Site icon Vistara News

ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

killer stress

ಕೊರೊನಾ ನಂತರ ಹೆಚ್ಚಾಯ್ತು ಸ್ರ್ಟೆಸ್ಸು, ಕಡಿಮೆಯಾಯ್ತು ದೇಹದ ಹುಮ್ಮಸ್ಸು

ʼʼಒತ್ತಡವೆಂದರೆ ಇಂದು ಬರಿಯ ಮಾನಸಿಕ ಸಮಸ್ಯೆಯಲ್ಲ. ಅದು ದೇಹಕ್ಕೂ ನಾನಾ ಸ್ವರೂಪದಲ್ಲಿ ಹಬ್ಬಿಕೊಂಡಿದ್ದು, ದೈಹಿಕ ಸಮಸ್ಯೆಗಳಲ್ಲಿ ವ್ಯಕ್ತವಾಗುತ್ತಿದೆʼʼ ಎನ್ನುತ್ತಾರೆ ಬೆಂಗಳೂರಿನ ನಿಮ್ಹಾನ್ಸ್‌ನ ಮಾಜಿ ನಿರ್ದೇಶಕ ಡಾ.ಬಿ.ಎನ್‌ ಗಂಗಾಧರ. ಕಳೆದ ಎರಡು ವರ್ಷಗಳಲ್ಲಿ ನಡೆದ ನಾನಾ ಅಧ್ಯಯನಗಳೂ ಇದನ್ನು ಖಚಿತಪಡಿಸಿವೆ. ಹೃದಯ ಕಾಯಿಲೆಗಳು, ಮೆದುಳಿನ ಲಕ್ವ, ಡಯಾಬಿಟಿಸ್‌, ಕ್ಯಾನ್ಸರ್‌, ಶ್ವಾಸಕೋಶದ ಸಮಸ್ಯೆಗಳು, ಯಕೃತ್ತಿನ ಊತ, ಫಲವತ್ತತೆಯ ಕೊರತೆ ಇತ್ಯಾದಿಗಳಿಗಿರುವ ಸಂಬಂಧ ಪತ್ತೆಯಾಗಿದೆ. ಇದರ ಜತೆಗೆ ಬೊಜ್ಜು, ನಾನಾ ವ್ಯಸನಗಳು, ಖಿನ್ನತೆಗಳಂತೂ ಹೇಗೂ ಇದ್ದೇ ಇವೆ. ಖಿನ್ನತೆಯು ಆತ್ಮಹತ್ಯೆಯ ಪ್ರಮುಖ ಕಾರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಒತ್ತಡವು ಇಂಥದಕ್ಕೆಲ್ಲ ಕಾರಣ ಎಂದು ಜನ ಗುರುತಿಸುತ್ತಿಲ್ಲ.

ಅದೇಕೆ? ಯಾಕೆಂದರೆ ಒತ್ತಡವನ್ನು ಅಳೆಯಲು ಸರಿಯಾದ ಮಾಪಕ ಆವಿಷ್ಕಾರ ಎಲ್ಲೂ ಆಗಿಲ್ಲ. ಹೀಗಾಗಿ, ಹೆಚ್ಚು ತೀವ್ರವಾದ ಒಂದು ಪರಿಣಾಮ ಕಾಣಿಸದೇ ಹೋಗುವವರೆಗೂ ಒತ್ತಡದ ಇರುವಿಕೆ ಗೊತ್ತೇ ಆಗುವುದಿಲ್ಲ.

ನಮ್ಮ ಆಧುನಿಕ ಜೀವನವೇ ಒತ್ತಡಯುಕ್ತವಾಗಿದೆ. ಆದರೆ ಕಳೆದ ಎರಡು ವರ್ಷಗಳ ಕಾಲದ ಕೊರೊನಾ ಜತೆಗಿನ ಸಹಜೀವನ ಇದನ್ನು ಇನ್ನೂ ದುರ್ಭರಗೊಳಿಸಿದೆ. ಇದು ನಮ್ಮ ದೇಹಗಳ ಮೇಲೆ ಹೆಚ್ಚಿನ ಕಂದಾಯ ಪಡೆಯುತ್ತಿದೆ. ʼʼಉದಾಹರಣೆಗೆ, ದಿಡೀರ್‌ ಹೃದಯಾಘಾತಗಳ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಿದೆ. ಇದಕ್ಕೆ ಗಣನೀಯ ಕಾರಣ ಒತ್ತಡʼʼ ಎನ್ನುತ್ತಾರೆ ಫೋರ್ಟಿಸ್‌ ಎಸ್ಕಾರ್ಟ್ಸ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಡಾ. ಅಶೋಕ್‌ ಸೇಠ್.‌ ಕೋವಿಡ್‌ ಪ್ರಹಸನದ ತೆರೆ ಇನ್ನೂ ಇಳಿಯುವ ಮೊದಲೇ ಇನ್ನೊಂದು ʼಒತ್ತಡದʼ ಪ್ರಹಸನಕ್ಕೆ ನಾವು ಸಜ್ಜಾಗಬೇಕಿದೆ.

