ರೀಮಂತ ಮಹಿಳೆ, ನೈಕಾ ಯಶಸ್ಸಿನ ಮುಕುಟಮಣಿ!

ವಿಸ್ತಾರ ನ್ಯೂಸ್‌ನಲ್ಲಿ ಇಂದಿನಿಂದ ಹೊಸ ಅಂಕಣ ಆರಂಭ. ʻವಾರದ ವ್ಯಕ್ತಿಚಿತ್ರʼ ಅಂಕಣದಲ್ಲಿ ವಾರದಲ್ಲಿ ವಿಶೇಷವಾದ ಕಾರಣಗಳಿಗಾಗಿ ಸುದ್ದಿ ಮಾಡಿದ ವ್ಯಕ್ತಿಗಳ ಚಿತ್ರಣವನ್ನು ನೀಡಲಾಗುತ್ತದೆ. ಈ ವಾರದ ವ್ಯಕ್ತಿಚಿತ್ರದಲ್ಲಿ ಭಾರತೀಯ ಉದ್ಯಮ ನಕ್ಷತ್ರದಲ್ಲಿ ಮಿನುಗುತ್ತಿರುವ ಹೊಸ ನಕ್ಷತ್ರ ಫಾಲ್ಗುಣಿ ನಾಯರ್ ಅವರ ಬಗ್ಗೆ ಚಿತ್ರಣವಿದೆ. ನೈಕಾ (www.nykaa.com) ಎಂಬ ಇ- ಕಾಮರ್ಸ್ ತಾಣವನ್ನು ಸ್ಥಾಪಿಸಿ, ಅದನ್ನೀಗ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ ಕಥೆ ಇದು. ಅವರೀಗ ದೇಶದ ಅತ್ಯಂತ ಶ್ರೀಮಂತ ಮಹಿಳೆ. ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೮. Vistara news impact | ರಾಯಚೂರಿನಲ್ಲಿ ಪರ್ಸೆಂಟೇಜ್ ವ್ಯವಹಾರ ನಡೆಸಿದ್ದ ಅಧಿಕಾರಿ ಅಮಾನತು
ಫೋನ್‌ನಲ್ಲಿ ಪರ್ಸೆಂಟೇಜ್ ವ್ಯವಹಾರ ನಡೆಸಿದ್ದ ರಾಯಚೂರಿನ ಪಾಮನಕಲ್ಲೂರು ಗ್ರಾಮದ ಪಿಡಿಒ ಅಮರೇಶಪ್ಪ ಅವರನ್ನು ಜಿಪಂ ಸಿಇಒ ಅಮಾನತು ಮಾಡಿದ್ದಾರೆ. ಇವರು ನಡುರಸ್ತೆಯಲ್ಲಿ ನಿಂತು ಮೊಬೈಲ್‌ನಲ್ಲಿ ಡೀಲ್ ನಡೆಸುತ್ತಿದ್ದುದನ್ನು ವಿಸ್ತಾರ ನ್ಯೂಸ್‌ ಸೆರೆ ಹಿಡಿದಿತ್ತು. ವಿಸ್ತಾರ ನ್ಯೂಸ್ ಸುದ್ದಿ ಪ್ರಸಾರದ ಹಿನ್ನೆಲೆಯಲ್ಲಿ ಅಧಿಕಾರಿಯ ಬಳಿ ಸ್ಪಷ್ಟನೆ ಕೇಳಿ ಕಾರ್ಯನಿರ್ವಾಹಕ ಅಧಿಕಾರಿ ನೋಟೀಸ್‌ ನೀಡಿದ್ದರು. ಸಮಂಜಸವಾದ ಸ್ಪಷ್ಟನೆ ಬರದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೯. ಮಹಾಲಯ ಅಮಾವಾಸ್ಯೆ ದಿನ ಹಿರಿಯರ ಪೂಜೆ ಹೇಗೆ? ಯಾರನ್ನೆಲ್ಲಾ ನೆನೆಯಬೇಕು?
