ಸುಮ್ನೇ ಒಂದು ಲೆಕ್ಕಾಚಾರ ನೋಡಿ: 2021ರಲ್ಲಿ ಭಾರತೀಯರು ಕೊಂಡುಕೊಂಡ ಎಸ್ಯುವಿಗಳ ಸಂಖ್ಯೆ 10 ಲಕ್ಷ. ಕಳೆದ 16 ವರ್ಷಗಳಲ್ಲಿ ಇಲ್ಲಿ ಸೇಲ್ ಆದ ಎಸ್ಯುವಿಗಳ ಸಂಖ್ಯೆ 93 ಲಕ್ಷ! ಒಟ್ಟಾರೆ ಜಾಗತಿಕವಾಗಿ ಮಾರಾಟವಾಗುವ ಎಸ್ಯುವಿ ಪ್ರಮಾಣದಲ್ಲಿ ಮೂರನೇ ಒಂದು ಭಾಗ ಭಾರತದ್ದು.
ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಪ್ರಕಾರ, ಇಲ್ಲಿ ಸೇಲಾಗುವ ಪ್ರತಿ ನಾಲ್ಕು ವಾಹನಗಳಲ್ಲಿ ಒಂದು ಎಸ್ಯುವಿ. ಪ್ರಯಾಣಿಕ ಕಾರುಗಳ ಮಾರಾಟದಲ್ಲಿ 25%. ಪ್ರತಿವರ್ಷ ಇದು ಹೆಚ್ಚುತ್ತ ಹೋಗುತ್ತಿದೆ. ಪ್ರತಿಯೊಂದು ಆಟೋಮೊಬೈಲ್ ಕಂಪನಿಯೂ ಎಸ್ಯುವಿ ತಯಾರಿಸುವತ್ತ ಗಮನ ಹರಿಸಿವೆ. ಇದಕ್ಕೆ ಕಾರಣಗಳೇನು?
- ಭಾರತದಲ್ಲಿ ಉತ್ತಮವಾದ ರಸ್ತೆಗಳಿಲ್ಲ. ಕೆಲವೆಡೆ ರಸ್ತೆಗಳೇ ಇಲ್ಲ. ಗುಂಡಿಗಳೇ ಹೆಚ್ಚು. ಇಂಥ ಕಡೆ ಸೆಡಾನ್ ಅಥವಾ ಹ್ಯಾಚ್ಬ್ಯಾಕ್ಗಳಲ್ಲಿ ಪ್ರಯಾಣಿಸಿದರೆ ಅದರ ಸಸ್ಪೆನ್ಷನ್ ಮುರಿದುಹೋಗುತ್ತದೆ. ಪ್ರಯಾಣಿಸಿದವರ ಬೆನ್ನೂ ಮುರಿಯಬಹುದು. ಗಟ್ಟಿಯಾದ ಸಸ್ಪೆನ್ಷನ್ ಹೊಂದಿರುವ ಎಸ್ಯುವಿಗಳು ಮಾಲಿಕರಿಗೆ ನಿಶ್ಚಿಂತೆ.
- ಎಸ್ಯುವಿಗಳ ಪ್ರಮುಖ ಪ್ರಯೋಜನಗಳಲ್ಲಿ ಒಂದು ಅದರ ಗ್ರೌಂಡ್ ಕ್ಲಿಯರೆನ್ಸ್. ನಮ್ಮ ರಸ್ತೆಗಳಲ್ಲಿರುವ ಒಂದೊಂದು ಹಂಪ್ಗಳನ್ನೂ ಒಂದೊಂದು ಬೆಟ್ಟಕ್ಕೆ ಹೋಲಿಸಬಹುದು. ಗ್ರೌಂಡ್ ಕ್ಲಿಯರೆನ್ಸೇ ಇಲ್ಲದ ಬುಗಾಟಿ ವೇರಾನ್ನಂಥ ಕಾರುಗಳ ಚೇಸಿಸ್ ಇಂಥ ಹಂಪ್ ಹತ್ತಿಳಿಯುವಷ್ಟರಲ್ಲಿ ತರಚಿಹೋಗುತ್ತವೆ.
- ಭಾರತದ ಹೆಚ್ಚಿನ ಫ್ಯಾಮಿಲಿಗಳು ಇನ್ನೂ ಅವಿಭಕ್ತ. ಒಬ್ಬೊಬ್ಬರೇ ಪ್ರಯಾಣಿಸುವುದು ಕಡಿಮೆ. ಮಕ್ಕಳು, ವೃದ್ಧ ತಂದೆ ತಾಯಿ ಸಹಿತ ಪ್ರಯಾಣ. ಐದು ಅಥವಾ ಏಳು ಮಂದಿ ಕೂರಬಲ್ಲ ಎಸ್ಯುವಿಗಳು ಭಾರತೀಯ ಮೇಲ್ಮಧ್ಯಮ ವರ್ಗಕ್ಕೆ ಹೇಳಿ ಮಾಡಿಸಿವೆ. ಸಾಕಷ್ಟು ಲಗ್ಗೇಜ್ ಕೂಡ ಇದರಲ್ಲಿ ಹಿಡಿಯುತ್ತದೆ. ಗೆಳಯರ ಬಳಗ ಜೊತೆಯಾಗಿ ಹೋಗೋಕೆ ಕೂಡ ಎಸ್ಯುವಿಯೇ ಬೇಕು.