ದೆಹಲಿಯಲ್ಲಿರುವ ಆರೋಗ್ಯ ಸೇವಾ ಸಂಸ್ಥೆ ದಿ ಸೆಂಟರ್‌ ಆಫ್‌ ಹೀಲಿಂಗ್‌ (TCOH) 2020ರ ಡಿಸೆಂಬರ್‌ನಲ್ಲಿ 10,000 ಭಾರತೀಯರ ಮೇಲೆ ಒಂದು ಸಮೀಕ್ಷೆ ನಡೆಸಿತು. ಇದರಕಲ್ಲಿ 74% ಮಂದಿ ತಮ್ಮಲ್ಲಿ ಒತ್ತಡವಿರುವುದನ್ನು ಗುರುತಿಸಿದರು. 88% ಮಂದಿ ತಮ್ಮಲ್ಲಿ ಆತಂಕದ ಪರಿಣಾಮವನ್ನು ಗಮನಿಸಿದರು. ಥೆರಪಿಸ್ಟ್‌ಗಳಲ್ಲಿ 70% ಮಂದಿ ಪೇಷೆಂಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗುರುತಿಸಿದರು. 55% ಥೆರಪಿಸ್ಟ್‌ಗಳು ಹೇಳುವಂತೆ, ಸಾಂಕ್ರಾಮಿಕದ ಬಳಿಕ ಚೊಚ್ಚಲ ಪೇಷೆಂಟ್‌ಗಳ ಸಂಖ್ಯೆಯೂ ಅಧಿಕಗೊಂಡಿದೆ.

ಒತ್ತಡ ಯಾಕೆ ಬೇಕು?

ಹಾಗಾದರೆ ಒತ್ತಡ ಎಂಬುದು ಹೊಸ ಸಂಗತಿಯಾ? ಹಾಗೇನಿಲ್ಲ. ಮೊದಲಿನಿಂದಲೂ ಇದು ಇದೆ. ಇದು ಮನುಷ್ಯನ ಅಸ್ತಿತ್ವದಷ್ಟೇ ಹಳತು. ʼಹೋರಾಡು ಇಲ್ಲವೇ ಓಡುʼ ಎಂಬ ಮನುಷ್ಯನ ಅತಿ ಹಳೆಯ ದೈಹಿಕ ಸುರಕ್ಷತಾ ತಂತ್ರದಷ್ಟೆ ಇದು ಹಳತು. ಆತಂಕವೊಂದು ಎದುರಾದಾಗ ಸಾಕಷ್ಟು ಒತ್ತಡಕ್ಕೆ ಒಳಗಾಗದೇ ದೇಹ ಅದನ್ನು ಎದುರಿಸಲಾರದು. ಆದರೆ ಇಂದು ಕಷ್ಟ ತಂದಿಟ್ಟಿರುವುದು ಒತ್ತಡಕ್ಕೆ ನಾವು ನೀಡುತ್ತಿರುವ ಅತಿ ಪ್ರತಿಕ್ರಿಯೆ. ಇದನ್ನು ಮನುಷ್ಯನ ಒಟ್ಟಾರೆ ದೈಹಿಕ- ಮಾನಸಿಕ ಆರೋಗ್ಯಕ್ಕಾಗಿ ನಿಭಾಯಿಸಲೇಬೇಕಿದೆ. ಸುದೀರ್ಘಕಾಲದ ಒತ್ತಡದಿಂದ ನಮ್ಮ ದೇಹಕ್ಕೆ ಏನಾಗುತ್ತದೆ? ಇದನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ಒತ್ತಡದ ಹಾರ್ಮೋನುಗಳ ಹಿಂದಿರುವ ವಿಜ್ಞಾನವನ್ನೂ ಅರ್ಥ ಮಾಡಿಕೊಳ್ಳಬೇಕು.

