Site icon Vistara News

Explainer: Heatwave, ಭಾರತ ಕುದಿಯುವ ಕುಲುಮೆ

ರಾಜಧಾನಿ ದೆಹಲಿಯಲ್ಲಿ ಕಳೆದ 72 ವರ್ಷಗಳಲ್ಲಿ ಕಾಣದ ಶಾಖ ದಾಖಲಾಗಿದೆ. ಅಲ್ಲಿನ ಈ ತಿಂಗಳ ಮಾಸಿಕ ಸರಾಸರಿ ತಾಪಮಾನ 40.2 ಡಿಗ್ರಿ ಸೆಲ್ಷಿಯಸ್.‌ ಏ.28 ಮತ್ತು 29ರಂದು ಇಲ್ಲಿ 43.5 ಡಿಗ್ರಿ ಸೆಲ್ಷಿಯಸ್‌ ಉಷ್ಣತೆ ಕಂಡುಬಂತು. ಇದು ಕಳೆದ 12 ವರ್ಷಗಳಲ್ಲೇ ಏಪ್ರಿಲ್‌ ತಿಂಗಳ ಅತ್ಯಧಿಕ ತಾಪಮಾನ. ದೇಶದ ಕೆಲವು ಕಡೆಗಳಲ್ಲಿ 46- 47 ಡಿಗ್ರಿ ಸೆಲ್ಷಿಯಸ್‌ ಉಷ್ಣತಾಮಾನ ದಾಖಲಾಗಿದೆ.

ಗಂಭೀರ ಶಾಖದಲೆಗಳು ಮುಂದಿನ ಕೆಲವು ದಿನಗಳಲ್ಲಿ ರಾಜಧಾನಿ ಭಾಗವನ್ನು ಕಾಡಲಿವೆಯಂತೆ. ದೇಶದ ಬಹುಭಾಗದಲ್ಲಿ ಇದೇ ಚಿತ್ರಣವಿದೆ. ಇದರ ಜೊತೆಗೆ ವಿದ್ಯುತ್‌ ಕಟ್‌ ಕೂಡ ಸೇರಿಕೊಂಡಿದ್ದು, ದಿನಚರಿಯನ್ನು ಮತ್ತಷ್ಟು ದುರ್ಭರಗೊಳಿಸಿದೆ. ಈಗಿನ್ನೂ ಏಪ್ರಿಲ್‌ ಅಂತ್ಯ. ಮುಂಗಾರಿನ ಆರಂಭಕ್ಕೆ ಇನ್ನೂ ಒಂದು ತಿಂಗಳಿದೆ. ಮೇ ತಿಂಗಳಿಡೀ ಈ ಬಿರುಬಿಸಿಲಿನಲ್ಲಿ ಕಳೆಯುವುದು ಹೇಗೆ ಎಂಬುದು ಜನತೆಯ ಆತಂಕ.

ಪೂರ್ವ ಹಾಗೂ ಪಶ್ಚಿಮ ಕರಾವಳಿ ಭಾಗದಲ್ಲಿ ಬಿಸಿಲನ ಜೊತೆಗೆ ಉಪ್ಪುಗಾಳಿ ಸೇರಿಕೊಂಡು ಬೇಸಿಗೆ ಇನ್ನಷ್ಟು ಅಸಹನೀಯವಾಗಿದೆ. ರಾಜಸ್ಥಾನದ ಮರಳುಗಾಡಿನ ಪ್ರಾಂತ್ಯ ಕೂಡ ಬಿಸಿಯೇರಿದೆ. ಇಲ್ಲಿನ ಧೋಲಾಪುರ, ಜೋಧ್‌ಪುರ, ಬಿಕಾನೇರ್‌ಗಳಲ್ಲಿ ಶುಕ್ರವಾರ 46.5 ಡಿಗ್ರಿ ದಾಖಲಾಗಿದೆ. ಇದರ ಜೊತೆಗೆ ಕುಸಿಯುತ್ತಿರುವ ನೀರಿನ ಲಭ್ಯತೆಯು ಸನ್ನಿವೇಶವನ್ನು ಇನ್ನಷ್ಟು ದುಸ್ಸಹನೀಯಗೊಳಿಸಿದೆ.

ಆರೆಂಜ್‌ ಅಲರ್ಟ್‌

ಒಟ್ಟು ಐದು ರಾಜ್ಯಗಳಲ್ಲಿ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ- ದೆಹಲಿ ಮತ್ತು ಸುತ್ತಮುತ್ತ, ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ ಹಾಗೂ ಒಡಿಶಾ. ಹವಾಮಾನ ಎಚ್ಚರಿಕೆಗೆ ನಾಲ್ಕು ಕಲರ್‌ ಕೋಡ್‌ಗಳನ್ನು ಬಳಸಲಾಗುತ್ತಿದೆ- ಹಸಿರು, ಹಳದಿ, ಕಿತ್ತಳೆ ಹಾಗೂ ಕೆಂಪು. ಸದ್ಯ ಕರ್ನಾಟಕ ಹಸಿರು ವಲಯದಲ್ಲಿದೆ. ಅಂದರೆ ಸದ್ಯಕ್ಕೆ ಆತಂಕ ಅಗತ್ಯವಿಲ್ಲ.

