Site icon Vistara News

Modi Birthday | ಮೋದಿಯಂತೆ ನೀವೂ ಪಟಪಟನೆ ಮೆಟ್ಟಿಲು ಹತ್ತಬೇಕು ಎಂದರೆ ಹೀಗೆ ಮಾಡಿ: ಇದು ನಮೋ ದಿನಚರಿ

modi climb stairs

ಸಾಮಾನ್ಯವಾಗಿ ಭಾರತದ ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ವಿಮಾನವನ್ನು ಏರುವಾಗ ನಿಧಾನವಾಗಿ, ಒಂದೊಂದೇ ಹೆಜ್ಜೆ ಇಟ್ಟುಕೊಂಡು ನಡೆಯುವುದನ್ನು ನೋಡಿದ್ದ ಭಾರತೀಯರಿಗೆ ನರೇಂದ್ರ ಮೋದಿಯವರನ್ನು ನೋಡಿದಾಗ ಸಹಜವಾಗಿ ಆಶ್ಚರ್ಯವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ, ಇತರರಂತೆ ನಿಧಾನವಾಗಿ, ವಿಮಾನದ ಮೇಲೇರುವ ಮೆಟ್ಟಿಲುಗಳ ಅಕ್ಕ ಪಕ್ಕ ಇರುವ ಕಂಬಿಗಳನ್ನು ಹಿಡಿದುಕೊಂಡು ಹತ್ತುವುದಿಲ್ಲ. ಮೆಟ್ಟಿಲಿನ ನಟ್ಟ ನಡುವೆ, ಯಾವುದೇ ಆಧಾರವಿಲ್ಲದೆ, ಪಟಪಟನೆ ನಾಲ್ಕೈದು ಸೆಕೆಂಡಿನಲ್ಲಿ ಹತ್ತಿದವರೇ, ಕೆಳಗಿರುವ ಎಲ್ಲರಿಗೂ ಟಾಟಾ ಮಾಡಿ ಒಳ ನಡೆಯುತ್ತಾರೆ.

ಮೋದಿ ಈಗ 72ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇಂತಹ ವಯಸ್ಸಿನಲ್ಲೂ ಅವರ ಈ ಎನರ್ಜಿಗೆ ಜೀವನಶೈಲಿ ಹಾಗೂ ಮನಸ್ಸೇ ಕಾರಣ. ಅತ್ಯುತ್ತಮ ಹಾಗೂ ಶುದ್ಧ ದಿನಚರಿಯ ಮೂಲಕ ದೇಹವನ್ನು ಹಾಗೂ ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಂಡಿದ್ದಾರೆ. ಬೇರೆ ರಾಜಕಾರಣಿಗಳ ರೀತಿ ಮೋದಿಯವರು ವೇದಿಕೆಯಲ್ಲಾಗಲಿ, ಸಂಸತ್‌ನಲ್ಲಾಗಲಿ ತೂಕಡಿಸಿದ್ದನ್ನೊ, ನಿದ್ದೆ ಮಾಡಿದ್ದನ್ನೊ ಯಾರಾದರೂ ಕಂಡಿದ್ದಾರೆಯೇ? ಒಂದೇ ದಿನ ನೇಪಾಳಕ್ಕೆ ತೆರಳಿ, ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದೆಹಲಿಗೆ ಮರಳುವಾಗ ಉತ್ತರ ಪ್ರದೇಶದಲ್ಲೊಂದು ಸ್ಟಾಪ್‌ ನೀಡಿ ಅಲ್ಲಿನ ಸಚಿವರ ಜತೆ ಸಂವಾದ ನಡೆಸುವಷ್ಟು ಎನರ್ಜಿ ಮೋದಿಯವರದ್ದು.

ಇದಕ್ಕೆಲ್ಲ ಕಾರಣವಾದ ಮೋದಿಯವರ ಜೀವನಶೈಲಿ ಕುರಿತು ಒಂದಷ್ಟು ತಿಳಿದು ಆಚರಿಸಿದರೆ ಸಾಕಷ್ಟು ಜನರು ಇದೇ ಎನರ್ಜಿಯನ್ನು ಪಡೆಯಬಹುದು. ಭಾರವಾದ ಕಾಲುಗಳ ಬದಲಿಗೆ ಅವರೂ ಪಟಪಟನೆ ಮೆಟ್ಟಿಲುಗಳನ್ನು ಸಫಲವಾಗಿ ಏರಿ, ಎವರೆಸ್ಟ್‌ ಏರಿದ ನಗೆ ಬೀರಬಹುದು.

