Site icon Vistara News

Explainer: ಬಿರುಗಾಳಿ ಎಬ್ಬಿಸ್ತಾ ಇರೋದೇಕೆ 10 minutes delivery ?

10 minutes delivery

ಈ ಮೊದಲು ಜೊಮ್ಯಾಟೋ ಹಾಗೂ ಸ್ವಿಗ್ಗಿಯಂಥ ಫುಡ್‌ ಡೆಲಿವರಿ ಆನ್‌ಲೈನ್‌ ಕಂಪನಿಗಳು, ಗ್ರೋಸರಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸೋ ಕಂಪನಿಗಳು ತಮ್ಮ ಆಪ್‌ಗಳಲ್ಲಿ ಅರ್ಧ ಗಂಟೆಯಲ್ಲಿ ಗ್ರಾಹಕರಿಗೆ ಎಲ್ಲಾ ಬಗೆಯ ಸಾಮಗ್ರಿ ಒದಗಿಸುವುದಾಗಿ ಭರವಸೆ ಕೊಡ್ತಾ ಇದ್ದವು. ಅರ್ಧ ಗಂಟೆಯಲ್ಲಿ ಗಿರಾಕಿಗಳಿಗೆ ವಸ್ತುಗಳನ್ನು ಕೊಡೋದಕ್ಕಾಗಿ ಡೆಲಿವರಿ ಬಾಯ್ಸ್‌ ಹತ್ತಾರು ಕಿಲೋಮೀಟರ್‌ ಬಹು ವೇಗದಿಂದ ಬೈಕ್‌ಗಳನ್ನು ಓಡಿಸೋದು, ಸಿಗ್ನಲ್‌ ಜಂಪ್‌ ಮಾಡ್ತಿದ್ದರು. ಕಳೆದ ಕೆಲವು ದಿನಗಳಿಂದ ಇವರ ಲೈಫು ಇನ್ನಷ್ಟು ಸ್ಪೀಡ್‌ ಆಗ್ತಾ ಇದೆ. ಡೆಲಿವರಿಗೆ ಇಳಿದಿರೋ ಕೆಲವು ಹೊಸ ಕಂಪನಿಗಳು, ಹತ್ತೇ ನಿಮಿಷದಲ್ಲಿ ನಿಮಗೆ ಗ್ರೋಸರಿಗಳನ್ನು ತಂದುಕೊಡುತ್ತೇವೆ ಎಂದು ಪ್ರಚಾರ ಶುರು ಮಾಡಿದವು. ನಮ್ಮ ಜನ ಎಷ್ಟು ಪುರುಸೊತ್ತಿಲ್ಲದವರಾಗಿದ್ದಾರೆ ಅಂದ್ರೆ, ಮನೆಯಲ್ಲಿ ಅಡುಗೆ ಮಾಡೋದು ಬಿಡಿ, ನೀವು ತಂದುಕೊಟ್ಟದ್ದನ್ನು ಬಿಡಿಸಿ ನೋಡೋಕೂ ಸಮಯವಿಲ್ಲದೆ ಬಾಯಿಗಿಡುತ್ತಿದ್ದಾರೆ. ಇಂಥವರ ನಡುವೆ ಹತ್ತು ನಿಮಿಷದಲ್ಲಿ ತಂದುಕೊಡ್ತೀನಿ ಅಂದ್ರೆ ಬೇಡ ಅನ್ನುವವರು ಇರ್ತಾರಾ? ಸಹಜವಾಗಿಯೇ ಅದೂ ಜನಪ್ರಿಯ ಆಗ್ತಾ ಇದೆ. ಈಗಾಗಲೇ ಎಸ್ಟಾಬ್ಲಿಷ್‌ ಆಗಿರೋ ಡೆಲಿವರಿ ಕಂಪನಿಗಳಿಗೂ ಈ ಹೊಸ ಪೈಪೋಟಿಗೆ ಇಳಿಯಲೇಬೇಕಾದ ಸಂದರ್ಭ ಬಂದಿದೆ. ಇದರ ನಡುವೆ ಫುಡ್‌ ಅನ್ನು ಕೂಡ ಟೆನ್‌ ಮಿನಿಟ್ಸ್‌ ಡೆಲಿವರಿ ಕೊಡೋಕೆ ಕೆಲವು ಕಂಪನಿಗಳು ಮುಂದಾಗಿವೆ.

