Site icon Vistara News

Russia-Ukraine War: ಮಾರಿಯೋಪೋಲ್‌ ನಗರ ಕೈವಶವಾಗಿದೆ ಎಂದು ಘೋಷಿಸಿದ ಪುಟಿನ್‌

Vladimir Putin well and Fit Says Russia Government

ಬೆಂಗಳೂರು: ಕಳೆದ ಎರಡು ತಿಂಗಳಿಂದ ಉಕ್ರೇನ್‌ ಮೇಲೆ ನಡೆಸುತ್ತಿರುವ ಯುದ್ಧದಲ್ಲಿ(Russia- Ukraine War) ಮಹತ್ವದ ಮೈಲುಗಲ್ಲನ್ನು ಸಾಧಿಸಿರುವುದಾಗಿ ಹೇಳಿಕೊಂಡಿರುವ ರಷ್ಯಾ, ಮಾರಿಯೊಪೋಲ್‌(Mariupol) ನಗರವನ್ನು ಸಂಪೂರ್ಣ ಕೈವಶ ಮಾಡಿಕೊಂಡಿರುವುದಾಗಿ ಘೋಷಿಸಿದೆ. ದೂರದರ್ಶನದ ಮೂಲಕ ಗುರುವಾರ ಈ ಘೋಷಣೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಮಾಡಿದ್ದಾರೆ.

ಮಾರಿಯೊಪೋಲ್‌ ನಗರದ ಅಜೋವ್ಸ್‌ಟನ್‌ ಉಕ್ಕಿನ ಘಟಕವನ್ನು ಹೊರತುಪಡಿಸಿ ಸಂಪೂರ್ಣ ನಗರ ನಮ್ಮ ನಿಯಂತ್ರಣದಲ್ಲಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಜಿ ಶೋಯ್ಗು ಹೇಳಿದ ನಂತರ ಪುಟಿನ್‌ ಈ ಘೋಷಣೆ ಮಾಡಿದ್ದಾರೆ. ಉಕ್ಕಿನ ಘಟಕದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಉಕ್ರೇನ್‌ ಸೈನಿಕರು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ನಾವು ಮಾರಿಯೊಪೋಲ್‌ ನಗರವನ್ನು ಸಂಪೂರ್ಣ ಸ್ವತಂತ್ರಗೊಳಿಸಿದ್ದೇವೆ ಎಂದಿರುವ ಪುಟಿನ್‌, ನಗರದಿಂದ ಯಾರೂ ಹೊರಹೋಗದಂತೆ ಸಂಪೂರ್ಣ ತಡೆ ವಿಧಿಸಿ ಎಂದಿದ್ದಾರೆ. ಫೆಬ್ರವರಿಯಲ್ಲಿ ಯುದ್ಧ ಆದಾಗಿನಿಂದ ಅತ್ಯಂತ ಬಿರುಸಿನ ಕದನಕ್ಕೆ ಮಾರಿಯೊಪೋಲ್‌ ನಗರ ಸಾಕ್ಷಿಯಾಗಿತ್ತು. ಈಗಾಗಲೆ ಕೆಲವು ನಗರಗಳನ್ನು ರಷ್ಯಾ ವಶಕ್ಕೆ ಪಡೆದಿದೆಯಾದರೂ, ಇಲ್ಲಿಯವರೆಗೆ ತನ್ನ ವಶದಲ್ಲಿದೆ ಎಂದು ರಷ್ಯಾ ಘೋಷಿಸಿರುವ ಅತಿ ದೊಡ್ಡ ನಗರ ಮಾರಿಯೊಪೋಲ್‌.

