ಜಾಗತಿಕ ಹಸಿವು ಸೂಚ್ಯಂಕ(Global Hunger Index)ದಲ್ಲಿ ಭಾರತವು ಮತ್ತೆ ಕುಸಿತವನ್ನು ಕಂಡಿದೆ. 2022ರ ಸಾಲಿನ ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದಿದೆ. 121 ದೇಶಗಳನ್ನು ಈ ಪಟ್ಟಿಗೆ ಪರಿಗಣಿಸಲಾಗಿದೆ. ಆಶ್ಚರ್ಯ ಎಂದರೆ, ನೆರೆಯ ರಾಷ್ಟ್ರಗಳಾದ ನೇಪಾಳ(81), ಪಾಕಿಸ್ತಾನ(99), ಶ್ರೀಲಂಕಾ(64) ಮತ್ತು ಬಾಂಗ್ಲಾದೇಶ(84) ನಮಗಿಂತಲೂ ಮೇಲಿನ ಸ್ಥಾನದಲ್ಲಿವೆ! ಹಸಿವಿಗೆ ಸಂಬಂಧಿಸಿದಂತೆ ಭಾರತವು 29.9 ಅಂಕ ಗಳಿಸಿದೆ. ಅದರರ್ಥ ಅತ್ಯಂತ ಕನಿಷ್ಠ ಮಟ್ಟ. ಆರ್ಥಿಕವಾಗಿ ಜಗತ್ತಿನಲ್ಲೇ 6ನೇ ಬಲಿಷ್ಠ ರಾಷ್ಟ್ರವಾಗಿರುವ ಭಾರತವು ಹಸಿವು ಸೂಚ್ಯಂಕದಲ್ಲಿ ಮಾತ್ರ ಏಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂಬ ಪ್ರಶ್ನೆ ಸಹಜ.
ಯಾರು ನೀಡೋದು?
ಹಸಿವು ಸೂಚ್ಯಂಕ ಎಂದ ಕೂಡಲೇ ಮುಖ್ಯವಾಗಿ ಎದುರಾಗುವ ಪ್ರಶ್ನೆ- ಈ ಸೂಚ್ಯಂಕವನ್ನು ಯಾರು, ಹೇಗೆ ನೀಡುತ್ತಾರೆ? ಯುರೋಪ್‌ನ ಸರ್ಕಾರೇತರ ಸಂಸ್ಥೆಗಳಾದ ಕನ್ಸರ್ನ್ ವರ್ಲ್ಡ್‌ವೈಡ್(Concern Worldwide) ಮತ್ತು ವೆಲ್ತುಂಗರ್‌ಹಿಲ್ಫ್ (Welthungerhilfe) ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯನ್ನು ಸಿದ್ಧಪಡಿಸುತ್ತವೆ. ಪ್ರತಿ ವರ್ಷಕ್ಕೊಮ್ಮೆ ಈ ಸೂಚ್ಯಂಕ ತಯಾರಿಸಲಾಗುತ್ತದೆ. 2021 ವರ್ಷವನ್ನು ಜಾಗತಿಕ ಹಸಿವು ಸೂಚ್ಯಂಕವು ಹೆಚ್ಚು ಚಿಂತೆಗೀಡು ಮಾಡಿದ ವರ್ಷ ಎಂದು ಬಣ್ಣಿಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಗತ್ತಿನಾದ್ಯಂತ ಸಂಘರ್ಷಮಯ ಸ್ಥಿತಿಯು ಹೆಚ್ಚಾಗಿತ್ತು. ಪರಿಣಾಮ ಹಸಿವು ಸೂಚ್ಯಂಕ ಕೂಡ ಹೆಚ್ಚಾಗಿತ್ತು. ಆದರೆ, 2013ರ ಹೊತ್ತಿಗೆ ಶೂನ್ಯ ಹಸಿವು ಸೂಚ್ಯಂಕ ಸಾಧಿಸುವ ನಿಟ್ಟಿನಲ್ಲಿ ನಿಧಾನದ ಪಯಣವಿದೆ ಎಂದು ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ಈ ವಿಷಯಗಳು ಕವರ್ ಆಗಿದ್ದವು
2010- ಎರಡು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೀಘ್ರ ಬಾಲ್ಯ ಅಪೌಷ್ಟಿಕಾಂಶ.
