Site icon Vistara News

G 20 Summit 2023: ಭಾರತದ ಪ್ರತಿಷ್ಠೆ ಹೆಚ್ಚಿಸಲಿದೆಯೆ ಜಿ 20 ಶೃಂಗಸಭೆ? ನೀವು ತಿಳಿದಿರಬೇಕಾದ ಸಂಗತಿಗಳಿವು

G20 Summit 2023

ಹೊಸದಿಲ್ಲಿ: ಸೆಪ್ಟೆಂಬರ್ 9-10ರಂದು ನಡೆಯಲಿರುವ G20 ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆಗಾಗಿ (G20 Summit 2023) ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ನಾಯಕರು ಹೊಸದಿಲ್ಲಿಯಲ್ಲಿ ಬಂದು ಸೇರಲಿದ್ದಾರೆ. ಈ ಸಲದ ಜಿ20 ಅಧ್ಯಕ್ಷತೆ ಭಾರತದ್ದು. ಒಂದು ವರ್ಷ ಅವಧಿಯ ಈ ಅಧ್ಯಕ್ಷತೆ ಈ ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.

ಆದರೆ ಈ G20 ಎಂದರೇನು? ಯಾವಾಗ ಅಸ್ತಿತ್ವಕ್ಕೆ ಬಂತು? ಇದು ಹೇಗೆ ಕೆಲಸ ಮಾಡುತ್ತದೆ? ಇದರಲ್ಲಿರುವ ದೇಶಗಳ್ಯಾವುವು? ಅಧ್ಯಕ್ಷತೆಯ ನಿರ್ಣಯ ಆಗುವುದು ಹೇಗೆ? ದಿಲ್ಲಿಯ ಶೃಂಗಸಭೆ ಅಜೆಂಡಾ ಏನು? ಇತ್ಯಾದಿ ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳೂ ಇಲ್ಲಿವೆ.

G20 ಎಂದರೇನು? ಅದು ಏನು ಮಾಡುತ್ತದೆ?

G20 ಅಥವಾ ಗ್ರೂಪ್ ಆಫ್ ಟ್ವೆಂಟಿ, 19 ದೇಶಗಳನ್ನು ಮತ್ತು ಒಂದು ಒಕ್ಕೂಟವನ್ನು ಒಳಗೊಂಡಿದೆ. ಅವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್‌, ಅಮೆರಿಕ. ಮತ್ತು ಯುರೋಪಿಯನ್ ಯೂನಿಯನ್. ಈ ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ. ಜಾಗತಿಕ ವ್ಯಾಪಾರದ ಶೇಕಡಾ 75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ.

ಜಿ20ಯ ಪ್ರಮುಖ ಉದ್ದೇಶಗಳು

G20 ಯಾವಾಗ, ಯಾಕೆ ಅಸ್ತಿತ್ವಕ್ಕೆ ಬಂದಿತು?

ಸೋವಿಯತ್ ಒಕ್ಕೂಟವು 1991ರಲ್ಲಿ ಕುಸಿಯಿತು. ಶೀತಲ ಸಮರ ಕೊನೆಗೊಂಡಿತು. ಅದೇ ಸಮಯದಲ್ಲಿ ಜಾಗತಿಕ ದಕ್ಷಿಣದಲ್ಲಿ ಬ್ರೆಜಿಲ್, ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ಆರ್ಥಿಕತೆಗಳು ಬೆಳೆಯತೊಡಗಿದವು. ಈ ಸಂದರ್ಭದಲ್ಲಿಯೇ ಜಾಗತಿಕ ಆಡಳಿತ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸುಧಾರಣೆಯ ಅಗತ್ಯ ಕಂಡುಬಂತು. G7ನಂತಹ, ಆಗ ಅಸ್ತಿತ್ವದಲ್ಲಿದ್ದ ವೇದಿಕೆಗಳು ಅಥವಾ ವಿಶ್ವ ಬ್ಯಾಂಕ್‌ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಜಾಗತಿಕ ಬಿಕ್ಕಟ್ಟುಗಳನ್ನು ನಿಭಾಯಿಸಲು ಅಸಮರ್ಥವಾದವು.