ಇದೆಲ್ಲ ಹೇಗೆ ಶುರು ಆಯ್ತು?
ಈ 10 ಮಿನಿಟ್ಸ್‌ ಡೆಲಿವರಿ ಅನ್ನೋ ಹವಾ ಮೊದಲು ಶುರು ಮಾಡಿದವರು ಬ್ಲಿಂಕಿಟ್‌ ಅನ್ನೋ ಕಂಪನಿ. ಗುರುಗ್ರಾಮ್‌ ಮೂಲದ ಈ ಕಂಪನಿ, ಹತ್ತೇ ನಿಮಿಷಗಳಲ್ಲಿ ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸ್ತೀವಿ ಅಂತ ಪ್ರಚಾರ ಶುರು ಮಾಡಿದರು. ಅರ್ಧ ಗಂಟೆಯಲ್ಲಿ ಬರುತ್ತಿದ್ದ ಮನೆ ಸಾಮಾನು ಹತ್ತೇ ನಿಮಿಷದಲ್ಲಿ ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ? ಮುಂಬಯಿ ಮೂಲದ ಝೆಪ್ಟೋ (Zepto) ಅನ್ನುವ ಕಂಪನಿ ಕೂಡ ಈ ಸ್ಪರ್ಧೆಗೆ ಇಳಿಯಿತು. ಸ್ಟಾನ್‌ಫರ್ಡ್‌ ಯೂನಿವರ್ಸಿಟಿ ಡ್ರಾಪೌಟ್‌ಗಳಾದ ಇಬ್ಬರು 2020ರಲ್ಲಿ ಸ್ಥಾಪಿಸಿದ ಈ ಕಂಪನಿ ಹತ್ತು ನಿಮಿಷಗಳಲ್ಲಿ ಗ್ರೋಸರಿ ಹಾಗೂ ರೆಡಿಮೇಡ್‌ ಫುಡ್‌ ಕೊಡುವ ಕಂಪನಿಯಾಗಿ ಜನಪ್ರಿಯವಾಯಿತು. ಇದು ಮುಂಬಯಿ ಮಹಾನಗರದಲ್ಲಿ ಟೀ, ಕಾಫಿ, ಬಿಸ್ಕಿಟ್‌, ಸ್ಯಾಂಡ್‌ವಿಚ್‌, ಪ್ಯಾಕೇಜ್ಡ್‌ ಸ್ನ್ಯಾಕ್ಸ್‌ ಮತ್ತು ಪ್ಯಾಕೇಜ್ಡ್‌ ಡ್ರಿಂಕ್‌ಗಳನ್ನು ಡೆಲಿವರಿ ಮಾಡೋಕೆ ಶುರುಮಾಡಿತು. ಬಹುಬೇಗ ಈ ಟ್ರೆಂಡ್‌ ಜನಕ್ಕೆ ಇಷ್ಟವಾಯಿತು. ಪಿಜ್ಝಾ ಡೆಲಿವರಿ ಮಾಡುವ ಡೊಮಿನೋಸ್‌ ಪಿಜ್ಝಾ ಕಂಪನಿ, ತಾನು ಡೆಲಿವರಿ ಸಮಯವನ್ನು 30 ನಿಮಿಷಗಳಿಂದ 20 ನಿಮಷಕ್ಕೆ ಇಳಿಸುವುದಾಗಿ ಕಳೆದ ವರ್ಷವೇ ಹೇಳಿತ್ತು.

ಇದನ್ನು ನೋಡಿ ಇದೇ ವ್ಯವಹಾರದಲ್ಲಿರೋ ಇತರ ಹಲವು ಕಂಪನಿಗಳಿಗೆ ದಿಗಿಲು ಶುರು ಆಯಿತು. ತಾವೂ ಕೂಡ ಈ ಪೈಪೋಟಿಗೆ ಇಳಿಯದೇ ಹೋದರೆ ಗ್ರಾಹಕರು ತಮ್ಮ ಕೈ ಬಿಡಬಹುದು ಎಂದು ಅನಿಸಿದ್ದೇ ತಡ, ಇತರ ಕಂಪನಿಗಳೂ ಒಂದೊಂದಾಗಿ ಹತ್ತು ನಿಮಿಷದ ಪೈಪೋಟಿಗೆ ಇಳಿದವು. ಸ್ವಿಗ್ಗಿ ಕಂಪನಿಯ ಇನ್‌ಸ್ಟಂಟ್‌ ಸರ್ವಿಸ್‌ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ಹದಿನೈದರಿಂದ ಮೂವತ್ತು ನಿಮಿಷದ ಒಳಗೆ ದಿನಸಿ ವಸ್ತುಗಳನ್ನು ಕೊಡಲು ಆರಂಭ ಮಾಡಿತು. ಟಾಟಾ ಡಿಜಿಟಲ್‌ ಮಾಲಿಕತ್ವದ ಬಿಗ್‌ಬಾಸ್ಕೆಟ್‌ ಕಂಪನಿ ತನ್ನ ಬಿಬಿ ಆಪ್‌ ಮೂಲಕ ಕೇವಲ ಹತ್ತರಿಂದ ಇಪ್ಪತ್ತು ನಿಮಿಷದಲ್ಲಿ ಗ್ರೋಸರಿಗಳನ್ನು ಕೊಡೋಕೆ ಶುರು ಮಾಡಿತು. ಟ್ರಾಫಿಕ್‌ ಜಾಮ್‌ ಮುಂತಾದ ಕಾರಣಗಳಿಗಾಗಿ ನಿಗದಿತ ಸಮಯದಲ್ಲಿ ವಸ್ತುಗಳನ್ನು ತಲುಪಿಸೋಕೆ ಸಾಧ್ಯವಾಗದೇ ಇದ್ದಲ್ಲಿ ಶೇ.5ರಷ್ಟು ಅಮೌಂಟ್‌ ವಾಪಸ್‌ ಕೊಡುವುದಾಗಿ ಹೇಳಿತು. ಇದರ ಜೊತೆಜೊತೆಗೇ ಭವಿಷ್‌ ಅಗರ್‌ವಾಲ್‌ ಅವರ ಓಲಾ ಕೂಡ, ಓಲಾ ಡ್ಯಾಶ್‌ (0la dash) ಅನ್ನುವ ವಿಭಾಗ ಶುರು ಮಾಡಿ ಕ್ವಿಕ್‌ ಆಗಿ ಗ್ರೋಸರಿ ತಲುಪಿಸೋಕೆ ಶುರು ಮಾಡಿತು.

