ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಮುಂಜಾನೆ ಟೋಕಿಯೋಗೆ ಆಗಮಿಸಿ ಎರಡನೇ ಸುತ್ತಿನ ʼಇನ್-ಪರ್ಸನ್’ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ (quad summit 2022) ಭಾಗವಹಿಸಿದರು. ಏನಿದು ಕ್ವಾಡ್? ಯಾಕೆ ಇದಕ್ಕೆ ಮಹತ್ವ?
ಪಿಎಂ ಮೋದಿ ಅವರು ಕ್ವಾಡ್ ಶೃಂಗಸಭೆಯಲ್ಲಿ ಬಿಡುವಿಲ್ಲದ ಕಾರ್ಯಸೂಚಿಗಳನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲೇ ಅವರು ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಆತಿಥೇಯ ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿದ್ದಾರೆ. ಕ್ವಾಡ್ ಗ್ರೂಪಿಂಗ್ ಎಂದರೆ ಏನು ಮತ್ತು ಅದು ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಕಾರ್ಯಸೂಚಿಯನ್ನು ಹೇಗೆ ಮುಂದಕ್ಕೊಯ್ಯುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ಕ್ವಾಡ್ ಎಂದರೇನು?
ಶಬ್ಧಶಃ ಕ್ವಾಡ್ ಅಂದರೆ ನಾಲ್ಕು ಎಂದು ಅರ್ಥ. ಜಗತ್ತಿನ ನಾಲ್ಕು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟು ಸೇರಿ ಮಾಡಿಕೊಂಡಿರುವ ಒಂದು ಗುಂಪು ಇದು. ಈ ಗುಂಪು ಪ್ರಪಂಚದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳನ್ನು ಒಳಗೊಂಡಿದೆ. ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕ ಈ ಗುಂಪಿನ ಸದಸ್ಯರು. ಈ ಗುಂಪು 34 ಟ್ರಿಲಿಯನ್ ಡಾಲರ್ ಅಥವಾ ಜಾಗತಿಕ ಒಟ್ಟು ಮೊತ್ತದ 40 ಪ್ರತಿಶತದಷ್ಟು ಜಿಡಿಪಿಯನ್ನು ಪ್ರತಿನಿಧಿಸುತ್ತದೆ.
ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ ಎಂಬುದರ ಹ್ರಸ್ವ ರೂಪವೇ ಈ ಕ್ವಾಡ್ (QUAD). ಇದು 2004ರ ಹಿಂದೂ ಮಹಾಸಾಗರದ ಸುನಾಮಿಯ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳನ್ನು ಸಂಘಟಿಸುವ ಉದ್ದೇಶಗಳಿಗಾಗಿ ಮೊದಲು ಕೈಜೋಡಿಸಿದ ಅನೌಪಚಾರಿಕ ಗುಂಪು. 2007ರಲ್ಲಿ ಜಾಗತಿಕ ಮಟ್ಟದಲ್ಲಿ ಈ ಗುಂಪನ್ನು ಹೆಚ್ಚು ಎದ್ದು ಕಾಣುವಂತೆ ಮಾಡುವ ಪ್ರಯತ್ನವಿತ್ತು. ಆದರೆ ಚೀನಾದ ಪ್ರತಿಭಟನೆಯಿಂದ ಈ ಕ್ರಮಗಳನ್ನು ಕೈಬಿಡಲಾಯಿತು ಎಂದು ಹೇಳಲಾಗಿದೆ. ಈಗ ಚೀನಾದ ‘ಭೂತ’ವೇ ಈ ನಾಲ್ಕು ದೇಶಗಳನ್ನು ಒಟ್ಟಿಗೆ ಸೇರಿಸಿದೆ ಎನ್ನಲಾಗುತ್ತಿದೆ.
2007ರಲ್ಲಿ, ಆಗಿನ ಜಪಾನ್‌ನ ಪ್ರಧಾನಿ ಶಿಂಜೊ ಅಬೆ ಅವರು ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್ ಅಥವಾ ಕ್ವಾಡ್ ಆಗಿ ಮೈತ್ರಿಯನ್ನು ಅಧಿಕೃತಗೊಳಿಸಿದರು.
