ತುಮಕೂರು: ರಾಜ್ಯಾದ್ಯಂತ ಮಳೆಯು (Karnataka Rain) ಅಬ್ಬರಿಸುತ್ತಿದ್ದು, ರಭಸವಾಗಿ ಬೀಸುತ್ತಿರುವ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಅಪ್ಪಿಸುತ್ತಿದೆ. ಸದ್ಯ ತುಮಕೂರಿನ ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ಹೋಬಳಿಯ ಮಾವಿನ ಕೆರೆ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ತೆಂಗಿನ ಮರವೊಂದು ಮನೆ ಮೇಲೆ ಉರುಳಿ ಬಿದ್ದಿದೆ. ಮಾವಿನಕೆರೆ ಗ್ರಾಮದ ನಿಂಗಮ್ಮ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.
ಸಣ್ಣನಂಜೇಗೌಡ ಎಂಬುವರ ತೋಟದ ತೆಂಗಿನ ಮರ ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ನಿಂಗಮ್ಮ ಎಂಬುವರ ಮನೆಯ ಮೇಲೆ ಮರ ಬಿದ್ದು, ಜಖಂಗೊಂಡಿದೆ. ನಿಂಗಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೆಂಗಿನ ಮರಗಳು ಎತ್ತರವಾಗಿದ್ದು ತೀರಾ ಹಳೆ ಮರಗಳಾಗಿವೆ. ಹಳೆಯದಾದ ತೆಂಗಿನ ಮರಗಳನ್ನು ತೆರವುಗೊಳಿಸುವಂತೆ ಕೆಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾ.ಪಂ ಪಿಡಿಒಗೆ ಮನವಿ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನದಿ ತೀರದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ
ಬೆಳಗಾವಿಯ ಬೈಲಹೊಂಗಲ ತಾಲೂಕಿನ ಮಾಟೋಳ್ಳಿ ಗ್ರಾಮದ ನದಿ ತೀರದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದೆ. ಮಲಪ್ರಭಾ ನದಿ ತೀರದಲ್ಲಿ ಸುಮಾರು 10 ಅಡಿ ಉದ್ದದ ಮೊಸಳೆಯು ಕಾಣಿಸಿಕೊಂಡಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬೃಹತ್ ಗಾತ್ರದ ಮೊಸಳೆ ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ. ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಹೊರ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದ್ದು, ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಹಂಚಿನಾಳ, ಯರಗೋಡಿ, ಕಡದರಗಡ್ಡಿ, ಯಳಗುಂದಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ನಡುಗಡ್ಡೆಯಲ್ಲಿ ವಾಸಿಸುವ ಜನರಿಗೆ ಸಂಪೂರ್ಣ ಜಲದಿಗ್ಭಂಧನ ಹಾಕಲಾಗಿದೆ. ರೈತರ ಪಂಪ್ ಸೆಟ್, ಪೈಪ್‌ಗಳು ಮುಳುಗಡೆಯಾಗಿದೆ.
ಇದೇ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡು ಕುರಿಗಾಹಿಗಳು ಪೇಚಿಗೆ ಸಿಲುಕಿದರು. ಮುಳುಗಡೆಯಾದ ಶೀಲಹಳ್ಳಿ ಸೇತುವೆ ಬಳಿಯ ಗುಡ್ಡದಲ್ಲಿ ಕುರಿಗಳನ್ನು ಮೇಯಲುಬಿಟ್ಟು,ಮೂವರು ಕುರಿಗಾಹಿಗಳು ಬೆಟ್ಟ ಇಳಿದಿದ್ದರು. ಈ ವೇಳೆ ಧುಮ್ಮಿಕ್ಕಿ ಹರಿಯಿತ್ತಿರುವ ನದಿ ನೋಡಿ ಬೆಚ್ಚಿ ಬಿದ್ದರು. ಕೆಲಹೊತ್ತು ಹೇಗೆ ಸುರಕ್ಷಿತವಾಗಿ ಸ್ಥಳ ತಲುಪ ಬೇಕೆಂದು ಗೊತ್ತಾಗದೇ ಕಂಗಾಲಾಗಿದ್ದರು. ಸುಮಾರು ಒಂದು ಗಂಟೆ ಬೆಟ್ಟದಲ್ಲೇ ಅತ್ತಿತ್ತ ಓಡಾಡಿ, ಬಳಿಕ ಮತ್ತೊಂದು ದಡದಲ್ಲಿ ವ್ಯಕ್ತಿಯೊಬ್ಬ ಸೂಚಿಸಿದ ದಿಕ್ಕಿನತ್ತ ಹೊರಟು ಹೋದರು.
