Site icon Vistara News

Explainer: ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ್ದೇಕೆ?

ರಷ್ಯಾ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಇತ್ತೀಚಿನ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಪ್ರಪಂಚದ ಯಾವುದೇ ದೇಶದಲ್ಲಿ ಯುದ್ಧ ನಡೆದರೂ, ಇತರ ದೇಶಗಳ ಮೇಲೆ ಸ್ವಲ್ಪ ಪರಿಣಾಮ ಆಗಿಯೇ ಆಗುತ್ತದೆ. ಯಾಕೆಂದರೆ, ಎಲ್ಲ ದೇಶಗಳೂ ಅನೇಕ ವಿಧಗಳಲ್ಲಿ ಪರಸ್ಪರ ಬೆಸೆದುಕೊಂಡಿರುತ್ತವೆ. ಹಾಗೆಯೇ, ರಕ್ಷಣಾ ವ್ಯವಸ್ಥೆಯ ದೃಷ್ಟಿಯಿಂದ ಪ್ರತಿಯೊಂದು ಯುದ್ಧದಿಂದಲೂ ಇತರ ದೇಶಗಳ ಸೈನ್ಯಗಳೂ ಕಲಿಯುವ ಅಂಶಗಳು ಬಹಳಷ್ಟು ಇರುತ್ತವೆ. ಭಾರತದ ಮೇಲೂ ಈ ಯುದ್ಧದ ಪರಿಣಾಮ ಪರೋಕ್ಷವಾಗಿ ಇದ್ದೇ ಇದೆ. ಹಾಗಾಗಿ, ಇದರ ಹಿನ್ನೆಲೆ ಹಾಗೂ ಪರಿಣಾಮಗಳನ್ನು ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ರಷ್ಯಾ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಉಕ್ರೇನ್‌