ಆದಾಗ್ಯೂ, ಕ್ವಾಡ್ ವಿಶಿಷ್ಟವಾದ ಬಹುಪಕ್ಷೀಯ ಸಂಸ್ಥೆಯಂತೆ ರಚನೆಯಾಗಿಲ್ಲ. ಅದಕ್ಕೊಂದು ಕಾರ್ಯಾಲಯ ಮತ್ತು ಯಾವುದೇ ಶಾಶ್ವತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯನ್ನು ಹೊಂದಿಲ್ಲ. ಯುರೋಪಿಯನ್ ಯೂನಿಯನ್ ಅಥವಾ ವಿಶ್ವಸಂಸ್ಥೆಯ ಮಾದರಿಯಲ್ಲಿ ನೀತಿಯನ್ನು ರಚಿಸುವ ಬದಲು, ಕ್ವಾಡ್ ಸದಸ್ಯ ರಾಷ್ಟ್ರಗಳ ನಡುವೆ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ವಿಸ್ತರಿಸಲು ಮತ್ತು ಅವುಗಳ ಹಂಚಿಕೆಯ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಲು ಗಮನಹರಿಸಿದೆ. ಅಲ್ಲದೆ, ನ್ಯಾಟೋಗಿಂತ ಭಿನ್ನವಾಗಿ, ಕ್ವಾಡ್ ಸಾಮೂಹಿಕ ರಕ್ಷಣೆಗಾಗಿ ನಿಬಂಧನೆಗಳನ್ನು ಒಳಗೊಂಡಿಲ್ಲ, ಬದಲಿಗೆ ಏಕತೆ ಮತ್ತು ರಾಜತಾಂತ್ರಿಕ ಒಗ್ಗಟ್ಟಿನ ಪ್ರದರ್ಶನವಾಗಿ ಜಂಟಿ ಮಿಲಿಟರಿ ಕವಾಯತುಗಳನ್ನು ನಡೆಸಲು ಯೋಜಿಸುತ್ತಿದೆ.
2020ರಲ್ಲಿ, ತ್ರಿಪಕ್ಷೀಯ ಭಾರತ-ಯುಎಸ್-ಜಪಾನ್ ಮಲಬಾರ್ ನೌಕಾ ಕವಾಯತುಗಳುಲ್ಲಿ ಆಸ್ಟ್ರೇಲಿಯಾವನ್ನು ಸೇರಿಸಿಕೊಂಡು ಗುಂಪನ್ನು ವಿಸ್ತರಿಸಲಾಯಿತು. ಇದು 2017ರಲ್ಲಿ ಪುನರುಜ್ಜೀವನಗೊಂಡ ನಂತರ ಕ್ವಾಡ್‌ನ ಮೊದಲ ಅಧಿಕೃತ ಗುಂಪು ಮತ್ತು ಒಂದು ದಶಕದ ಅವಧಿಯ ನಾಲ್ಕು ದೇಶಗಳ ನಡುವೆ ಮೊದಲ ಜಂಟಿ ಮಿಲಿಟರಿ ಕವಾಯತನ್ನು ನಡೆಸಿತ್ತು.
ಹೆಚ್ಚಿನ ಓದಿಗೆ : Modi in Japan: ಪುಟ್ಟ ಹುಡುಗ ಬಾಯಲ್ಲಿ ಹಿಂದಿ ಮಾತು ಕೇಳಿ ಥ್ರಿಲ್ಲಾದ ಮೋದಿ!
ಚೀನಾದ ದೃಷ್ಟಿಕೋನ ಯಾವುದು?
ಕ್ವಾಡ್ ನಾಯಕರ ಕೂಟವನ್ನು ಚೀನಾ ‘ಏಷ್ಯಾದ ನ್ಯಾಟೋ’ ಎಂದು ಪರಿಗಣಿಸುತ್ತದೆ. ವಾಸ್ತವದಲ್ಲಿ ಈ ಕೂಟ ಚೀನಾದ ವಿರುದ್ಧ ಅಲ್ಲದೇ ಹೋದರೂ, ಕ್ವಾಡ್‌ನ ನಾಲ್ಕೂ ಸದಸ್ಯ ರಾಷ್ಟ್ರಗಳಿಗೆ ಚೀನಾದ ಜತೆಗಿನ ಬಾಂಧವ್ಯ ಹಳಸಿದೆ. ಪಾಲುದಾರರ ನಡುವಣ ಸಮಾನ ಅಂಶವೆಂದರೆ ಇದೊಂದೇ. ಹೀಗಾಗಿಯೇ ಚೀನಾ ಇದನ್ನು ‘ಏಷ್ಯನ್ ನ್ಯಾಟೋ’ ಎಂದು ಕರೆಯುತ್ತದೆ.