ನಮ್ಮ ಪಿತೃಗಳಿಗೆ ವರ್ಷದಲ್ಲೊಮ್ಮೆ ಕೃತಜ್ಞತೆ ಸಲ್ಲಿಸಲು ಇರುವ ಅವಕಾಶವೇ ಪಿತೃಪಕ್ಷ ಹಾಗೂ ಮಹಾಲಯ ಅಮಾವಾಸ್ಯೆ (Mahalaya 2022). ನಮ್ಮ ಇಂದಿನ ಜನ್ಮಕ್ಕೆ, ಜೀವನಕ್ಕೆ ನಮ್ಮ ಪಿತೃಗಳ ಕೊಡುಗೆ ಅಪಾರ. ಒಂದಲ್ಲಾ ಒಂದು ರೀತಿಯಲ್ಲಿ ಅವರು ನಮಗೆ ಕೊಡುಗೆ ನೀಡಿಯೇ ಇರುತ್ತಾರೆ. ಆದ್ದರಿಂದ ಅವರಿಗೆ ವರ್ಷದಲ್ಲಿ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ರೀತಿ ಕೃತಜ್ಞತೆ ಸಲ್ಲಿಸಲು ಜಾತಿ-ಧರ್ಮಗಳ ಭೇದವಿಲ್ಲ! ಪಿತೃಪಕ್ಷವು ಸರ್ವರಿಗೂ ಅನ್ವಯಿಸುವ ಆಚರಣೆಯಾಗಿದೆ.
ಮಹಾಲಯ ಅಮಾವಾಸ್ಯೆ, ಪಿತೃ ಪಕ್ಷ ಕುರಿತ ಹಲವು ವರದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೧೦. ಅಂತಿಮ ಪಂದ್ಯದಲ್ಲಿ ಸೋಲು, ರೋಜರ್‌ ಫೆಡರರ್‌ ಟೆನಿಸ್‌ಗೆ ಕಣ್ಣೀರಿನ ವಿದಾಯ‌
ಜಾಗತಿಕ ಖ್ಯಾತಿಯ ಟೆನಿಸ್‌ ಕ್ರೀಡಾಪಟು ರೋಜರ್‌ ಫೆಡರರ್‌ ಅಂತಾರಾಷ್ಟ್ರೀಯ ಟೆನಿಸ್‌ನ ಕೊನೆಯ ಪಂದ್ಯದಲ್ಲಿ ಸೋತು ವಿದಾಯ ಹೇಳಿದ್ದಾರೆ. ವಿಶೇಷವೆಂದರೆ, ಅವರ ಬಹುಕಾಲದ ಎದುರಾಳಿ ರಫೇಲ್‌ ನಡಾಲ್‌ ಅವರು ಅಂತಿಮ ಡಬಲ್ಸ್‌ ಪಂದ್ಯದಲ್ಲಿ ಫೆಡರರ್‌ ಅವರ ಜತೆಗಾರನಾಗಿದ್ದರು. ಇಂಗ್ಲೆಂಡ್‌ನಲ್ಲಿ ನಡೆದ ಲೇವರ್‌ ಕಪ್‌ ಪಂದ್ಯಾವಳಿಯ ಈ ಪಂದ್ಯ ತಮ್ಮ ವೃತ್ತಿ ಟೆನಿಸ್‌ನ ಅಂತಿಮ ಪಂದ್ಯವೆಂದು ಫೆಡರರ್‌ ಘೋಷಿಸಿದ್ದರು. ಪಂದ್ಯ ಮುಗಿಯುತ್ತಿದ್ದಂತೆಯೇ ಎಲ್ಲರತ್ತ ಕೈಬೀಸಿ, ಕಣ್ಣೀರಿನೊಂದಿಗೆ ವಿದಾಯ ಹೇಳಿದರು ಫೆಡರರ್‌. ಫೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version