ಕಾಂಗ್ರೆಸ್ (congress) ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಯೋಜನೆ ಜಾರಿಗೊಳಿಸಲಾಗುವುದು ಎಂದಿದೆ. ಇದರ ಜೊತೆಗೆ, ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 2000 ರೂ. ಮತ್ತು ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ಎಂಬ ಘೋಷಣೆಗಳನ್ನು ಮಾಡಿದೆ.
ಇದು ಉಚಿತಗಳ ಸರಣಿಯಲ್ಲಿ (freebies) ಒಂದು ಅಷ್ಟೇ. ಜೆಡಿಎಸ್ (JDS), ಆಪ್ (APP) ಕೂಡ ಇಂಥ ಘೋಷಣೆಗಳನ್ನು ಮಾಡಿವೆ. ಉಚಿತ ಆಶ್ವಾಸನೆ ನೀಡುವುದಿಲ್ಲ ಎಂದು ಈ ಮೊದಲು ಹೇಳಿದ್ದ ಬಿಜೆಪಿ ಕೂಡ ಇತರ ಪಕ್ಷಗಳ ಆಮಿಷದ ಮುಂದೆ ತಾನು ಸೋಲಬಾರದು ಎಂದೋ ಏನೋ, ಕೆಲವು ಭರವಸೆಗಳನ್ನು ನೀಡಿದೆ. ಈ ಉಚಿತ ಭರವಸೆಗಳನ್ನು ಈಡೇರಿಸಲು ಬೇಕಾದಷ್ಟು ಹಣ ರಾಜ್ಯದ ಬೊಕ್ಕಸದಲ್ಲಿ ಇದೆಯೇ? ಇಲ್ಲವಾದರೆ ಅದಕ್ಕೆಲ್ಲಾ ಹಣವನ್ನು ಎಲ್ಲಿಂದ ತರುತ್ತಾರೆ? ಇದು ಸಾಮಾನ್ಯ ಮತದಾರನ ಕುತೂಹಲ. ಇದನ್ನು ಉತ್ತರಿಸಲು ಪಕ್ಷಗಳು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆ ಲೆಕ್ಕಾಚಾರ ನಾವೇ ಮಾಡಬೇಕು.
ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ರಾಜಕೀಯ ಪಕ್ಷಗಳ ಚುನಾವಣಾ ಭರವಸೆಗಳ ವೆಚ್ಚಗಳು ನಿರ್ಣಾಯಕವಾಗಲಿವೆ. ಸಾಮಾನ್ಯ ಮತದಾರನಿಗೆ ಸಾರ್ವಜನಿಕ ಸಾಲ, ಹಣಕಾಸಿನ ಕೊರತೆಯ ಬಗ್ಗೆ ಸಾಕಷ್ಟು ಜ್ಞಾನವಿಲ್ಲದಿರಬಹುದು. ಆದರೆ ಗೊತ್ತಿರುವ ಅಗತ್ಯವಿದೆ. IMFನಿಂದ ಸಾಕಷ್ಟು ಹಣಕಾಸು ಸಾಲ ಪಡೆದಿದ್ದರೂ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ/ ಪಾಕಿಸ್ತಾನ ದಿವಾಳಿ ಪರಿಸ್ಥಿತಿ ಎದುರಿಸುತ್ತಿರುವುದೇಕೆ? ಈ ಪ್ರಶ್ನೆಗೆ ಉತ್ತರವೂ ಇದರಲ್ಲಿಯೇ ಇದೆ.