ಉಕ್ರೇನ್ ಎಂಬ ದೇಶ ಮೊದಲು ಸೋವಿಯತ್ ಯೂನಿಯನ್ ಇದ್ದಾಗ ಅದರ ಭಾಗವಾಗಿದ್ದ ಪ್ರದೇಶ. 1991ರಲ್ಲಿ ಕಮ್ಯುನಿಸಂ ಪತನವಾಗಿ ಸೋವಿಯತ್ ಯೂನಿಯನ್ ಒಡೆದು ಚೂರಾದ ಬಳಿಕ ಉಕ್ರೇನ್ ಪ್ರತ್ಯೇಕ ರಾಷ್ಟ್ರವಾಯಿತು. ರಷ್ಯಾದಲ್ಲಿ ಕಮ್ಯುನಿಸಂ ಬರುವ ಮೊದಲೂ ಈಗಿನ ಉಕ್ರೇನಿನ ಕೆಲವು ಭಾಗ ಆಸ್ಟ್ರಿಯಾದಲ್ಲೂ, ಕೆಲವು ಭಾಗ ರಷ್ಯಾದಲ್ಲೂ ಇತ್ತು. ಸಾಂಸ್ಕೃತಿಕವಾಗಿ ಪ್ರತ್ಯೇಕ ಅಸ್ಮಿತೆ ಹೊಂದಿದ್ದ ಉಕ್ರೇನ್ ತನ್ನ ಸ್ವತಂತ್ರ ಅಸ್ತಿತ್ವಕ್ಕಾಗಿ ಪ್ರಯತ್ನ ನಡೆಸಿದ್ದರೂ ಅದು ಯಶಸ್ವಿಯಾಗಿರಲಿಲ್ಲ. 1991ರಲ್ಲೇ ಅದು ಯಶಸ್ವಿಯಾಗಿ ಸ್ವತಂತ್ರ ರಾಷ್ಟ್ರವಾಗಿದ್ದು, ಆ ಬಳಿಕವೂ ಉಕ್ರೇನಿನ ಕೆಲವು ಭಾಗಗಳಲ್ಲಿ ರಷ್ಯನ್ ಮಾತನಾಡುವ ಜನರಿದ್ದು ಅವರ ಒಲವು ರಷ್ಯಾದೆಡೆಗೆ ಇದ್ದದ್ದು ಸುಳ್ಳಲ್ಲ. ಹಾಗಾಗಿ, 2014ರಲ್ಲಿ ಅಂತಹ ಒಂದು ಪ್ರದೇಶವಾದ ಕೈಮಿಯಾವನ್ನು ರಷ್ಯಾ ವಶಪಡಿಸಿಕೊಂಡಿತು. ಆ ಬಳಿಕ ಉಕ್ರೇನಿಗೆ ಬಲಿಷ್ಠ ರಷ್ಯಾವನ್ನು ಎದುರಿಸಲು ತಾನು ನ್ಯಾಟೋ ಸೇರಬೇಕೆಂಬ ಬಯಕೆ ಬಲವಾಯಿತು. ಅದಕ್ಕೆ ಸ್ವಲ್ಪ ಜನಬೆಂಬಲವೂ ದೊರೆಯಿತು. (ನ್ಯಾಟೋ ಎಂದರೆ, ಅಮೇರಿಕಾ ಕೆನಡಾ ಹಾಗೂ ಯುರೋಪಿನ 28 ದೇಶಗಳ ನಡುವಿನ ಮಿಲಿಟರಿ ಸಹಕಾರಕ್ಕಾಗಿನ ಒಪ್ಪಂದ). ಇತ್ತೀಚೆಗೆ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಕಂಡದ್ದರಿಂದ ರಷ್ಯಾಕ್ಕೆ ಇದರ ಅಪಾಯದ ಅರಿವಾಯಿತು. ಹಾಗಾಗಿ, ಉಕ್ರೇನ್ ನ್ಯಾಟೋ ಸೇರುವುದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿತು. ಒಂದು ವೇಳೆ ಉಕ್ರೇನ್ ನ್ಯಾಟೋ ಸೇರಿದರೆ, ಅಮೇರಿಕ, ಇಂಗ್ಲೆಂಡ್ ಮೊದಲಾದ ದೇಶಗಳ ಸೈನ್ಯಗಳು ಉಕ್ರೇನಿಗೆ ರಷ್ಯಾದ ಗಡಿಯವರೆಗೂ ಬರಬಹುದು. ತನ್ನ ಗಡಿಯವರೆಗೂ ಇನ್ನೊಂದು ಬಲಿಷ್ಟ ಸೈನ್ಯವನ್ನು ಬಿಟ್ಟುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಆದ್ದರಿಂದ ರಷ್ಯಾ ಉಕ್ರೇನಿಗೆ ಎಚ್ಚರಿಕೆ ಕೊಟ್ಟಿತು. ಇದನ್ನು ಉಕ್ರೇನ್ ಗಂಭೀರವಾಗಿ ಪರಿಗಣಿಸಲಿಲ್ಲ. ಜೊತೆಗೆ, ನ್ಯಾಟೋ ಕೂಡ ಉಕ್ರೇನಿಗೆ ಸದಸ್ಯತ್ವ ಕೊಡುವುದಕ್ಕೆ ಒಂದು ಹೆಜ್ಜೆ ಹಿಂದಿನದ್ದು ಎನ್ನಬಹುದಾದ ಮೆಂಬರ್‌ಶಿಪ್ ಆಕ್ಷನ್ ಪ್ಲಾನ್ ಪ್ರಾರಂಭಿಸಿತು. ಹಾಗಾಗಿ, ರಷ್ಯಾ ಉಕ್ರೇನಿನ ಮೇಲೆ ಧಾಳಿ ಪ್ರಾರಂಭಿಸಿತು. ಇವಿಷ್ಟು ಯುದ್ಧದ ಹಿನ್ನೆಲೆ.

