Site icon Vistara News

Elon Musk: ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ‌ ಆರಂಭಿಸಲು ಸ್ಥಳ ಗುರುತು ಎಂದ ಉದ್ಯಮಿ ಎಲಾನ್ ಮಸ್ಕ್

Tesla is ready to start a factory in India, but it has one condition

ಸ್ಯಾನ್‌ ಫ್ರಾನ್ಸಿಸ್ಕೋ, ಅಮೆರಿಕ: ಭಾರತದಲ್ಲಿ ಟೆಸ್ಲಾ (Tesla) ತನ್ನ ಘಟಕವನ್ನು ಆರಂಭಿಸಲಿದೆ ಎಂದು ಕೆಲವು ದಿನಗಳಿಂದ ವರದಿಯಾಗುತ್ತಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಘಟಕವನ್ನು ಆರಂಭಿಸುವ ಸ್ಥಳವನ್ನು ಗುರುತಿಸಲಾಗುವುದು ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO) ಎಲಾನ್ ಮಸ್ಕ್ (Elon Musk) ಅವರು ಹೇಳಿದ್ದಾರೆ.

ವಾಲ್‌ಸ್ಟ್ರೀಟ್ ಜರ್ನಲ್‌ನ ಥೋರಾಲ್ಡ್ ಬಾರ್ಕರ್ ಅವರು ಕಾರ್ಯಕ್ರಮವೊಂದರಲ್ಲಿ, ಟೆಸ್ಲಾ ಫ್ಯಾಕ್ಟರಿ ಆರಂಭಕ್ಕೆ ಭಾರತವು ಆಸಕ್ತಿ ಹೊಂದಿದೆಯೇ ಎಂದು ಎಲಾನ್ ಮಸ್ಕ್ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಅವರು, ಸಂಪೂರ್ಣವಾಗಿ ಎಂದು ಉತ್ತರಿಸಿದ್ದಾರೆ.

ಭಾರತದಲ್ಲಿ ಟೆಸ್ಲಾ ತನ್ನ ಫ್ಯಾಕ್ಟರಿಯನ್ನು ಆರಂಭಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದು ಭಾರತದ ತಂತ್ರಜ್ಞಾನ ಸಹಾಯಕ ಸಚಿವರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕಳೆದ ವಾರ ರಾಯ್ಟರ್ಸ್ ವರದಿ ಮಾಡಿತ್ತು.
ವಿಶ್ವದ ಅತ್ಯಂತ ಬೆಲೆಬಾಳುವ ವಾಹನ ತಯಾರಕ ಟೆಸ್ಲಾ ತನ್ನ ಜಾಗತಿಕ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿದೆ. ಹಾಗಾಗಿ, ಈ ವರ್ಷದ ಆರಂಭದಲ್ಲಿ ಮೆಕ್ಸಿಕೋದಲ್ಲಿ ಗಿಗಾಫ್ಯಾಕ್ಟರಿಯನ್ನು ತೆರೆಯುವುದಾಗಿ ಘೋಷಿಸಿತ್ತು. ಟೆಸ್ಲಾ, ಸ್ಪೇಸ್‌ಎಕ್ಸ್, ಟ್ವಿಟರ್‌ನ ಸಿಇಒ ಮತ್ತು ಹಲವಾರು ಇತರ ಸಂಸ್ಥೆಗಳ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಮಂಗಳವಾರ ವಿವರಗಳನ್ನು ನೀಡದೆ, ಶಿಕ್ಷಣ ಸಂಸ್ಥೆಯನ್ನು ರಚಿಸುವ ಆಲೋಚನೆಯನ್ನು ತೇಲಿ ಬಿಟ್ಟರು.

ಎಲಾನ್ ಮಸ್ಕ್ ಅವರು ತಮ್ಮ ಕಂಪನಿಗಳ ಉತ್ತರಾಧಿಕಾರಿಯನ್ನು ಗುರುತಿಸಿದ್ದಾರೆ. ಆ ವ್ಯಕ್ತಿಯು ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ ಕಂಪನಿಯನ್ನು ನಡೆಸಬಹುದು ಎಂದು ಅವರು ಹೇಳಿದರು. ನೋಡಿ, ನನಗೆ ಏನಾದರೂ ಅನಿರೀಕ್ಷಿತವಾಗಿ ಸಂಭವಿಸಿದಲ್ಲಿ, ನನ್ನ ಅಧಿಕಾರ ವಹಿಸಿಕೊಳ್ಳಲು ಇದು ನನ್ನ ಶಿಫಾರಸು ಎಂದು ನಾನು ಮಂಡಳಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?

ಟೆಸ್ಲಾ ಮಂಡಳಿಯ ನಿರ್ದೇಶಕರಾದ ಜೇಮ್ಸ್ ಮುರ್ಡೋಕ್ ಅವರು ಕಳೆದ ವರ್ಷ ನ್ಯಾಯಾಲಯದಲ್ಲಿ ಟ್ವಿಟ್ಟರ್‌ಗೆ ಸಂಬಂಧಿಸಿದಂತೆ ಹೂಡಿಕೆದಾರರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಸಮಯದಲ್ಲಿ ಎಲೆಕ್ಟ್ರಿಕ್ ಕಾರು ತಯಾರಕರ ಮುಖ್ಯಸ್ಥರಾಗಲು ಸಂಭಾವ್ಯ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ಎಲಾನ್ ಮಸ್ಕ್ ಅವರು ಗುರುತಿಸಿದ್ದಾರೆ ಎಂದು ಸಾಕ್ಷ್ಯ ನುಡಿದಿದ್ದರು. ಇತ್ತೀಚೆಗಷ್ಟೇ ಟ್ವಿಟರ್‌ಗೆ ಸಿಇಒ ಅವರನ್ನು ಘೋಷಿಸಿರುವ ಮಸ್ಕ್ ಈಗ ತಮ್ಮ ಗಮನವನ್ನು ಟೆಸ್ಲಾ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version