ಕ್ಯೂ ಕಾಮರ್ಸ್‌
ಇದೆಲ್ಲದರ ಹಿನ್ನೆಲೆಯಲ್ಲಿ ಹೀಗೆ ಕ್ವಿಕ್‌ ಆಗಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಕ್ಯೂ ಕಾಮರ್ಸ್‌ ಅಂತ ಕೂಡಾ ಕರೆಯಲಾಯಿತು. ಈಗ ಹೆಚ್ಚಿನ ಎಲ್ಲ ಆನ್‌ಲೈನ್‌ ಡೆಲಿವರಿ ಸಂಸ್ಥೆಗಳು ತಮ್ಮದೇ ಆದ ಕ್ಯೂ ಕಾಮರ್ಸ್‌ ವಿಭಾಗವನ್ನು ಹೊಂದಿವೆ.

ಇದೆಲ್ಲದರ ನಡುವೆ ಇನ್ನೊಂದು ಬಿರುಗಾಳಿಯನ್ನು ಈಗ ಆರಂಭಿಸಿರೋದು ಜೊಮ್ಯಾಟೋ ಕಂಪನಿ. ತಾನು ಹತ್ತು ನಿಮಿಷದಲ್ಲಿ ಫುಡ್‌ ಡೆಲಿವರಿ ಕೊಡುವುದಾಗಿ ಈ ಕಂಪನಿ ಪ್ರಚಾರ ಮಾಡಿದೆ. ಝೆಪ್ಟೋಗಿಂತ ಈ ವಿಚಾರದಲ್ಲಿ ತುಸು ಮುಂದೆ ಹೋಗಿರೋ ಜೊಮ್ಯಾಟೋ, ರೆಡಿಮೇಡ್‌ ಪ್ಯಾಕೇಜ್‌ ಫುಡ್‌ಗಳ ಜೊತೆಗೆ ಕೆಲವು ಫ್ರೆಶ್‌, ಬಿಸಿಬಿಸಿ ಆಹಾರಗಳನ್ನು ಆಯ್ದ ಔಟ್‌ಲೆಟ್‌ಗಳಿಂದ ಗ್ರಾಹಕರಿಗೆ ವಿತರಿಸುವುದಾಗಿ ಹೇಳಿಕೊಂಡಿದೆ. ಉದಾಹರಣೆಗೆ ಬಿರಿಯಾನಿ, ಮೋಮೋಸ್‌, ಇನ್‌ಸ್ಟಂಟ್‌ ನ್ಯೂಡಲ್ಸ್‌, ಬ್ರೆಡ್‌ ಆಮ್ಲೆಟ್‌ ಮುಂತಾದ ಕೆಲವು ನಿರ್ದಿಷ್ಟ ಆಹಾರಗಳನ್ನು ಹತ್ತೇ ನಿಮಿಷದಲ್ಲಿ ಆಯ್ದ ರೆಸ್ಟೋರೆಂಟ್‌ಗಳಿಂದ ತಾನು ತರಿಸಿಕೊಡ್ತೀನಿ ಅಂತ ಜೊಮ್ಯಾಟೋ ಗ್ರಾಹಕರಿಗೆ ವಾಗ್ದಾನ ಮಾಡಿದೆ.

ತರಾತುರಿ ಏಕೆ?
ಹತ್ತೇ ನಿಮಿಷದಲ್ಲಿ ಡೆಲಿವರಿ ಕೊಡಬೇಕು ಎಂಬ ಹಠಕ್ಕೆ ಬಿದ್ದಿರೋದ್ಯಾಕೆ ಈ ಕಂಪನಿಗಳು? ಇದರಿಂದ ಅವುಗಳಿಗೆ ಏನು ಲಾಭ? ಇಷ್ಟೊಂದು ಅವಸರದಲ್ಲಿ ಗುಣಮಟ್ಟದ ಸೇವೆ ಕೊಡೋಕೆ ಆಗುತ್ತಾ? ಈ ಎಲ್ಲ ಪ್ರಶ್ನೆಗಳೂ ಇವೆ.

