Site icon Vistara News

Explainer: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಕೊಳ್ಳೋದು ಅಂತಿಮ, ಮುಂದೇನಾಗುತ್ತೆ?

musk

ಮುಂದಿನ ಪ್ರಕ್ರಿಯೆ ಏನು?

ಹತ್ತು ದಿನಗಳ ಹಿಂದೆ ಮಸ್ಕ್‌ ಈ ಆಫರ್‌ ಅನ್ನು ಮುಂದಿಟ್ಟಾಗ, ಟ್ವಿಟ್ಟರ್‌ ಆಡಳಿತ ಮಂಡಳಿ “ಪಾಯಿಸನ್‌ ಪಿಲ್‌ʼ ತೆಗೆದುಕೊಂಡಿತ್ತು- ಹಾಗೆಂದರೆ ಖರೀದಿ ತಡೆ ಉಪಕ್ರಮ. ಆದರೆ ಹತ್ತೇ ದಿನಗಳಲ್ಲಿ ಆಡಳಿತ ಮಂಡಳಿಯ ಸದಸ್ಯರ ಅಭಿಮತಗಳು ಬದಲಾಗಿವೆ. ಮಸ್ಕ್‌ ನೀಡುತ್ತಿರುವ ಹಣ ಟ್ವಿಟ್ಟರ್‌ನ ಷೇರುಗಳಿಗೆ ನ್ಯಾಯ ಸಲ್ಲಿಸುವುದಿಲ್ಲ ಎಂದು ಸದಸ್ಯರು ಹೇಳಿದ್ದರು. ಆದರೆ ಮಸ್ಕ್‌, ಈಗಿನ ಮಂಡಳಿಯಲ್ಲಿ ಇದಕ್ಕಿಂತ ಹೆಚ್ಚು ಬೆಲೆ ನಿರೀಕ್ಷಿಸುವುದು ಸಾಧ್ಯವಿಲ್ಲ, ನನ್ನಿಂದ ಸಂಸ್ಥೆ ಮತ್ತಷ್ಟು ಮೌಲ್ಯವನ್ನು ಪಡೆಯಲಿದೆ ಎಂದಿದ್ದರು.

ಆಡಳಿತ ಬದಲಾವಣೆ

ಟ್ವಿಟ್ಟರ್‌ ಆಡಳಿತ ಮಂಡಳಿಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ಮಸ್ಕ್‌ ಅವರು ʼʼಟ್ವಿಟ್ಟರ್‌ನ ಆಡಳಿತ ಸಮರ್ಪಕವಾಗಿಲ್ಲʼʼ ಎಂದು ಹೇಳಿದ್ದಾರೆ. ಒಮ್ಮೆ ಮಸ್ಕ್‌ ಕಂಪನಿಯ ಪೂರ್ಣ ಹೊಣೆ ಹೊತ್ತುಕೊಂಡ ಬಳಿಕ, ಆಡಳಿತ ಮಂಡಳಿಯಲ್ಲಿ ಪೂರ್ತಿ ಬದಲಾವಣೆ ಮಾಡಲಿರುವುದು ಖಚಿತ. ಟೆಸ್ಲಾ ಮುಂತಾದ ಕಂಪನಿಗಳನ್ನು ಲಾಭಕರವಾಗಿ ಮುನ್ನಡೆಸುತ್ತಿರುವ ಮಸ್ಕ್‌ ನೇತೃತ್ವದಲ್ಲಿ ಟ್ವಿಟ್ಟರ್‌ಗೆ ಹೊಸ ಉದ್ಯಮ ಸ್ವರೂಪ ದೊರೆಯುವುದಂತೂ ಖಚಿತ.

ಸಿಇಒ ಪರಾಗ್‌ ಅಗರ್‌ವಾಲ್‌ ಕತೆಯೇನು?