ಬೆಂಜಮಿನ್‌ ಫ್ರಾಂಕ್ಲಿನ್‌ ದಿನಚರಿ

ಬೆಂಜಮಿನ್‌ ಫ್ರಾಂಕ್ಲಿನ್‌ ಎಂದರೆ ಅಮೆರಿಕದ ಸಂಸ್ಥಾಪಕರಲ್ಲೊಬ್ಬರು. 100 ಡಾಲರ್‌ ಮೇಲೆ ಅವರ ಚಿತ್ರ ಅಚ್ಚಾಗಿರುತ್ತದೆ. 2022ರ ಮೇ 16ರಂದು ನೇಪಾಳ ಪ್ರವಾಸಕ್ಕೆ ತೆರಳಿದ್ದ ಮೋದಿ, ದಾರಿ ಮಧ್ಯೆ ಉತ್ತರ ಪ್ರದೇಶದಲ್ಲಿ ಸಚಿವ ಸಂಪುಟದೊಂದಿಗೆ ಸಂವಾದ ನಡೆಸಿದರು. ಈ ಸಮಯದಲ್ಲಿ ಸಚಿವರಿಗೆ ಅವರು ಹೇಳಿದ ಕಿವಿಮಾತು, ಬೆಂಜಮಿನ್‌ ಫ್ರಾಂಕ್ಲಿನ್‌ ದಿನಚರಿ ಅನುಸರಿಸಿ ಎಂದು.

ಬೆಂಜಮಿನ್‌ ಫ್ರಾಂಕ್ಲಿನ್‌ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಗೆ ಪ್ರಸಿದ್ಧರಾದವರು. ಸಮಯಪಾಲನೆಯಲ್ಲಿ ಕಟ್ಟುನಿಟ್ಟು. ಅವರು ಜೀವನಚರಿತ್ರೆಯಲ್ಲಿ ದಿನಚರಿಯನ್ನು ಬರೆದಿಟ್ಟಿದ್ದಾರೆ. ಬೆಳಗ್ಗೆ 5ಕ್ಕೆ ಏಳುವುದು, 7 ಗಂಟೆವರೆಗೆ ನಿತ್ಯಕರ್ಮ, ದಿನದ ಕಾರ್ಯಗಳ ಮುನ್ನೋಟ, ಆ ದಿನ ಕೈಗೊಳ್ಳಬೇಕಾದ ಕಾರ್ಯದ ಸಂಕಲ್ಪ, ಅಧ್ಯಯನ, ಉಪಾಹಾರ ಸೇವನೆ. 8ರಿಂದ 11ರವರೆಗೆ ಕೆಲಸ. 12ರಿಂದ 1ರವರೆಗೆ ಓದು, ಖರ್ಚು ವೆಚ್ಚದ ಅವಲೋಕನ, ಭೋಜನ.

ಮದ್ಯಾಹ್ನ 2ರಿಂದ 5ರವರೆಗೆ ಕೆಲಸ. ಸಂಜೆ 6ರಿಂದ ರಾತ್ರಿ 9ರವರೆಗೆ, ಅದೆಷ್ಟೇ ತುರ್ತು ಕೆಲಸವಿದ್ದರೂ ಪಕ್ಕಕ್ಕಿಡುವುದು, ಭೋಜನ, ಸಂಗೀತ ಕೇಳುವುದು ಅಥವಾ ಇನ್ನಾವುದೇ, ಮನಸ್ಸಿಗೆ ಉಲ್ಲಾಸ ಉಂಟುಮಾಡುವಂತಹ ಅಭ್ಯಾಸ ಅಥವಾ ಆತ್ಮೀಯರೊಂದಿಗೆ ಮಾತುಕತೆ, ದಿನಪೂರ್ತಿ ನಡೆದ ಕೆಲಸಗಳ ಅವಲೋಕನ. ರಾತ್ರಿ 10ರಿಂದ ಬೆಳಗ್ಗೆ 4ರವರೆಗೆ ನಿದ್ದೆ.

ಇವಿಷ್ಟನ್ನೂ ಕೈಗೊಳ್ಳುವಂತೆ ಉತ್ತರ ಪ್ರದೇಶ ಸಚಿವರಿಗೆ ಮೋದಿ ತಿಳಿಸಿದ್ದರು. ಕಾರ್ಯ ಹಾಗೂ ಕಾರ್ಯಕ್ರಮದ ನಡುವೆ ವ್ಯತ್ಯಾಸವನ್ನು ಗುರುತಿಸಿ ಎಂದು ತಿಳಿಸಿದ್ದ ಮೋದಿ, ಮೊದಲಿಗೆ ಕಾರ್ಯದ ಕಡೆ ಗಮನ ನೀಡಿ ಎಂದು ತಾಕೀತು ಮಾಡಿದ್ದರು.