ಮುಖ್ಯವಾಗಿ, ಮೆಟ್ರೋ ನಗರದಲ್ಲಿನ ಬದುಕು ಇಂದು ತುಂಬಾ ಫಾಸ್ಟಾಗಿ ನಡೆಯುತ್ತಿದೆ. ಇಪ್ಪತ್ತನಾಲ್ಕು ಗಂಟೆಯೂ ಕೆರಿಯರ್‌ ಉದ್ಯೋಗ ಅಂತ ಬ್ಯುಸಿಯಾಗಿರುವ ಮಂದಿಗೆ ಅಡುಗೆ ಮಾಡಲು, ಒಟ್ಟಿಗೆ ಕುಳಿತು ಊಟಾ ಮಾಡಲು ಸಮಯ ಇಲ್ಲ. ಗ್ರೋಸರಿ ಶಾಪ್‌ಗೆ ಹೋಗಿ ಶಾಪಿಂಗ್‌ ಮಾಡಲೂ ಸಮಯವಿಲ್ಲ. ಇದರಿಂದಾಗಿ ದಿನಸಿ ಸಾಮಗ್ರಿಗಳ ಡೋರ್‌ ಡೆಲಿವರ್‌ ಆಪ್‌ಗಳು ತುಂಬಾ ಬೇಗನೆ ಜನಪ್ರಿಯತೆ ಗಳಿಸಿದವು. ನಂತರದ ಹಂತದಲ್ಲಿ ಬಂದ ಫುಡ್‌ ಡೆಲಿವರಿ ಆಪ್‌ಗಳಂತೂ ಮನೆಯಲ್ಲೇ ರೆಸ್ಟೋರೆಂಟ್‌ ಫುಡ್‌ ತಿನ್ನಬಯಸುವವರಿಗೆ ಹಬ್ಬವೇ ಆಯ್ತು. ಸಾಮಾನ್ಯವಾಗಿ ಎಲ್ಲ ಫುಡ್‌ ಡೆಲಿವರಿ ಆಪ್‌ಗಳೂ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಯಲ್ಲಿ ಗ್ರಾಹಕರಿಗೆ ಆಹಾರ ತಲುಪಿಸುತ್ತವೆ. ಆರ್ಡರ್‌ ರಿಸೀವ್‌ ಮಾಡಿ, ಅದನ್ನು ಡೆಲಿವರಿ ಬಾಯ್‌ಗೆ ನಿಗದಿ ಮಾಡಿ, ಆತ ರೆಸ್ಟೋರೆಂಟ್‌ ತಲುಪಿ, ಅಲ್ಲಿ ಆರ್ಡರ್‌ ಆಗಿರುವ ಆಹಾರ ತಯಾರಾಗುವವರೆಗೆ ಕಾದು, ಅದನ್ನು ಗಾಡಿಗೆ ಏರಿಸಿಕೊಂಡು ವಾಹನಗಳು ತುಂಬಿರೋ ನಮ್ಮ ನಗರಗಳ ರಸ್ತೆಗಳಲ್ಲಿ ಬ್ಯಾಲೆನ್ಸ್‌ ಮಾಡ್ತಾ ಅದನ್ನು ಗ್ರಾಹಕರ ಮನೆ ಹುಡುಕಿ ಅದನ್ನು ತಲುಪಿಸೋ ಹಂತದವರೆಗೆ ಕನಿಷ್ಠ ಅರ್ಧ ಗಂಟೆಯಾದರೂ ಹೋಗುತ್ತೆ.

ಇದನ್ನೂ ಓದಿ: Explainer: Sex work ಲೀಗಲ್‌ ಅಂದರೆ ಏನರ್ಥ?