ಟ್ವಿಟ್ಟರ್‌ ಕಂಪನಿಯನ್ನು ಎಲಾನ್‌ ಮಸ್ಕ್‌ ಖರೀದಿಸಿದರೆ ಆಗ ಅವರೇ ಕಂಪನಿಯ ಸಿಇಒ ಆಗಿಬಿಡುತ್ತಾರೆ. ಈಗಿನ ಸಿಇಒ, ಭಾರತೀಯ ಮೂಲದ ಪರಾಗ್‌ ಅಗರ್‌ವಾಲ್‌ ಅವರು ಹೊರಬೀಳುವುದು ಅನಿವಾರ್ಯವಾಗುತ್ತದೆ. ಟೆಕ್‌ ಅಧ್ಯಯನ ಸಂಸ್ಥೆ ಇಕ್ವಿಲರ್‌ ಪ್ರಕಾರ, ಮಸ್ಕ್‌ ಆಗಮನದ ನಂತರ 12 ತಿಂಗಳ ಒಳಗೆ ಅಗರ್‌ವಾಲ್‌ ಅವರನ್ನು ಹೊರಹಾಕಿದರೆ, ಅವರಿಗೆ 42 ದಶಲಕ್ಷ ಡಾಲರ್‌ (₹321 ಕೋಟಿ) ಗಳನ್ನು ನೀಡಬೇಕಾಗುತ್ತದೆ. ಟ್ವಿಟ್ಟರ್‌ನಲ್ಲಿ ಮುಖ್ಯ ತಂತ್ರಜ್ಞರಾಗಿದ್ದ ಅಗರ್‌ವಾಲ್‌ ಅವರು ಕಳೆದ ನವೆಂಬರ್‌ನಲ್ಲಿ ಕಂಪನಿಯ ಸಿಇಒ ಆಗಿದ್ದರು. 2021ರಲ್ಲಿ ಅವರ ಸಂಬಳ, ಭತ್ಯೆ ಸೇರಿ ಅವರು 30.4 ದಶಲಕ್ಷ ಡಾಲರ್‌ (₹ 232 ಕೋಟಿ) ಪಡೆದಿದ್ದರು.

ಟೀಕಾಕಾರರೂ ಇರಲಿ

ಸದ್ಯ ಸಾರ್ವಜನಿಕ ಕಂಪನಿಯಾಗಿರುವ ಟ್ವಿಟ್ಟರ್‌, ಮಸ್ಕ್‌ ಖರೀದಿಯಿಂದ ಅವರ ಖಾಸಗಿ ಕಂಪನಿಯಾಗಲಿದೆ. ಮಸ್ಕ್‌ ಅವರ ಟೀಕಾಕಾರರ ಕತೆಯೇನಾಗುತ್ತದೆ ಎಂದು ತಿಳಿಯದು. ವಾಸ್ತವವಾಗಿ, ಮಸ್ಕ್‌ ಟ್ವಿಟ್ಟರ್‌ ಖರೀದಿಸುತ್ತಾರೆ ಎಂದು ತಿಳಿದ ಕೂಡಲೇ ಸೋಶಿಯಲ್‌ ಮೀಡಿಯಾ ಪೂರ್ತಿ ಟ್ರೋಲ್‌ನಿಂದ ತುಂಬಿಹೋಗಿದೆ. ಟ್ವಿಟ್ಟರ್‌ನಲ್ಲೇ CEO of Twitter ಎಂಬುದು ಟ್ರೆಂಡಿಂಗ್‌ ಆಗಿದೆ. ಹೆಚ್ಚಿನವರು ಎಲಾನ್‌ ಮಸ್ಕ್‌ ಅನ್ನು ದಾರುಣವಾಗಿ ಟ್ರೋಲ್‌ ಮಾಡುತ್ತಿದ್ದಾರೆ! ಸ್ವತಃ ಎಲಾನ್‌ ಮಸ್ಕ್‌ ಕೂಡ ʼʼನನ್ನ ಅತ್ಯಂತ ಕಟು ಟೀಕಾಕಾರರು ಕೂಡ ಟ್ವಿಟ್ಟರ್‌ನಲ್ಲಿ ಉಳಿಯಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ಮುಕ್ತ ಅಭಿವ್ಯಕ್ತಿ ಎಂದರೆ ಅದೇ ಆಗಿದೆʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಟ್ವಿಟ್ಟರ್‌ ನಷ್ಟದಲ್ಲಿದೆಯೇ?