ಪೂರ್ವ ಉಕ್ರೇನ್‌ನ ಡೊನೆಸ್ಕ್‌ ಹಾಗೂ ಲುಹಾನ್ಸ್‌ಕ್‌ ನಗರಗಳನ್ನು ಸ್ವತಂತ್ರ ಎಂದು ಫೆಬ್ರವರಿಯಲ್ಲಿ ಘೋಷಿಸಿದ ನಂತರ ಉಕ್ರೇನ್‌ ಮೇಲೆ ಯುದ್ಧವನ್ನು ರಷ್ಯಾ ಆರಂಭಿಸಿತ್ತು. ಯುದ್ಧ ಆರಂಭವಾದಾಗ ರಷ್ಯಾ ಬಲಿಷ್ಠ ರಾಷ್ಟ್ರವಾಗಿ, ಉಕ್ರೇನ್‌ ಸಣ್ಣ ಗುಬ್ಬಿಯಂತೆ ಭಾಸವಾಗುತ್ತಿತ್ತು. ಕೆಲವೇ ದಿನಗಳಲ್ಲಿ ಉಕ್ರೇನನ್ನು ರಷ್ಯಾ ವಶಪಡಿಸಿಕೊಳ್ಳುತ್ತದೆ ಎನ್ನಲಾಗುತ್ತಿತ್ತು. ಆರಂಭದ ದಿನಗಳಲ್ಲೆ ರಾಜಧಾನಿ ಕೀವ್‌ಗೆ ದಿಗ್ಬಂಧನ ವಿಧಿಸಿತ್ತು. ಆದರೆ ಉಕ್ರೇನ್‌ಗೆ ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ನೀಡಿದ ಬೆಂಬಲ ಮತ್ತು ಉಕ್ರೇನಿ ಸೈನಿಕರ ಹೋರಾಟದಿಂದಾಗಿ ಎರಡು ತಿಂಗಳಾದರೂ ರಷ್ಯಾಕ್ಕೆ ನಿರೀಕ್ಷಿತ ಜಯ ಸಿಕ್ಕಿಲ್ಲ. ಉಕ್ಕಿನ ಘಟಕ ಪ್ರದೇಶದಲ್ಲಿ ಸುಮಾರು 1,000 ನಾಗರಿಕರು ಹಾಗೂ ಗಾಯಗೊಂಡ 500 ಉಕ್ರೇನಿ ಸೈನಿಕರು ಸಿಲುಕಿದ್ದಾರೆ ಎನ್ನಲಾಗಿದೆ. ಇವರೆಲ್ಲರನ್ನೂ ಸುರಕ್ಷಿತವಾಗಿ ಸಾಗಣೆ ಮಾಡಲು ಮಾನವೀಯ ಮಾರ್ಗವನ್ನು ಒದಗಿಸಲು ರಷ್ಯಾವನ್ನು ಉಕ್ರೇನ್‌ ಗುರುವಾರ ಬೆಳಗ್ಗೆಯಷ್ಟೆ ಕೋರಿತ್ತು. ಆದರೆ ಈ ಉಕ್ಕಿನ ಘಟಕ ಪ್ರದೇಶದಿಂದ ಒಂದು ಹಕ್ಕಿಯೋ ಹೊರಹೋಗದಂತೆ ನಿರ್ಬಂಧಿಸಿ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಹೆಚ್ಚಿನ ಓದಿಗಾಗಿ | ಉಕ್ರೇನ್‌ ಮೇಲೆ ಅನುಕಂಪ, ರಷ್ಯಾ ಸ್ನೇಹಕ್ಕೆ ಧಕ್ಕೆಯಿಲ್ಲ: ಮೋದಿ-ಬೈಡೆನ್‌ ಸಭೆ Updates

ಇನ್ನೂ ಉಕ್ರೇನಿ ಸೈನಿಕರನ್ನು ಪ್ರದೇಶದಲ್ಲಿಟ್ಟುಕೊಂಡು ಸ್ವತಂತ್ರ ಎಂದು ಘೋಷಣೆ ಮಾಡಲಾಗಿದೆ. ಇದು ನಿಜವಾಗಿಯೂ ಸ್ವತಂತ್ರ ಅಲ್ಲದೇ ಇದ್ದರೂ, ದೀರ್ಘಕಾಲದ ಯುದ್ಧದಲ್ಲಿರುವ ರಷ್ಯಾಕ್ಕೆ, ತನ್ನ ಕಾರ್ಯಾಚರಣೆಯಲ್ಲಿ ಸಫಲತೆ ಕಾಣುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಮಾರಿಯುಪೋಲ್‌ ಸಂಪೂರ್ಣ ಸ್ವತಂತ್ರವಾಗಿದೆ ಎಂದು ಪುಟಿನ್‌ ಘೋಷಣೆ ಮಾಡಿದ್ದಾರೆ.

Exit mobile version