ಒತ್ತಡದ ಹಿಂದಿನ ವಿಜ್ಞಾನ

ಒತ್ತಡಕ್ಕೇ ದೇಹ ನೀಡುವ ಪ್ರತಿಕ್ರಿಯೆ ಸೃಷ್ಟಿಯಾಗುವುದು ಅದರ ಎಂಡೋಕ್ರೈನ್‌ ವ್ಯವಸ್ಥೆಯಲ್ಲಿ. ಇದು ಹೈಪೋಥಲಾಮೈನ್-‌ ಪಿಟ್ಯುಟರಿ- ಅಡ್ರಿನಲ್‌ ಗ್ರಂಥಿಗಳ ವ್ಯವಸ್ಥೆಯಲ್ಲಿದೆ. ಹೈಪೋಥಲಾಮೈನ್‌ ಮೆದುಳಿನ ಸೂಚನಾ ಕೇಂದ್ರ. ಇದು ಮೂಡ್‌, ದೇಹದ ತಾಪಮಾನ, ಹೃದಯ ಬಡಿತ, ಆಹಾರ ಸೇವನೆ, ಲೈಂಗಿಕ ಅಭೀಪ್ಸೆ, ಶಕ್ತಿ, ದಾಹ, ನಿದ್ರಾ ಚಕ್ರಗಳನ್ನು ನಿಯಂತ್ರಿಸುತ್ತದೆ. ಹಾರ್ಮೋನುಗಳ ಸ್ರಾವವನ್ನೂ ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ನಮ್ಮ ದೇಹದ ಹಲವು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸುತ್ತವೆ.

ಒತ್ತಡ ಉಂಟುಮಾಡುವ ಯಾವುದೇ ಸಂಗತಿ ನಿಮಗೆ ಎದುರಾದಾಗ (ಅದು ದೈಹಿಕ ಅಪಾಯ, ಇನ್ನೊಬ್ಬರ ಕೋಪತಾಪ, ಕೆಟ್ಟ ಸುದ್ದಿ ಹೀಗೆ ಯಾವುದೂ ಇರಬಹುದು) ಅದು ದೇಹದಲ್ಲಿ ಕೆಲವು ಚಟುವಟಿಕೆಗಳನ್ನು ಉಂಟುಮಾಡುತ್ತದೆ. ಕಾರ್ಟಿಕೋಟ್ರೋಫಿನ್‌ ಹಾರ್ಮೋನ್‌ ವ್ಯವಸ್ಥೆಯನ್ನು ಹೈಪೋಥಲಾಮಸ್‌ ಉತ್ಪತ್ತಿ ಮಾಡುತ್ತದೆ. ಇದು ಎಂಡೋಕ್ರೈನ್‌ ವ್ಯವಸ್ಥೆಯ ಕೇಂದ್ರವಾದ ಕಡಲೆಕಾಳಿನಂಥ ಸಣ್ಣ ಗಾತ್ರದ ಪಿಟ್ಯುಟರಿ ಗ್ರಂಥಿಗೆ ಈ ಸಂದೇಶ ತಲುಪಿಸುತ್ತದೆ. ಅದು ಅಡ್ರಿನೋಕಾರ್ಟಿಕೋಟ್ರೋಪಿಕ್‌ ಹಾರ್ಮೋನನ್ನು ಕಿಡ್ನಿಯ ಬಳಿಯಿರುವ ಅಡ್ರಿನಲ್‌ ಗ್ರಂಥಿಗಳಿಗೆ ಕಳಿಸುತ್ತದೆ. ಇದು ಒತ್ತಡ ನಿಭಾಯಿಸುವ ನೈಜ ಕೇಂದ್ರ. ಇವು ಕಾರ್ಟಿಸೋಲ್‌ ಎಂಬ ಸ್ಟಿರಾಯ್ಡಲ್‌ ಹಾರ್ಮೋನನ್ನು ಸ್ರವಿಸಿ, ಒತ್ತಡದ ನಿಭಾವಣೆಗೆ ಮುಂದುಬಿಡುತ್ತದೆ. ಇದು ದೇಹದ ನರವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದರಿಂದ ಹೃದಯದ ಬಡಿತ ಹೆಚ್ಚಾಗುತ್ತದೆ, ನಾಡಿಮಿಡಿತ ಹಾಗೂ ರಕ್ತದೊತ್ತಡ ಹೆಚ್ಚಾಗುತ್ತವೆ. ಉಸಿರಾಟ ವೇಗವಾಗುತ್ತದೆ. ಮೆದುಳು ಹಾಗೂ ರಕ್ತನಾಳಗಳಲ್ಲಿ ಹೆಚ್ಚಿನ ಆಕ್ಸಿಜನ್‌ ಮತ್ತು ಗ್ಲುಕೋಸ್‌ ಉತ್ಪತ್ತಿಯಾಗುತ್ತದೆ. ಒತ್ತಡವನ್ನು ನಿಭಾಯಿಸಲು ಬೇಕಾದ ಶಕ್ತಿಯಿಂದ ದೇಹ ಕುದಿಯುತೊಡಗುತ್ತದೆ. ಅಪಾಯ ದೂರವಾದಾಗ, ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ ಹಾಗೂ ದೇಹ ಮೊದಲಿನ ಸ್ಥಿತಿಗೆ ಬರುತ್ತದೆ.

