Site icon Vistara News

Made In Bihar: ರಷ್ಯಾ ಸೈನ್ಯಕ್ಕೆ ಬಿಹಾರದಿಂದ ಸೇಫ್ಟಿ ಶೂ ಪೂರೈಕೆ; ವಾರ್ಷಿಕ 100 ಕೋಟಿ ರೂ. ವ್ಯವಹಾರ

Made In Bihar

Made In Bihar

ಪಟನಾ: ರಷ್ಯಾ ಸೇನೆ (Russian soldiers)ಯು ಉಕ್ರೇನ್‌ ವಿರುದ್ಧ ಯುದ್ಧ ಮುಂದುವರಿಸಿದೆ. ವಿಶೇಷ ಎಂದರೆ ಈ ಕಾರ್ಯಾಚರಣೆಗೆ ರಷ್ಯಾ ಸೈನಿಕರು ಬಿಹಾರದ ಹಾಜಿಪುರ (Hajipur)ದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ (Made In Bihar) ಶೂಗಳನ್ನು ಬಳಸುತ್ತಿದ್ದಾರೆ.

ಕೃಷಿ ಉತ್ಪಾದನೆಗೆ ಹೆಸರುವಾಸಿಯಾದ ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ (Competence Exports) ಖಾಸಗಿ ಕಂಪನಿಯಾಗಿದ್ದು, ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

ಈ ಬಗ್ಗೆ ಮಾತನಾಡಿದ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್, “ನಾವು 2018ರಲ್ಲಿ ಹಾಜಿಪುರದಲ್ಲಿ ಈ ಕಂಪನಿ ಆರಂಭಿಸಿದೆವು. ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸುವುದು ನಮ್ಮ ಮುಖ್ಯ ಗುರಿ. ಹಾಜಿಪುರದಲ್ಲಿ ನಾವು ರಷ್ಯಾಕ್ಕೆ ರಫ್ತು ಮಾಡಬಹುದಾದ ಸೇಫ್ಟಿ ಶೂಗಳನ್ನು ತಯಾರಿಸುತ್ತೇವೆ. ರಷ್ಯಾದ ಜತೆಗೆ ಯುರೋಪ್‌ಗೂ ರಫ್ತು ಮಾಡುತ್ತಿದ್ದೇವೆ. ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ.

ರಷ್ಯಾ ಸೈನ್ಯಕ್ಕೆ ಪೂರೈಸುವ ಸೇಫ್ಟಿ ಶೂ ವಿಶೇಷತೆಗಳ ಬಗ್ಗೆ ಮಾತನಾಡಿದ ಅವರು, “ಈ ಶೂಗಳು ಹಗುರವಾಗಿರಬೇಕು. ಜಾರದಂತಿರಬೇಕು. ಸೋಲ್‌ನಲ್ಲಿ ವೈಶಿಷ್ಟ್ಯ ಹೊಂದಿರಬೇಕು ಮತ್ತು -40 ಡಿಗ್ರಿ ಸೆಲ್ಸಿಯಸ್‌ನಂತಹ ವಾತಾವರಣಕ್ಕೂ ಹೊಂದಿಕೆಯಾಗುವಂತಿರಬೇಕು. ಈ ರೀತಿಯಲ್ಲಿ ನಾವು ಶೂ ತಯಾರಿಸುತ್ತಿದ್ದೇವೆʼʼ ಎಂದು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ

“ಬಿಹಾರದಲ್ಲಿ ವಿಶ್ವ ದರ್ಜೆಯ ಕಾರ್ಖಾನೆಯನ್ನು ಆರಂಭಿಸುವುದು ಮತ್ತು ರಾಜ್ಯದ ಯುವ ಜನತೆಗೆ ಉದ್ಯೋಗ ನೀಡುವುದು ಕಂಪನಿಯ ಎಂ.ಡಿ. ದಾನೇಶ್ ಪ್ರಸಾದ್ ಅವರ ಮಹತ್ವಾಕಾಂಕ್ಷೆ. ಸದ್ಯ ನಮ್ಮಲ್ಲಿರುವ 300 ಉದ್ಯೋಗಿಗಳಲ್ಲಿ ಶೇ. 70ರಷ್ಟು ಮಹಿಳೆಯರುʼʼ ಎಂದು ಶಿಬ್ ಕುಮಾರ್ ರಾಯ್ ತಿಳಿಸಿದ್ದಾರೆ.

ಕಂಪೆನಿಯುವ ಕಳೆದ ವರ್ಷ 15 ಲಕ್ಷ ಜೋಡಿ ಶೂಗಳನ್ನು ರಫ್ತು ಮಾಡಿದೆ. ಇದರ ಮೌಲ್ಯ ಸುಮಾರು 100 ಕೋಟಿ ರೂ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ʼʼಬಿಹಾರ ಸರ್ಕಾರವು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಜತೆಗೆ ರಸ್ತೆ ಮತ್ತು ಸಂವಹನದಂತಹ ಮೂಲಸೌಕರ್ಯಗಳಲ್ಲಿ ಸುಧಾರಣೆಯ ಅಗತ್ಯವಿದೆ. ಇದರಿಂದ ಗ್ರಾಹಕರಿಗೆ ಸುಲಭವಾಗಿ ನಮ್ಮನ್ನು ತಲುಪಲು ಸಾಧ್ಯವಾಗುತ್ತದೆʼʼ ಎಂದು ಶಿಬ್ ಕುಮಾರ್ ರಾಯ್ ಅಭಿಪ್ರಾಯಪಟ್ಟಿದ್ದಾರೆ. “ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರಿಂದ ಕೌಶಲ್ಯ ಹೊಂದಿದ ಯುವ ಜನತೆಯನ್ನು ಸಿದ್ಧ ಪಡಿಸುತ್ತೇವೆʼʼ ಎಂದಿದ್ದಾರೆ.

ಸದ್ಯ ಹಾಜಿಪುರ ಘಟಕವು ಸೇಫ್ಟಿ ಶೂಗಳಲ್ಲದೆ ಐಷಾರಾಮಿ ಡಿಸೈನರ್ ಶೂಗಳನ್ನು ಯುರೋಪಿಯನ್ ಮಾರುಕಟ್ಟೆಗಳಾದ ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ಗೆ ರಫ್ತು ಮಾಡುತ್ತಿದೆ. “ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗಾಗಿ ಉನ್ನತ ಮಟ್ಟದ ಶೂಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ನಾವು ಇತ್ತೀಚೆಗೆ ಬೆಲ್ಜಿಯಂ ಕಂಪನಿಯೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದೇವೆ ” ಎಂದು ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಮಜರ್ ಪಲ್ಲುಮಿಯಾ ತಿಳಿಸಿದ್ದಾರೆ. ಮುಂದಿನ ತಿಂಗಳು ಕೆಲವು ವಿದೇಶಿ ಕಂಪನಿಗಳು ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಪೊಲೀಸರಿಗೂ ಕೇರಳದ ಟೇಲರ್‌ಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ!

Exit mobile version