Site icon Vistara News

Explainer: ಉಕ್ರೇನ್‌ನಲ್ಲಿ ಹತಾಶ ರಷ್ಯಾ ಸೈನಿಕರಿಂದ ಬಂಡಾಯ ಸಾಧ್ಯತೆ

ukraine war

ತನ್ನ ವ್ಯಾಪ್ತಿಗೆ ಹೋಲಿಸಿದರೆ ಚಿಕಣಿಯಂತಿರುವ ಉಕ್ರೇನನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಹೊಸಕಿ ಹಾಕಿ ಬಿಡಬಹುದು ಎನ್ನುವ ರಷ್ಯದ ಅಹಂಕಾರ ಬೂದಿಯಾಗಿದೆ. ಉಕ್ರೇನ್‌ನಲ್ಲಿ ಎದುರಾಗ್ತಿರೋ ಪ್ರತಿರೋಧದ ಅಲೆಗಳು ರಷ್ಯಾದ ಸೈನ್ಯವನ್ನು ನಡುಗಿಸಿಬಿಟ್ಟಿವೆ. ರಷ್ಯಾ ಸೈನ್ಯದ ಸುಮಾರು ಸೈನ್ಯಾಧಿಕಾರಿಗಳೇ ಹತರಾಗಿದ್ದಾರೆ. ರಷ್ಯಾದ ಸೈನಿಕರೇ ತಮ್ಮ ಮೇಲಧಿಕಾರಿಗಳ ಮೇಲೆ ತಿರುಗಿ ಬೀಳಬಹುದಾ ಎಂಬ ಚಿಂತನೆ ಶುರುವಾಗಿದೆ. ಈ ಕೆಳಗಿನ ಅಂಶಗಳನ್ನು ಓದಿದರೆ ಆ ಆತಂಕಕ್ಕೆ ಕಾರಣಗಳು ಸ್ಪಷ್ಟವಾಗಬಹುದು.

1. ಕಳೆದ ಒಂದೂವರೆ ತಿಂಗಳಲ್ಲಿ ಐದು ಜನರಲ್‌ಗಳು, ಮತ್ತಷ್ಟು ಕಮಾಂಡರ್‌ಗಳು ರಷ್ಯದ ಸೈನ್ಯದಲ್ಲಿ ಉಕ್ರೇನ್‌ ಸೈನಿಕರಿಂದ ಹತರಾಗಿದ್ದಾರೆ. ಸೈನಿಕರು ಸಾಯುವುದು ಸಹಜ, ನ್ಯಾಟೋ ಪಡೆಗಳು ಹೇಳುವ ಪ್ರಕಾರ ಸುಮಾರು 15,000ಕ್ಕೂ ಹೆಚ್ಚಿನ ರಷ್ಯಾ ಸೈನಿಕರು ಉಕ್ರೇನ್‌ನಲ್ಲಿ ಸತ್ತಿದ್ದಾರೆ. ಇದೊಂದು ದೊಡ್ಡ ಮೊತ್ತವೇ. ಆದರೆ ಜನರಲ್‌ಗಳು, ಕಮಾಂಡಿಂಗ್‌ ಆಫೀಸರ್‌ಗಳು ದೊಡ್ಡ ಸಂಖ್ಯೆಯಲ್ಲಿ ಸಾಯುವುದು ಅಚ್ಚರಿಯ ವಿಷಯ. ಉಕ್ರೇನ್‌ನ ಪರಿಣತ ಸ್ನೈಪರ್‌ಗಳು ರಷ್ಯಾದ ಸೈನ್ಯಾಧಿಕಾರಿಗಳನ್ನು ಹುಡುಕಿ ಹುಡುಕಿ ತೆಗೆಯುತ್ತಿದ್ದಾರೆ. ಇದು ರಷ್ಯಾದ ಸೈನಿಕರನ್ನು ಅಧೀರಗೊಳಿಸಿದೆ. ಕಮಾಂಡಿಂಗ್‌ ಅಫೀಸರ್‌ಗಳಿಗೂ ಸೈನ್ಯವನ್ನು ಮುನ್ನಡೆಸುವ ಉತ್ಸಾಹ ಉಳಿದಿಲ್ಲ.