ರಾಜ್ಯದ ಆರ್ಥಿಕ ಆರೋಗ್ಯದಲ್ಲಿ ʼಆರ್ಥಿಕ ಶಿಸ್ತುʼ ಎಂಬುದು ನಿರ್ಣಾಯಕ. ಆದ್ದರಿಂದ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ- 2002 (ಕೆಎಫ್‌ಆರ್‌ಎ), ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) 3%ಕ್ಕಿಂತ ಹೆಚ್ಚಿರಬಾರದು ಎನ್ನುತ್ತದೆ. ಹೀಗಾಗಿ ಉಚಿತ ಕೊಡುಗೆಗಳು ಆರ್ಥಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿಮರ್ಶಿಸುವುದು ಬಹಳ ಮುಖ್ಯ. ಆರ್ಥಿಕ ಶಿಸ್ತನ್ನು ಗೌರವಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಪ್ರಮುಖ. ಈಗ ಈ ಪಕ್ಷಗಳು ಅಧಿಕಾರಕ್ಕೆ ಬಂದರೆ, ಅವು ನೀಡಿರುವ ಭರವಸೆಗಳಿಂದ ರಾಜ್ಯದ ಬೊಕ್ಕಸದ ಮೇಲೆ ಪರಿಣಾಮ ಏನಾಗಬಹುದು?
ಕಾಂಗ್ರೆಸ್‌ನ ಉಚಿತ ಕೊಡುಗೆಗಳು
ಕರ್ನಾಟಕದಲ್ಲಿ ಸುಮಾರು 1.79 ಕೋಟಿ ಕುಟುಂಬಗಳಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ವಿದ್ಯುತ್ ನೀಡುವ ʼಗೃಹಜ್ಯೋತಿʼ ಯೋಜನೆ ಭರವಸೆ ನೀಡಿದೆ. ಇದು ಪ್ರತೀ ಮನೆಗೆ ತಿಂಗಳಿಗೆ ₹ 1202.50, ವರ್ಷಕ್ಕೆ ₹ 14,430 ಆಗುತ್ತದೆ. ಒಟ್ಟಾರೆಯಾಗಿ ₹ 25830 ಕೋಟಿ ರೂಪಾಯಿ. ಕರ್ನಾಟಕ ಜಿಎಸ್‌ಡಿಪಿ ₹ 23.33 ಲಕ್ಷ ಕೋಟಿ; ವಿತ್ತೀಯ ಕೊರತೆ ₹ 60,531 ಕೋಟಿ. ಇದು 2023-24ರ ಲೆಕ್ಕ. ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 3%ಗಿಂತ ಹೆಚ್ಚಿರುವುದರಿಂದ ₹ 25830 ಕೋಟಿಗಳ ಈ ಆರ್ಥಿಕ ಹೊರೆಯು ಕೆಎಫ್‌ಆರ್‌ಎ ಮಿತಿಯನ್ನು ಮೀರುತ್ತದೆ. ಜತೆಗೆ ಈ ಉಚಿತವು ರೈತರಿಗೆ ನೀಡುತ್ತಿರುವ ₹ 13,000 ಕೋಟಿಯ ಉಚಿತ ವಿದ್ಯುತ್ ಪೂರೈಕೆಯ ವೆಚ್ಚದ ದುಪ್ಪಟ್ಟು ಆಗಿದೆ.
ಹೆಚ್ಚುತ್ತಿರುವ ಬಾಕಿಯಿಂದಾಗಿ ರಾಜ್ಯದ ವಿದ್ಯುತ್ ಕಂಪನಿಗಳು ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಿಗೆ ₹ 14,700 ಕೋಟಿ ಮೌಲ್ಯದ ಉಚಿತ ವಿದ್ಯುತ್‌ನ ಈಗಿರುವ ಬದ್ಧತೆಯೇ ರಾಜ್ಯದ ಹಣಕಾಸಿನ ಮೇಲೆ ಹೆಚ್ಚಿನ ಒಜ್ಜೆಯನ್ನು ಉಂಟುಮಾಡಿದೆ. ಗೃಹಜ್ಯೋತಿ ಮೂಲಕ ಮತ್ತೂ ₹ 25830 ಕೋಟಿ ಒದಗಿಸುವುದು ರಾಜ್ಯದ ಆರ್ಥಿಕತೆಯನ್ನು ಇನ್ನಷ್ಟು ಅಪಾಯಕ್ಕೆ ತಳ್ಳುತ್ತದೆ. ಇದು ವಿತ್ತೀಯ ಕೊರತೆಯ 3%ನ್ನು ಮೀರುತ್ತದೆ.
