Site icon Vistara News

ವಿಸ್ತಾರ TOP 10 NEWS | ʼಶಿರಚ್ಛೇದʼಕ್ಕೆ ಪಾಕ್‌ ಲಿಂಕ್‌, ʼಮಹಾʼ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ ಸೇರಿ ಪ್ರಮುಖ ಸುದ್ದಿಗಳಿವು

Vistara top 10 news maharashtra kanhayya lal GST .webp

ಬೆಂಗಳೂರು: ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿದ್ದ ರಾಜಸ್ಥಾನದ ಉದಯಪುರದ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಆರೋಪಿಗಳು ಪಾಕಿಸ್ತಾನದ ಜತೆಗೂ ಸಂಪರ್ಕ ಹೊಂದಿರುವ ಸಂಗತಿ ಬುಧವಾರ ಬಹಿರಂಗವಾಗಿದೆ. ದೇಶದಲ್ಲಿ ಈಗಾಗಲೇ ಎದ್ದಿರುವ ಆಕ್ರೋಶಕ್ಕೆ ಇದು ತೈಲ ಸುರಿದಂತಾಗಿದೆ. ಕರ್ನಾಟಕದ ವಿವಿಧೆಡೆಯೂ ತೀವ್ರ ಸ್ವರೂಪದ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ, ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದೆ, ಜಿಎಸ್‌ಟಿ ದರ ಪರಿಷ್ಕರಣೆ ನಂತರ ಕೆಲ ವಸ್ತುಗಳು ದುಬಾರಿಯಾಗಿವೆ, ವಿದ್ಯುತ್‌ ಸ್ಕೂಟರ್‌ಗಳ ಅವಘಡಕ್ಕೆ ಕಾರಣ ಏನೆಂಬುದು ತಿಳಿದು ಬಂದಿದೆ. ಇವೂ ಸೇರಿದಂತೆ ದಿನದ ಪ್ರಮುಖ ಘಟನಾವಳಿಗಳ TOP 10 NEWS ಇಲ್ಲಿವೆ.

1. Maha politics: ಗುವಾಹಟಿಯಿಂದ ಗೋವಾಕ್ಕೆ ಶಿಂಧೆ ಬಣ ಹಾರಲು ವಿಮಾನ ರೆಡಿ, ಆದರೆ ಹೋಲ್ಡಾನ್!
ಗುರುವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿರುವ ಅತ್ಯಂತ ಮಹತ್ವದ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಳ್ಳಬೇಕಿರುವ ಶಿವಸೇನೆಯ ಏಕನಾಥ್‌ ಶಿಂಧೆ ಬಣ ಗುವಾಹಟಿಯಿಂದ ಗೋವಾಗೆ ಹಾರಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಎಲ್ಲರೂ ತಮ್ಮ ತಮ್ಮ ಬಟ್ಟೆ ಬರೆಗಳನ್ನು ಪ್ಯಾಕ್‌ ಮಾಡಿ ಇಟ್ಟುಕೊಂಡಿದ್ದಾರೆ. ಶಿಂಧೆ ಬಣದಲ್ಲಿರುವ ಐವತ್ತು ಶಾಸಕರ ಪೈಕಿ ೧೦ ಮಂದಿ ಮುಂಬಯಿಗೆ ನೇರವಾಗಿ ತೆರಳಲಿದ್ದಾರೆ. ಉಳಿದ ೪೦ ಮಂದಿ ಗೋವಾಕ್ಕೆ ತೆರಳಲಿದ್ದಾರೆ. ಗುರುವಾರ ವಿಮಾನದ ಮೂಲಕ ಮುಂಬಯಿಗೆ ತೆರಳಿ ನೇರವಾಗಿ ವಿಧಾನಸಭೆ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. Rajsthan murder: ಕನ್ಹಯ್ಯ ಲಾಲ್‌ ಹಂತಕರಿಗೆ ಪಾಕಿಸ್ತಾನ ಲಿಂಕ್‌, 45 ದಿನ ಜಿಹಾದಿ ಟ್ರೇನಿಂಗ್‌!
ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ದರ್ಜಿ ಕನ್ಹಯ್ಯ ಲಾಲ್‌ ಅವರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ (Rajsthan murder) ರಾಕ್ಷಸರಾದ ಮೊಹಮ್ಮದ್‌ ರಿಯಾಜ್‌ ಅಖ್ತಾರಿ ಮತ್ತು ಘೋಷ್‌ ಮೊಹಮ್ಮದ್‌ಗೆ ಪಾಕಿಸ್ತಾನದ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ಇವರಿಬ್ಬರೂ ಈ ಪೈಶಾಚಿಕ ಕೃತ್ಯ ನಡೆಸುವ ಎರಡು ಮೂರು ದಿನ ಮೊದಲು ʻಸದ್ಯವೇ ಒಂದು ವಿಶೇಷ ಕೃತ್ಯ ನಡೆಸಿ ವಿಡಿಯೊ ಕಳುಹಿಸುತ್ತೇವೆʼ ಎಂದು ಪಾಕಿಸ್ತಾನದಲ್ಲಿರುವ ಫ್ರೆಂಡ್ಸ್‌ಗೆ ಮೆಸೇಜ್‌ ಮಾಡಿದ್ದರು! (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೩. Rajasthan Murder | ಧರ್ಮದ ಹೆಸರಲ್ಲಿ ಹಿಂಸೆ ಸಹಿಸಲಾಗದು ಎಂದ ರಾಹುಲ್‌ ಗಾಂಧಿ, ಓವೈಸಿ
ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾರನ್ನು ಬೆಂಬಲಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ರಾಜಸ್ಥಾನದಲ್ಲಿ ಹಿಂದು ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಲಾಗಿದ್ದು, ಅದನ್ನು ತೀವ್ರವಾಗಿ ಖಂಡಿಸಿ ರಾಷ್ಟ್ರಾದ್ಯಂತ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗೆಯೇ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಸೇರಿ ವಿವಿಧ ರಾಜಕೀಯ ನಾಯಕರು ಈ ಕೃತ್ಯವನ್ನು ಖಂಡಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಕಲ್ಲಂಗಡಿ ಒಡೆದಾಗ ಅತ್ತವರು ಈಗೆಲ್ಲಿ?: ಹತ್ಯೆಗೆ ರಾಜ್ಯದಲ್ಲಿ ಖಂಡನೆ
ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಶಿರಚ್ಛೇದವನ್ನು ಖಂಡಿಸಿ ಕರ್ನಾಟಕದ ವಿವಿಧೆಡೆ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. GST rate hike | ಪ್ಯಾಕೇಜ್ಡ್‌ ಪನೀರ್‌, ಮೊಸರು, ಮೀನು, ಮಾಂಸ ಇನ್ನು ದುಬಾರಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ ೪೭ನೇ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಚಿವರುಗಳ ಸಮಿತಿಯು (GoM) ಜಿಎಸ್‌ಟಿಯ ದರಗಳನ್ನು ಸರಳಗೊಳಿಸುವ ಸಂಬಂಧ ನೀಡಿರುವ ಮಧ್ಯಂತರ ವರದಿಯನ್ನು ಅಂಗೀಕರಿಸಲಾಗಿದೆ. ಇದರ ಪರಿಣಾಮ ದಿನ ನಿತ್ಯ ಬಳಸುವ ಹಲವು ವಸ್ತುಗಳ ದರಗಳು ಏರಿಕೆಯಾಗಲಿವೆ. ಏಕೆಂದರೆ ಸಮಿತಿಯ ಶಿಫಾರಸಿನ ಮೇರೆಗೆ ದಿನ ಬಳಕೆಯ ಹಲವು ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಹಿಂಪಡೆಯಲಾಗುವುದು. ಇದರ ಪರಿಣಾಮ ಅವುಗಳ ಬೆಲೆ ಏರಿಕೆಯಾಗಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೫. Agnipath | ವಾಯುಪಡೆಗೆ ಅಗ್ನಿವೀರರ ನೇಮಕ; ಆರು ದಿನಗಳಲ್ಲಿ 1.83 ಲಕ್ಷ ಅರ್ಜಿ
ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿದ ಸೇನಾ ನೇಮಕಾತಿ ಯೋಜನೆ ʼಅಗ್ನಿಪಥ್‌ʼ (Agnipath) ಅಡಿಯಲ್ಲಿ ಮೊದಲಿಗೆ ಭಾರತೀಯ ವಾಯುಪಡೆಯು (ಐಎಎಫ್‌) ʼಅಗ್ನಿವೀರʼ ರನ್ನು (ಸೈನಿಕರನ್ನು) ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಇದುವರೆಗೆ ೧.೮೩ ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. Ev Scooter: ಬೆಂಕಿ ಅವಘಡಗಳಿಗೆ ಬ್ಯಾಟರಿ ಬಿಸಿಯಾಗುವುದೇ ಕಾರಣ