ಇತ್ತ ತುಂಗಭದ್ರಾ ಡ್ಯಾಂನಿಂದ 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಯಚೂರಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ರಾಯರ ಜಪದ ಕಟ್ಟೆಗೆ ಮುಳುಗಿದೆ. ಜಪದ ಕಟ್ಟೆ ಬಳಿ ತೆರಳದಂತೆ ಆಡಳಿತ ಮಂಡಳಿ ಬ್ಯಾರಿಕೇಡ್ ಅಳವಡಿಸಿ-ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ. ರಾಯಚೂರಿನ ಕೃಷ್ಣಾ ತೀರದ ಮತ್ತೊಂದು ದೇವಸ್ಥಾನ ಜಲಾವೃತಗೊಂಡಿದೆ. ಕೊಪ್ಪರದಲ್ಲಿರೊ ಲಕ್ಷ್ಮೀ ನರಸಿಂಹ ದೇವಸ್ಥಾನ ಮುಳುಗುಡೆಯಾಗಿದೆ. ದೇವಸ್ಥಾನ ಜಲಾವೃತ ಹಿನ್ನೆಲೆ ಅರ್ಚಕರು ನೀರಲ್ಲೇ ನಡೆದುಕೊಂಡು ಹೋಗಿ ಪೂಜಾ ಕೈಂಕರ್ಯ ನಡೆಸಿದ್ದಾರೆ.
ಇದನ್ನೂ ಓದಿ: Mysuru News : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆ
ರೌದ್ರಾವತಾರ ತಾಳಿದ ಐತಿಹಾಸಿಕ ಮದಗದ ಕೆರೆ
ಚಂದ್ರದ್ರೋಣ ಪರ್ವತದ ಸಾಲಿನ ಗಿರಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಐತಿಹಾಸಿಕ ಮದಗದ ಕೆರೆ ರೌದ್ರಾವತಾರ ತಾಳಿದೆ. ತಾತ್ಕಾಲಿಕವಾಗಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಮದಗದ ಕೆರೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಟ್ ಆಗಿದೆ. ಸಖರಾಯಪಟ್ಟಣ-ಮದಗದ ಕೆರೆ-ಮದಗದ ಕೆರೆ- ಮುಸ್ಲಾಪುರ ರಸ್ತೆ ಸಂಪರ್ಕ ಬಂದ್ ಆಗಿದೆ. ಸಾವಿರಾರು ಎಕರೆ ತೋಟ, ಜಮೀನುಗಳು ಜಲಾವೃತಗೊಂಡಿದೆ
ನದಿಯ ನೀರು ನೇರವಾಗಿ ಸೇವಿಸದಂತೆ ಸೂಚನೆ
ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತರು, ನದಿ ದಡದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿಯಲ್ಲಿ ಪ್ರವಾಹ ಇರುವ ಹಿನ್ನೆಲೆಯಲ್ಲಿ ನದಿಗೆ ಇಳಿಯದಂತೆ ಭದ್ರತಾ ಸಿಬ್ಬಂದಿ, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಗ್ರಾಮಸ್ಥರು ನದಿಯ ನೀರು ನೇರವಾಗಿ ಸೇವಿಸದಂತೆ ಸೂಚನೆ ನೀಡಲಾಗಿದೆ. ಇದರಿಂದ ವಾಂತಿ- ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಎಂದು ಪ್ರಚಾರ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗ್ರಾಮದ ನದಿಯ ದಡದಲ್ಲಿನ ಹೊಳೆ ಬಸವವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಕೆಲವೆಡೆ ಜಮೀನುಗಳಿಗೆ ನೀರು ನುಗ್ಗಿದೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.