ಕಾಂಗ್ರೆಸ್‌ನ ಎರಡನೇ ಪ್ರಮುಖ ಭರವಸೆ ಎಂದರೆ ಎಲ್ಲಾ BPL ಕುಟುಂಬಗಳಿಗೆ, ಆ ಕುಟುಂಬದ ಮಹಿಳೆಗೆ ತಿಂಗಳಿಗೆ ₹ 2000 ನೀಡುವುದು. ಈಗ ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಕುಟುಂಬಗಳಿವೆ. ಪ್ರತಿ ಬಿಪಿಎಲ್ ಕುಟುಂಬದ ಮಹಿಳೆಗೆ ತಿಂಗಳಿಗೆ ₹ 2000 ನೀಡುವುದರಿಂದ ವಾರ್ಷಿಕ ₹ 30,720 ಕೋಟಿ ವೆಚ್ಚ ಆಗುತ್ತದೆ. 2022-23ರಲ್ಲಿ, ರಾಜ್ಯದ ಆದಾಯ ಕೊರತೆ ₹14,699 ಕೋಟಿಗಳಷ್ಟಿತ್ತು. ವಾರ್ಷಿಕ ₹ 30,720 ಕೋಟಿ ವೆಚ್ಚದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮಾಡಬೇಕಾದರೆ ಬಂಡವಾಳ ವೆಚ್ಚವನ್ನು ₹ 46,955 ಕೋಟಿಯಿಂದ ₹ 16,235 ಕೋಟಿಗೆ ಇಳಿಸಬೇಕು. ಅಥವಾ ಆದಾಯ ಕೊರತೆಯನ್ನು ₹ 14,699 ಕೋಟಿಯಿಂದ ₹ 45,419 ಕೋಟಿಗೆ ಹೆಚ್ಚಿಸಬೇಕು. ಅಥವಾ ಬಂಡವಾಳಕ್ಕೆ ಯಾವುದೇ ವೆಚ್ಚ ಮಾಡಬಾರದು. ಕಂದಾಯದ ಮೇಲಿನ ವೆಚ್ಚ 90% ದಾಟಿದೆ, ಹೀಗಾಗಿ ಕಂದಾಯ ವೆಚ್ಚದಲ್ಲಿ ಇದಕ್ಕೆ ಹಾದಿಯಿಲ್ಲ.
ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪದವೀಧರ ನಿರುದ್ಯೋಗಿಗಳಿಗೆ ಭತ್ಯೆ ಮುಂತಾದವುಗಳ ವೆಚ್ಚ ವಾರ್ಷಿಕ 2000 ಕೋಟಿ ರೂ.ಗಳನ್ನು ಮೀರುತ್ತದೆ. ಇತರ ಫ್ರೀಬೀಗಳ ಜತೆ ಕೂಡಿಸಿದಾಗ ಇದು ಕೂಡ ಹೊರೆಯೇ ಆಗುತ್ತದೆ. ಇದಕ್ಕೂ ವಿತ್ತೀಯ ಕೊರತೆ ಬಿಡುವುದಿಲ್ಲ.
