ಪಿಎಫ್‌ಐ ಹುಟ್ಟು ಬೆಳವಣಿಗೆ
PFI ಅನ್ನು 2006ರಲ್ಲಿ ʼರಾಷ್ಟ್ರೀಯ ಅಭಿವೃದ್ಧಿ ನಿಧಿʼಯ (NDF) ಒಕ್ಕೂಟವಾಗಿ ಸ್ಥಾಪಿಸಲಾಯಿತು. ಎನ್‌ಡಿಎಫ್ 1993ರಲ್ಲಿ ಕೇರಳದಲ್ಲಿ ರೂಪುಗೊಂಡಿತು ಮತ್ತು ನಂತರ ತಮಿಳುನಾಡಿನಲ್ಲಿ ಮನಿತಾ ನೀತಿ ಪಸರೈ (MNP) ಮತ್ತು ಕರ್ನಾಟಕದಲ್ಲಿ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ (KFD) ಆಗಿ ಹೊರಹೊಮ್ಮಿತ್ತು. PFI ತನ್ನನ್ನು ʼಕೇಡರ್-ಆಧಾರಿತ ಚಳುವಳಿʼ ಎಂದು ಕರೆದುಕೊಳ್ಳುತ್ತದೆ. ನಾಯಕತ್ವ ಮತ್ತು ಸಾಮೂಹಿಕ ಚಳವಳಿಗೆ ಸಂಬಂಧಿಸಿದ ದಿನಚರಿ, ತರಬೇತಿ ಮತ್ತು ಶಿಕ್ಷಣಗಳನ್ನು ಇದು ನಡೆಸುತ್ತದೆ ಎಂದು ಹೇಳಿಕೊಂಡಿದೆ. ಮುಸ್ಲಿಮರು ಮತ್ತು ಸಮಾಜದ ಅಂಚಿನಲ್ಲಿರುವ ಇತರ ವರ್ಗಗಳ ಸಬಲೀಕರಣಕ್ಕಾಗಿ ಶ್ರಮಿಸುವ ಸಾಮಾಜಿಕ-ರಾಜಕೀಯ ಚಳುವಳಿ ಎಂದು ತನ್ನನ್ನು ಕರೆದುಕೊಳ್ಳುತ್ತದೆ.
ಹಿಂಸಾಚಾರಕ್ಕೆ ಕುಮ್ಮಕ್ಕು?
ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆಗಳನ್ನು ಖಂಡತುಂಡವಾಗಿ ವಿರೋಧಿಸಿದ್ದ ಪಿಎಫ್‌ಐ, ಅವುಗಳನ್ನು ಹಿಂದೆಗೆಯುವಂತೆ ಆಗ್ರಹಿಸಿ ನಡೆಸಿದ ಚಳುವಳಿಗಳನ್ನು ಸಂಘಟಿಸಿತ್ತು. ಆದರೆ ಇದರ ಹಿನ್ನೆಲೆಯಲ್ಲಿ ವ್ಯಾಪಕ ಹಿಂಸಾಚಾರವೂ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳು ಪಿಎಫ್‌ಐ ಹಿನ್ನೆಲೆ ಹೊಂದಿದ್ದಾರೆ. ಇದಲ್ಲದೇ ಅನೇಕ ಹಿಂಸಾತ್ಮಕ ಮತ್ತು ಉಗ್ರ ಕೃತ್ಯಗಳ ಹಿಂದೆ ಈ ಸಂಘಟನೆಯಲ್ಲಿ ತರಬೇತಾದ ವ್ಯಕ್ತಿಗಳು ಇರುವುದು ಕಂಡುಬಂದಿತ್ತು. ಪಿಎಫ್‌ಐ ಕೇಂದ್ರಗಳಲ್ಲಿ ಮಾರಕಾಸ್ತ್ರಗಳನ್ನು ಬಳಸಿದ ಪುರಾವೆಗಳು ಕರ್ನಾಟಕ ಹಾಗೂ ಕೇರಳ ಪೊಲೀಸರಿಗೆ ದೊರೆತಿವೆ.
ಬೇಹುಗಾರಿಕೆ ಇಲಾಖೆ ಹೇಳಿದ್ದೇನು?
