ಬೆಂಗಳೂರು: ಮೂಡಾ ಪ್ರಕರಣದಲ್ಲಿ ಸಿಎಂ ವಿರುದ್ಧದ ಪ್ರಾಥಮಿಕ ಹಂತದ ತನಿಖೆಗೆ ಹೈಕೋರ್ಟ್ ಅಸ್ತು ಎಂದಿತ್ತು. ಮುಡಾದ ಭೂಕಬಳಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ A1 ಆರೋಪಿ (CM Siddaramaiah) ಆಗಿದ್ದು, ಐಪಿಸಿ ಸೆಕ್ಷನ್ 420, 120B, 166, 403,126, 465,468, 340, 351 ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಇತ್ತ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಟೆನ್ಶನ್ ಹೆಚ್ಚಾಗಿದೆ. ಸ್ವಪಕ್ಷ- ವಿಪಕ್ಷ ನಾಯಕರ ನಡೆ- ನುಡಿಗಳ ಮೇಲೆ ಕಣ್ಣಿಡುವ ಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ಹಾಕಿಸುವಲ್ಲಿ ವಿಪಕ್ಷಗಳು ಒಂದು ಹಂತದ ಸಕ್ಸಸ್ ಆಗಿವೆ. ಇತ್ತ ರಾಜಕೀಯವಾಗಿ ಸಿಎಂ ಬೆನ್ನಿಗೆ ನಾವಿದ್ದೇವೆ ಎಂದು ಶಾಸಕರು, ಸಚಿವರು ಹೈಕಮಾಂಡ್ ನಾಯಕರಿಂದ ಸಂದೇಶ ರವಾನೆ ಆಗಿದೆ. ಆದರೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯೇ ಬೇರೆ. ರಾಜಕೀಯದಲ್ಲಿ ಯಾರು ಸಹ ಸನ್ಯಾಸಿಗಳಲ್ಲ ಎನ್ನುವ ಪರಿಸ್ಥಿತಿ ಇದೆ.
ನಾಯಕರು ದಿನಕ್ಕೊಂದು ಹೇಳಿಕೆಗಳ ಮೂಲಕ ಪರೋಕ್ಷವಾಗಿ ಮುನ್ಸೂಚನೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎನ್ನುವ ಚರ್ಚೆ ಇದೆ. ಪಕ್ಷಕ್ಕೆ ಮುಜುಗರ ತಪ್ಪಿಸಲು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ತನಿಖೆ ಬಳಿಕ ಮತ್ತೆ ಸಿಎಂ ಆಗಲಿ ಎಂದು ಕೆಬಿ ಕೋಳಿವಾಡ ಹೇಳಿದ್ದರು.
ಮತ್ತೊಂದು ಕಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಇಂದು ಇರಬಹುದು, ನಾಳೆ ಇಲ್ಲದೆಯೂ ಇರಬಹುದು. ಪಕ್ಷ ಶಾಶ್ವತವಾಗಿ ಮುಂದುವರೆಯುತ್ತದೆ ಎಂದಿದ್ದರು. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸಿಎಂ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ. ನಾನು ರಾಜ್ಯದ ಸೇವೆ ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ರಾಜ್ಯದ ಸೇವೆ ಮಾಡಲು ನನ್ನ ಹೋರಾಟ ನಡೆಯುತ್ತಿದೆ. ಹೀಗೆ ಹೇಳಿದರೆ ಮಾಧ್ಯಮದವರು ಬೇರೆ ರೀತಿ ಬಿಂಬಿಸುತ್ತಾರೆ. ಯಾರು ಏನು ಬೇಕಾದರೂ ಬಿಂಬಿಸಲಿ ಸೇವೆ ಮಾಡ್ತೇನೆ ಎಂದಿದ್ದರು.
ಮುಡಾ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ
ಮುಡಾ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ನಾನು ಕಾನೂನು, ರಾಜಕೀಯ ಹೋರಾಟ ಮಾಡ್ತೇನೆ. ಪ್ರತಿಪಕ್ಷಗಳಿಗೆ ಪ್ರತ್ಯುತ್ತರ ನೀವು ಕೊಡಿ ಎಂದು ಆಪ್ತ ಶಾಸಕರು, ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಸಿಎಂ ಸೂಚನೆ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ, ಜೆಡಿಎಸ್- ವಿರುದ್ಧ ಮುಗಿಬಿದ್ದಿದ್ದರುವ ನಾಯಕರು ಮೋದಿ, ಅಮಿತ್ ಶಾ , ಎಚ್‌ಡಿ ಕುಮಾರಸ್ವಾಮಿ ಆರೋಪಗಳು ಕೇಳಿ ಬಂದಾಗ ರಾಜೀನಾಮೆ ಕೊಟ್ರಾ ಎಂದು ಕೈ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.
ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಲೋಕಾಯುಕ್ತ ಪೊಲೀಸರು
ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇಂದು ಭಾನುವಾರ ರಜೆ, ನಾಳೆ ಸೋಮವಾರ ಸಿಎಂ ಕಾನೂನು ನಡೆ ಬಹಿರಂಗವಾಗಲಿದೆ. ಹೀಗಾಗಿ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡಲು ಚಿಂತನೆ ನಡೆದಿದೆ. ಭಾನುವಾರದ ರಜೆ ದಿನವಾದ ಕಾರಣ ಕಚೇರಿಗೆ ಬೀಗ ಹಾಕಲಾಗಿದೆ. ಇಂದು ಅಧಿಕಾರಿಗಳು ಕಚೇರಿಗೆ ಬರೋದು ಅನುಮಾನವಾಗಿದೆ.
ಒಂದೆಡೆ ಲೋಕಾಯುಕ್ತ ತನಿಖೆ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಲಿದ್ದು, ತನಿಖೆಯನ್ನು ಸಿಬಿಐ ವಹಿಸುವಂತೆ ಕೋರ್ಟ್‌ಗೆ ಮನವಿ ಮಾಡಲಿದ್ದಾರೆ. ಮತ್ತೊಂದೆಡೆ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.