1997ರಲ್ಲಿ, ಏಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಇದು ಶೀಘ್ರದಲ್ಲೇ ಲ್ಯಾಟಿನ್ ಅಮೆರಿಕಕ್ಕೆ ಹರಡಿತು. ಈ ಬಿಕ್ಕಟ್ಟಿನ ಸಂದರ್ಭದಲ್ಲಿಯೇ 1998ರಲ್ಲಿ 22ಕ್ಕೂ ಅಧಿಕ ದೇಶಗಳು ಸೇರಿ ಒಕ್ಕೂಟ ಸ್ಥಾಪಿಸುವ ಅಗತ್ಯ ಮಾತಾಡಿಕೊಂಡವು. 1999ರ ಆರಂಭದಲ್ಲಿ 33 ಸದಸ್ಯರು (G33) ಸೇರಿ ಇನ್ನೂ ಎರಡು ಸಭೆಗಳನ್ನು ಕರೆಯಲಾಯಿತು. ಜಾಗತಿಕ ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸುಧಾರಣೆಗಳನ್ನು ಚರ್ಚಿಸಲಾಯಿತು. 1999ರ ಕೊನೆಯಲ್ಲಿ G20 ಮೂಡಿತು. ಅಂತಿಮವಾಗಿ ರಾಷ್ಟ್ರಗಳ ಹಣಕಾಸು ಮಂತ್ರಿಗಳು, ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ವಾರ್ಷಿಕವಾಗಿ ಭೇಟಿಯಾಗಲು ಅನೌಪಚಾರಿಕ ವೇದಿಕೆಯಾಗಿ ಸ್ಥಾಪಿಸಲಾಯಿತು.

G20 ನಾಯಕರ ಶೃಂಗಸಭೆ ಯಾವಾಗ ಪ್ರಾರಂಭವಾಯಿತು?

1999 ಮತ್ತು 2008ರ ನಡುವೆ G20 ಹೆಚ್ಚಾಗಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸಿತು. ವಾರ್ಷಿಕ ಸಭೆಗಳು ನಡೆಯುತ್ತಿದ್ದರೂ ಅವು ಇಂದಿನಂತೆ ದೊಡ್ಡ ವಿಷಯವಾಗಿರಲಿಲ್ಲ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು G20ಯನ್ನು ಪ್ರಸ್ತುತ ಸ್ಥಿತಿಗೆ ತಂದಿತು. ಗ್ರೇಟ್ ಡಿಪ್ರೆಶನ್ (1929-39) ನಂತರದ ಇನ್ನೊಂದು ದೊಡ್ಡ ಆರ್ಥಿಕ ಬಿಕ್ಕಟ್ಟಿನಿಂದ ಜಗತ್ತು ತತ್ತರಿಸುತ್ತಿರುವಾಗ, ಆ ಸಮಯದಲ್ಲಿ EU ಅಧ್ಯಕ್ಷ ಸ್ಥಾನವನ್ನು ಹೊಂದಿದ್ದ ಫ್ರಾನ್ಸ್, ಬಿಕ್ಕಟ್ಟನ್ನು ಪರಿಹರಿಸಲು ತುರ್ತು ಶೃಂಗಸಭೆಗೆ ಆಗ್ರಹಿಸಿತು. ಮೊದಲ G20 ನಾಯಕರ ಶೃಂಗಸಭೆಯನ್ನು (ʼಹಣಕಾಸು ಮಾರುಕಟ್ಟೆಗಳು ಮತ್ತು ವಿಶ್ವ ಆರ್ಥಿಕತೆಯ ಶೃಂಗಸಭೆ’) ನವೆಂಬರ್ 2008ರಲ್ಲಿ ವಾಷಿಂಗ್ಟನ್ DCಯಲ್ಲಿ ಕರೆಯಲಾಯಿತು. 20 ಸದಸ್ಯರ ಜೊತೆಗೆ IMF, ವಿಶ್ವ ಬ್ಯಾಂಕ್, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ರಾಷ್ಟ್ರಗಳನ್ನೂ ಆಹ್ವಾನಿಸಲಾಯಿತು. ಅಂದಿನಿಂದ ವಾರ್ಷಿಕ ಶೃಂಗಸಭೆಗಳು ನಡೆಯುತ್ತಿವೆ.

G20 ಹೇಗೆ ಕೆಲಸ ಮಾಡುತ್ತದೆ?