ಭಾರತ ಮತ್ತು ಜಪಾನ್ ಪ್ರತಿಪಾದಿಸುತ್ತಿರುವ ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್ ನೀತಿಯು ಚೀನಾದೊಂದಿಗೆ ಸಂಘರ್ಷಾತ್ಮಕವಾಗಿದೆ. ಪೂರ್ವ ಚೀನಾ ಸಮುದ್ರದಲ್ಲಿನ ಸೆಂಕಾಕು ಅಥವಾ ಡಯೋಯು ದ್ವೀಪಗಳ ವಿಚಾರದಲ್ಲಿ ಬಗ್ಗೆ ಜಪಾನ್ ಚೀನಾದೊಂದಿಗೆ ಸಂಘರ್ಷದಲ್ಲಿದೆ. ಎರಡೂ ದೇಶಗಳು ಈ ದ್ವೀಪಗಳನ್ನು ತಮ್ಮದೇ ಎಂದು ಹೇಳಿಕೊಳ್ಳುತ್ತವೆ. ಆದರೆ ಭಾರತ ಮತ್ತು ಚೀನಾ ತಾವು ಹಂಚಿಕೊಂಡಿರುವ ಗಡಿಯ ಬಗ್ಗೆ ವಿಭಿನ್ನ ಗ್ರಹಿಕೆಗಳು, ಮತ್ತು ಭಿನ್ನಾಭಿಪ್ರಾಯ ಹೊಂದಿವೆ. ಇದಲ್ಲದೆ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ನಂತಹ ದೇಶಗಳೊಂದಿಗೆ ಸ್ನೇಹಶೀಲವಾಗಿ ಭಾರತವು ಪ್ರಖ್ಯಾತವಾಗಿದ್ದರೂ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಚೀನಾ ಪ್ರಯತ್ನಿಸುತ್ತಿದೆ.
ಬಿಡೆನ್ ಅವರ ಪೂರ್ವಾಧಿಕಾರಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧವು ಮತ್ತಷ್ಟು ಕುಗ್ಗಿತು. ಎರಡು ದೇಶಗಳು ಸುಂಕದ ಸಮರದಲ್ಲಿ ತೊಡಗಿದವು. ಇದಲ್ಲದೆ, ಅಮೆರಿಕವು ಅಫ್ಘಾನಿಸ್ತಾನದಿಂದ ನಿರ್ಗಮಿಸುವುದರೊಂದಿಗೆ, ಈಗ ಏಷ್ಯಾ-ಪೆಸಿಫಿಕ್ ವಲಯದಲ್ಲಿ ಕೆಲಸ ಮಾಡುತ್ತಿದೆ, ತಜ್ಞರು ಹೇಳುವಂತೆ, ಚೀನಾದ ವಿಸ್ತರಣಾವಾದಕ್ಕೆ ಕಡಿವಾಣ ಹಾಕುವುದು ವಾಷಿಂಗ್ಟನ್‌ನ ಮುಂದಿನ ದೊಡ್ಡ ಗುರಿಯಾಗಿದೆ.
ತನ್ನ ಅತಿದೊಡ್ಡ ವ್ಯಾಪಾರ ಪಾಲುದಾರ ಚೀನಾವನ್ನು ಹಿಮ್ಮೆಟ್ಟಿಸುವ ಕ್ರಮಗಳ ವಿಚಾರದಲ್ಲಿ ಆಸ್ಟ್ರೇಲಿಯಾವು ಹೆಚ್ಚು ಸೂಕ್ಷ್ಮತೆಯನ್ನು ಹೊಂದಿದೆ. ಆದರೂ, ನೋವೆಲ್ ಕರೋನ ವೈರಸ್ ಸಾಂಕ್ರಾಮಿಕವು ಜಗತ್ತಿಗೆ ಹರಡಲು ವುಹಾನ್ ಲ್ಯಾಬ್ ಸೋರಿಕೆಯೇ ಕಾರಣ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಆಸ್ಟ್ರೇಲಿಯಾ ಕರೆ ನೀಡಿದ ಬಳಿಕ ಅವುಗಳ ನಡುವಿನ ಸಂಬಂಧಗಳು ಹದಗೆಡಲಾರಂಭಿಸಿವೆ. ಆಸ್ಟ್ರೇಲಿಯಾದ ಒತ್ತಾಯಕ್ಕೆ ತಿರುಗೇಟು ನೀಡಲು ಚೀನಾ ಅದರ ಮೇಲೆ ನಿರ್ಬಂಧಗಳನ್ನು ಹೇರಿತು.