ಮೋದಿ ದಿನಚರಿ

ಬೆಳಗ್ಗೆ 4 ಗಂಟೆಗೆ ಏಳುವುದು
ನರೇಂದ್ರ ಮೋದಿ ನಿತ್ಯ ಬೆಳಗ್ಗೆ 4 ಗಂಟೆಗೆ ಏಳುತ್ತಾರೆ. ಮತ್ತೆ ರಾತ್ರಿಯವರೆಗೆ ನಿದ್ದೆಯ ಮಾತಿಲ್ಲ. ಎದ್ದ ನಂತರ ನಿತ್ಯ ಕರ್ಮ ಮುಗಿಸಿ, ಎಷ್ಟೇ ಕಾರ್ಯದ ಒತ್ತಡವಿದ್ದರೂ ಸೂರ್ಯನಮಸ್ಕಾರ, ಪ್ರಾಣಾಯಾಮ ಹಾಗೂ ಯೋಗ ಮಾಡುವುದನ್ನು ಮರೆಯುವುದಿಲ್ಲ. ನಂತರ ಒಂದು ಶುಂಠಿಯ ಚಹಾ ಹಾಗೂ ಲಘು ಉಪಾಹಾರ ಸೇವನೆ.

ಬೆಳಗ್ಗೆ 8 ಗಂಟೆ: ಸುದ್ದಿ
ಉಪಾಹಾರದ ಜತೆಜತೆಗೇ ಸುದ್ದಿಯ ಕಡೆಗೆ ಗಮನ ಹರಿಸುವುದು.

ಬೆಳಗ್ಗೆ 9 ಗಂಟೆ: ಕಚೇರಿ
ದೆಹಲಿಯಲ್ಲಿ ಇದ್ದಾರೆ ಎಂದರೆ ಮೋದಿ ಬೆಳಗ್ಗೆ 9 ಗಂಟೆಗೆ ಕಚೇರಿಯಲ್ಲಿ ಹಾಜರು. ಪ್ರಧಾನಮಂತ್ರಿಯಾದ ಪ್ರಾರಂಭದಲ್ಲಿ ಸ್ವತಃ ಮೋದಿ ಆಗಮಿಸಿದರೂ ಅನೇಕ ಅಧಿಕಾರಿಗಳೇ ಆಗಮಿಸುತ್ತಿರಲಿಲ್ಲ. ನಂತರದ ದಿನಗಳಲ್ಲಿ ಎಲ್ಲವನ್ನೂ ʼರಿಪೇರಿʼ ಮಾಡಲಾಗಿದೆ. ಈಗ ಎಲ್ಲರೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸುತ್ತಿದ್ದಾರೆ.

ಬೆಳಗ್ಗೆ 11.30: ಉಪಾಹಾರ
ಉಪಾಹಾರದಲ್ಲಿ ಗುಜರಾತಿ, ದಕ್ಷಿಣ ಭಾರತೀಯ ತಿನಿಸು ಹೆಚ್ಚು ಪ್ರಿಯ. ಪ್ರಮುಖವಾಗಿ ಖಿಚ್ಡಿ-ಕಡಿ, ಉಪ್ಪಿಟ್ಟು, ಬಾಖ್ರಿ, ಖಾಕ್ರಾ ಮುಂತಾದ ಆಹಾರ ಸೇವನೆ. ಗುಜರಾತ್‌ ಸಿಎಂ ಆದ ಸಮಯದಿಂದಲೂ ತಮ್ಮ ಜತೆಗೆ ಬಾಣಸಿಗನನ್ನು ನೇಮಿಸಿಕೊಂಡಿದ್ದಾರೆ. ಅವರಿಗೆ ಮೋದಿ ಮೆನು ಸಂಪೂರ್ಣ ಅರಿವಿದೆ.

ರಾತ್ರಿವರೆಗೂ ಕೆಲಸ, ರಾತ್ರಿ 10ಕ್ಕೆ ಭೋಜನ
ಟಿವಿ ನೋಡುತ್ತ ರಾತ್ರಿ 10 ಗಂಟೆಗೆ ಭೋಜನ. ದಿನದ ಸುಮಾರು 14 ಗಂಟೆಯ ನಿರಂತರ ಕೆಲಸದ ನಂತರ ಕೆಲವು ಕಡತಗಳನ್ನು ವೀಕ್ಷಣೆ ಮಾಡುವುದು, ವಿಲೇವಾರಿ ಮಾಡುವುದು. ನಾಳಿನ ಕೆಲಸಗಳ ಮಾಹಿತಿ ಪಡೆಯುವುದು.