G20 ಒಂದು ಅನೌಪಚಾರಿಕ ಗುಂಪು ಎಂದು ಗಮನಿಸುವುದು ಮುಖ್ಯ. ಇದರರ್ಥ ಇದು ಯುನೈಟೆಡ್ ನೇಷನ್ಸ್ (UN) ಗಿಂತ ಭಿನ್ನ. ಇದು ಶಾಶ್ವತ ಕಾರ್ಯದರ್ಶಿ ಅಥವಾ ಸಿಬ್ಬಂದಿಯನ್ನು ಹೊಂದಿಲ್ಲ. ಬದಲಿಗೆ, G20 ಅಧ್ಯಕ್ಷ ಸ್ಥಾನವು ವಾರ್ಷಿಕವಾಗಿ ಸದಸ್ಯರ ನಡುವೆ ಆವರ್ತಗೊಳ್ಳುತ್ತದೆ. ಅಧ್ಯಕ್ಷತೆ ವಹಿಸಿದ ದೇಶ G20 ಕಾರ್ಯಸೂಚಿಯನ್ನು ಒಟ್ಟುಗೂಡಿಸುವ ಜವಾಬ್ದಾರಿ ಹೊಂದಿರುತ್ತದೆ. ಅದರ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತದೆ ಮತ್ತು ಶೃಂಗಸಭೆಗಳನ್ನು ಆಯೋಜಿಸುತ್ತದೆ. ಸದ್ಯ ಭಾರತವು ಡಿಸೆಂಬರ್ 1, 2022ರಿಂದ ನವೆಂಬರ್ 30, 2023ರವರೆಗೆ ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಇಂಡೋನೇಷ್ಯಾ ಈ ಹಿಂದಿನ ಅಧ್ಯಕ್ಷನಾಗಿತ್ತು. ಬ್ರೆಜಿಲ್ ಮುಂಬರುವ ಅಧ್ಯಕ್ಷನಾಗಲಿದೆ.

G20 ಮತ್ತೊಂದು ಅರ್ಥದಲ್ಲಿಯೂ ಅನೌಪಚಾರಿಕವಾಗಿದೆ. ಅದರ ನಿರ್ಧಾರಗಳು ಸ್ವಯಂಚಾಲಿತವಾಗಿ ಕಾರ್ಯಗತಗೊಳ್ಳುವುದಿಲ್ಲ. ಬದಲಿಗೆ G20 ನಾಯಕರು ವಿವಿಧ ವಿಷಯಗಳನ್ನು ಚರ್ಚಿಸುವ ಮತ್ತು ಅವರ ಉದ್ದೇಶಗಳನ್ನು ಸೂಚಿಸುವ ಘೋಷಣೆಗಳನ್ನು ಮಾಡುವ ವೇದಿಕೆ. ನಂತರ ಅವುಗಳನ್ನು ಸಂಬಂಧಿತ ರಾಷ್ಟ್ರಗಳು ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು ಕಾರ್ಯಗತಗೊಳಿಸುತ್ತವೆ. ಉದಾಹರಣೆಗೆ, G20 ವ್ಯಾಪಾರದ ಮೇಲೆ ಒಂದು ಘೋಷಣೆ ಮಾಡಿದರೆ, ಘೋಷಣೆಯ ನಿಜವಾದ ಅನುಷ್ಠಾನವನ್ನು ವಿಶ್ವ ವ್ಯಾಪಾರ ಸಂಸ್ಥೆ (WTO)ಯಿಂದ ಮಾಡಲಾಗುತ್ತದೆ.

ಅಧ್ಯಕ್ಷ ಸ್ಥಾನವನ್ನು ಹೇಗೆ ನಿರ್ಧರಿಸಲಾಗುತ್ತದೆ?

G20 ಅಧ್ಯಕ್ಷ ಸ್ಥಾನಕ್ಕಾಗಿ ಅದರ ಸದಸ್ಯರ ನಡುವೆ (EU ಹೊರತುಪಡಿಸಿ) 5 ಗುಂಪುಗಳಾಗಿ ವಿಂಗಡಿಸಲಾಗಿದೆ. ಅಧ್ಯಕ್ಷ ಸ್ಥಾನವು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಹೋಗುತ್ತದೆ. ಒಂದು ಗುಂಪಿನೊಳಗಿನ ಪ್ರತಿಯೊಂದು ದೇಶವೂ ಅವರ ಗುಂಪಿನ ಸರದಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರ್ಹವಾಗಿರುತ್ತದೆ. ಹೀಗಾಗಿ, ಗುಂಪಿನ ಅಧ್ಯಕ್ಷ ಸ್ಥಾನವನ್ನು ನಿರ್ಧರಿಸಲು ಅರ್ಹ ಗುಂಪಿನಲ್ಲಿರುವ ದೇಶಗಳು ತಮ್ಮ ನಡುವೆ ಮಾತುಕತೆ ನಡೆಸುತ್ತವೆ.