ಹಾಗಾದರೆ ಅಪಾಯ ಎಲ್ಲಿ? ನೈಜವಾದ ಅಪಾಯ ಉಂಟಾದಾಗ ದೇಹದಲ್ಲಿ ಈ ಪ್ರಕ್ರಿಯೆಗಳು ನಡೆಯಲೇಬೇಕು. ಇಲ್ಲವಾದರೆ ಅದನ್ನು ಎದುರಿಸುವ ಚೈತನ್ಯ ಉಂಟಾಗುವುದಿಲ್ಲ. ಆದರೆ ಇದು ನಿತ್ಯವೂ ಸಂಭವಿಸಿದರೆ, ಅತಿ ಸಣ್ಣ ಒತ್ತಡಕ್ಕೂ (ಉದಾಹರಣೆಗೆ ಟ್ರಾಫಿಕ್‌ ಜಾಮ್)‌ ದೇಹದಲ್ಲಿ ಈ ಪ್ರಕ್ರಿಯೆಗಳು ಉಂಟಾಗಲು ತೊಡಗಿದರೆ, ಆಗ ನಿಯಂತ್ರಣ ತಪ್ಪುತ್ತದೆ. ʼʼಕಾರ್ಟಿಸೋಲ್‌ ಎಂಬುದು ನಮ್ಮನ್ನು ಉಳಿಸುವ ಹಾರ್ಮೋನ್‌. ಇದು ನಮ್ಮ ಆಲೋಚನೆಗಳಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ಯೋಚನೆಗಳು ಒತ್ತಡಯುಕ್ತವಾದಾಗ ದೇಹವನ್ನು ಕಾಪಾಡಿಕೊಳ್ಳಲು ಕಾರ್ಟಿಸೋಲ್ ಸ್ರವಿಸುತ್ತದೆ. ಆದರೆ ದೀರ್ಘಾವಧಿ ಮತ್ತು ಪದೇ ಪದೇ ನಾವು ಒತ್ತಡಯುಕ್ತರಾಗಿದ್ದರೆ, ಯಾವಾಗಲೂ ದೇಹದಲ್ಲಿ ಕಾರ್ಟಿಸೋಲ್‌ ತುಂಬಿರುತ್ತದೆ ಮತ್ತು ಅದು ನಮ್ಮ ದೈಹಿಕ- ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲವೇ ಅಲ್ಲ.

ಕಾರ್ಟಿಸೋಲ್‌ ಎಂಬ ಎರಡಲಗಿನ ಕತ್ತಿ

ಕಾರ್ಟಿಸೋಲ್‌ ಎಂಬ ಚೋದಕದ ಪತ್ತೆಯಾದಾಗ ಅದು ವಿಜ್ಞಾನದಲ್ಲಿ ಒಂದು ಮಹತ್ವದ ಸಂಗತಿಯಾಗಿತ್ತು. ಆದರೆ, ಸ್ಟಿರಾಯ್ಡ್‌ಗಳು ಯಾವಾಗಲೂ ಎರಡಲಗಿನ ಕತ್ತಿ ಎಂಬುದು ನಂತರ ಗೊತ್ತಾಯಿತು. ಇವು ಅತಿಯಾದಾಗ, ತಮ್ಮ ನಿಜವಾದ ಉದ್ದೇಶಕ್ಕಿಂತ ವ್ಯತಿರಕ್ತವಾದುದನ್ನೇ ಮಾಡುತ್ತವೆ. ದೇಹವನ್ನು ಉಳಿಸುವ ಭರದಲ್ಲಿ ಉರಿಯೂತ ಸೃಷ್ಟಿ ಮಾಡುತ್ತವೆ. ಅತಿಯಾದ ಕಾರ್ಟಿಸೋಲ್‌ ಮೆದುಳಿನಲ್ಲಿ ಕಾಯಂ ಬದಲಾವಣೆಗಳನ್ನು ಮಾಡುತ್ತದೆ ಹಾಗೂ ನರವ್ಯೂಹ ಕಾಯಿಲೆಗಳನ್ನು ಸೃಷ್ಟಿಮಾಡುತ್ತದೆ ಎನ್ನುತ್ತಾರೆ ದೆಹಲಿಯ ನ್ಯೂರಾಲಜಿಸ್ಟ್‌ ಡಾ.ಪಿ.ಎನ್‌ ರಂಜನ್‌. 2018ರಲ್ಲಿ ವಾಷಿಂಗ್ಟನ್‌ ಮೂಲದ ಸೊಸೈಟಿ ಫಾರ್‌ ರಿಸರ್ಚ್‌ ಇನ್‌ ಚೈಲ್ಡ್‌ ಡೆವಲಪ್‌ಮೆಂಟ್‌ ನಡೆಸಿದ ಅಧ್ಯಯನದಲ್ಲಿ, ಹೈಸ್ಕೂಲ್‌ ಅಂಕಗಳಲ್ಲಿ ಇಳಿಕೆ ಉಂಟಾದಾಗ ಮಕ್ಕಳಲ್ಲಿ ಕಾರ್ಟಿಸೋಲ್‌ ಹೆಚ್ಚಾದುದನ್ನು ದಾಖಲಿಸಿದೆ. 2021ರಲ್ಲಿ ಒರ್ಯಾಕಲ್‌ ಹಾಗೂ ಅಮೆರಿಕದ ವರ್ಕ್‌ಪ್ಲೇಸ್‌ ಇಂಟಲಿಜೆನ್ಸ್‌ ಎಂಬ ಸಂಸ್ಥೆಗಳು ಜಂಟಿಯಾಗಿ ಒಂದು ಅಧ್ಯಯನ ನಡೆಸಿದ್ದು, ಇದರಲ್ಲಿ 13 ದೇಶಗಳ 41,600 ಉದ್ಯೋಗಿಗಳನ್ನು ಮಾತಾಡಿಸಿದವು. ಇದರಲ್ಲಿ, ಭಾರತದ ಉದ್ಯೋಗಿಗಳಲ್ಲಿ ಅತಿ ಹೆಚ್ಚು ಒತ್ತಡವಿರುವುದನ್ನು ಗುರುತಿಸಿತು. ಇತರೆಡೆಯ ಉದ್ಯೋಗಿಗಳಲ್ಲಿ 80% ಒತ್ತಡವಿದ್ದರೆ, ಭಾರತದವರಲ್ಲಿ 91% ಇತ್ತು. ಈ ಒತ್ತಡಗಳು ಕೌಟುಂಬಿಕದಿಂದ ಹಿಡಿದು ವೃತ್ತಿಸಂಬಂಧಿ, ಆರ್ಥಿಕದಿಂದ ರಾಜಕೀಯದವರೆಎಗ ವ್ಯಾಪಿಸಿವೆಯಂತೆ.