ರಾತ್ರಿ 12 ಗಂಟೆ: ನಿದ್ದೆ
ಊಟದ ನಂತರ ತಮ್ಮ ಅತ್ಯಂತ ಆತ್ಮೀಯರಿಗೆ, ಪ್ರೀತಿಪಾತ್ರ ಕೆಲವರಿಗೆ ತಾವೇ ಕರೆ ಮಾಡಿ ಮಾತನಾಡುತ್ತಾರೆ. ಮದ್ಯರಾತ್ರಿ ವೇಳೆಗೆ ನಿದ್ದೆಗೆ ಜಾರಿದರೆ ಮತ್ತೆ ಬೆಳಗ್ಗೆ 4ಕ್ಕೆ ಏಳುವುದು. ಉಪರಾಷ್ಟ್ರಪತಿಯಾಗಿದ್ದ ವೆಂಕಯ್ಯ ನಾಯ್ಡು ಅವರು ಒಮ್ಮೆ ಹೇಳಿದಂತೆ, “ಮೋದಿಯವರು ತಾವೂ ನಿದ್ರಿಸುವುದಿಲ್ಲ, ಬೇರೆಯವರು ನಿದ್ರಿಸಲೂ ಬಿಡುವುದಿಲ್ಲ.” ದಿನಕ್ಕೆ 4-5 ಗಂಟೆ ಮಾತ್ರ ನಿದ್ದೆ ಮಾಡುವ ಮೋದಿಯವರು ಮನಸ್ಸನ್ನು ಅತ್ಯಂತ ಉಲ್ಲಸಿತವಾಗಿಟ್ಟುಕೊಳ್ಳುವುದರಿಂದಲೇ ಒತ್ತಡವನ್ನು, ಕಡಿಮೆ ನಿದ್ರೆಯಿಂದಾಗಬಹುದಾದ ಕಿರಿಕಿರಿಯನ್ನು ಮೆಟ್ಟಿ ನಿಲ್ಲುತ್ತಾರೆ.

ಆಯುರ್ವೇದ ಔಷಧ
ನರೇಂದ್ರ ಮೋದಿಯವರು ತಮ್ಮ ಜೀವನಶೈಲಿಯ ಭಾಗವಾಗಿ ಆಯುರ್ವೇದವನ್ನು ಸ್ವೀಕರಿಸಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಷ್ಟೆ ಅಲ್ಲದೆ, ನಿತ್ಯ ಜೀವನದ ಆಹಾರ, ಊಟೋಪಚಾರದಲ್ಲಿ ಆಯುರ್ವೇದವನ್ನು ಹೊಂದಿಸಿಕೊಂಡಿದ್ದಾರೆ. ಮೋದಿಯವರೇ ಒಂದು ಸಂದರ್ಶನದಲ್ಲಿ ಹೇಳಿದಂತೆ, ತಮಗೇನಾದರೂ ಶೀತವಾದರೆ ಬಿಸಿ ನೀರನ್ನು ಕುಡಿದು ಹಾಗೂ ಉಪವಾಸವಿರುವ ಮೂಲಕ ಗುಣಪಡಿಸಿಕೊಳ್ಳುತ್ತಾರೆ.

ಉಸಿರಾಟದ ಮೇಲೆ ನಿಯಂತ್ರಣ
ದಿನದ ಒಂದು ಸಮಯದಲ್ಲಿ ವ್ಯಾಯಾಮ, ಯೋಗ ಮಾಡಿ ಸುಮ್ಮನಾಗುವುದಲ್ಲ. ಉಸಿರಾಟದ ನಿಯಂತ್ರಣ ಹಾಗೂ ಪ್ರಾಣಾಯಾಮವನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆ ಮೋದಿ. ಯಾವುದೇ ಸಮಯದಲ್ಲಿ ಉಸಿರಾಟದ ಮೇಲಿನ ನಿಯಂತ್ರಣದಿಂದಾಗಿ, ಅತ್ಯಂತ ಹೆಚ್ಚಿನ ಒತ್ತಡಗಳನ್ನು ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ.