G20 Summit Venue

ಅಧ್ಯಕ್ಷನ ಜವಾಬ್ದಾರಿಯೇನು?

G20ಯ ವಾರ್ಷಿಕ ಕಾರ್ಯಸೂಚಿ ಹೊಂದಿಸುವುದು ಅಧ್ಯಕ್ಷೀಯ ಜವಾಬ್ದಾರಿ. ಇದನ್ನು ಇತರ ಸದಸ್ಯರೊಂದಿಗೆ ಸಮಾಲೋಚಿಸುತ್ತದೆ. ಅಧ್ಯಕ್ಷರು ವಿವಿಧ ಸಭೆಗಳನ್ನು ಮತ್ತು G20 ನಾಯಕರ ಶೃಂಗಸಭೆಯನ್ನು ಆಯೋಜಿಸುತ್ತಾರೆ. ಇದು ವರ್ಷದುದ್ದಕ್ಕೂ ಕೆಳ ಹಂತಗಳಲ್ಲಿ ನಡೆಯುತ್ತದೆ. ಇದರ ಎಲ್ಲ ಉಸ್ತುವಾರಿ ಅಧ್ಯಕ್ಷರದು. ಇದೆಲ್ಲ ಯಶಸ್ವಿಯಾಗಿ ನಡೆಸಲು ಮಾನವ ಮತ್ತು ವಸ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಅತಿಥಿ ದೇಶಗಳಿಗೆ G20 ಶೃಂಗದಲ್ಲಿ ಭಾಗವಹಿಸಲು ಆಮಂತ್ರಣ ಕಳುಹಿಸುವ ವಿಶೇಷ ಅಧಿಕಾರ ಹೊಂದಿದೆ.

G20ನ ಕಾರ್ಯ ರಚನೆ ಹೇಗಿದೆ?

G20 ಮೂರು ಪ್ರಮುಖ ಟ್ರ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಪ್ರಮುಖವಾದವು ಫೈನಾನ್ಸ್ ಟ್ರ್ಯಾಕ್, ಶೆರ್ಪಾ ಟ್ರ್ಯಾಕ್. ಇನ್ನೊಂದು ಅನಧಿಕೃತ ಟ್ರ್ಯಾಕ್ ನಾಗರಿಕ ಸಮಾಜದ ಗುಂಪುಗಳು.

ಹಣಕಾಸು ಟ್ರ್ಯಾಕ್: ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ನೇತೃತ್ವದಲ್ಲಿ, ಸಾಮಾನ್ಯವಾಗಿ ವರ್ಷಕ್ಕೆ ನಾಲ್ಕು ಬಾರಿ ಭೇಟಿಯಾಗುತ್ತಾರೆ. ಇದು ಜಾಗತಿಕ ಆರ್ಥಿಕತೆ, ಮೂಲಸೌಕರ್ಯ, ಹಣಕಾಸು ನಿಯಂತ್ರಣ, ಹಣಕಾಸು ಸೇರ್ಪಡೆ, ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ತೆರಿಗೆ, ವಿತ್ತೀಯ ನೀತಿಗಳ ಮೇಲೆ ಕೇಂದ್ರೀಕರಿಸುತ್ತದೆ.