ಆಪ್ ಪಕ್ಷ ಉಚಿತದ ಭರವಸೆ
ಆಮ್ ಆದ್ಮಿ ಪಕ್ಷ (ಎಎಪಿ) ಉಚಿತ ವಿದ್ಯುತ್, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ, ರೂ. 3000ನಂತೆ ನಿರುದ್ಯೋಗ ವಿಮೆ, 2000 ಲೀಟರ್ ವರೆಗೆ ಉಚಿತ ನೀರು, ನಗರ ಪ್ರದೇಶದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಭರವಸೆ ನೀಡಿದೆ. ಯಾವುದೇ ಕೃಷಿ ಉತ್ಪನ್ನದ ಮೌಲ್ಯದ 10%ಕ್ಕಿಂತ ಹೆಚ್ಚಿನ ಬೆಂಬಲ ಬೆಲೆ ನೀಡುವುದು WTOಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ರೈತರ ಸಾಲ ಮನ್ನಾಗೆ ₹ 36,201 ಕೋಟಿ ವೆಚ್ಚವಾಗುತ್ತದೆ. ಮನೆಗಳಿಗೆ ತಿಂಗಳಿಗೆ 200 ಯೂನಿಟ್‌ಗಳ ಉಚಿತ ವಿದ್ಯುತ್ ಅನ್ನು ಒದಗಿಸುವ ವೆಚ್ಚ ₹ 25830 ಕೋಟಿಗಳು. ಒಟ್ಟು ₹ 62301 ಕೋಟಿಗಳ ಉಚಿತ ಭರವಸೆ. ಇದು ಕೂಡ ಈಡೇರಿಸಲಾಗದ ಆಶ್ವಾಸನೆ, ಮೂಗಿಗೆ ಸವರಿದ ತುಪ್ಪ.
ಬಿಜೆಪಿಯ ಉಚಿತ ಕೊಡುಗೆಗಳು
2024ರ ಸಾಲಿನ ಬಜೆಟ್‌ನಲ್ಲಿ ಬಿಜೆಪಿ ಸರ್ಕಾರ ಗೃಹಿಣಿ ಶಕ್ತಿ ಯೋಜನೆಯಡಿಯಲ್ಲಿ ಪ್ರತಿ ಭೂರಹಿತ ಮಹಿಳಾ ರೈತ ಕಾರ್ಮಿಕರಿಗೆ ತಿಂಗಳಿಗೆ ₹ 1000 ನೀಡುವುದಾಗಿ ಘೋಷಿಸಿತು. ಕರ್ನಾಟಕದಲ್ಲಿ 77,58,600 ಗ್ರಾಮೀಣ ಕುಟುಂಬಗಳಿವೆ. ಮತ್ತು 8.4% ಗ್ರಾಮೀಣ ಕುಟುಂಬಗಳು ಭೂರಹಿತ. ಹೀಗೆ 6,51,722 ಭೂರಹಿತ ಗ್ರಾಮೀಣ ಕುಟುಂಬಗಳಿಗೆ ತಲಾ ಒಬ್ಬ ಕೃಷಿ ಕೆಲಸಗಾರ್ತಿಯಂತೆ ವರ್ಷಕ್ಕೆ ₹ 12000, ಹಾಗೂ ₹ 782 ಕೋಟಿ ವೆಚ್ಚವಾಗುತ್ತದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್‌ಗಾಗಿ ₹ 1,000 ಕೋಟಿ ಮತ್ತು ಶಾಲಾ ಕಾಲೇಜುಗಳ 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್‌ಗಾಗಿ ₹ 350 ಕೋಟಿ ಹೆಚ್ಚುವರಿ ಅನುದಾನ ನೀಡಲಿದೆ. ಇದು ಸೇರಿ ₹ 2132 ಕೋಟಿ ವೆಚ್ಚದ ಲೆಕ್ಕ.
ಇದನ್ನೂ ಓದಿ: ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?
ಕೊರತೆಗೆ ಯಾರ ಕೊಡುಗೆ ಎಷ್ಟು?