2. ವಿಶ್ರಾಂತಿ ಹಾಗೂ ಸರಿಯಾದ ಅನ್ನಾಹಾರಗಳಿಲ್ಲದೆ ಸತತ ದಾಳಿಗಳಲ್ಲಿ ಪಾಲ್ಗೊಂಡಿರುವ ರಷ್ಯಾದ ಸೈನಿಕರು ನೈತಿಕ ಸ್ಥೈರ್ಯದ ಕುಸಿತವನ್ನು ಎದುರಿಸುತ್ತಿದ್ದಾರೆ. ರಷ್ಯಾದಿಂದ ಉಕ್ರೇನನ್ನು ಸಂಪರ್ಕಿಸುವ ಹಾದಿಗಳು ಅಷ್ಟೇನೂ ಸುಲಭವಲ್ಲ. ಉಕ್ರೇನ್‌ನಲ್ಲಿ ಆಹಾರದ ಲಭ್ಯತೆಯಿಲ್ಲ. ರಷ್ಯಾದಿಂದ ತರಲು ಕಷ್ಟವಾಗುತ್ತಿದೆ. ರಷ್ಯಾದ ಸೈನ್ಯ ಭ್ರಷ್ಟಾಚಾರಕ್ಕೆ ಹೆಸರುವಾಸಿ. ಇಲ್ಲಿನ ಮೇಲಧಿಕಾರಿಗಳನ್ನು ಸ್ವತಃ ಅಧ್ಯಕ್ಷ ಪುಟಿನ್‌ ಅವರೇ ಕಿತ್ತು ಹಾಕಿದ್ದುಂಟು. ಇವರು ಪಡೆಯುವ ಸಂಬಳ ಅಮೆರಿಕದ ಸೈನಿಕರಿಗೆ ಹೋಲಿಸಿದರೆ ಅತ್ಯಂತ ಕಡಿಮೆ.

3. ರಷ್ಯಾದ ಸೈನ್ಯಾಧಿಕಾರಿಗಳಿಗೆ ಈಗಿನ ಹೆದರಿಕೆ ಸೈನಿಕರು ಆಂತರಿಕವಾಗಿ ದಂಗೆ ಎದ್ದುಬಿಟ್ಟಾರು ಎಂಬುದು. ಇದು ನಿರಾಧಾರವಲ್ಲ. ಕಳೆದ ತಿಂಗಳು ಒಬ್ಬ ಕಮಾಂಡರ್‌ನ ಜೊತೆ ವಾದವಿವಾದ ಬೆಳೆದು ಸೈನಿಕರು ಆತನ ಕಾಲಿನ ಮೇಲೆ ಟ್ಯಾಂಕರ್‌ ಹರಿಸಿ ಗಾಯಗೊಳಿಸಿದ್ದರು. ಮೇಲಧಿಕಾರಿಗಳ ಆಜ್ಞೆ ಧಿಕ್ಕರಿಸಿದ, ಹೋರಾಡಲು ನಿರಾಕರಿಸಿದ, ತಮ್ಮದೇ ಆಯುಧೋಪಕರಣಗಳನ್ನು ಹಾಳುಗೆಡವಿದ, ಘಟನೆಗಳು ನಡೆದಿವೆ. ರಷ್ಯಾದ ಸೈನಿಕರು ತಮ್ಮ ಸೈನ್ಯಾಧಿಕಾರಿಗಳ ವಿರುದ್ಧವೇ ತಿರುಗಿಬೀಳುವುದಕ್ಕೆ ಕುಖ್ಯಾತರು.

4. ಅದರಲ್ಲೂ ನೈತಿಕ ಸ್ಥೈರ್ಯ ಕುಸಿದ, ಹತಾಶೆಗೀಡಾದ ಸೈನಿಕರು ಮತ್ತಷ್ಟು ಅಪಾಯಕಾರಿ. 1905ರಲ್ಲಿ ನಡೆದ ರಷ್ಯಾ- ಜಪಾನಿ ಯುದ್ಧದಲ್ಲಿ 700 ನೌಕಾಸೈನಿಕರು ತಮ್ಮ ಅಧಿಕಾರಿಗಳ ವಿರುದ್ಧ ಬಂಡಾಯ ಎದ್ದಿದ್ದರು. 1942ರಲ್ಲಿ ಸ್ಟಾಲಿನ್‌ ಒಂದು ಆದೇಶ ಹೊರಡಿಸಿ, ಹೀಗೆ ದಂಗೆಯೇಳುವ ಸೈನಿಕರನ್ನು ಸ್ಥಳದಲ್ಲೇ ಕೊಂದುಹಾಕುವಂತೆ ಆದೇಶಿಸಿದ. ಒಂದು ಲೆಕ್ಕಾಚಾರದ ಪ್ರಕಾರ ಹೀಗೆ ಸತ್ತುಹೋದ ಸೈನಿಕರ ಸಂಖ್ಯೆ ಒಂದೂವರೆ ಲಕ್ಷ. ಇಂಥ ಕ್ರೌರ್ಯದಿಂದ ಬೇಸತ್ತುಹೋದ ಸುಮಾರು 10 ಲಕ್ಷ ರಷ್ಯನ್‌ ಸೈನಿಕರು ಎರಡನೇ ಮಹಾಯುದ್ಧದ ಸಮಯದಲ್ಲಿ ತಾವಾಗಿಯೇ ಯುದ್ಧ ಕೈದಿಗಳಾಗಿದ್ದರು.

