ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಗಾಳಿ ಜತೆಗೆ ವ್ಯಾಪಕ (Karnataka Rain) ಮಳೆಯಾಗುತ್ತಿದೆ. ಶಿವಮೊಗ್ಗದಲ್ಲಿ ಭಾರಿ ಮಳೆಗೆ ಮರವೊಂದು ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೀನ್ಮನೆಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ರಾಮಪ್ಪ (26) ಮೃತ ದುರ್ದೈವಿ.
ಚಿಕ್ಕಮಗಳೂರಲ್ಲಿ ಮೊಬೈಲ್ ಚಾರ್ಜ್ ಮಾಡಲು ಜನರೇಟರ್ ಮೊರೆ!
ಗಾಳಿ ಮಳೆ ಅಬ್ಬರಕ್ಕೆ ಚಿಕ್ಕಮಗಳೂರಿನ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಒಂದು ವಾರದಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಳಸ,ಮೂಡಿಗೆರೆ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಮೊಬೈಲ್ ಚಾರ್ಜ್ ಮಾಡಲು ಹಾಗೂ ಮನೆ ಬಳಕೆಗೆ ಜನರೇಟರ್ ಮೊರೆ ಹೋಗಿದ್ದಾರೆ. ಡೀಸೆಲ್ ಜನರೇಟರ್ ಬಳಸಿ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳುತ್ತಿದ್ದಾರೆ.
ಕೋಡಿ ಬಿದ್ದು ಅಚ್ಚರಿ ಮೂಡಿಸಿದ ಅಯ್ಯನಕೆರೆ
ನಿನ್ನೆ ಶುಕ್ರವಾರ ಮದಗದ ಕೆರೆ ಕೋಡಿ ಬಿದ್ದ ಬೆನ್ನಲ್ಲೆ ಇಂದು ಶನಿವಾರ ಅಯ್ಯನಕೆರೆ ಕೋಡಿ ಬಿದ್ದಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದ ಕೆರೆಗಳು ಕೋಡಿ ಬಿದ್ದು ಜಲಪಾತದಂತೆ ಧುಮ್ಮಿಕ್ಕಿ ಹರಿಯುತ್ತಿದೆ. ಇನ್ನೂ ಶನಿವಾರವೇ ಅಯ್ಯನಕೆರೆ ಕೋಡಿ ಬೀಳುವುದು ಪ್ರತೀತಿ. ಮತ್ತೆ ಶನಿವಾರವೇ ಕೋಡಿಬಿದ್ದು ಅಚ್ಚರಿ ಮೂಡಿಸಿದೆ. ಹತ್ತಾರು ಹಳ್ಳಿ, ಸಾವಿರಾರು ಎಕರೆ ಜಮೀನು, ಜನ-ಜಾನುವರಗಳಿಗೆ ಆಶ್ರಯವಾಗಿದೆ.
ಇನ್ನೂ ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕೋಡಿ ಬಿದ್ದು ಭಾರೀ ಪ್ರಮಾಣದ ನೀರು ಹರಿದುಹೋಗಿದೆ. ಕೋಡಿ ಬಿದ್ದ ಕೆರೆ ನೀರಿನಿಂದ ಹೊಲಗದ್ದೆ-ತೋಟಗಳು ಜಲಾವೃತಗೊಂಡಿದೆ. ಇತ್ತ ಸೇತುವೆಗಳು ಜಲಾವೃತಗೊಂಡು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ನೀರಿನ ವೇಗಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಇತ್ತ ಭದ್ರಾ ನದಿ ಅಬ್ಬರಕ್ಕೆ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ಬಾಳೆಹೊನ್ನೂರು-ಕೊಟ್ಟಿಗೆಹಾರ- ಕಳಸ ಸಂಪರ್ಕಿಸುವ ಹೆದ್ದಾರಿ ರಸ್ತೆಯಲ್ಲಿ ನೀರು ಏರಿಕೆ ಆಗುತ್ತಿದೆ. ಬಾಳೆಹೊನ್ನೂರು ಕಳಸ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ:Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು
ತೆಪ್ಪದಲ್ಲಿ ತೆರಳಿದ ಲೈನ್‌ಮ್ಯಾನ್
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ವಿದ್ಯುತ್ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ಲೈನ್ ಸರಿಪಡಿಸಲು ಮೆಸ್ಕಾಂ ಸಿಬ್ಬಂದಿ ಪ್ರಾಣ ಪಣಕಿಟ್ಟು ಕೆಲಸ ಮಾಡುತ್ತಿದ್ದಾರೆ. ಉಕ್ಕಿ ಹರಿಯುವ ನೀರಿನಲ್ಲಿ ತೆಪ್ಪದಲ್ಲಿ ತೆರಳಿ ವಿದ್ಯುತ್ ಲೈನ್ ಸರಿಪಡಿಸಿದ್ದಾರೆ. ಬಾಳೆಹೊನ್ನೂರು-ಗಡಿಗೇಶ್ವರದ ಬಳಿ ವಿದ್ಯುತ್ ತಂತಿಗಳು ಹೊಳೆಯಲ್ಲಿ ಮುಳುಗಿ ಹೋಗಿದೆ. ಜೆ.ಇ ಗಣೇಶ್, ಕಾಂತರಾಜು, ಶಿವಕುಮಾರ್ ಸರಿಪಡಿಸುತ್ತಿದ್ದಾರೆ. ಮಲೆನಾಡಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸುವುದೇ ದೊಡ್ಡ ಸಾಹಸವಾಗಿದೆ. ಜಿಲ್ಲೆಯಾದ್ಯಂತ 2,400ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಮರ ಬಿದ್ದು ಮನೆ ಜಖಂ
ಕೊಡಗು ಜಿಲ್ಲೆಯಲ್ಲಿ ಭಾರಿ ಗಾಳಿಗೆ ಸುಂಟಿಕೊಪ್ಪದ ಪನ್ಯ ಬಳಿ ಸಿಲ್ವರ್ ಮರ ಧರೆಗುರುಳಿತ್ತು. ಇದರಿಂದಾಗಿ ಸುಂಟಿಕೊಪ್ಪ ಮಾದಾಪುರ ಸೋಮವಾರಪೇಟೆ ರಸ್ತೆ ಬಂದ್ ಆಗಿತ್ತು. ಮಡಿಕೇರಿ ಹೊರವಲಯದ ಕರ್ಣಗೇರಿಯಲ್ಲಿ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿತ್ತು. ಗ್ರಾಮದ ಹೇಮಾವತಿ ಎಂಬುವರಿಗೆ ಸೇರಿದ ವಾಸದ ಮನೆ ಜಖಂಗೊಂಡಿತ್ತು.
ನೀರಿನಲ್ಲಿ ಸಿಲುಕಿದ ಕಾರು
ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ತಡರಾತ್ರಿ ನೀರಿನಲ್ಲಿ ಕಾರುವೊಂದು ಸಿಲುಕಿತ್ತು. ನೀರಿನಲ್ಲಿ ಸಿಲುಕಿ ಕಾರು ಚಾಲಕ ಪರದಾಡಿದರು. ಬೇಲೂರು ತಾಲೂಕಿನ ಬಿರಡಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಮತ್ತೊಂದು ವಾಹನ ತಂದು ನೀರಿನಲ್ಲಿ ಸಿಲುಕಿದ್ದ ಕಾರನ್ನು ಹೊರಗೆ ಎಳೆದು ತಂದರು. ಬಿರಡಹಳ್ಳಿ ಬಳಿಯ ಸೇತುವೆ ಮುಳುಗಡೆಯಾಗಿ ಸುಮಾರು ಹದಿನೈದು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಸಕಲೇಶಪುರದ ತಾಲೂಕಿನ ಹಾನುಬಾಳು ಹೋಬಳಿಯಲ್ಲಿ ರಸ್ತೆ ಜಲಾವೃತಗೊಂಡು ಹಾನುಬಾಳು-ವೆಂಕಟಹಳ್ಳಿ-ರಾಗಿಗುಂಡಿ-ಅಗ್ನಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇತ್ತ ಸಕಲೇಶಪುರ ಹೊಳೆಮಲ್ಲೇಶ್ವರ ದೇಗುಲ ಜಲಾವೃತಗೊಂಡಿತ್ತು. ಗರ್ಭಗುಡಿಯೊಳಗೆ ಅಪಾರ ಪ್ರಮಾಣದ ನೀರು ನುಗ್ಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