ʼʼನಮ್ಮ ದೇಹದ ಒತ್ತಡ ವ್ಯವಸ್ಥೆ ಯಾಕೆ ಇರುವುದು ಗೊತ್ತೇ? ಅದು ಇರುವುದು ʼಮಾಡು ಇಲ್ಲವೇ ಮಡಿʼ ಸನ್ನಿವೇಶಕ್ಕಾಗಿ. ಆದರೆ ಇಂದು ಅದು ಅತ್ಯಂತ ಸಣ್ಣ ಸಂಗತಿಗಳಲ್ಲೂ ಕ್ರಿಯಾಶೀಲವಾಗುವಂತೆ ನಾವು ಮಾಡಿಕೊಂಡಿದ್ದೇವೆ. ಆಫೀಸಿಗೆ ತಡವಾಯ್ತು, ಆನ್‌ಲೈನ್‌ನಲ್ಲಿ ಏನೋ ಅಹಿತಕರವಾದದ್ದನ್ನು ಓದಿದೆವು- ಎಂಬುದಕ್ಕೂ ಒತ್ತಡ ಸೃಷ್ಟಿಯಾಗುತ್ತದೆ. ಮಿತಿ ಮೀರಿ ಯೋಚಿಸುವುದು, ಮಿತಿ ಮೀರಿ ವಿಶ್ಲೇಷಿಸುವುದು ನಮ್ಮ ಅಸ್ತಿತ್ವದ ಭಾಗವಾಗಿಬಿಟ್ಟಿದೆ. ನಮ್ಮ ಯೋಚನೆಗಳೇ ಒತ್ತಡದ ಕುರಿತು ನಮ್ಮ ಮೆದುಳಿನ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ನಾವು ಕೆಟ್ಟದನ್ನೇ ಸದಾ ಯೋಚಿಸುತ್ತಿದ್ದರೆ, ಅಪ್ರಜ್ಞಾಪೂರ್ವಕವಾಗಿ ಹೈಪೋಥಲಾಮಸ್‌ಗೆ ತಪ್ಪು ಸಂದೇಶಗಳು ಹೋಗುತ್ತಿರುತ್ತವೆʼʼ ಎಂದು ಫೋರ್ಟಿಸ್‌ನ ನಿರ್ದೇಶಕ ಡಾ.ಸಮೀರ್‌ ಪಾರಿಖ್‌ ಎಂಬವರು ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು 2016ರಲ್ಲಿ ಒತ್ತಡವನ್ನು ʼ21ನೇ ಶತಮಾನದ ವಿಶ್ವ ಆರೋಗ್ಯ ಸಾಂಕ್ರಾಮಿಕʼ ಎಂದು ಗುರುತಿಸಿತು. ಒತ್ತಡವೊಂದು ಲಕ್ಷಣಸಹಿತ ಗುರುತಿಸಬಹುದಾದ ಕಾಯಿಲೆಯಲ್ಲ. ಆದರೆ ಅದು ಜೀವಾಪಾಯಕ್ಕೆ ಕಾರಣವಾಗಬಲ್ಲ ಕಾಯಿಲೆಗಳನ್ನು ಪ್ರಚೋದಿಸಬಲ್ಲುದು. ವೈದ್ಯಕೀಯ ತಜ್ಞರು ಒತ್ತಡವನ್ನು ದೇಹದ ದೀರ್ಘಕಾಲಿಕ ಉರಿಯೂತ ಎಂದೇ ಗುರುತಿಸುತ್ತಾರೆ.