ಮತ್ತಷ್ಟು ಓದಿ: ಉಕ್ರೇನ್‌ ರಾಜಧಾನಿ ಕೀವ್‌ಗೆ ರಷ್ಯಾ ದಿಗ್ಬಂಧನ

ಉಕ್ರೇನ್‌ಗೆ ಕೈಕೊಟ್ಟ ಮಿತ್ರರು

ಪ್ರಾರಂಭದಲ್ಲಿ ತಾವೆಲ್ಲ ಬೆಂಬಲ ಕೊಡುವುದಾಗಿ ಹೇಳಿದರೂ, ಪ್ರತ್ಯಕ್ಷ ಯುದ್ಧ ಪ್ರಾರಂಭವಾದಾಗ ಯಾವ ನ್ಯಾಟೋ ದೇಶಗಳೂ ಸಹಾಯಕ್ಕೆ ಸೈನ್ಯ ಕಳುಹಿಸಲಿಲ್ಲ. ಜರ್ಮನಿ ಮಾತ್ರ ಯುದ್ಧೋಪಕರಣ ನೀಡಿದ ಸುದ್ದಿ ಬಂದಿದೆ. ಅಮೇರಿಕವಂತೂ ತಾನು ಉಕ್ರೇನಿನ ನೆಲಕ್ಕೆ ತನ್ನ ಸೈನ್ಯ ಕಳುಹಿಸುವುದಿಲ್ಲ ಎಂದು ಹೇಳಿದ್ದು ಉಕ್ರೇನಿಗೆ ದೊಡ್ಡ ಆಘಾತವನ್ನೇ ಒಡ್ಡಿತು. ಈಗಾಗಲೇ, ಯುದ್ಧದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಉಕ್ರೇನ್ ಒಂದೋ ಶರಣಾಗಬಹುದು ಅಥವಾ ಪೂರ್ತಿ ಸೋಲುವವರೆಗೂ ಹೋರಾಡಬಹುದು. ಕದನವಿರಾಮದ ಮಾತುಕತೆ ನಡೆಯುತ್ತಿದೆಯಾದರೂ ಎರಡೂ ಪಕ್ಷದವರು ತಮ್ಮ ಪಟ್ಟು ಸಡಿಲಿಸದಿರುವುದರಿಂದ ಹೆಚ್ಚೇನೂ ಪರಿಣಾಮ ಕಂಡುಬರುತ್ತಿಲ್ಲ.

ಕದನವಿರಾಮದ ಮಾತುಕತೆ ನಡೆಯುತ್ತಿದೆಯಾದರೂ ಎರಡೂ ಪಕ್ಷದವರು ತಮ್ಮ ಪಟ್ಟು ಸಡಿಲಿಸದಿರುವುದರಿಂದ ಹೆಚ್ಚೇನೂ ಪರಿಣಾಮ ಕಂಡುಬರುತ್ತಿಲ್ಲ.

ಭಾರತದ ಮೇಲೆ ಯಾವ ಪರಿಣಾಮ ಬೀರಬಹುದು?

ರಷ್ಯಾ-ಉಕ್ರೇನ್‌ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿದೆ. ಆದರೆ ಎರಡೂ ದೇಶಗಳ ಮುಖ್ಯಸ್ಥರ ಜತೆಗೆ ಭಾರತದ ಪ್ರಧಾನಿ ಮಾತುಕತೆ ನಡೆಸಿದ್ದಾರೆ. ಯಾವುದೇ ಹಿಂಸಾಚಾರವನ್ನು ಭಾರತ ಬೆಂಬಲಿಸುವುದಿಲ್ಲ, ಎರಡೂ ದೇಶಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದೇ ಸೂಕ್ತ ಎಂದು ತಿಳಿಸಿದ್ದಾರೆ. ಎಲ್ಲ ದೇಶಗಳ ಮೇಲೆ ಆದಂತೆ ಫಿದಾರತದ ಮೇಲೂ ತೈಲ ಬೆಲೆಯೇರಿಕೆಯ ಪರಿಣಾಮವಾಗಲಿದೆ. ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ಜೊತೆ ಆಮದು ರಫ್ತು ಇದೆಯಾದ್ದರಿಂದ ಅದರ ಮೇಲೆ ಸ್ವಲ್ಪ ಪರಿಣಾಮವಾಗಲಿದೆ. ಅನೇಕ ದೇಶಗಳು ರಷ್ಯಾದ ಮೇಲೆ ವ್ಯಾಪಾರ ನಿರ್ಬಂಧ ಹೇರಿದರೂ, ಭಾರತ ಮಾತ್ರ ಹಾಗೆ ಮಾಡಲಿಲ್ಲ. ರಷ್ಯಾ ಭಾರತದ ದೀರ್ಘಕಾಲೀನ ಮಿತ್ರ ಮಾತ್ರವಲ್ಲ, ಪೋಖರಣ್ ಅಣ್ವಸ್ತ್ರ ಪರೀಕ್ಷೆಯ ಬಳಿಕ ಅಮೇರಿಕ ನಿರ್ಬಂಧ ಹೇರಿದಾದ ನಮಗೆ ತಂತ್ರಜ್ಞಾನ ಕೊಟ್ಟು ಸಹಕರಿಸಿದ ದೇಶ. ಈಗಲೂ ಅನೇಕ ಪ್ರಮುಖ ರಕ್ಷಣಾ ಉಪಕರಣಗಳನ್ನು ಭಾರತ ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ, ವಿಶ್ವಸಂಸ್ಥೆಯಲ್ಲಿ ರಷ್ಯಾದ ನಡೆಯನ್ನು ವಿರೋಧಿಸಿ ಮಂಡನೆಯಾದ ನಿರ್ಣಯದ ಮತದಾನದಲ್ಲಿ ಭಾರತ ಮತದಾನ ಮಾಡದೇ ತಟಸ್ಥವಾಗಿ ಉಳಿಯಿತು. ಉಕ್ರೇನ್ ಜಮ್ಮು ಕಾಶ್ಮೀರ ವಿಷಯದಲ್ಲೇ ಆಗಲಿ, ಸಿಎಎ ಮೊದಲಾದ ಸಂದರ್ಭಗಳಲ್ಲಿ ಭಾರತ ವಿರೋಧಿ ದನಿಯಲ್ಲಿ ಮಾತನಾಡಿತ್ತು, ವಿಶ್ವಸಂಸ್ಥೆಯಲ್ಲೂ ಹಾಗೆಯೇ ನಡೆದುಕೊಂಡಿತ್ತು ಎಂಬುದನ್ನು ನಾವು ಗಮನಿಸಬಹುದು.