ಮೂರೂ ಪಕ್ಷಗಳು ನೀಡಿರುವ ಉಚಿತ ಕೊಡುಗೆಗಳು ರಾಜ್ಯ ಬೊಕಸದ ಮೇಲೆ ಉಂಟುಮಾಡುವ ಹೊರೆಯ ಒಂದು ತುಲನೆ ಮಾಡಬಹುದು. ಕಾಂಗ್ರೆಸ್‌ನ ಉಚಿತಗಳು ವಿತ್ತೀಯ ಕೊರತೆಯ 93.42% ಮತ್ತು GSDPಯ 2.43% ಆಗುತ್ತವೆ. AAPನ ಕೊಡುಗೆಗಳು ವಿತ್ತೀಯ ಕೊರತೆಯ 103% ಮತ್ತು GSDPಯ 2.59% ಕಬಳಿಸುತ್ತವೆ. ಆದರೆ ಬಿಜೆಪಿಯು ಪ್ರಸ್ತುತ 3.52%ನಷ್ಟು ವಿತ್ತೀಯ ಕೊರತೆಯನ್ನು ಹಾಗೂ GSDPಯ ಸುಮಾರು 0.09% ಕೊರತೆಯನ್ನು ಪೋಷಿಸುತ್ತಿದೆ. ಕಾಂಗ್ರೆಸ್‌ನ ಉಚಿತಗಳಿಂದ ಒಟ್ಟು ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 5.02%ರಷ್ಟು ಮತ್ತು ₹ 1.17 ಲಕ್ಷ ಕೋಟಿಗೆ ಏರುತ್ತದೆ. ಆಪ್ ಕೊರತೆ ಜಿಎಸ್‌ಡಿಪಿಯ 5.26%ಕ್ಕೆ ಮತ್ತು ಬಿಜೆಪಿಯ ಕೊರತೆ ಜಿಎಸ್‌ಡಿಪಿಯ 2.69%ಕ್ಕೆ ಏರುತ್ತದೆ. ಕಾಂಗ್ರೆಸ್ ಮತ್ತು ಆಪ್ ಉಚಿತ ಕೊಡುಗೆಗಳು ವಿತ್ತೀಯ ಕೊರತೆಯನ್ನು ಬಹುತೇಕ ದ್ವಿಗುಣಗೊಳಿಸಿ ಕರ್ನಾಟಕದ ಆರ್ಥಿಕತೆಗೆ ಅಪಾಯವನ್ನುಂಟುಮಾಡುತ್ತವೆ. 3% ಮೇಲ್ಮಿತಿಯ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತವೆ. ಬಿಜೆಪಿಯ ಒಟ್ಟು ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 2.69%ರಷ್ಟಿದ್ದು, ಕೆಎಫ್‌ಆರ್‌ಎ ಮಿತಿಯಲ್ಲಿದೆ.
ಅಧಿಕಾರಕ್ಕೆ ಅಂಟಿಕೊಳ್ಳುವುದಕ್ಕಾಗಿ ಆರ್ಥಿಕತೆಯನ್ನು ಕೆಳಕ್ಕೆ ತಳ್ಳುವುದು, ಜನತೆ ಹೆಚ್ಚಿನ ಹಣದುಬ್ಬರದಿಂದ ಬಳಲುವಂತೆ ಮಾಡುವುದು ಅಪಾಯಕರ. ಜನಪ್ರಿಯತೆಗಾಗಿ ಉಚಿತ ಕೊಡುಗೆಗಳನ್ನು ನೀಡುವ ದೇಶಗಳು ನಾಶವಾಗಿವೆ. ಉದಾಹರಣೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನ. ಆರ್ಥಿಕತೆಯ ಸಂಭಾವ್ಯ ಕುಸಿತವನ್ನು ತಪ್ಪಿಸಲು ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆ ಮತದಾರರು ತಿಳಿವಳಿಕೆ ಗಳಿಸುವುದು ಅಗತ್ಯ. ರಾಜಕೀಯ ಪಕ್ಷಗಳು ಮತದಾರರ ಮತ್ತು ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆ ಜವಾಬ್ದಾರಿಯುತವಾಗಿ, ಧನಾತ್ಮಕವಾಗಿ ಯೋಚಿಸಬೇಕು.
ಇದನ್ನೂ ಓದಿ: ವಿಸ್ತಾರ Explainer: ಜೈಲಿನಿಂದ ಬಿಡುಗಡೆಯಾದ ಕೊಲೆ ಅಪರಾಧಿ, ಮಾಜಿ ಸಂಸದ, ʻಬಾಹುಬಲಿ’ ಯಾರಿವನು?