ಹತ್ತು ನಿಮಿಷದಲ್ಲಿ ಹೇಗೆ ತಲುಪಿಸ್ತಾರೆ?
ಯಾವುದೆ ನಗರದಲ್ಲಿ ಹೈ ಆರ್ಡರ್‌ಡೆನ್ಸಿಟಿ ಏರಿಯಾಗಳು ಅಂತ ಇರುತ್ತವೆ. ಇಲ್ಲಿ ಕೆಲವು ಹೊತ್ತಿನಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳು ಅಥವಾ ವಸತಿ ಪ್ರದೇಶಗಳಲ್ಲಿ ಕೆಲವು ನಿರ್ದಿಷ್ಟ ರೆಸ್ಟೋರೆಂಟ್‌ಗಳಿಂದ ಫುಡ್‌ ತರಿಸಿಕೊಳ್ಳುವವರು ಹೆಚ್ಚು ಇರುತ್ತಾರೆ. ಇಂಥ ಸಂದರ್ಭದಲ್ಲಿ ಆ ಸ್ಥಳದಲ್ಲಿ ಕಂಪನಿ ಹೆಚ್ಚಿನ ಡೆಲಿವರಿ ಬಾಯ್‌ಗಳನ್ನು ನಿಯೋಜಿಸಿದ್ದರೆ ಅಲ್ಲಿ ಟೆನ್‌ ಮಿನಿಟ್ಸ್‌ ಡೆಲಿವರಿ ಕೊಡೋದು ಸುಲಭ. ಆದರೆ ಇನ್ನ ಕೆಲವು ಪ್ರದೇಶಗಳಿಗೆ ಸರಿಯಾದ ರಸ್ತೆಗಳು ಇರೋದಿಲ್ಲ, ಸಿಗ್ನಲ್‌ಗಳು ಹೆಚ್ಚು ಇರುತ್ತವೆ, ಟ್ರಾಫಿಕ್‌ ಜಾಮ್‌ ಇರುತ್ತದೆ- ಇಂಥ ಸಂದರ್ಭದಲ್ಲಿ ಟೆನ್‌ ಮಿನಿಟ್ಸ್‌ ಡೆಲಿವರಿ ಸಾಧ್ಯವಿಲ್ಲ. ಇದನ್ನು ಕಂಪನಿಗಳು ಸ್ಪಷ್ಟವಾಗಿ ತಮ್ಮ ವೆಬ್‌ಸೈಟ್‌ಗಳಲ್ಲಿ ಹೇಳಿವೆ. ಕೆಲವು ಕಂಪನಿಗಳು, ಅನಿವಾರ್ಯ ಕಾರಣಗಳಿಂದ ತಡವಾದರೆ ಆರ್ಡರ್‌ನಲ್ಲಿ ಕೆಲವು ಪರ್ಸೆಂಟ್‌ ಹಣವನ್ನು ಮರಳಿ ಗ್ರಾಹಕನಿಗೆ ಕೊಡುತ್ತವೆ. ಇನ್ನು ಕೆಲವು ಫ್ರೀ ಡೆಲಿವರಿ ಕೊಡೋದೂ ಉಂಟು.

ಡೆಲಿವರಿ ಬಾಯ್ಸ್‌ ಸಾಮಾನ್ಯವಾಗಿ ಈ ಕಂಪನಿಗಳ ಕಾಯಂ ಕೆಲಸಗಾರರು ಆಗಿರುವುದಿಲ್ಲ. ಇವರು ಯಾವುದೇ ಆರ್ಡರ್‌ ಅನ್ನು ಪರಿಶೀಲಿಸಿ ಅಂಗೀಕರಿಸಬಹುದು. ತಾನು ಆರ್ಡರ್‌ ಕಲೆಕ್ಟ್‌ ಮಾಡಿಕೊಳ್ಳಬೇಕಾದ ರೆಸ್ಟೋರೆಂಟ್‌ ಹಾಗೂ ಸಾಗಬೇಕಾದ ದಾರಿ, ತಲುಪಿಸಬೇಕಾದ ಗುರಿ, ಇದೆಲ್ಲವನ್ನೂ ನೋಡಿ, ನಿಗದಿತ ಸಮಯದಲ್ಲಿ ಅದನ್ನು ತಲುಪಿಸಬಹುದು ಎನಿಸಿದರೆ ಆರ್ಡರ್ ಅನ್ನು ತಾನು ಪಡೆದುಕೊಳ್ಳಬಹುದು. ಅಥವಾ ನಿರಾಕರಿಸಬಹುದು. ಆದರೆ, ಹೀಗೆ ಪದೇ ಪದೇ ನಿರಾಕರಿಸುವ ಡೆಲಿವರಿ ಬಾಯ್‌ಗಳು ಸಂಬಳ ಕಡಿತ, ಇನ್ಸೆಂಟಿವ್‌ಗಳ ಕೊರತೆ, ನೆಗೆಟಿವ್‌ ರಿಮಾರ್ಕ್‌ಗಳನ್ನು ಎದುರಿಸಬೇಕಾಗುತ್ತೆ.