ಟ್ವಿಟ್ಟರ್‌ ತುಂಬಾ ಲಾಭದಲ್ಲಂತೂ ಇಲ್ಲ. 2006ರಲ್ಲಿ ಜ್ಯಾಕ್‌ ಡೋರ್ಸೀ, ನೋವಾ ಗ್ರಾಸ್‌, ಬಿಝ್‌ ಸ್ಟೋನ್‌, ಇವಾನ್‌ ವಿಲಿಯಂಸ್‌ ಮುಂತಾದವರು ಇದನ್ನು ಸ್ಥಾಪಿಸಿದರು. 2012ರಲ್ಲಿ ಇದರ ಬಳಕೆದಾರರ ಸಂಖ್ಯೆ 10 ಕೋಟಿಗೆ ಏರಿತು. 2013ರಲ್ಲಿ ಇದು ಸಾರ್ವಜನಿಕ ಕಂಪನಿಯಾಯಿತು. ಈಗ ಇದರ ಬಳಕೆದಾರರ ಸಂಖ್ಯೆ 20.6 ಕೋಟಿ. ಈಗ ಟ್ವಿಟ್ಟರ್‌ನ ಷೇರಿನ ಬೆಲೆ 51.7 ಡಾಲರ್‌ (₹ 3963) ಇದೆ. ಒಂದು ಹಂತದಲ್ಲಿ ಷೇರಿನ ಬೆಲೆ 74 ಡಾಲರ್‌ವರೆಗೂ ಹೋಗಿತ್ತು. ಜನರನ್ನು ಆಕರ್ಷಿಸುವ ಹಾಗೂ ಪ್ರಭಾವದ ದೃಷ್ಟಿಯಿಂದ ಟ್ವಟ್ಟರ್‌ಗೆ ಬಲುದೊಡ್ಡ ಸ್ಥಾನವಿದೆ; ಆದರೆ ಇದೇ ಕ್ಷೇತ್ರದ ಇನ್ನೆರಡು ಪ್ರಭಾವಿ ಕಂಪನಿಗಳಾದ ಗೂಗಲ್‌, ಮೈಕ್ರೋಸಾಫ್ಟ್‌ಗಳಿಗೆ ಹೋಲಿಸಿದರೆ ಟ್ವಿಟ್ಟರ್‌ ಆದಾಯ ಬಲು ಕಡಿಮೆ. ಜಾಹೀರಾತು ಆದಾಯವಿಲ್ಲ. ಹೀಗಾಗಿ ಕಂಪನಿಯ ನಿರೀಕ್ಷಿತ ಬೆಳವಣಿಗೆಯಾಗಿಲ್ಲ.

ಮಸ್ಕ್‌ ಉದ್ದೇಶವೇನು?