ಕಿಡ್ನಿಯ ಮೇಲೆ ಪರಿಣಾಮ

ಒತ್ತಡವು ಕಿಡ್ನಿಯನ್ನು ಹಾಳುಗೆಡವುತ್ತದೆ ಎಂದರೆ ನೇರವಾಗಿ ಹಾಗೆ ಮಾಡುತ್ತದೆಂದಲ್ಲ. ಬದಲು, ಸದಾ ಒತ್ತಡಯುಕ್ತರಾದವರು ಕಡಿಮೆ ನೀರು ಸೇವಿಸುತ್ತಾರೆ. ಲೈಫ್‌ಸ್ಟೈಲ್‌ನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪೌಷ್ಟಿಕ ಆಹಾರಕ್ಕೆ ಗಮನ ಕೊಡುವುದಿಲ್ಲ. ಇದು ಡಯಾಬಿಟಿಸ್‌, ಅಧಿಕ ರಕ್ತದೊತ್ತಡಗಳಿಗೆ ಕಾರಣವಾಗುತ್ತದೆ. ಇದರಿಂದ ಕಿಡ್ನಿಯ ಮೇಲೆ ದುಷ್ಪರಿಣಾಮ ಖಚಿತ.

ಡಯಾಬಿಟಿಸ್‌ನ ಕಾರಣ

2017ರಲ್ಲಿ PLOS one ಎಂಬ ಜರ್ನಲ್‌ ನಡೆಸಿದ ಅಧ್ಯಯನದ ಪ್ರಕಾರ ಟೈಪ್‌ 2 ಡಯಾಬಿಟಿಸ್‌ನ ಕಾರಣಗಳಲ್ಲಿ ಸ್ಟ್ರೆಸ್‌ ಕೂಡ ಒಂದು. 2018ರ BMC ಜರ್ನಲ್‌ ಅಧ್ಯಯನದ ಪ್ರಕಾರ ಟೈಪ್‌ 2 ಡಯಾಬಿಟಿಸ್‌ ಹೊಂದಿರುವವರಲ್ಲಿ 20-40%ರಷ್ಟು ಮಂದಿ ಜೀವನದಲ್ಲಿ ಹೆಚ್ಚಿನ ಒತ್ತಡಯುಕ್ತ ಸನ್ನಿವೇಶದಲ್ಲಿ ಕೆಲಸ ಮಾಡಿದವರು. 2020ರಲ್ಲಿ ಸೈಕೋಎಂಡೋಕ್ರೈನಾಲಜಿ ನಡೆಸಿದ ಅಧ್ಯಯನದಲ್ಲಿ ಟೈಪ್‌ 2 ಡಯಾಬಿಟಿಸ್‌ ಹೊಂದಿದ ಪೇಷೆಂಟ್‌ಗಳಲ್ಲಿ ಕಾರ್ಟಿಸೋಲ್‌ ರಕ್ತದ ಸಕ್ಕರೆಯ ಅಂಶವನ್ನು ಹೆಚ್ಚು ಮಾಡಿದುದು ಕಂಡುಬಂತು.