2011- ಇತ್ತೀಚಿನ ವರ್ಷಗಳಲ್ಲಿ ಆಹಾರ ಬೆಲೆ ಹೆಚ್ಚಳ ಮತ್ತು ಅಸ್ಥಿರ ಪರಿಸ್ಥಿತಿಯಿಂದ ಹಸಿವು ಮತ್ತು ಅಪೌಷ್ಟಿಕಾಂಶದ ಮೇಲಾದ ಪರಿಣಾಮಗಳು.
2012- ಆಹಾರದ ನೈಸರ್ಗಿಕ ಮೂಲಗಳು ನಾಶವಾಗುತ್ತಿರುವಾಗ ಆಹಾರ ಭದ್ರತೆ ಸಾಧನೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ.
2013- ಅಪೌಷ್ಟಿಕತೆ ಮತ್ತು ಪೋಷಣೆಯ ಕೊರತೆಯ ವಿರುದ್ಧ ಸಮುದಾಯದ ಹೊಂದಾಣಿಕೆಯನ್ನು ಬಲಪಡಿಸುವುದು.
2014- ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ನಿರೂಪಿಸಲ್ಪಟ್ಟ ಅಪೌಷ್ಟಿಕತೆಯ ಒಂದು ರೂಪವೇ ನಿಗೂಢ ಹಸಿವು.
2015- ಸಶಸ್ತ್ರ ಸಂಘರ್ಷ ಮತ್ತು ಹಸಿವಿನೊಂದಿಗೆ ಅದರ ಸಂಬಂಧ.
2016- 2030ರ ಹೊತ್ತಿಗೆ ಶೂನ್ಯ ಹಸಿವು ಸೂಚ್ಯಂಕಕ್ಕೆ ತಲುಪುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯತ್ತ ಪಯಣ.
2017- ಹಸಿವು ಮತ್ತು ಅಸಮಾನತೆಯ ಸವಾಲುಗಳು.
20180- ಒತ್ತಾಯದ ವಲಸೆ ಮತ್ತು ಹಸಿವು.
2019- ಹವಾಮಾನ ಬದಲಾವಣೆ ಮತ್ತು ಹಸಿವು.
2020- ಶೂನ್ಯ ಹಸಿವಿಗೆ ಒಂದು ದಶಕ: ಆರೋಗ್ಯ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಯ ನಡುವೆ ಸಂಪರ್ಕ.
2021- ಸಂಘರ್ಷದ ವ್ಯವಸ್ಥೆಯಲ್ಲಿ ಹಸಿವು ಮತ್ತು ಆಹಾರ ವ್ಯವಸ್ಥೆ
ಈ ಸೂಚ್ಯಂಕದ ಲೆಕ್ಕಾಚಾರ ಹೇಗೆ?
ಹಸಿವು ಸ್ವರೂಪದ ನಾನಾ ಆಯಾಮಗಳನ್ನು ಪತ್ತೆ ಹಚ್ಚುವುದೇ ಹಸಿವು ಸೂಚ್ಯಂಕದ ಮುಖ್ಯ ಉದ್ದೇಶ. ಒಟ್ಟು ನಾಲ್ಕು ಸಂಗತಿಗಳನ್ನು ಆಧರಿಸಿ ಪ್ರತಿ ರಾಷ್ಟ್ರದ ಹಸಿವು ಸೂಚ್ಯಂಕವನ್ನು ಲೆಕ್ಕ ಹಾಕಲಾಗುತ್ತದೆ. 1. ಪೋಷಣೆ ಕೊರತೆ 2. ಮಗು ಬೆಳವಣಿಗೆ ಕುಂಠಿತ 3. ಕೃಶ ಮಕ್ಕಳು, 4. ಮಕ್ಕಳ ಮರಣ. ಯಾವುದೇ ದೇಶದ ಹಸಿವು ಸೂಚ್ಯಂಕವನ್ನು ಲೆಕ್ಕ ಹಾಕುವಾಗ ಅಂಶಗಳನ್ನು ಪರಿಗಣಿಸಲಾಗುತ್ತದೆ.