- ಸೆಡಾನ್ಗಳು ಅಥವಾ ಸಣ್ಣ ಕಾರ್ಗಳಲ್ಲಿ ದೂರದ ಡ್ರೈವ್ ಹೋಗುವುದು ಸುಸ್ತುಗೊಳಿಸುತ್ತದೆ. ಎಸ್ಯುವಿಗಳಲ್ಲಿ ಲಾಂಗ್ ಡ್ರೈವ್ಗಳು ಆರಾಮದಾಯಕವಾಗಿರುತ್ತವೆ.
- ಎಸ್ಯುವಿಗಳಲ್ಲಿ ಡೀಸೆಲ್ ರನ್ ಹಾಗೇ ಪೆಟ್ರೋಲ್ ರನ್ ಕೂಡ ಇವೆ. ಭಾರತದಲ್ಲಿ ಡೀಸೆಲ್ ರನ್ ಹೆಚ್ಚು. ಯಾಕೆಂದರೆ ಪೆಟ್ರೋಲ್ಗಿಂತ ಡೀಸೆಲ್ ಅಗ್ಗ. ಡೀಸೆಲ್ ಎಂಜಿನ್ ಎಸ್ಯುವಿಗಳು ಪೆಟ್ರೋಲ್ ಎಂಜಿನ್ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ.
- ಭಾರತದಲ್ಲಿ ಟ್ರಾಫಿಕ್ ಪ್ರಜ್ಞೆ ಕಡಿಮೆ. ಸಣ್ಣ ಕಾರುಗಳು ಅಪಾಯಕ್ಕೆ ತುತ್ತಾಗುತ್ತವೆ ಎಂಬ ಭಾವನೆ ಹೆಚ್ಚಿನವರಲ್ಲಿ ಇದೆ. ಎಸ್ಯುವಿಯ ಎತ್ತರದ ಚಾಲಕ ಸೀಟ್ನಿಂದ ರಸ್ತೆಯ ನೋಟ ಚೆನ್ನಾಗಿ ಸಿಗುತ್ತದೆ.
- ಏರ್ ಬ್ಯಾಗ್ನಂಥ ಭದ್ರತಾ ಸಾಧನಗಳನ್ನು ಅಳವಡಿಸಿದಾಗ ಗಾಡಿ ಹೆವೀ ಅನಿಸುವುದಿಲ್ಲ. ಇವುಗಳ ಬಿಲ್ಟ್ ಸಣ್ಣ ಕಾರುಗಳಿಗಿಂತ ಗಟ್ಟಿಯಾಗಿದ್ದು, ನಾಲ್ಕಾರು ಪಲ್ಟಿಯಾದರೂ ಅಪ್ಪಚ್ಚಿ ಆಗುವುದಿಲ್ಲ.
- ಹಿಮಾಚಲ ಪ್ರದೇಶ, ಉತ್ತರಾಂಚಲ, ಈಶಾನ್ಯ ರಾಜ್ಯಗಳು ಮುಂತಾದ ಕಡೆಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ನಿರಂತರವಾಗಿ ಆಫ್ ರೋಡ್ ಡ್ರೈವ್ ಹೋಗುವವರು ಎಸ್ಯುವಿಗಳನ್ನು ಇಷ್ಟಪಡುತ್ತಾರೆ.
- ಎಸ್ಯುವಿಗಳು ಪ್ರೇಸ್ಟೀಜ್ ಸಿಂಬಲ್ ಎಂಬ ಭಾವನೆಯೂ ಭಾರತದ ಮೇಲ್ಮಧ್ಯಮ, ಮಧ್ಯಮ ವರ್ಗದವರಲ್ಲಿ ಇದೆ. ಇದೀಗ ಆರು ಲಕ್ಷ ರೂಪಾಯಿಗಳಿಂದ ಆರಂಭಿಸಿ ಎಸ್ಯುವಿಗಳು ಸಿಗುತ್ತವೆ. ತಾವೂ ಶ್ರೀಮಂತ ಎನಿಸಿಕೊಳ್ಳುವ ಹಪಹಪಿಯಲ್ಲಿರುವ ಮಧ್ಯಮ ವರ್ಗದವರು ಇವುಗಳಿಗೆ ಮೊರೆ ಹೋಗುತ್ತಾರೆ.
ಇದನ್ನೂ ಓದಿ: Explainer: EVಗಳೇಕೆ ಹೊತ್ತಿ ಉರಿಯುತ್ತಿವೆ?