ಮೆದುಳು ಕುಗ್ಗುತ್ತದೆ

ಅಧಿಕ ಪ್ರಮಾಣದ ಕಾರ್ಟಿಸೋಲ್‌ ಸ್ರಾವದಿಂದಾಗಿ, ಮೆದುಳಿನ ನರವ್ಯೂಹ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದಾಗಿ, ನಮ್ಮ ಸಾಮಾಜೀಕರಣವೇ ಏರುಪೇರಾದೀತು. ಅಂದರೆ ಇತರರೊಂದಿಗೆ ನಮ್ಮ ಬೆರೆಯುವಿಕೆಯಲ್ಲಿ ತೊಡಕು ಸೃಷ್ಟಿಯಾದೀತು. ಒತ್ತಡವು ಮೆದುಳಿನ ಜೀವಕೋಶಗಳನ್ನು ಸಾಯಿಸಬಲ್ಲುದು ಹಾಗೂ ಮೆದುಳಿನ ಗಾತ್ರವನ್ನೂ ಕುಗ್ಗಿಸಬಲ್ಲುದು ಎಂಬುದು ಕೆಲವು ಪ್ರಕರಣಗಳಲ್ಲಿ ಗೊತ್ತಾಗಿದೆ. ಮೆದುಳಿನ ಮುಂಭಾಗದಲ್ಲಿರುವ ಪ್ರಿಫ್ರಂಟಲ್‌ ಕಾರ್ಟೆಕ್ಸ್‌ ಅನ್ನು ಕುಗ್ಗಿಸುವ ಪರಿಣಾಮವನ್ನು ಕಾರ್ಟಿಸೋಲ್‌ ಮಾಡುವುದರಿಂದ, ಜ್ಞಾಪಕಶಕ್ತಿಯಲ್ಲೂ ತೊಂದರೆ ಉಂಟಾಗುತ್ತದೆ.

ಹೃದಯದಲ್ಲಿ ಇದೇನಿದು?

ಅಧಿಕ ಪ್ರಮಾಣದ ಕಾರ್ಟಿಸೋಲ್‌ನಿಂದಾಗಿ ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳಗಳಲ್ಲಿ ಸಂಕುಚನ ಉಂಟಾಗುತ್ತದೆ. ದೀರ್ಘಾವಧಿ ಕಾರ್ಟಿಸೋಲ್‌ಗೆ ಒಡ್ಡಿಕೊಳ್ಳುವುದರಿಂದ ರಕ್ತದೊತ್ತಡ, ಟ್ರೈಗ್ಲಿಸರೈಡ್ಸ್‌ಗಳು ಮತ್ತು ಕೊಲೆಸ್ಟರಾಲ್‌ ಹೆಚ್ಚುತ್ತದೆ. 2019ರಲ್ಲಿ BMJ ಜರ್ನಲ್‌ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ, ಕಡಿಮೆ ವಯಸ್ಸಿನಲ್ಲಿ ಹೃದಯದ ಸಮಸ್ಯೆಗಳು ಕಂಡುಬರುವುದರ ಹಿನ್ನೆಲೆಯಲ್ಲಿ ಒತ್ತಡದ ಕೈವಾಡವೂ ಇದೆ.

ಅರ್ಬುದ ಎಂದೆಂಬ ವ್ಯಾಘ್ರನು

2021ರಲ್ಲಿ Pubmed ಒಂದು ಅಧ್ಯಯನ ನಡೆಸಿತು. ಅದರಂತೆ, ಪ್ರಯೋಗಾಲಯದ ಇಲಿಗಳಲ್ಲಿ ಒತ್ತಡದ ಹಾರ್ಮೋನುಗಳು ಕೆಲವು ಬಗೆಯ ಕ್ಯಾನ್ಸರ್‌ಕಾರಕ ಕೋಶಗಳ ಜನ್ಮಕ್ಕೆ ಕಾರಣವಾದುದನ್ನು ಗುರುತಿಸಿತು. ಇದು ಮನುಷ್ಯರಲ್ಲೂ ನಿಜವಾಗಬಹುದು. ಅಂದರೆ ಅತೀವ ಒತ್ತಡದ ಪರಿಣಾಮ ಕ್ಯಾನ್ಸರ್‌ ಕೋಶಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ.

ಮೂಳೆ ಮುರಿಯುವ ಒತ್ತಡ

ಕಾರ್ಟಿಸೋಲ್‌ಗೂ ಮೂಳೆಗಳ ಸಾಂದ್ರತೆಗೂ ನೇರ ಸಂಬಂಧವಿದೆ. ಕಾರ್ಟಿಸೋಲ್‌ ಹೆಚ್ಚಾದಷ್ಟೂ ಮೂಳೆಗಳ ಸಾಂದ್ರತೆ ಕುಸಿಯುತ್ತದೆ. ಮೂಳೆಗಳು ಪೊಳ್ಳಾಗುವಿಕೆ ಹೆಚ್ಚಾಗುತ್ತದೆ. ಇದು ಬೆನ್ನೆಲುಬು, ಮೊಣಕಾಲು ಮುಂತಾದವುಗಳ ಮೇಲೆ ಒತ್ತಡ ಹಾಕಿ ಸಂಧಿವಾತಕ್ಕೆ ಕಾರಣವಾಗಬಹುದು. ಮೂಳೆಸಂದುಗಳಲ್ಲಿ ನೋವು, ಉರಿಯೂತ ಸಾಮಾನ್ಯವಾದೀತು.

