ನೋಡುಗರನ್ನು ತೆರೆಗೆ ಸದಾಕಾಲ ಅಂಟಿಕೊಂಡಿರುವಂತೆ ಮಾಡಿರುವ ಒಟಿಟಿ ವೇದಿಕೆಗಳಲ್ಲಿ ನೆಟ್ಪ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್ಗೆ ಅಗ್ರ ಸ್ಥಾನ. ಆದರೆ ಕಳೆದ ಮೂರು ತಿಂಗಳಲ್ಲಿ ಇದು ಜಗತ್ತಿನಾದ್ಯಂತ ಕಳೆದುಕೊಂಡಿರುವ ಚಂದಾದಾರರ ಸಂಖ್ಯೆ 2 ಲಕ್ಷ. ಭಾರತದಲ್ಲೂ ಇದು ಭದ್ರ ನೆಲೆಗಟ್ಟು ಕಂಡುಕೊಂಡಿಲ್ಲ. ಈ ಹಿನ್ನಡೆಗೆ ಕಾರಣವೇನು?
ಅಮೆರಿಕ ಮೂಲದ ಈ ಮೂರೂ ಕಂಪನಿಗಳು ಭಾರತದಲ್ಲಿ ತಮ್ಮದೇ ಆದ ಚಂದಾದಾರರ ತಳಹದಿ ಹೊಂದಿವೆ. 2016ರಲ್ಲಿ ನೆಟ್ಪ್ಲಿಕ್ಸ್ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿತು. ಒಂದು ಅಂದಾಜಿನ ಪ್ರಕಾರ ನೆಟ್ಪ್ಲಿಕ್ಸ್ಗೆ ಭಾರತದಲ್ಲಿರುವ ಚಂದಾದಾರರ ಸಂಖ್ಯೆ 55 ಲಕ್ಷ. ಇದಕ್ಕೆ ಹೋಲಿಸಿದರೆ ಅಮೆಜಾನ್ ಪ್ರೈಮ್ ಮತ್ತು ಹಾಟ್ಸ್ಟಾರ್ಗಳು ತುಂಬಾ ಮುಂದಿವೆ. ಪ್ರೈಮ್ಗೆ ಇಲ್ಲಿ 2.2 ಕೋಟಿ ಹಾಗೂ ಹಾಟ್ಸ್ಟಾರ್ಗೆ 4.6 ಕೋಟಿ ಚಂದಾದಾರರಿದ್ದಾರೆ. ಇವರೂ ನಾನಾ ಕಾರಣಗಳಿಂದಾಗಿ ನೆಟ್ಪ್ಲಿಕ್ಸ್ನಿಂದ ದೂರವಾಗುತ್ತಿದ್ದಾರೆ.
ಚಂದಾದಾರರ ಇಳಿಕೆ
ಸಂಸ್ಥೆಯೇ ಹೇಳಿಕೊಂಡಿರುವಂತೆ ಜಾಗತಿಕವಾಗಿ ಕಳೆದ ಮೂರು ತಿಂಗಳಲ್ಲಿ ಕಳೆದುಕೊಂಡಿರುವ ಚಂದಾದಾರರ ಸಂಖ್ಯೆ 2 ಲಕ್ಷ. ಈ ಅಂಶ ಬಹಿರಂಗವಾಗುತ್ತಿರುವಂತೆ ನೆಟ್ಪ್ಲಿಕ್ಸ್ನ ಷೇರುಗಳು 26% ಕುಸಿತ ಕಂಡವು. ಕಂಪನಿಯ ಸ್ಟಾಕ್ ಮಾರ್ಕೆಟ್ ಮೌಲ್ಯದಲ್ಲಿ 4000 ಕೋಟಿ ಡಾಲರ್ ಕುಸಿತವಾಯಿತು. ಸಂಸ್ಥೆ ಗುರುತಿಸಿರುವಂತೆ ಚಂದಾದಾರರ ಕುಸಿತಕ್ಕೆ ಕಾರಣಗಳು ಇವು:
- ಕೊರೊನಾ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದ ಕಾರಣ ಒಟಿಟಿ ವೀಕ್ಷಣೆ ಹೆಚ್ಚಿತ್ತು. ಆದರೆ ನಂತರ, ಅದೇ ಸನ್ನಿವೇಶ ಉಳಿಯಲಿಲ್ಲ. ಆ ಎರಡು ವರ್ಷಗಳ ಸನ್ನಿವೇಶ ನೋಡಿಕೊಂಡು ನೆಟ್ಪ್ಲಿಕ್ಸ್ ಹೂಡಿಕೆಗೆ ಮುಂದಾಗಿತ್ತು.
- ಆರ್ಥಿಕತೆಯಲ್ಲಿ ನಿರೀಕ್ಷಿತ ಚೇತರಿಕೆ ಆಗಲಿಲ್ಲ. ಹಣದುಬ್ಬರ ಹೆಚ್ಚುತ್ತಿದೆ, ಹೊಸ ಚಂದಾದಾರರು ನಿರೀಕ್ಷೆಯಂತೆ ಬರುತ್ತಿಲ್ಲ.