ಒಂದು ದೇಶದ ಜನರಿಗೆ ಕೊರತೆಯಾಗುವ ಕ್ಯಾಲೋರಿಕ್ ಆಹಾರವನ್ನು ಪೋಷಣೆ ಕೊರತೆಯಲ್ಲಿ ಸೇರಿಸಲಾಗುತ್ತದೆ. ಹಾಗೆಯೇ, ಐದು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಎತ್ತರ ಮತ್ತು ತೂಕ ಕೊರತೆಯನ್ನು ಅವರ ಬೆಳವಣಿಗೆಯನ್ನು ಪರಿಗಣಿಸಿ ಮಗುವಿನ ಬೆಳವಣಿಗೆ ಕುಂಠಿತ ಸಂಗತಿಯನ್ನು ತಿಳಿದುಕೊಳ್ಳಲಾಗುತ್ತದೆ. ಅದೇ ರೀತಿ, ಐದನೇ ವರ್ಷಕ್ಕೆ ಕಾಲಿಡುವ ಮುಂಚೆಯೇ ಮಕ್ಕಳ ಸಾವಿನ ಪ್ರಮಾಣವನ್ನು ಕೂಡ ಪರಿಗಣಿಸಲಾಗುತ್ತದೆ. ಅನಾರೋಗ್ಯ ಪರಿಸರ ಮತ್ತು ಪೂರ್ಣ ಪ್ರಮಾಣದಲ್ಲಿ ಪೌಷ್ಟಿಕಾಂಶ ಕೊರತೆಯೇ ಇದಕ್ಕೆ ಕಾರಣವಾಗಿರುತ್ತದೆ. ಈ ಎಲ್ಲ ಸಂಗತಿಗಳನ್ನು ಯಾವುದೇ ಒಂದು ರಾಷ್ಟ್ರದ ಹಸಿವು ಸೂಚ್ಯಂಕವನ್ನು ತಿಳಿಯಲು ಬಳಸಿಕೊಳ್ಳಲಾಗುತ್ತದೆ.
ಭಾರತವೇಕೆ ಕುಸಿಯುತ್ತಿದೆ?
ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತವೇಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂಬ ಚರ್ಚೆಗಳು ಮೊದಲಿನಿಂದಲೂ ಇವೆ. ಆರ್ಥಿಕವಾಗಿ ತೀವ್ರ ಹಿಂದುಳಿದ ನಮ್ಮ ನೆರೆಯ ರಾಷ್ಟ್ರಗಳು ಪಟ್ಟಿಯಲ್ಲಿ ನಮಗಿಂತಲೂ ಮೇಲಿನ ಸ್ಥಾನದಲ್ಲಿವೆ. ಭಾರತ ಮಾತ್ರ ಕುಸಿಯುತ್ತಾ ಸಾಗುತ್ತದೆ. ಯಾಕೆ ಹೀಗೆ?