ದೇವಸ್ಥಾನಕ್ಕೆ ನುಗ್ಗಿದ ಘಟಪ್ರಭೆ
ಘಟಪ್ರಭೆಯ ರುದ್ರ ಪ್ರತಾಪಕ್ಕೆ ದೇವಸ್ಥಾನಕ್ಕೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಪ್ರಸಿದ್ಧ ಉದ್ದಮ್ಮ ದೇವಸ್ಥಾನ ಮುಳುಗುಡೆಯಾಗಿದೆ. ನೀರಿಲ್ಲಿಯೇ ದೇವಸ್ಥಾನದ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ಇನ್ನೂ ಸುಣಧೋಳಿ ಗ್ರಾಮಕ್ಕೂ ಘಟಪ್ರಭಾ ನದಿ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ದೇವಸ್ಥಾನ ಆವರಣದ ಮಳಿಗೆಗಳಿಗೂ ನುಗ್ಗಿದ ನೀರು ನುಗ್ಗಿದ್ದು, ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗುವ ಆತಂಕವಿದೆ.
ಇನ್ನೂ ಮುಸುಗುಪ್ಪಿ ಗ್ರಾಮವು ದ್ವೀಪದಂತಾಗಿದೆ. ಗ್ರಾಮದ ೪೫೦ ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುಸುಗುಪ್ಪಿ ಗ್ರಾಮಸ್ಥರು ನಡುಮಟ್ಟದ ನೀರಲ್ಲಿ ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿದೆ. ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಬಹುತೇಕ ಗ್ರಾಮಸ್ಥರು ಜಲಾವೃತವಾದ ಗ್ರಾಮದಿಂದ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಆಗಿದ್ದಾರೆ.
ಇನ್ನೂ ಮುಸಗುಪ್ಪಿ ಗ್ರಾಮದಲ್ಲಿ ಲಕ್ಷ್ಮಿ ದೇವಿ ದೇವಸ್ಥಾನ ಮಾತ್ರವಲ್ಲದೇ ಬ್ಯಾಂಕ್, ಕಲ್ಯಾಣ ಮಂಟಪವು ಮುಳುಗಿದೆ. ದೇವಸ್ಥಾನ ಮುಂಭಾಗದ ಮಳಿಗೆಗಳು, ರಂಗಮಂದಿರ, ಮನೆ ಕೂಡ ಮುಳುಗಡೆಯಾಗಿದೆ. ನದಿಯಿಂದ ಅರ್ಧ ಕಿಮೀ ದೂರದಲ್ಲಿರುವ ದೇವಸ್ಥಾನ, ಊರಿಗೆ ನೀರು ನುಗ್ಗಿದೆ. ನೀರು ಬರುವ ಸುದ್ದಿ ತಿಳಿದು ವರಮಹಾಲಕ್ಷ್ಮಿ ಬ್ಯಾಂಕ್ ಸಿಬ್ಬಂದಿ ಹಣ ಸೇರಿ ಸಾಮಾಗ್ರಿ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಗ್ರಾಮದ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಲಾವೃತವಾಗಿದ್ದು, ಸೇತುವೆ ರಸ್ತೆ ಸೇರಿ ಎಲ್ಲವೂ ನೀರಲ್ಲಿ ತೇಲಿ ಹೋಗುವ ಸ್ಥಿತಿ ಇದೆ. ಬೆಳೆದ ಬೆಳೆ ಕೊಚ್ಚಿ ಹೋಗಿದೆ.
ಹೇಮಾವತಿ ಜಲಾಶಯಕ್ಕೆ ಇಂದಿನಿಂದ ಸಾರ್ವಜನಿಕರಿಗೆ ಪ್ರವೇಶ
ಭಾನುವಾರದಿಂದ (ಜು.28) ಹೇಮಾವತಿ ಜಲಾಶಯಕ್ಕೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಹೊರಹರಿವು ಬಿಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಹೊರಹರಿವು ಬಿಡುತ್ತಿದ್ದ ಕಾರಣ ಹೇಮಾವತಿ ಅಣೆಕಟ್ಟು ವಿಭಾಗದ ಅಧಿಕಾರಿಗಳು ಜಲಾಶಯಕ್ಕೆ ನಿರ್ಬಂಧ ಹೇರಿದ್ದರು. ಇದೀಗ ಮಳೆ ಕಡಿಮೆಯಾದ ಕಾರಣ ಕಡಿಮೆ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