ಇದನ್ನೂ ಓದಿ | ವಿಸ್ತಾರ Explainer | ಲೂಸ್ ಸಿಗರೇಟ್‌ ಮಾರಾಟ ನಿಷೇಧಕ್ಕೆ ಚಿಂತನೆ ಏಕೆ? ಇದರ ಹಿಂದಿನ ಉದ್ದೇಶ ಏನು?

ಪೌಷ್ಟಿಕತೆ ಕುಸಿತ

ಒತ್ತಡದ ಹಾರ್ಮೋನುಗಳಿಗೂ ಒತ್ತಡ ಆಹಾರ ಸೇವನೆ (stress eating)ಗೂ ಸಂಬಂಧವಿದೆ. ಕಾರ್ಟಿಸೋಲ್‌ ಹೆಚ್ಚಾದಷ್ಟೂ ಅತಿಯಾದ ಆಹಾರ ಸೇವನೆ, ಅತೀ ಕಡಿಮೆ ಸೇವನೆ, ಜಂಕ್‌ ಫುಡ್‌ ಹೆಚ್ಚಳ, ಕಳಪೆ ಆಹಾರ ಇತ್ಯಾದಿಗಳು ಹೆಚ್ಚುತ್ತವೆ. ಇದರಿಂದ ಅಪೌಷ್ಟಿಕತೆ ಸಾಮಾನ್ಯ.

ನಿದ್ರೆಯಿಲ್ಲದ ರಾತ್ರಿಗಳು (ಇನ್‌ಸೋಮ್ನಿಯಾ)

ಪ್ರತಿದಿನ ಅನುಭವಿಸುವ ಒತ್ತಡದ ಪ್ರಥಮ ನೇರ ಪರಿಣಾಮ ಗೊತ್ತಾಗುವುದು ನಿದ್ರೆಯ ಅಭ್ಯಾಸದಲ್ಲಿ. ಈ ಸಂದರ್ಭದಲ್ಲಿ REM ನಿದ್ರೆ ಹೆಚ್ಚಳವಾಗುತ್ತದೆ. ಹೀಗೆಂದರೆ ತೀವ್ರ ಕಣ್ಣುಗುಡ್ಡೆ ಚಲನೆಯ ನಿದ್ರೆ. ಇದು ಗಾಢವಾದ ನಿದ್ರೆಯಲ್ಲ. ಇದು ಮೆದುಳಿನಲ್ಲಿ ಅತಿಯಾದ ಚಟುವಟಿಕೆ ಸೃಷ್ಟಿಸುತ್ತದೆ. ಮೆದುಳನ್ನು ಶಾಂತವಾಗಿಸುವ ಗಾಢವಾದ ನಿದ್ರೆ ಕಡಿಮೆಯಾಗುತ್ತದೆ. ಮೆದುಳಿಗೆ ವಿಶ್ರಾಂತಿ ಪಡೆಯುವ ಸಮಯವೇ ಇಲ್ಲವಾಗುತ್ತದೆ. ಮೆದುಲು ರಿಲ್ಯಾಕ್ಸ್‌ ಆಗುವುದಿಲ್ಲವಾದ್ದರಿಂದ ದೇಹಕ್ಕೂ ನಿದ್ರೆ ಹಾಗೂ ವಿಶ್ರಾಂತಿ ಸಿಗುವುದಿಲ್ಲ.

ಶೃಂಗಾರವಿಲ್ಲದ ಜೀವನ

ಕಾರ್ಟಿಸೋಲ್‌ ಉಂಟುಮಾಡುವ ಕಿತಾಪತಿಯಿಂದಾಗಿ ಲೈಂಗಿಕ ಹಾರ್ಮೋನ್‌ಗಳ ಸ್ರಾವ ಕೂಡ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ಲೈಂಗಿಕ ಚೈತನ್ಯ ಸೃಷ್ಟಿಯಾಗುವುದಿಲ್ಲ. ಫಲವತ್ತತೆ ದೂರವಾದೀತು. ಮಹಿಳೆಯರಲ್ಲಿ ಋತುಸ್ರಾವಕ್ಕೆ ಕಾರಣವಾಗುವ ಹಾರ್ಮೋನ್‌ಗಳ ಸ್ರಾವದಲ್ಲೂ ಕಾರ್ಟಿಸೋಲ್‌ ಏರುಪೇರು ಉಂಟುಮಾಡುತ್ತದೆ.

ಇದನ್ನೂ ಓದಿ | Health Tips | ಈ ಕಾಂಬಿನೇಷನ್‌ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!

ನಿಮಗೆ ಒತ್ತಡ ಇದೆಯೆಂಬುದು ಹೇಗೆ ಗೊತ್ತಾಗುತ್ತದೆ?

ಒತ್ತಡವನ್ನು ನಿಭಾಯಿಸುವುದು ಹೇಗೆ?

Exit mobile version