ನವರಾತ್ರಿ ಉಪವಾಸ
ಧಾರ್ಮಿಕ ಆಚರಣೆಯ ಜತೆಗೆ ಆರೋಗ್ಯದ ಭಾಗವಾಗಿಯೂ ವರ್ಷದಲ್ಲಿ 35 ದಿನ ನವರಾತ್ರಿ ಸಂದರ್ಭದಲ್ಲಿ ಉಪವಾಸವನ್ನು ಮೋದಿ ತಪ್ಪದೇ ಮಾಡುತ್ತಾರೆ. 35ಕ್ಕೂ ಹೆಚ್ಚು ವರ್ಷದಿಂದ ಇದನ್ನು ನಡೆಸಿಕೊಂಡು ಬಂದಿರುವ ಮೋದಿ, 2014ರಲ್ಲಿ ಇದೇ ಸಮಯದಲ್ಲಿ ಅಮೆರಿಕ ಪ್ರವಾಸದಲ್ಲಿದ್ದಾಗಲೂ ನಿಂಬೆ ಹಣ್ಣಿನ ರಸ ಸೇವನೆ ಮಾತ್ರ ಮಾಡುತ್ತಿದ್ದರು.

ಪರಿಸರ ಪೂರಕ ಜೀವನಶೈಲಿ
ವೈಯಕ್ತಿಕ ಜೀವನ ಆರೋಗ್ಯವಾಗಿರಬೇಕೆಂದರೆ ಸಾಮಾಜಿಕ ಜೀವನ, ಸಮಾಜವೂ ಆರೋಗ್ಯಕರವಾಗಿರಬೇಕು. ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳದಿದ್ದರೆ ಉತ್ತಮ ಗಾಳಿ ಲಭಿಸುವುದಿಲ್ಲ. ಆಗ ಉತ್ತಮ ಆರೋಗ್ಯವೂ ನಮ್ಮದಾಗುವುದಿಲ್ಲ. ಇದೇ ಕಾರಣಕ್ಕೆ 2022ರಲ್ಲಿ ʼಲೈಫ್‌ʼ (LiFE)ಲೈಫ್‌ಸ್ಟೈಲ್‌ ಫಾರ್‌ ದಿ ಎನ್ವಿರಾನ್‌ಮೆಂಟ್‌) ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪ್ಲಾಸ್ಟಿಕ್‌ನಂತಹ, ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಮರುಬಳಕೆ ಮಾಡುವುದು, ಬಳಕೆ ಕಡಿಮೆ ಮಾಡುವುದು, ಸಂಸ್ಕರಿಸಿ ಹೊಸ ಉತ್ಪನ್ನ ತಯಾರಿಸುವ ಮೂಲಕ ಅವುಗಳು ಪರಿಸರಕ್ಕೆ ಸೇರುವುದನ್ನು ತಡೆಯಬೇಕು.

ದಿನನಿತ್ಯದ ಜೀವನಚಕ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ವಾಹನಗಳ ಬಳಕೆಯನ್ನು ಅತ್ಯಂತ ಕಡಿಮೆ ಮಾಡಿ ವಿದ್ಯುತ್‌ಚಾಲಿತ ವಾಹನಗಳ ಬಳಕೆ, ಸಾಧ್ಯವಾದೆಡೆಯಲ್ಲಿ ನಡಿಗೆ ಮೂಲಕ ಕಾರ್ಯಸಾಧನೆ ಮಾಡುವುದು.

ಎಲ್ಲರೂ ಮೋದಿಯವರ ಜೀವನಶೈಲಿಯನ್ನೇ ಕಾಪಿ ಮಾಡಬೇಕೆಂದಿಲ್ಲ. ಅವರವರ ದೇಹದ ಪ್ರಕೃತಿಗೆ, ಆರೋಗ್ಯಕ್ಕೆ, ಕೆಲಸದ ರೀತಿಗೆ ಅನುಗುಣವಾಗಿ ಪ್ರತ್ಯೇಕ ಜೀವನಶೈಲಿ ಇರುತ್ತದೆ. ಅದನ್ನು ನಿರ್ಧರಿಸಿಕೊಂಡು ಶಿಸ್ತುಬದ್ಧವಾಗಿ ಪಾಲನೆ ಮಾಡುವುದು ಮುಖ್ಯ.

ಇದನ್ನೂ ಓದಿ | Modi Birthday | ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ 15 ದಿನಗಳ ಕಾಲ ಆರೋಗ್ಯ ರಕ್ಷಣೆ ವಿಶೇಷ ಅಭಿಯಾನ

Exit mobile version