ರಸ್ತೆ ಮೇಲೆ ಸಾಗುತ್ತಿರುವ ಎಲೆಕ್ಟ್ರಾನಿಕ್‌ Ev Scooter ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗುವುದಕ್ಕೆ ಏನು ಕಾರಣ ಎಂಬುದು ಪತ್ತೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಇಲಾಖೆ ನೇಮಿಸಿದ್ದ ಸಮಿತಿ ತನಿಖೆ ನಡೆಸಿ, ಬ್ಯಾಟರಿ ಚಾಲಿತ ವಾಹನಗಳ ತಯಾರಿಗೆ ನಿಗದಿಪಡಿಸಿರುವ ಮಾನದಂಡಗಳನ್ನು ಉತ್ಪಾದಕ ಕಂಪನಿಗಳು ಪಾಲಿಸದಿರುವುದೇ ಕಾರಣ ಎಂದು ಹೇಳಿದೆ. ಪ್ರಮುಖವಾಗಿ ಬ್ಯಾಟರಿಗಳು ಬಿಸಿಯಾಗಿ ಸ್ಫೋಟಗೊಳ್ಳುತ್ತವೆ ಎಂದು ವರದಿ ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. Film on Vajpayee | ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ತೆರೆಯ ಮೇಲೆ ಬರಲು ಸಜ್ಜು
ಮಾಜಿ ಪ್ರಧಾನಮಂತ್ರಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಆಟಲ್‌ ಎಂಬ ಶೀರ್ಷಿಕೆಯ “ಮೈ ರಹೂಂ ಯಾ ನಾ ರಹೂಂ, ಯೇ ದೇಶ್ ರೆಹನಾ ಚಾಹಿಯೇʼ (Atal- Main Rahoon Ya Na Rahoon, Yeh Desh Rehna Chahiye) ಎಂಬ ಟ್ಯಾಗ್‌ಲೈನ್‌ ಹೊಂದಿರುವ ಚಿತ್ರವು 2023ರಲ್ಲಿ ತೆರೆಗೆ ಬರಲಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. 15 ಸೋಂಕಿತರಿದ್ದರೆ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ ಕೊರೊನಾ ಪರೀಕ್ಷೆ: ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಸಲಹೆ ಮೇರೆಗೆ ಬೆಂಗಳೂರಿಗೆ ಸೀಮಿತವಾಗುವಂತೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕೊರೊನಾ ಸೋಂಕು ಹೆಚ್ಚು ಹರಡುವ ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಅನ್ವಯವಾಗುವಂತೆ ಹೊಸ ನಿಯಮ ಜಾರಿ ಮಾಡಲಾಗಿದೆ. ವಸತಿ ಸಮುಚ್ಚಯ/ ಅಪಾರ್ಟ್ ಮೆಂಟ್‌ಗಳಿಗೆ ಪ್ರತ್ಯೇಕ ರೂಲ್ಸ್‌ ಇದ್ದರೆ ಶಾಲಾ-ಕಾಲೇಜು ಮತ್ತು ಕಚೇರಿಗಳಿಗೆ ಬೇರೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. ನವ ದೆಹಲಿಯಲ್ಲಿ 2ನೇ ದಿನವೂ ಮುಂದುವರಿದ ಕಾಂಗ್ರೆಸ್‌ ʼಕಾರ್ಯತಂತ್ರʼ ಸಭೆ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಜ್ಜುಗೊಳಿಸಲು ರಾಹುಲ್‌ ಗಾಂಧಿ ನೇತೃತ್ವದಲ್ಲಿ ನವ ದೆಹಲಿಯಲ್ಲಿ ನಡೆಯುತ್ತಿರುವ ಮ್ಯಾರಥಾನ್‌ ಸಭೆ ಎರಡನೇ ದಿನವೂ ಮುಂದುವರಿದಿದೆ. ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಂಗಳವಾರದಿಂದ ಸಭೆ ನಡೆಸುತ್ತಿದ್ದಾರೆ. ಇದೊಂದು ರೀತಿಯಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವಿನ ʼಸಂಧಾನʼ ಸಭೆಯಂತೆ ಭಾಸವಾಗುತ್ತಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. 24/7 Hotel | ಆಯ್ದ ಸ್ಥಳಗಳಲ್ಲಿ ರಾತ್ರಿ ಹೋಟೆಲ್‌ ತೆರೆಯಲು ಪೊಲೀಸರ ಗ್ರೀನ್‌ ಸಿಗ್ನಲ್‌
ನಗರದಲ್ಲಿ ರಾತ್ರಿ ಪೂರ್ತಿ ಹೋಟೆಲ್‌ ತೆರೆಯಲು ಸರ್ಕಾರ ಅವಕಾಶ ನೀಡಬೇಕು ಎಂಬ ವಾಣಿಜ್ಯೋದ್ಯಮಿಗಳ ಬೇಡಿಕೆ ಒಂದು ಹಂತಕ್ಕೆ ಈಡೇರುವ ಹಂತ ತಲುಪಿದ್ದು, ಬೆಂಗಳೂರಿನ ಕೆಲವು ಆಯ್ದ ಪ್ರದೇಶಗಳಲ್ಲಿ ಅನುಮತಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ. ಭದ್ರತೆಯ ಕಾರಣಕ್ಕೆ ಎಲ್ಲ ಕಡೆಗಳಲ್ಲಿ ವಾಣಿಜ್ಯ ಚಟುವಟಿಕೆಯನ್ನು ದಿನವಿಡೀ ನಡೆಸಲು ಕಷವಾಗುತ್ತದೆ. ಆಯ್ದ ಪ್ರದೇಶಗಳಲ್ಲಿ ನಡೆಸಬಹುದು ಎಂದು ಪೊಲೀಸ್‌ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಜನಸಂದಣಿ ಇರುವ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟ್‌ಲೈಟ್ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆ ಇದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version