ದೂಳಿನ ಗಾಳಿ
ಹೀಟ್‌ವೇವ್‌ ಜೊತೆಗೆ ಪಂಜಾಬ್‌, ಹರಿಯಾಣ, ದೆಹಲಿ, ಚಂಡೀಗಢ, ಉತ್ತರಪ್ರದೇಶ, ಪೂರ್ವ ರಾಜಸ್ಥಾನಗಳಲ್ಲಿ ದೂಳಿನ ಗಾಳಿಯೂ ಬೀಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಗೋಧಿ ಬೆಳೆಗೆ ಏಟು
ಗೋಧಿ ಬೆಳೆ ಶಾಖಕ್ಕೆ ಅತ್ಯಂತ ಸೂಕ್ಷ್ಮ ಸಂವೇದಿ ಬೆಲೆಯಾಗಿದ್ದು, ಈ ಸಲದ ಶಾಖಕ್ಕೆ ತತ್ತರಿಸಿದೆ. ಉತ್ತರ ಭಾರತ, ಪಂಜಾಬ್‌ನ ಗೋಧಿ ಬೆಳೆಯ ಇಳುವರಿ ಕಡಿಮೆಯಾಗುವ ಲಕ್ಷಣ ಗೋಚರಿಸಿದೆ. ಉಕ್ರೇನ್-‌ ರಷ್ಯಾ ಯುದ್ಧದಿಂದಾಗಿ ಕಡಿಮೆಯಾಗಿರುವ ಜಾಗತಿಕ ಗೋಧಿ ಪೂರೈಕೆಯನ್ನು ಸರಿದೂಗಿಸುವ ಭರವಸೆ ನೀಡಿರುವ ಭಾರತ, ಈಗ ಅದನ್ನು ಈಡೇರಿಸುವುದು ಹೇಗೆ ಎಂಬ ಚಿಂತೆಗೀಡಾಗುವಂತಿದೆ.

ಬಹು ದೀರ್ಘ ಅಲೆ
ಶಾಖದಲೆಗಳ ಕಾಲಾವಧಿಯು ತಜ್ಞರನ್ನು ಚಿಂತೆಗೀಡು ಮಾಡಿದೆ. ಕ್ಷಿಪ್ರ ಅವಧಿಯ ಶಾಖದಲೆಗಳು ಕಡಿಮೆ ಹಾನಿಕಾರಕ. ಆದರೆ ಇದು ಹಾಗಿಲ್ಲ. ಕಳೆದ 6 ವಾರಗಳಿಂದ ಇದರ ಬಾಧೆ ಮುಂದುವರಿದಿದೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಬರಬೇಕಿದ್ದ ಒಂದೆರಡು ಸಣ್ಣ ಮಳೆಗಳು ಬಂದಿದ್ದರೆ ವಾತಾವರಣ ತುಸು ತಂಪಾಗುತ್ತಿತ್ತು. ಆದರೆ ಆಗಿಲ್ಲ. ಈ ವರ್ಷದ್ದು ಕಳೆದ 72 ವರ್ಷಗಳ ಅತ್ಯಂತ ಬಿಸಿಯೇರಿದ ಮಾರ್ಚ್ ಎಂದಿದೆ ಹವಾಮಾನ ಇಲಾಖೆ. ಸದ್ಯ ಇದು ಮೇ 2ರವರೆಗೂ ಮುಂದುವರಿಯಬಹುದು ಎಂದಿದೆ.

ಇದನ್ನೂ ಓದಿ: Covid-19 | ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ: ವಲಯಕ್ಕೊಂದು ಆಸ್ಪತ್ರೆ ಮೀಸಲು

ಎಲ್ಲೆಲ್ಲಿ ಹೀಟ್‌ವೇವ್?
ಕಳೆದ ವರ್ಷ ಕೆನಡಾ ಮುಂತಾದ ಕಡೆ ಶಾಖದಲೆಗಳು ದಾರುಣವಾದ ಪರಿಣಾಮ ಬೀರಿದ್ದವು. ಹತ್ತಾರು ಜನ ಸತ್ತಿದ್ದರು. ಈ ವರ್ಷ ಪಾಕಿಸ್ತಾನ ಹಾಗೂ ಭಾರತದಲ್ಲಿ ಇದು ಕಂಡುಬಂದಿದೆ. ಕಳೆದ ಒಂದು ದಶಕದಲ್ಲಿ ಶಾಖದಿಂದಲಾಗಿಯೇ ಭಾರತದಲ್ಲಿ ಸುಮಾರು 10,000 ಜನ ಸತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.

ಯಾಕೆ ಈ ಬಿಸಿಲ ಬೆಂಕಿ?
ಇದು ಜಾಗತಿಕ ತಾಪಮಾನದ ಎಫೆಕ್ಟ್‌ ಎಂಬ ತೀರ್ಮಾನಕ್ಕೆ ಈ ಕ್ಷಣವೇ ಬರುವಂತಿಲ್ಲ ಎನ್ನುತ್ತಾರೆ ಡಬ್ಲ್ಯುಎಂಒ (ವಿಶ್ವ ಹವಾಮಾನ ಸಂಸ್ಥೆ- ಇದು ವಿಶ್ವಸಂಸ್ಥೆಯ ಭಾಗ) ತಜ್ಞರು. ಕಳೆದ ಸಲ ಕೆನಡಾದಲ್ಲಿ ಸಂಭವಿಸಿದ ಹೀಟ್‌ವೇವ್‌ಗೆ ಎಲ್‌ ನಿನೊ ಕಾರಣವಾಗಿತ್ತು. ಮಾರ್ಚ್‌ನಲ್ಲಿ ಮಳೆಯಾಗದೇ ಹೋದುದು, ಪೆಸಿಫಿಕ್‌ ಸಮುದ್ರದಲ್ಲಿ ಈ ಸಂದರ್ಭದಲ್ಲಿ ಆಗುವ ಮೇಲ್ಮುಖ ಪ್ರವಾಹ ಹಾಗೂ ಶಾಖ ಮಾರುತಗಳ ಪರಿಣಾಮ ಇದಾಗಿರಬಹುದು ಎನ್ನಲಾಗುತ್ತದೆ.

Exit mobile version