ಕ್ಯೂ ಕಾಮರ್ಸ್‌ ಕಂಪನಿಗಳು ಟೆನ್‌ ಮಿನಿಟ್ಸ್‌ ಡೆಲಿವರಿ ಹಿಂದೆ ಬಿದ್ದಿರೋದನ್ನು ನೋಡಿ ಜನ ಮಿಶ್ರ ರೀತಿಯಲ್ಲಿ ಪ್ರತಿಕ್ರಿಯಿಸ್ತಾ ಇದ್ದಾರೆ. ಬಹುತೇಕ ಮಂದಿ ಇದೊಂದು ಗಿಮಿಕ್‌ ಅಂತಾರೆ. ಇನ್ನಷ್ಟು ಮಂದಿ ಇದೊಂದು ಇನ್ನೋವೇಟಿವ್‌ ಐಡಿಯಾ, ಇದರಿಂದ ಮುಂದಿನ ದಿನಗಳಲ್ಲಿ ಒಟ್ಟಾರೆ ಕ್ಯೂ ಕಾಮರ್ಸ್‌ ಚಿತ್ರಣವೇ ಬದಲಾಗುತ್ತೆ ಅಂತ ಮಾತಾಡ್ತಾರೆ. ಬದಲಾಗ್ತಿರೋದೂ ನಿಜ. ಟರ್ಕಿಯಲ್ಲಿ ಗೆಟಿರ್‌, ಗೋರಿಲ್ಲಾಸ್‌, ಬ್ರಿಟನ್‌ನಲ್ಲಿ ದಿಜಾ, ಅಮೆರಿಕದಲ್ಲಿ ಗೋಪಫ್‌ ಮುಂತಾದ ಕಂಪನಿಗಳು ಈ ವಿಷಯದಲ್ಲಿ ಒಟ್ಟಾರೆ ಚಿತ್ರಣವನ್ನೇ ಬದಲಾಯಿಸಿವೆ. ಭಾರತದಲ್ಲಿ ಡಂಜೋ ಸೇರಿದಂತೆ ಹಲವಾರು ಡೆಲಿವರಿ ಕಂಪನಿಗಳು ತಮ್ಮ ವೇರ್‌ಹೌಸ್‌ಗಳನ್ನು ನಗರದ ಅಲ್ಲಲ್ಲಿ ತೆರೆಯುತ್ತಿವೆ ಹಾಗೂ ಸರ್ವಿಸ್‌ ಅನ್ನು ಸ್ಪೀಡ್‌ ಮಾಡುತ್ತಿವೆ. ಅಗತ್ಯವಾದ ಎಲ್ಲ ತಂತ್ರಜ್ಞಾನವನ್ನೂ ಅಳವಡಿಸಲಾಗ್ತಾ ಇದೆ.

ಮತ್ಯಾಕೆ ಕೆಲವರು ಸಿಟ್ಟಾಗಿದ್ದಾರೆ?
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸಂಸದೆ ಮೋಹುವಾ ಮೋಯಿತ್ರಾ ಅವರು ಈ ಬಗ್ಗೆ ಅಸಮಾಧಾನದಿಂದ ಟ್ವೀಟ್‌ ಮಾಡಿದ್ದಾರೆ. ಈ ಟೆನ್‌ ಮಿನಿಟ್ಸ್‌ ಡೆಲಿವರಿ ಅನ್ನೋದು ಕಂಪನಿಗಳು ಮಾರುಕಟ್ಟೆ ಗಳಿಸಿಕೊಳ್ಳೋಕೆ ಮಾಡಿರೋ ಗಿಮಿಕ್‌ ಅಲ್ಲದೇ ಮತ್ತೇನಲ್ಲ. ಇದರಿಂದ ಡೆಲಿವರಿ ಬಾಯ್‌ಗಳಿಗೆ ಒತ್ತಡ ಉಂಟಾಗುತ್ತೆ, ಅವರು ಅತಿವೇಗದಿಂದ ಡ್ರೈವ್‌ ಮಾಡೋದರಿಂದಾಗಿ ಅಪಘಾತ ಇತ್ಯಾದಿ ಉಂಟಾಗಬಹುದು. ನಾನು ಇದನ್ನು ಸಂಸತ್‌ನಲ್ಲಿ ಪ್ರಸ್ತಾಪ ಮಾಡ್ತೀನಿ ಅಂತ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಾಕಷ್ಟು ಇಂಟರೆಸ್ಟಿಂಗ್‌ ಆದ ವಾದ ವಿವಾದ ನಡೆದಿದೆ.

ಇನ್ನಷ್ಟು ಓದಿಗಾಗಿ: ವಿಸ್ತಾರ Explainer: ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ಅಬಕಾರಿ ಸುಂಕವನ್ನು ಗಣನೀಯ ಇಳಿಸಿದ್ದೇಕೆ?

