ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ಎಲೆಕ್ಟ್ರಿಕ್ ವಿಭಾಗದಲ್ಲಿ ʼಟಾಟಾ ನೆಕ್ಸಾನ್ ಇ.ವಿ. ಮ್ಯಾಕ್ಸ್ʼ ಹೆಸರಿನ ನೂತನ ಕಾರನ್ನು ಲಾಂಚ್ ಮಾಡಿದೆ. ಈ ಮೂಲಕ ಹೊಸ ಶೈಲಿಯ ಮತ್ತು ಅತ್ಯಾಧುನಿಕ ಕಾರು ಉತ್ಪಾದನೆಯಲ್ಲಿ ಟಾಟಾ ಮೋಟರ್ಸ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಈ ಹೊಸ ಕಾರು ಬುಧವಾರ ಮಾರುಕಟ್ಟೆಗೆ ಕಾಲಿಟ್ಟಿದೆ. ಎರಡು ಮಾದರಿಯ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಬಿಡುಗಡೆ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ. ಬೇಸಿಕ್ ಮಾಡೆಲ್ ಕಾರಿನ ದರ ₹ 17.74 ಲಕ್ಷದಿಂದ ಆರಂಭಗೊಳ್ಳಲಿದೆ.
ದೇಸೀ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರಿನ ಕುರಿತು ವಾಹನ ಪ್ರಿಯರಿಗೆ ಅಪಾರ ನಿರೀಕ್ಷೆ ಇದೆ. ಈ ಹಿಂದೆ ಅವಿನ್ಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಟಾಟಾ ಮೋಟಾರ್ಸ್ ಘೋಷಣೆ ಮಾಡಿತ್ತು. ಈಗಾಗಲೇ ಲಾಂಚ್ ಆಗಿರುವ ಟಾಟಾ ನೆಕ್ಸಾನ್ ಇ.ವಿ. ಕಾರಿನ ಮುಂದಿನ ಆವೃತ್ತಿ ನೆಕ್ಸಾನ್ ಇ.ವಿ ಮ್ಯಾಕ್ಸ್ ಎಂದು ಹೇಳಲಾಗಿದೆ.
ನೆಕ್ಸಾನ್ ಇ.ವಿ. ಮ್ಯಾಕ್ಸ್ | ಚಾರ್ಜಿಂಗ್ ಆಪ್ಷನ್ | ಎಕ್ಸ್-ಶೋರೂಂ ದರ |
XZ+ | 3.3kWh | ₹17,74,000 |
XZ+ | 7.2kWh AC fast charger | ₹18,24,000 |
XZ+ LUX | 3.3kWh | ₹18,74,000 |
XZ+ LUX | 7.2kWh AC fast charger | ₹19,24,000 |
ಏನು ಈ ವಾಹನದ ವಿಶೇಷತೆ?
Battery: ಈ ವಾಹನದ ಬ್ಯಾಟರಿ ಸಾಮರ್ಥ್ಯವನ್ನು ಈ ಹಿಂದೆ ಚಲಾವಣೆಯಲ್ಲಿದ್ದ ನೆಕ್ಸಾನ್ ಇ.ವಿ ಕಾರಿಗಿಂತ 30% ಅಧಿಕಗೊಳಿಸಲಾಗಿದೆ. ಆದರೆ, ಬ್ಯಾಟರಿಯ ಗಾತ್ರ ಹೆಚ್ಚಿರಬಹುದು. ಇದರಿಂದ ವಾಹನದ ಬೂಟ್ ಕೆಪ್ಯಾಸಿಟಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ ಇದ್ದ 350 ಲೀಟರ್ ಟ್ಯಾಂಕ್ ಈ ವಾಹನದಲ್ಲೂ ಇದೆ.
ಬ್ಯಾಟರಿ ಚಾರ್ಜ್ ಮಾಡಲು 3.3 kWhನ ಸ್ಟಾಂಡರ್ಡ್ ಚಾರ್ಜಿಂಗ್ ಯುನಿಟ್ ದೊರಕಲಿದೆ. ಇನ್ನೂ ಹೆಚ್ಚಿನ ಯುನಿಟ್ ಬೇಕಾದವರು ಅಧಿಕ ಮೊತ್ತ ನೀಡಿ 7.2 kWhನ ಯುನಿಟ್ ಖರೀದಿಸಬಹುದು. ಸುಮಾರು 6 ಗಂಟೆಗಳಲ್ಲಿ ಕಾರ್‌ನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಬಹುದು.
ಯಾವ ವೇಗದಲ್ಲಿ ಕಾರು ಚಲಾಯಿಸಬಹುದು?
ಸಾಮಾನ್ಯವಾಗಿ ವಿದ್ಯುತ್ ಚಾಲಿತ ಕಾರುಗಳ ಪವರ್ ಇಂಧನವು ಸಾಮನ್ಯ ಕಾರುಗಳಿಗಿಂತ ಕಡಿಮೆಯಿರುತ್ತದೆ. ಈ ಕಾರಣದಿಂದ ಜನರ ಗಮನ ಸೆಳೆಯುವಲ್ಲಿ ಎಲೆಕ್ಟ್ರಿಕ್ ಗಾಡಿಗಳು ವಿಫಲವಾಗುತ್ತವೆ. ಈ ಕಾರಿನ ಪವರ್, ಟಾರ್ಕ್ ಹಾಗೂ ಟಾಪ್ ಸ್ಪೀಡ್ ಆಕರ್ಷಮಯವಾಗಿದೆ.
ಪವರ್: 143hp
ಟಾರ್ಕ್: 250nm
ಟಾಪ್ ಸ್ಪೀಡ್: 140kmph
ಗಾಡಿಯನ್ನು ನಿಲ್ಲಿಸಲು ಈ ಪವರ್‌ಗೆ ತಕ್ಕಂತೆ ಅತ್ಯುತ್ತಮ ಬ್ರೇಕಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ.
ಕಾರಿನ ರೇಂಜ್ ಏನು?
ಕಾರನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಎಷ್ಟು ದೂರ ಸಾಗಬಹುದು ಎಂಬುದು ರೇಂಜ್. ನೆಕ್ಸಾನ್ ಇ.ವಿ. ಮ್ಯಾಕ್ಸ್ ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಐಡಿಯಲ್ ವಾತಾವರಣದಲ್ಲಿ ಸುಮಾರು 400 ಕಿ.ಮೀ ಸಾಗಬಹುದು. ಹಾಗೂ ವಾಸ್ತವಿಕ ಸನ್ನಿವೇಶದಲ್ಲಿ ಸುಮಾರು 300 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ.
ಉಳಿದ ಫೀಚರ್ ಏನೇನು?
ಸುಖವಾಗಿ ಕೂರಲು ಅನುಕೂಲವಾಗುವಂತಹ ವೆಂಟಿಲೇಟೆಡ್ ಲೆದರ್ ಸೀಟುಗಳು, ಏರ್ ಪ್ಯೂರಿಫೈಯರ್, ಹರ್ಮನ್ ಡಿಸ್ಪ್‌ಲೇ ಹಾಗೂ ಸೌಂಡ್ ಸಿಸ್ಟಮ್, ಫೋನ್ ಚಾರ್ಜ್ ಮಾಡಲು ವೈಯರ್‌ಲೆಸ್ ವ್ಯವಸ್ಥೆ ಇತರ ಕೆಲವು ಆಕರ್ಷಕ ಫೀಚರ್‌ಗಳು.