ನಿಜಕ್ಕೂ ಟ್ವಿಟ್ಟರ್‌ ಅನ್ನು ಖರೀದಿಸುವಲ್ಲಿ ಎಲಾನ್‌ ಮಸ್ಕ್‌ ಅವರ ಒಳ ಉದ್ದೇಶವೇನಿದೆ ಎಂಬುದು ಮಸ್ಕ್‌ ಹೊರತುಪಡಿಸಿ ಇನ್ಯಾರಿಗೂ ತಿಳಿಯದು. ಹಾಗೆ ಯಾರೂ ಮಸ್ಕ್‌ನ ಮನದಲ್ಲೇನಿದೆ ಎಂಬುದನ್ನು ಊಹಿಸಲೂ ಆಗದು. ಪ್ರಸ್ತುತ ಷೇರಿನ ಬೆಲೆಗಳಿಗಿಂತಲೂ ಹೆಚ್ಚು ಬೆಲೆಯನ್ನು ಮಸ್ಕ್‌ ಕೋಟ್‌ ಮಾಡಿದ್ದಾರೆ. ಟ್ವಿಟ್ಟರ್‌ ಸಂಸ್ಥೆಯನ್ನು ನಾಶ ಮಾಡುವ ಉದ್ದೇಶವಂತೂ ಮಸ್ಕ್‌ಗೆ ಇಲ್ಲ. ತನ್ನ ವರ್ಚಸ್ಸಿನ ವೃದ್ಧಿಗಾಗಿ ಟ್ವಿಟ್ಟರ್‌ ಅನ್ನು ಮಸ್ಕ್‌ ಬಳಸಿಕೊಳ್ಳಲಿರುವುದಂತೂ ಖಚಿತ. ಫೇಸ್‌ಬುಕ್‌ನ ಝುಕರ್‌ಬರ್ಗ್‌ ಇಂದು ಮಾಧ್ಯಮ ಲೋಕದಲ್ಲಿ ಪಡೆದಿರುವ ಸ್ಥಾನವನ್ನೇ ಮಸ್ಕ್‌ ಕೂಡ ಹೊಂದಲು ಬಯಸಿರುವುದು ಸ್ಪಷ್ಟವಾಗಿದೆ. ಇದು ಒಬ್ಬ ವ್ಯಕ್ತಿಯ ಕೈಯಲ್ಲಿ ಅಪಾರ ಅಧಿಕಾರವನ್ನು ಕ್ರೋಡೀಕರಿಸುವುದರಿಂದ, ಇದನ್ನು ತಡೆಯಬೇಕು ಎಂದು ಹೇಳುವವರೂ ಇದ್ದಾರೆ.

ಇದನ್ನೂ ಓದಿ: Explainer: EVಗಳೇಕೆ ಹೊತ್ತಿ ಉರಿಯುತ್ತಿವೆ?

ಟ್ರೋಲ್‌ಗಳು

ತಮಾಷೆ ಸಂಗತಿ ಎಂದರೆ, ಮಸ್ಕ್‌ ಡೀಲ್‌ಗೆ ಟ್ವಿಟ್ಟರ್‌ ಒಪ್ಪಿಕೊಂಡಿರುವುದಕ್ಕೆ ಸ್ವತಃ ಟ್ವಿಟ್ಟರ್‌ನಲ್ಲೇ ನಡೆಯುತ್ತಿರುವ ಟ್ರೋಲ್‌ಗಳು.
ʼʼಫ್ರೀ ಸ್ಪೀಚ್‌ ಹಾಗಿರಲಿ ಮಸ್ಕ್‌, ಟ್ವಿಟ್ಟರ್‌ನಲ್ಲಿ ಹೇಟ್‌ ಸ್ಪೀಚ್‌ ಇಲ್ಲದಂತೆ ನೋಡಿಕೊಳ್ಳಿʼʼ ಎಂದು ಒಬ್ಬರು ಹೇಳಿದ್ದರೆ, ʼʼನೀನು ಟ್ವಿಟ್ಟರ್‌ ಖರೀದಿಸಿದ ಬಳಿಕ ನಾನು ಅದರ ಬಳಕೆಗೆ ಹಣ ಕೊಡುತ್ತೇನೆʼʼ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ʼʼಟೀಕೆ ಒಂದು ಸಂಗತಿ. ಆದ್ರೆ ಬೆದರಿಕೆ, ಹಿಂಸೆಯ ಸೂಚನೆ, ಅಪಪ್ರಚಾರ ಇದೆಲ್ಲವೂ ಇಲ್ಲಿದೆ. ಇವನ್ನು ಹೇಗೆ ನಿರ್ವಹಣೆ ಮಾಡ್ತೀರಿ?ʼʼ ಎಂಬುದು ಇನ್ನೊಂದು ಟ್ವೀಟ್.‌ ʼʼವಿಶ್ವದ ಹಸಿವನ್ನು ಹಿಂಗಿಸಲು ಬಿಲಿಯನ್‌ಗಟ್ಟಲೆ ಖರ್ಚು ಮಾಡುವ ನಿಮ್ಮ ಯೋಚನೆ ಏನಾಯ್ತು?ʼʼ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

Exit mobile version