Site icon Vistara News

Karnataka Rain : ಭಾರಿ ಗಾಳಿ-ಮಳೆಗೆ ತಲೆ ಮೇಲೆ ಬಿದ್ದ ಮರ; ಮಹಿಳೆ ಸೇರಿ ಜಾನುವಾರುಗಳು ಮೃತ್ಯು

Karnataka weather Forecast

ಉಡುಪಿ: ಭಾರಿ ಗಾಳಿ- ಮಳೆಗೆ (Karnataka Rain) ಮಹಿಳೆ ಮತ್ತು 2 ಹಸುಗಳು ದಾರುಣವಾಗಿ ಮೃತಪಟ್ಟಿವೆ. ಉಡುಪಿಯ ಕುಂದಾಪುರ ತಾಲೂಕು ಕೆಂಚನೂರು ಗ್ರಾಮದಲ್ಲಿ ಘಟನೆ (Karnataka Weather Forecast) ನಡೆದಿದೆ. ಸುಜಾತ ಆಚಾರ್ತಿ (53) ಮೃತ ದುರ್ದೈವಿಗಳು.

ಸುಜಾತ ಹಸುಗಳನ್ನು ಮನೆಯ ಪಕ್ಕದಲ್ಲೇ ಇದ್ದ ಮರಕ್ಕೆ ಕಟ್ಟಿದ್ದರು. ಮುಂಜಾನೆಯಿಂದ ಕುಂದಾಪುರ ತಾಲೂಕಿನಲ್ಲಿ ಭಾರಿ ಗಾಳಿ ಮಳೆ ಹಿನ್ನೆಲೆಯಲ್ಲಿ ಹಸುವನ್ನು ಬಿಡಿಸಲು ಹೋಗಿದ್ದಾರೆ. ಈ ವೇಳೆ ಮರ ಮುರಿದು ಬಿದ್ದಿದೆ. ಏಕಾಏಕಿ ಮರ ಬಿದ್ದ ಪರಿಣಾಮ ಮರದಡಿಗೆ ಸಿಲುಕಿ ಸುಜಾತ ಗಂಭೀರ ಗಾಯಗೊಂಡಿದ್ದರು. ಎರಡು ಹಸುಗಳ ಮೇಲೆ ರಭಸವಾಗಿ ಮರ ಬಿದ್ದ ಕಾರಣಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದವು.

ಸ್ಥಳೀಯರ ನೆರವಿನಿಂದ ಮರದಡಿ ಸಿಲುಕಿದ್ದ ಸುಜಾತ ಮತ್ತು ಹಸುಗಳನ್ನು ಮೇಲೆತ್ತಲಾಯಿತು. ಆದರೆ ಮರ ತಲೆಗೆ ನೇರವಾಗಿ ಬಿದ್ದಿದ್ದರಿಂದ ಸುಜಾತ ಸೇರಿ ಜಾನುವಾರುಗಳು ಜೀವ ಬಿಟ್ಟಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Fraud Case : ಶಾಸಕರ ನಕಲಿ ಸಹಿ ಬಳಸಿ ಕೆಲಸ ಗಿಟ್ಟಿಸಿಕೊಂಡ‌ ಖತರ್ನಾಕ್‌ ಖದೀಮರು

ಮತ್ತೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂನಿಂದ 25 ಗೇಟ್ ಓಪನ್ ಮಾಡಿ ಕೃಷ್ಣಾ ನದಿಗೆ 1,20,800 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ.

33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು ಸೋಮವಾರ 30.83 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಪ್ರಮಾಣ ಏರಿಕೆ ಮಾಡಲಾಗಿದೆ. ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ನೀಡಿದ್ದರೂ, ಡ್ಯಾಂ ಮುಂಭಾಗದಲ್ಲಿಯೇ ಮೀನುಗಾರರ ಹುಚ್ಚಾಟ ಮೆರೆದಿದ್ದಾರೆ. ಉಕ್ಕಿ ಹರಿಯುವ ನದಿಯಲ್ಲಿ ಅಪಾಯವನ್ನು ಲೆಕ್ಕಿಸದೇ ಮೀನು ಹಿಡಿಯುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.

ಹೊಳೆ ಬಸವೇಶ್ವರ ದೇಗುಲಕ್ಕೆ ಜಲ ದಿಗ್ಭಂಧನ

ಕೊನೆಯ ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಹೊಳೆ ಬಸವೇಶ್ವರ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರು ಹೊಳೆ ಬಸವೇಶ್ವರ ದೇವಾಲಯಕ್ಕೆ ಘಟಪ್ರಭಾ ನದಿಯು ದಿಗ್ಭಂಧನ ಹಾಕಿದೆ. ಕಳೆದ ಒಂದು ತಿಂಗಳಿಂದಲೂ ದೇವಸ್ಥಾನದ ಆವರಣದಲ್ಲಿ 3-4 ಅಡಿ ನೀರು ಸಂಗ್ರಹವಾಗಿದೆ. ನೀರಿನಲ್ಲೇ ನಡೆದು ಹೋಗಿ ದೇವರ ದರ್ಶನ ಮಾಡಿ ನೈವೇದ್ಯ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ. ದೇವಾಲಯದ ಮುಂಭಾಗದ ನದಿ ನೀರಲ್ಲಿ‌ ಮಕ್ಕಳ ಆಟವಾಗುತ್ತಿರುವ ದೃಶ್ಯ ಕಂಡು ಬಂತು.

ಗೋವನಕೊಪ್ಪ-ಕೊಣ್ಣೂರ ಸಂಪರ್ಕದ ಹಳೆ ಸೇತುವೆ ಮುಳುಗಡೆ

ಬಾಗಲಕೋಟೆಯ ಖಾನಾಪುರ ಬಳಿ ಧಾರಾಕಾರ ಮಳೆಯಾಗುತ್ತಿದ್ದು, ನವೀಲು ತೀರ್ಥ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಲಾಗಿದೆ. ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಗೋವನಕೊಪ್ಪ-ಕೊಣ್ಣೂರ ಸಂಪರ್ಕದ ಹಳೆ ಸೇತುವೆ ಮೇಲೆ 4-5 ಅಡಿಯಷ್ಟು ನೀರು ನಿಂತಿದ್ದು, ಸೇತುವೆ ಮುಳುಗಡೆಯಾಗಿದೆ. ಬಾಗಲಕೋಟೆ-ಗದಗ ಜಿಲ್ಲೆ ಸಂಪರ್ಕದ ಸೇತುವೆ ಇದಾಗಿದೆ. ಮಲಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ನಾಳೆ ಕರಾವಳಿಯಷ್ಟೇ ಭಾರಿ ಮಳೆ

ಮಂಗಳವಾರದಂದು ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡು ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಸಮುದ್ರ ತೀರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version