ಇದರಿಂದಾಗಿ ಆಸ್ಟ್ರೇಲಿಯ ಕೂಡ ಹೆಚ್ಚು ದೃಢವಾಗಿ ಭಾರತ-ಜಪಾನ್- ಅಮೆರಿಕದ ಕಡೆಗೆ ವಾಲತೊಡಗಿದೆ. 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಭಾರತದಿಂದ ಪ್ರಾರಂಭವಾದ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಜಪಾನ್ ಸೇರಿಕೊಂಡಿತು. ಕಳೆದ ವರ್ಷದ ಕವಾಯತಿನಲ್ಲಿ ಆಸ್ಟ್ರೇಲಿಯಾ ಕೂಡ ಸೇರಿಕೊಂಡಿತು.
ಚೀನೀ ಮಿಲಿಟರಿ ಮತ್ತು ಕ್ವಾಡ್ ಸದಸ್ಯರು ಇತ್ತೀಚಿನ ದಿನಗಳಲ್ಲಿ ಪರಸ್ಪರ ಸಂಘರ್ಷದ ಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷ ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಗಾಲ್ವಾನ್‌ನಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರೊಂದಿಗೆ ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಚೀನಾ ಮತ್ತು ಮಲೇಷಿಯಾದ ನೌಕೆಯನ್ನು ಒಳಗೊಂಡಿರುವ ಬಿಕ್ಕಟ್ಟಿನ ನಂತರ ಅಮೆರಿಕ ಮತ್ತು ಆಸ್ಟ್ರೇಲಿಯಾ ಈ ವರ್ಷದ ಆರಂಭದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧನೌಕೆಗಳನ್ನು ನಿಯೋಜಿಸಿದ್ದವು.
ಇದನ್ನೂ ಓದಿ: ಇವರ ಮೈಮೇಲೆ ಸಾಯಿಬಾಬಾ ಬರುತ್ತಾರಾ? ಸದ್ಗುರು ಮಧುಸೂದನ ಸಾಯಿ ಇನ್ನೊಂದು ಸಾಮ್ರಾಜ್ಯ ಕಟ್ಟಿದ ರೋಚಕ ಕತೆ!
ಈ ಗುಂಪಿನ ಗುರಿಗಳೇನು?
ಕ್ವಾಡ್ ಧ್ಯೇಯೋದ್ದೇಶಗಳ ಪ್ರಕಾರ, ಗುಂಪಿನ ಪ್ರಾಥಮಿಕ ಉದ್ದೇಶಗಳು ಕಡಲ ಭದ್ರತೆ, ಕೋವಿಡ್ -19 ಬಿಕ್ಕಟ್ಟನ್ನು ಎದುರಿಸುವುದು, ವಿಶೇಷವಾಗಿ ಲಸಿಕೆ ರಾಜತಾಂತ್ರಿಕತೆಗೆ ವಿರುದ್ಧವಾಗಿ, ಹವಾಮಾನ ಬದಲಾವಣೆಯ ಅಪಾಯಗಳನ್ನು ಪರಿಹರಿಸುವುದು, ಈ ಪ್ರದೇಶದಲ್ಲಿ ಹೂಡಿಕೆಗಾಗಿ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮತ್ತು ತಾಂತ್ರಿಕತೆಯನ್ನು ಹೆಚ್ಚಿಸುವುದು. ಆವಿಷ್ಕಾರಿ ತಾಂತ್ರಿಕತೆಯ ಮೂಲಕ ಕ್ವಾಡ್ ಸದಸ್ಯರು ಕ್ವಾಡ್ ಪ್ಲಸ್ ಎಂದು ಕರೆಯಲ್ಪಡುವ ಮೂಲಕ ಪಾಲುದಾರಿಕೆಯನ್ನು ವಿಸ್ತರಿಸುವ ಉದ್ದೇಶ ಹೊಂದಿವೆ. ಈ ಕ್ವಾಡ್ ಪ್ಲಸ್‌ನಲ್ಲಿ ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಮತ್ತು ವಿಯೆಟ್ನಾಂ ಅನ್ನು ಸೇರಿಸಿಕೊಳ್ಳುವ ಯೋಜನೆ ಹೊಂದಲಾಗಿದೆ.