- ಉಕ್ರೇನ್ ಮೇಲೆ ರಷ್ಯಾ ದಾಳಿಯಂಥ ಬೆಳವಣಿಗೆಗಳು ಮನರಂಜನಾ ಮಾರುಕಟ್ಟೆಗೆ ಹೊಡೆತ ನೀಡಿವೆ.
- ಕೋವಿಡ್ನ ದಾಳಿಯ ಪರಿಣಾಮ ಇನ್ನೂ ಪೂರ್ತಿ ಮಾಯವಾಗಿಲ್ಲ.
- 22 ಕೋಟಿ ಚಂದಾದಾರರು ಇನ್ನೂ 10 ಕೋಟಿ ಮಂದಿಯ ಜೊತೆಗೆ ತಮ್ಮ ಚಂದಾದಾರಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಪಾಸ್ವರ್ಡ್ ಶೇರಿಂಗ್ ನಮಗೆ ಮಾರಕವಾಗಿ ಪರಿಣಮಿಸಿದೆ ಎಂದು ಕಂಪನಿ ಹೇಳಿದೆ.
- ಇತರ ಕಂಪನಿಗಳು ನೀಡುತ್ತಿರುವ ಪೈಪೋಟಿ.
ಭಾರತದಲ್ಲಿ ಯಾಕೆ ಕುಸಿತ?
- ಭಾರತದ ಮಾರುಕಟ್ಟೆಯನ್ನು ನಿರೀಕ್ಷೆಯಂತೆ ಆವರಿಸಿಕೊಳ್ಳಲು ನೆಟ್ಪ್ಲಿಕ್ಸ್ಗೆ ಸಾಧ್ಯವಾಗಿಲ್ಲ. ಮುಖ್ಯವಾಗಿ ಅದರ ಹೆಚ್ಚಿನ ಕಂಟೆಂಟ್ ಅಮೆರಿಕನ್ ಮೂಲದ್ದು. ಭಾರತೀಯರ ಮನರಂಜನೆಯ ನಿರೀಕ್ಷೆ ಬೇರೆ.
- ಪ್ರಾದೇಶಿಕ ಕಂಟೆಂಟ್ನ ವಿಚಾರದಲ್ಲಿ ಪ್ರಾದೇಶಿಕ ಒಟಿಟಿ ವೇದಿಕೆಗಳೇ ದೊಡ್ಡ ಪೈಪೋಟಿ ಕೊಡುತ್ತಿವೆ. ಉದಾಹರಣೆಗೆ, ಮಲಯಾಳಂ ಸಿನಿಮಾಗಳ ವಿಷಯದಲ್ಲಿ ಡಿಸ್ನಿ ಹಾಟ್ಸ್ಟಾರ್ ನೀಡುತ್ತಿರುವ ಕಂಟೆಂಟ್ ಅದ್ಭುತವಾಗಿದೆ. ಪ್ರೈಮ್ ಕೂಡ ಈ ವಿಚಾರದಲ್ಲಿ ಸಾಕಷ್ಟು ಮುಂದಿದೆ.
- 2018ರಲ್ಲಿ ಹಿಂದಿಯಲ್ಲಿ ಬಂದ ಟಾಪ್ 100 ಫಿಲಂಗಳಲ್ಲಿ ನೆಟ್ಫ್ಲಿಕ್ಸ್ ಖರೀದಿಸಿದ್ದು ಕೇವಲ 20. ಆದರೆ ಪ್ರೈಮ್ 40ನ್ನು ಖರೀದಿಸಿದೆ. ಪ್ರೈಮ್, ಹಾಟ್ಸ್ಟಾರ್ಗಳು ಈ ವಿಚಾರದಲ್ಲಿ ಗಾವುದ ಮುಂದಿವೆ.
- ಪ್ರಾದೇಶಿಕ ಒರಿಜಿನಲ್ಸ್ಗಳ ತಯಾರಿಯಲ್ಲೂ ಪ್ರೈಮ್ ಮುಂದಿದೆ. ಮನೋಜ್ ಬಾಜಪೇಯಿ ನಟನೆಯ ಫ್ಯಾಮಿಲಿ ಮ್ಯಾನ್ ಮುಂತಾದವನ್ನು ಉದಾಹರಿಸಬಹುದು. ನೆಟ್ಫ್ಲಿಕ್ಸ್ನಲ್ಲಿ ಇವು ಕಡಿಮೆ.
- ತೀರ ಇತ್ತೀಚಿನವರೆಗೂ ನೆಟ್ಫ್ಲಿಕ್ಸ್ ಚಂದಾದಾರಿಕೆ ದುಬಾರಿಯಾಗಿತ್ತು. ಇತ್ತೀಚೆಗೆ ಇದು ತನಗೆ ನಷ್ಟದಾಯಕ ಆಗುತ್ತಿರುವುದನ್ನು ಅರಿತು ನೆಟ್ಫ್ಲಿಕ್ಸ್ ದರಗಳನ್ನು ತುಸು ಇಳಿಸಿದೆ.
ಇದನ್ನೂ ಓದಿ: ಹೆಚ್ಚೆಚ್ಚು ಸ್ತ್ರೀಯರನ್ನು ಕೊಲ್ಲುತ್ತಿದೆ ಹಾರ್ಟ್ಫೇಲ್, ಈಗಲೇ ಎಚ್ಚೆತ್ತುಕೊಳ್ಳಿ