ಚಿಕ್ಕೋಡಿ: ಸಿಡಿಲು ಬಡಿದು ರೈತರೊಬ್ಬರು (Karnataka Rain) ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಭೀಮಪ್ಪ ಭಾಳಪ್ಪ ಮಂಗಳೂರ (56) ಮೃತ ದುರ್ದೈವಿ. ದನ ಕಾಯುತ್ತಿದ್ದ ಭೀಮಪ್ಪ ಭಾಳಪ್ಪ ಮನೆಗೆ ತೆರಳುವಾಗ ಸೋಮವಾರ ಸಂಜೆ ಹೊತ್ತಿಗೆ ಮಳೆ- ಗಾಳಿ ಜತೆಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸುರ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಜೈನ ಸಮುದಾಯ ಬಸದಿ ಶಿಖರಕ್ಕೆ ಹಾನಿಯಾಗಿದೆ. ಹೊಸೂರು ಗ್ರಾಮದ 1008 ಪಾರ್ಶ್ವನಾಥ ಜೈನ ಮಂದಿರಕ್ಕೆ ಹಾನಿಯಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಡಿಲಿನ ಅಬ್ಬರವು ಅವಾಂತರವೇ ಸೃಷ್ಟಿಯಾಗಿದೆ. ಕಳೆದ ಎರಡು ದಿನಗಳಿಂದ ಹುಕ್ಕೇರಿ ಬಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕಗಳ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆಯಾಗಿದೆ. ಮಳೆಯಿಂದ ರಸ್ತೆ ಮೇಲೆ ನೀರು ಹರಿದಿದೆ. ವರುಣನ ಆರ್ಭಟಕ್ಕೆ ಪ್ರಯಾಣಿಕರ ಪರದಾಡಿದರು. ಇತ್ತ ಮಳೆಯಿಂದ ಹಿಂಗಾರು ಬಿತ್ತನೆಗೆ ಸಜ್ಜಾದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಗಾಳಿ- ಮಳೆಗೆ ಹಾರಿ ಹೋದ ಕಾರ್ಖಾನೆಯ ಚಾವಣಿ
ಹಾವೇರಿ ಜಿಲ್ಲೆಯಲ್ಲಿ ತಡ ರಾತ್ರಿ ಸುರಿದ ಗಾಳಿ- ಮಳೆಗೆ ಕಾರ್ಖಾನೆಯ ಚಾವಣಿ ಹಾರಿಹೋಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಸನೀಲ್ ಎನ್ನುವವರಿಗೆ ಸೇರಿದ ಕಾರ್ಖಾನೆಯಲ್ಲಿದ್ದ ಮಷಿನ್ ಹಾಗು ಕಟ್ಟಡಕ್ಕೆ ಹಾನಿಯಾಗಿದೆ. ಜೋರಾಗಿ ಬೀಸಿದ ಗಾಳಿಗೆ ಚಾವಣಿ ಹಾರಿ ಹೋಗಿದೆ.
ರಾಯಚೂರಿನಲ್ಲೂ ಸಿಡಿಲು ಬಡಿದು ವ್ಯಕ್ತಿ ಸಾವು
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿದ್ದಾರೆ. ದುರಗಪ್ಪ (35) ಮೃತ ದುರ್ದೈವಿ. ರಾಯಚೂರಿನ ಲಿಂಗಸ್ಗೂರು ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗ್ರೇಡ್ -2 ತಹಶಿಲ್ದಾರ್ ಶಂಶಾಲಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲೂ ಅಬ್ಬರಿಸಿದ್ದ ಮಳೆ
ಕಾಫಿನಾಡ ಮಲೆನಾಡು ಭಾಗದಲ್ಲಿ ಸೋಮವಾರ ಸಂಜೆ ಮಳೆ ಅಬ್ಬರ ಜೋರಾಗಿತ್ತು. ಆಲಿಕಲ್ಲು ಮಳೆಗೆ ಮಲೆನಾಡಿಗರು ಹೈರಾಣಾದರು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದಲ್ಲಿ ಭಾರೀ ಆಲಿಕಲ್ಲು ಮಳೆಯಾಗಿತ್ತು. ಹಸಿರ ಹುಲ್ಲಿನ ರಾಶಿ ಮೇಲೆ ಆಲಿಕಲ್ಲು ಹರಡಿದಂತೆ ಸುರಿದಿದೆ. ಅಕ್ಟೋಬರ್‌ನಲ್ಲಿ ಆಲಿಕಲ್ಲು ಮಳೆ ಕಂಡು ಮಲೆನಾಡಿಗರು ಕಂಗಲಾಗಿದ್ದು, ಕಾಫಿ ಬೆಳೆಗೆ ಹಾನಿಯಾಗುವ ಆತಂಕ ಇದೆ.
ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಜಲಾವೃತಗೊಂಡಿತ್ತು. ಕಳಸ-ಬಾಳೆಹೊನ್ನೂರು ರಾಜ್ಯ ಹೆದ್ದಾರಿ ಬಂದ್ ಆಗಿತ್ತು. ಹೊರನಾಡು ಮಾರ್ಗದಲ್ಲಿ ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವು ಬಂದ್ ಆಗಿತ್ತು. ಸೇತುವೆ ಮೇಲೆ 2 ಅಡಿ ಎತ್ತರದಲ್ಲಿ ನೀರು ಹರಿಯುತ್ತಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