ಶೆರ್ಪಾ ಟ್ರ್ಯಾಕ್: 2008ರಲ್ಲಿ G20 ನಾಯಕರ ಶೃಂಗಸಭೆಯ ನಂತರ ಸ್ಥಾಪಿಸಲಾಯಿತು. ಇದು ಸದಸ್ಯ ರಾಷ್ಟ್ರಗಳ ಅಧ್ಯಕ್ಷ/ಪ್ರಧಾನ ಮಂತ್ರಿಯ ನಿಯೋಜಿತ ಪ್ರತಿನಿಧಿಗಳಾಗಿರುವ ಶೆರ್ಪಾಸ್ ನೇತೃತ್ವದಲ್ಲಿದೆ. ಇದು ಕೃಷಿ, ಭ್ರಷ್ಟಾಚಾರ-ವಿರೋಧಿ, ಹವಾಮಾನ, ಡಿಜಿಟಲ್ ಆರ್ಥಿಕತೆ, ಶಿಕ್ಷಣ, ಉದ್ಯೋಗ, ಇಂಧನ, ಪರಿಸರ, ಆರೋಗ್ಯ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಹೂಡಿಕೆಯಂತಹ ಸಾಮಾಜಿಕ-ಆರ್ಥಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.

G20 Summit Venue

G20 ಶೃಂಗಸಭೆ ಕಾರ್ಯಸೂಚಿಯಲ್ಲಿ ಏನಿದೆ?

ಶೃಂಗಸಭೆಗಳ ಅಂತ್ಯದಲ್ಲಿ ಸಾಮಾನ್ಯವಾಗಿ ಎಲ್ಲಾ ಸದಸ್ಯರು ಒಪ್ಪಿದ ಘೋಷಣೆ ಅಥವಾ ಜಂಟಿ ಹೇಳಿಕೆಯನ್ನು ನೀಡಲಾಗುತ್ತದೆ. ಇದು ಅಂತರಾಷ್ಟ್ರೀಯ ಘರ್ಷಣೆಗಳು, ಹವಾಮಾನ ಬದಲಾವಣೆ- ಸಂಬಂಧಿತ ಬದ್ಧತೆಗಳು, ಭವಿಷ್ಯದ ಸಹಕಾರದ ಕ್ಷೇತ್ರಗಳು ಇತ್ಯಾದಿ ವಿಷಯಗಳ ಕುರಿತು ಸಾಮಾನ್ಯ ನಿಲುವುಗಳನ್ನು ತೆಗೆದುಕೊಳ್ಳುತ್ತದೆ. ಹವಾಮಾನ ಬದಲಾವಣೆ- ಸಂಬಂಧಿತ ಸಹಕಾರವನ್ನು ಅಧಿಕೃತ ಹೇಳಿಕೆಗಳಲ್ಲಿ ಸೂಚಿಸಲಾಗಿದೆ.

ಈ ವರ್ಷದ G20 ಥೀಮ್ ಏನು?

ಅಧಿಕೃತ G20 ವೆಬ್‌ಸೈಟ್ ಪ್ರಕಾರ, ಈ ವರ್ಷದ ಥೀಮ್ “ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ”. ಇದನ್ನು ಉಪನಿಷತ್ತಿನಿಂದ ಪಡೆಯಲಾಗಿದೆ. “ಮೂಲಭೂತವಾಗಿ ಈ ಥೀಮ್ ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಎಲ್ಲರಿಗೂ ಭೂಮಿಯ ಮೇಲೆ ಇರುವ ಅಧಿಕಾರವನ್ನು ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧʼʼವನ್ನು ಸೂಚಿಸುತ್ತದೆ. ಇದಲ್ಲದೆ, ಥೀಮ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅನ್ನು ಸಹ ಗುರುತಿಸಲಾಗಿದೆ.

2023ರ G20 ಲೋಗೋ

ಈ ವರ್ಷದ G20 ಲೋಗೋ ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಸ್ಫೂರ್ತಿ ಪಡೆದಿದೆ. ಕೇಸರಿ, ಬಿಳಿ, ಹಸಿರು ಮತ್ತು ನೀಲಿ. ಸವಾಲುಗಳ ನಡುವೆ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದೊಂದಿಗೆ ಭೂಮಿಯನ್ನು ಇದು ಜೋಡಿಸುತ್ತದೆ. ಪ್ರಕೃತಿಯೊಂದಿಗೆ ಪರಿಪೂರ್ಣ ಸಾಮರಸ್ಯವನ್ನು ಹೊಂದಿದೆ.

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಯ ʼಭಾರತ ಮಂಟಪʼ ಎಷ್ಟು ಅದ್ಭುತವಾಗಿದೆ ನೋಡಿ! ಇದಕ್ಕಿದೆ ಕರ್ನಾಟಕದ ಲಿಂಕ್!

Exit mobile version