ಇಂಟಲಿಜೆನ್ಸ್ ಬ್ಯೂರೋ 2010ರಲ್ಲೇ ಪಿಎಫ್‌ಐ ಬಗ್ಗೆ ಒಂದು ದಾಖಲೆ ಸಿದ್ಧಪಡಿಸಿದೆ. ಅದು ಹೀಗೆ ಹೇಳಿದೆ: ʼʼನಿಷೇಧಿತ ಮೂಲಭೂತವಾದಿ ಇಸ್ಲಾಮಿಸ್ಟ್ ಸಂಘಟನೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಜೊತೆಗೆ ಸಂಬಂಧ ಹೊಂದಿರುವ ಹಲವು ಇಸ್ಲಾಮಿಕ್ ಸಂಘಟನೆಗಳ ಒಕ್ಕೂವೇ ಪಿಎಫ್‌ಐ. ಗೋವಾದ ಸಿಟಿಜನ್ಸ್ ಫೋರಂ, ರಾಜಸ್ಥಾನದ ಕಮ್ಯುನಿಟಿ ಸೋಶಿಯಲ್ ಆಂಡ್ ಎಜುಕೇಶನಲ್ ಸೊಸೈಟಿ, ಪಶ್ಚಿಮ ಬಂಗಾಳದ ನಾಗರಿಕ ಅಧಿಕಾರ ಸುರಕ್ಷಾ ಸಮಿತಿ, ಮಣಿಪುರದ ಲಿಯಾಂಗ್ ಸೋಶಿಯಲ್ ಫಾರಂ, ಅಂಧ್ರಪ್ರದೇಶದ ಅಸೋಸಿಯೇಶನ್ ಆಫ್ ಸೋಶಿಯಲ್ ಜಸ್ಟಿಸ್ ಇವೆಲ್ಲವೂ ಪಿಎಫ್‌ಐಯ ಭಾಗಗಳು.ʼʼ
ಎನ್‌ಐಎ ವರದಿ
2017ರಲ್ಲಿ ರಾಷ್ಟ್ರೀಯ ತನಿಖಾ ಸಮಿತಿ (ಎನ್‌ಐಎ) ಒಂದು ವರದಿ ನೀಡಿತು. ಅದರ ಪ್ರಕಾರ, ʼʼ1993ರಲ್ಲಿ ಬಾಬರಿ ಮಸೀದಿ ಉರುಳಿಸಿದಾಗ ರಚನೆಯಾಗಿ, ದೇಶಾದ್ಯಂತ ಗಲಭೆಗೆ ಕಾರಣವಾಗಿದ್ದ ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ (ಎನ್‌ಡಿಎಫ್)ನ ಇನ್ನೊಂದು ಅವತಾರವೇ ಪಿಎಫ್‌ಐ. ಎನ್‌ಡಿಎಫ್ ಮುಂದೆ ಕರ್ನಾಟಕದ ಕೆಎಫ್‌ಡಿ, ತಮಿಳುನಾಡಿನ ಎಂಎನ್‌ಪಿ ಮತ್ತಿತರ ಸಂಘಟನೆಗಳೊಂದಿಗೆ ವಿಲೀನಗೊಂಡಿತು. ಇವೆಲ್ಲವೂ ಸೇರಿ ಬೆಂಗಳೂರಿನಲ್ಲಿ 2006ರ ನವೆಂಬರ್ 9ರಂದು ಪಿಎಎಫ್‌ಐ ರೂಪುಗೊಂಡಿತು,ʼʼ ಎನ್ನುತ್ತದೆ.
ರಾಜಕೀಯಕ್ಕಾಗಿ ಎಸ್‌ಡಿಪಿಐ
ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಎಂಬುದು ಪಿಎಫ್‌ಐನ ರಾಜಕೀಯ ಸಂಘಟನೆ. ಇದನ್ನು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳು ಸೇರಿದಂತೆ ಎಲ್ಲಾ ಅಂಚಿನಲ್ಲಿರುವ ನಾಗರಿಕರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದೆ ಎಂದು ವಿವರಿಸಲಾಗಿದೆ. SDPI ಅನ್ನು 2009ರಲ್ಲಿ ರಚಿಸಲಾಯಿತು. 2010ರಲ್ಲಿ ಚುನಾವಣಾ ಆಯೋಗದಲ್ಲಿ ಇದು ನೋಂದಾವಣೆಯಾಯಿತು.
ನಾವು ದೇಶವಿರೋಧಿಗಳಲ್ಲ: ಪಿಎಫ್‌ಐ
ಯಾವುದೇ ಹಿಂಸಾಚಾರದಲ್ಲಿ ನಮ್ಮ ಕೈವಾಡವಿಲ್ಲ. ನಮ್ಮ ಸಂಘಟನೆ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಲ್ಲ ಎಂದು ಪಿಎಫ್‌ಐ ಜನರಲ್ ಸೆಕ್ರಟರಿ ಅನೀಸ್ ಅಹ್ಮದ್ ಹೇಳಿದ್ದಾರೆ.