ಪಟನಾ: ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಮುರಿದುಬಿದ್ದ ಬಳಿಕ ಬಿಜೆಪಿಯ ಮೊದಲ ಪ್ರತಿಕ್ರಿಯೆ ಹೊರಬಿದ್ದಿದೆ. ʻʻಈಗ ಆಗಿರುವ ಬೆಳವಣಿಗೆಗಳು ಬಿಹಾರದ ಜನತೆ ಮತ್ತು ಕೇಸರಿ ಪಕ್ಷಕ್ಕೆ ಮಾಡಿದ ದ್ರೋಹʼʼ ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.
ʻʻ೨೦೨೦ರ ವಿಧಾನಸಭಾ ಚುನಾವಣೆಯಲ್ಲಿ ನಾವು ಎನ್‌ಡಿಎ ಕೂಟದ ಹೆಸರಿನಲ್ಲಿ ಜತೆಯಾಗಿ ಸ್ಪರ್ಧೆ ಮಾಡಿದ್ದೆವು. ಆಗ ಜನರು ಕೊಟ್ಟಿರುವ ತೀರ್ಪು ಜೆಡಿಯು ಮತ್ತು ಬಿಜೆಪಿಗೆ ಆಗಿತ್ತು. ನಾವು ಹೆಚ್ಚು ಸ್ಥಾನ ಪಡೆದಿದ್ದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿದೆವುʼʼ ಎಂದು ಜೈಸ್ವಾಲ್ ಹೇಳಿಕೊಂಡಿದ್ದಾರೆ.
ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡ ಬಳಿಕ ರಾಜ್ಯಪಾಲರಾದ ಫಗು ಚೌಹಾಣ್ ಅವರನ್ನು ಭೇಟಿಯಾದ ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅದರ ಬಳಿಕ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಮನೆಗೆ ಹೋಗಿ ಮಹಾಘಟಬಂಧನ್ ಮರು ಸ್ಥಾಪನೆಯನ್ನು ಪ್ರಕಟಿಸಿದರು. ಬಳಿಕ ಮಹಾಘಟಬಂಧನ್ ಹೆಸರಿನಲ್ಲಿ ಹೊಸ ಸರಕಾರ ರಚನೆಗೆ ಸಜ್ಜಾಗಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಹಿತ ೧೬೦ ಶಾಸಕರು ಅವರ ಬೆಂಬಲಕ್ಕೆ ನಿಂತಿದ್ದಾರೆ.
ಇದೆಲ್ಲದರ ನಡುವೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಅವರು, ಜತೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜತೆಯಾಗಿ ಗೆದ್ದು ಈಗ ಮೈತ್ರಿ ಮುರಿದುಕೊಂಡು ಹೋಗಿರುವುದು ಜನಾದೇಶಕ್ಕೆ ಮಾಡಿರುವ ದ್ರೋಹ ಎಂದಿದ್ದಾರೆ. ಅದರ ಜತೆಗೆ ಬಿಜೆಪಿ ನಿತೀಶ್ ಕುಮಾರ್ ಅವರ ಮೇಲೆ ನಂಬಿಕೆ ಇಟ್ಟು, ಅವರಿಗೆ ಕಡಿಮೆ ಸ್ಥಾನಗಳು ಬಂದಿದ್ದರೂ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದೆ ಎಂದು ನೆನಪಿಸಿದರು.
ಯಾರ ಮಾತೂ ಕೇಳದ ನಿತೀಶ್
ಸೋಮವಾರವೇ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳುವ ಸೂಚನೆ ನೀಡಿದ್ದ ನಿತೀಶ್ ಕುಮಾರ್ ಅವರನ್ನು ರಾತ್ರಿಯೇ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರು ಸಂಪರ್ಕಿಸಲು ಯತ್ನಿಸಿದ್ದರು ಎನ್ನಲಾಗಿದೆ. ಆದರೆ, ನಿತೀಶ್ ಯಾವುದೇ ಮಾತಿಗೆ ಸೊಪ್ಪು ಹಾಕಿಲ್ಲ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಈ ರೀತಿ ಸಂಪರ್ಕ ಮಾಡಿರುವ ಸುದ್ದಿಗಳನ್ನು ಅಲ್ಲಗಳೆದಿದೆ.
ಇದನ್ನೂ ಓದಿ | Bihar Politics | ಮತ್ತೆ ಮಗ್ಗಲು ಹೊರಳಿಸಿದ ನಿತೀಶ್ ಕುಮಾರ್; ಈಗ್ಯಾಕೆ ಬಿಜೆಪಿ ನಂಟು ಬಿಟ್ಟಿತು ಜೆಡಿಯು?