ಮತ್ತಷ್ಟು ಓದಿ: ರಷ್ಯಾದ ಆಕ್ರಮಣ ವಿರೋಧಿಸಲು ಭಾರತಕ್ಕೆ ಭಯವಿದೆ: ಬೈಡನ್‌

ಯುದ್ಧಭೂಮಿಯಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳು

ಭಾರತದ ಸುಮಾರು 19,000 ವಿದ್ಯಾರ್ಥಿಗಳು ಉಕ್ರೇನಿನಲ್ಲಿ ವ್ಯಾಸಂಗ (ಹೆಚ್ಚಿನವರು ವೈದ್ಯಕೀಯ ಪದವಿ) ಮಾಡುತ್ತಿದ್ದಾರೆ. ಅವರಿಗೆಲ್ಲ ದೇಶ ಬಿಟ್ಟು ಬರುವಂತೆ ಭಾರತದ ವಿದೇಶಾಂಗ ಇಲಾಖೆ ಎಚ್ಚರಿಕೆ ಕೊಟ್ಟಿತ್ತಾದರೂ ಕೆಲವರು ಮಾತ್ರ ಯುದ್ಧ ಶುರುವಾಗುವ ಮೊದಲೇ ಬಂದಿದ್ದರು. ಉಳಿದವರನ್ನು ವಾಪಸ್ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಭಾರತ ಸರ್ಕಾರ, ನೆರೆಯ ದೇಶಗಳಾದ ರೊಮೇನಿಯಾ, ಪೋಲೆಂಡ್, ಮಾಲೋವಾ, ಹಂಗೇರಿಗಳಿಗೆ ಸತತವಾಗಿ ಭಾರತದ ವಿಮಾನಗಳು ಹಾರಾಟ ನಡೆಸುತ್ತಿವೆ. ಜೊತೆಗೆ ಯುದ್ಧಸಂತ್ರಸ್ತರಿಗೆ ಇಲ್ಲಿಂದ ಪರಿಹಾರ ಸಾಮಗ್ರಿಗಳನ್ನೂ ಕೂಡ ಕಳುಹಿಸಲಾಗುತ್ತಿದೆ. ಇಷ್ಟರ ನಡುವೆಯೂ ಕರ್ನಾಟಕದ ನವೀನ್‌, ರಷ್ಯಾ ಬಾಂಬ್‌ ದಾಳಿಗೆ ಮೃತಪಟ್ಟ ದುರದೃಷ್ಟಕರ ಘಟನೆಯೂ ನಡೆಯಿತು.

Exit mobile version