ಹತ್ತು ನಿಮಿಷದಲ್ಲಿ ನಿಮಗೆ ಫುಡ್‌ ಡೆಲಿವರಿ ಕೊಡೋಕೆ ಸಾಧ್ಯ ಇದೆ ಅಂತಾದ್ರೆ ಸಾಯ್ತಾ ಇರೋರ ಬಳಿಗೆ ಆಂಬುಲೆನ್ಸ್‌ ತಲುಪಿಸೋಕೆ ಸಾಧ್ಯ, ಮೆಡಿಸಿನ್‌ ತಲುಪಿಸೋಕೆ ಸಾಧ್ಯ ಆಗಬೇಕು. ಈಗ ನಮಗೆ ಕಾಣಬರ್ತಾ ಇರೋದೇನೆಂದರೆ, ಬೆಂಗಳೂರೂ ಸೇರಿದಂತೆ ಹಲವಾರು ನಗರಗಳಲ್ಲಿ ಆಗ್ತಿರೋ ಅಪಘಾತಗಳಲ್ಲಿ ಡೆಲಿವರಿ ಬಾಯ್‌ಗಳು ಸಾಯ್ತಾ ಇದಾರೆ. ಯಾವಾಗ್ಲೂ ದೊಡ್ಡ ವಾಹನ ಮತ್ತು ಡೆಲಿವರಿ ಬಾಯ್‌ಗಳ ಪುಟ್ಟ ಬೈಕ್‌ಗಳ ನಡುವೆ ಉಂಟಾಗೋ ಆಕ್ಸಿಡೆಂಟ್‌ನಲ್ಲಿ ಡೆಲಿವರಿ ಬಾಯ್‌ಗಳೇ ಜೀವ ಕಳೆದುಕೊಳ್ಳೋದು, ಅವರೇ ಕೈಕಾಲು ಮುರಿದುಕೊಳ್ಳೋದು. ಇದಕ್ಕೆ ಕಾರಣ ಅನಾವಶ್ಯಕ ನಾವು ಅವರ ಮೇಲೆ ಹೇರ್ತಾ ಇರುವಂಥ ಸಮಯದ ಒತ್ತಡ. ಬೇಗನೆ ಸಾಮಗ್ರಿ ತಲುಪಿಸಬೇಕು ಎಂಬ ಒತ್ತಡವನ್ನು ಅತ್ತ ಗ್ರಾಹಕರು ಮತ್ತು ಇತ್ತ ಕಂಪನಿ ಅವರ ಮೇಲೆ ಹೇರುವುದರಿಂದ, ಮಿತಿ ಮೀರಿದ ಸ್ಪೀಡಿನಲ್ಲಿ ಗಾಡಿ ಓಡಿಸುವುದು, ಸಿಗ್ನಲ್‌ಗಳನ್ನು ಲೆಕ್ಕಿಸದೆ ಜಂಪ್‌ ಮಾಡುವುದು, ಅಪಾಯಕಾರಿಯಾಗಿ ಓವರ್‌ಟೇಕ್‌ ಮಾಡುವುದು ಮುಂತಾದವುಗಳನ್ನು ಕಾಣ್ತೇವೆ. ಇದು ಇವರ ಮೇಲೆ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮ ಬೀರ್ತಿದೆ. ಮಾತ್ರ ಅಲ್ಲ, ಅದು ಟ್ರಾಫಿಕ್‌ನಲ್ಲಿ ಇರೋ ಇತರರಿಗೂ ಅಪಾಯ. ಯಾರದೋ ಅವಸರಕ್ಕೆ ಇನ್ಯಾರೋ ಜೀವ ಕಳೆದುಕೊಳ್ಳೋದು ಎಷ್ಟು ಸರಿ ಅಂತ ಹೆಚ್ಚಿನವರು ವಾದಿಸಿದ್ದಾ.

ಜೊತೆಗೆ, ಹತ್ತೇ ನಿಮಿಷದಲ್ಲಿ ನಮಗೆ ಸಿಗೋ ಆಹಾರ ಫ್ರೆಶ್‌ ಆಗಿರುತ್ತೆ ಅಂತ ಏನು ಗ್ಯಾರಂಟಿ? ಮೊದಲೇ ತಯಾರಿಸಿಟ್ಟಿರೋ ಆಹಾರವನ್ನು ನಮಗೆ ತಲುಪಿಸೋ ಕೆಲಸವನ್ನು ಮಾತ್ರ ಈ ಕಂಪನಿಗಳು ಮಾಡ್ತಾ ಇವೆಯಾ ಅಂತ ಕೂಡ ಕೇಳಿದ್ದಾರೆ. ಇನ್ನು ರೆಸ್ಟೋರೆಂಟ್‌ಗಳು ಕೂಡ ಈ ವಿಚಾರದಲ್ಲಿ ಪಾಸಿಟಿವ್‌ ಅಭಿಪ್ರಾಯ ಹೊಂದಿಲ್ಲ. ಹತ್ತೇ ನಿಮಿಷದಲ್ಲಿ ಆಹಾರ ತಲುಪಿಸ್ಬೇಕು ಅಂದ್ರೆ ಆರ್ಡರ್‌ ಬಂದ ಐದೇ ನಿಮಿಷದ ಒಳಗೆ ಆಹಾರ ರೆಡಿ ಮಾಡಬೇಕು. ಇದು ಆಗೋ ಹೋಗೋ ಮಾತಲ್ಲ, ಇದರಿಂದ ಆಹಾರದ ಗುಣಮಟ್ಟ ಕಾಪಾಡೋಕೆ ಆಗಲ್ಲ, ಹಾಗಾದರೆ ರೆಸ್ಟೋರೆಂಟಿಗೆ ಕೆಟ್ಟ ಹೆಸರು ಬರುತ್ತೆ- ಅಂತ ರೆಸ್ಟೋರೆಂಟ್‌ ಮಾಲಿಕರು ಅಭಿಪ್ರಾಯಪಡುತ್ತಾರೆ.