ಈ ಪ್ರಶ್ನೆಗೆ ಉತ್ತರ- ಚೈಲ್ಡ್ ವೇಸ್ಟಿಂಗ್- ಮಗು ಬೆಳವಣಿಗೆ ಕುಂಠಿತವಾಗುವುದು. ಅಂದರೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೋಲಿಸಿದರೆ, ಅವರ ಎತ್ತರಕ್ಕೆ ಕಡಿಮೆ ತೂಕವನ್ನು ಹೊಂದಿರುತ್ತಾರೆ. ಇದು ಆ ಮಕ್ಕಳು ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಪರಿಣಾಮ ಇಡೀ ಜಗತ್ತಿನಲ್ಲೇ ಚೈಲ್ಡ್ ವೇಸ್ಟಿಂಗ್ ರೇಟ್ ಅತಿ ಹೆಚ್ಚು. ಅಂದರೆ ಶೇ.19.3ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಅಂಶವೇ ವರ್ಷದಿಂದ ವರ್ಷಕ್ಕೆ ಪಟ್ಟಿಯಲ್ಲಿ ಕುಸಿತ ಕಾಣಲು ಕಾರಣವಾಗಿದೆ. ಇನ್ನುಳಿದಂತೆ ಚೈಲ್ಡ್ ಸ್ಟನ್ನಿಂಗ್ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆಗೊಳಿಸುವಲ್ಲಿ ಭಾರತವು ಸಾಕಷ್ಟು ಸುಧಾರಣೆಯನ್ನು ಕಂಡಿದೆ.
ಸೂಚ್ಯಂಕ ಮಾಪನ ವಿವಾದ
ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಕಟಿಸಲಾಗುವ ಸೂಚ್ಯಂಕ ಪಟ್ಟಿಯಲ್ಲಿ ಭಾರತವು ಕಳಪೆ ಸಾಧನೆ ಮಾಡುತ್ತಿರುವುದು ಇದೇ ಮೊದಲನೇಲ್ಲ. ಆದರೆ, ಪ್ರಸಕ್ತ ಸರ್ಕಾರ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇದೆ ಎಂಬರ್ಥದ ಭಾವನೆಗಳು ಜನರಲ್ಲಿದೆ. ಸರ್ಕಾರ ಕೂಡ ಅದನ್ನೇ ಬಿಂಬಿಸುತ್ತಾ ಬಂದಿದೆ. ಹಾಗಾಗಿ, ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಸರ್ವೇ, ಸೂಚ್ಯಂಕಗಳು ಸರ್ಕಾರದ ವಿರುದ್ಧವಾಗಿದ್ದರೆ ಅಂಥವುಗಳನ್ನು ನಿರಾಕರಿಸುವ ಪರಿಪಾಠ ಹೆಚ್ಚುತ್ತಿದೆ. ಹಾಗೆಯೇ ಹಸಿವು ಸೂಚ್ಯಂಕದ ಬಗ್ಗೆ ಅಪಸ್ವರಗಳಿವೆ.
ಪಶ್ಚಿಮ ರಾಷ್ಟ್ರಗಳ ಸರ್ಕಾರೇತರ ಸಂಸ್ಥೆಗಳು ನಡೆಸುವ ಈ ಸಮೀಕ್ಷೆಗಳನ್ನು ಹಿಡನ್ ಅಜೆಂಡಾ ಇಟ್ಟುಕೊಂಡು ಮಾಡಲಾಗಿರುತ್ತದೆ ಎಂಬ ಆರೋಪವಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಇಮೇಜ್ ಅನ್ನು ತಗ್ಗಿಸಲು ಈ ರೀತಿಯ ಸಮೀಕ್ಷೆಗಳು, ಸೂಚ್ಯಂಕಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಆರೋಪ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಆದರೆ, ತಜ್ಞರು ಈ ವಾದವನ್ನು ಒಪ್ಪುವುದಿಲ್ಲ. ಯಾವುದೇ ಸಮೀಕ್ಷೆಗಳಾಗಲಿ, ಸೂಚ್ಯಂಕಗಳಾಗಲೀ… ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಂಡಿರಲಾಗಿರುತ್ತದೆ. ಎರರ್ ಮಾರ್ಜಿನ್ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ, ಸಾರಾಸಗಟಾಗಿ ತಳ್ಳಿ ಹಾಕುವಂತಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನೂ ಓದಿ | National nutrition week | ಊಟ, ತಿಂಡಿಗೆ ಮೊದಲು ಅರಗಿಸಿಕೊಳ್ಳಿ ಈ ಸಂಗತಿ!