5. ರಷ್ಯನ್‌ ಸೈನಿಕರು ಉಕ್ರೇನಿ ನಾಗರಿಕರ ಮೇಲೆ ತೋರಿಸುತ್ತಿರುವ ಕ್ರೌರ್ಯದ ವಿವರಗಳು ಬರುತ್ತಿವೆ. ಹತಾಶ, ಕಡಿಮೆ ಸಂಬಳದ, ಸೈನಿಕರು ದೌರ್ಜನ್ಯ ಎಸಗುವ ಹಾದಿ ಆಯ್ದುಕೊಳ್ಳುತ್ತಾರೆ. ಮುಗ್ಧ ಹೆಂಗಸರು ಮಕ್ಕಳನ್ನು ಉಕ್ರೇನಿ ಸೈನಿಕರ ದಾಳಿಗೆ ಎದುರಾಗಿ ಹ್ಯೂಮನ್‌ ಶೀಲ್ಡ್‌ಗಳಂತೆ ಬಳಸಿಕೊಳ್ಳುವುದು, ಮನೆಯ ಗಂಡಸರ ಮುಂದೆಯೇ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವುದು, ಮಕ್ಕಳನ್ನು ಕೊಂದು ಅಟ್ಟಹಾಸ ಮೆರೆಯುವುದು, ಆಸ್ಪತ್ರೆ- ಶಾಲೆಗಳ ಮೇಲೆ ಬಾಂಬ್‌ ಎಸೆತ- ಇತ್ಯಾದಿ ಕ್ರೌರ್ಯ ತೋರುತ್ತಿದ್ದಾರೆ. ಉತ್ತರ ಭಾಗದ ಉಕ್ರೇನ್‌ನಲ್ಲಿ ರಷ್ಯಾ ವಶಪಡಿಸಿಕೊಂಡ ಭಾಗದಲ್ಲಿ ಹೆಣಗಳು ಬೀದಿಯಲ್ಲಿ ಚೆಲ್ಲಾಡಿವೆ. ಎರಡನೇ ಮಹಾಯುದ್ಧ ಕಾಲದಲ್ಲಿ ಜರ್ಮನಿ ಸೈನ್ಯ ತೋರಿದ ದಬ್ಬಾಳಿಕೆಗೆ ಇದು ಏನೇನೂ ಕಡಿಮೆಯದಲ್ಲ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡುತ್ತಿವೆ.

ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಅಮಾನತು: ವಿಶ್ವಸಂಸ್ಥೆಯ ಮತದಾನದಿಂದ ಹೊರಗುಳಿದ ಭಾರತ

6. ಯುದ್ಧ ಇನ್ನಷ್ಟು ಕಾಲ ಮುಂದುವರಿದರೆ, ಉಕ್ರೇನ್‌ ಮೇಲೆ ನಿರ್ಣಾಯಕ ವಿಜಯ ಸಂಪಾದಿಸಲು ಸಾಧ್ಯವಾಗದೇ ಹೋದರೆ, ರಷ್ಯಾದ ಸೈನಿಕರು ದಂಗೆ ಏಳುವ ಎಲ್ಲ ಸಾಧ್ಯತೆಗಳೂ ಇವೆ ಎಂಬುದು ವಿಶ್ಲೇಷಣೆ. ರಷ್ಯಾ ಸೈನಿಕರು ನಮ್ಮ ಕಡೆಗೆ ಬಂದು ಸೇರಿಕೊಳ್ಳಬಹುದು ಎಂದು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಘೋಷಿಸಿದ್ದಾರೆ.

Exit mobile version