ಡೆಲಿವರಿ ಬಾಯ್‌ಗಳಿಗೂ ಸಮಸ್ಯೆ

ಇದಲ್ಲದೆ ಡೆಲಿವರಿ ಬಾಯ್‌ಗಳಿಗೆ ಸಂಬಂಧಪಟ್ಟಂತೆ ಇತರ ಸಮಸ್ಯೆಗಳೂ ಇವೆ. ಇವರಿಗೆ ಈಗ ಕೊಡಲಾಗ್ತಿರೋ ಸಂಬಳ ಬಹಳ ಕಡಿಮೆ ಇದೆ. ಇವರ ಡ್ಯೂಟಿ ಸಮಯ ಒಂಬತ್ತೂವರೆ ಗಂಟೆಗಿಂತ್ಲೂ ಹೆಚ್ಚು. ದಿನಕ್ಕೆ ಹದಿನಾರರಿಂದ ಮೂವತ್ತು ಡೆಲಿವರಿಗಳವರೆಗೂ ಅವರಿಂದ ಮಾಡಿಸಲಾಗ್ತಿದೆ. ಮೂವತ್ತು ಡೆಲಿವರಿ ಮಾಡಿದರೆ ಸಿಗೋದು 1,900 ರೂಪಾಯಿ ಮಾತ್ರ. ಈ ಗುರಿಯನ್ನು ಸಾಧಿಸೋಕೆ ಕೆಲವರು 24 ಗಂಟೆ ದುಡೀತಾರೆ. ಈಗ ಟೆನ್‌ ಮಿನಿಟ್ಸ್‌ ಡೆಲಿವರಿ ಟಾರ್ಗೆಟ್‌ಗಳನ್ನು ತೆಗೆದುಕೊಂಡ್ರೆ ಇನ್ನೂ ಹೆಚ್ಚಿನ ದುಡಿಮೆ ಮಾಡಬಹುದು ಎಂಬ ಆಮಿಷವೂ ಹೊಸದಾಗಿ ಹುಟ್ಟಿಕೊಂಡಿದೆ. ಆದ್ರೆ ಇವರು ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಬೇಕಾಗಿ ಬಂದ್ರೆ, ಅವರ ಕಂಪನಿ ಅವರಿಗೆ ಯಾವುದೇ ನೆರವು ಕೊಡಲ್ಲ. ಇವರಿಗೆ ಇನ್ಶೂರೆನ್ಸ್‌ ಇತ್ಯಾದಿ ಸೌಲಭ್ಯವಿಲ್ಲ.

ಹಾಗಿದ್ರೆ ಇದಕ್ಕೆ ಪರಿಹಾರ ಏನು? ಅನಾರೋಗ್ಯಕರವಾದ ಟೆನ್‌ ಮಿನಿಟ್ಸ್‌ ಡೆಲಿವರಿಯನ್ನು ಕೈಬಿಡೋದು ಎಲ್ಲರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಅಂತ ಕೆಲವರು ಹೇಳಿದ್ರೆ, ಕ್ಯೂ ಕಾಮರ್ಸ್‌ ಈಗಷ್ಟೇ ನಮ್ಮ ದೇಶದಲ್ಲಿ ಅಭಿವೃದ್ಧಿಯಾಗ್ತಿದೆ. ನಿಧಾನವಾಗಿ ಇಲ್ಲಿ ಗ್ರಾಹಕನಿಗೆ ಅನುಕೂಲವಾದ ಒಳ್ಳೇ ರೂಢಿಗಳು ಉಳಿದು, ಉಳಿದದ್ದು ಹೊರಟುಹೋಗ್ತವೆ ಅಂತ ಇನ್ನು ಕೆಲವರು ಹೇಳ್ತಾರೆ. ನೀವೇ ನಿರ್ಧರಿಸಿ, ಮುಂದಿನ ಸಲ ಫುಡ್‌ ಆರ್ಡರ್‌ ಮಾಡುವಾಗ ಹತ್ತೇ ನಿಮಿಷದ ಆಯ್ಕೆ ಮಾಡುತ್ತೀರಾ? ಯೋಚಿಸಿ ನಿರ್ಧರಿಸಿ.

ಇದನ್ನೂ ಓದಿ: ವಿಸ್ತಾರ Explainer: ಅಮೆರಿಕದ ಯುವಕರೇಕೆ ಕಿಲ್ಲರ್ ಆಗುತ್ತಿದ್ದಾರೆ?

Exit mobile version