ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲೂ ಮಳೆಯ ( Karnataka Rain) ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ದೋಬಿ ಹಳ್ಳ ಪ್ರವಾಹಕ್ಕೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗಿವೆ. ಮನೆಯಿಂದ ಹೊರಬರಲು ಆಗದೆ ಸಣ್ಣ ಬೋಟ್ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಶಾಲೆ, ಮದರಸ, ಸಂತೆ ಮಾರುಕಟ್ಟೆ, ಮನೆಗಳು ಜಲಾವೃತಗೊಂಡಿದೆ. ಸದ್ಯ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೋಟ್ ಬಳಕೆ ಮಾಡುವಂತಾಗಿದೆ.
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆಯು ಕೋಡಿ ಹೊಡೆದಿದೆ. ಪರಿಣಾಮ ಭತ್ತ ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭೂ ಕುಸಿದಿದೆ. ಮಲ್ಲೇಶ್ವರ ಗುಡ್ಡದಲ್ಲಿ ಭಾರಿ ಪ್ರಮಾಣದ ಧರೆ ಕುಸಿದು, ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಂದಿದೆ. 2019ರಲ್ಲಿ ಕುಸಿತ ಕಂಡಿದ್ದ ಸ್ಥಳದ ಸಮೀಪವೇ ಧರೆ ಕುಸಿದಿದೆ. ಬಾಳೆಹೊಳೆ, ಚನ್ನಹಡ್ಲು, ಬಾಳೆಹೊನ್ನೂರು ರಸ್ತೆಯಲ್ಲಿ ಘಟನೆ ನಡೆದಿದೆ.
ತುಂಗಾ ನದಿಯ ಅಬ್ಬರ ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದ್ದು, ಅಂಗಡಿ ಮಳಿಗಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ನಿಷೇಧ ಹೇರಲಾಗಿದೆ. ತಾತ್ಕಾಲಿಕವಾಗಿ ಸುಮಾರು 20ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ಕ್ಲೋಸ್ ಆಗಿವೆ. ಇನ್ನೂ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ.
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ರಾ.ಹೆ.173ರ ಚಾರ್ಮಾಡಿ ಘಾಟಿಯಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಚಿಕ್ಕಮಗಳೂರು-ಮಂಗಳೂರು ಮಾರ್ಗ ಸಂಪೂರ್ಣ ಬಂದ್ ಆಗಿದ್ದರಿಂದ ಕೊಟ್ಟಿಗೆಹಾರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಕಳೆದ ಮೂರು ದಿನದಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣ ಸೋಮವಾರ ರಾತ್ರಿಯಿಡೀ ಭಾರೀ ಮಳೆಗೆ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ಹರಿಯುತ್ತಿರೋ ನೀರಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಜಲಾವೃತವಾಗಿದೆ. ಟಿಪ್ಪರ್ ಲಾರಿ ಚಾಲಕ ಸೇತುವೆ ಮೇಲೆ ಸಂಚರಿಸಲು ಹೋಗಿ ಭಯಗೊಂಡು ವಾಪಾಸ್ ಆಗಿದ್ದಾರೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಇದನ್ನೂ ಓದಿ: Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!
ನೀರಿಗೆ ಜಿಗಿದು ವಿದ್ಯುತ್ ಸರಿಪಡಿಸಿದ ಹೆಸ್ಕಾಂ ಸಿಬ್ಬಂದಿ
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರಕ್ಕೆ ಚಿಕ್ಕೋಡಿ ಉಪವಿಭಾಗದ ನದಿಗಳು ಸಮುದ್ರದಂತಾಗಿದೆ. ಪ್ರವಾಹ ಸಮಯದಲ್ಲಿ ಹೆಸ್ಕಾಂ ಸಿಬ್ಬಂದಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಗ್ರಾಮದಲ್ಲಿ ನೀರಿನಲ್ಲಿ ಧುಮುಕಿ ವಿದ್ಯುತ್ ಸರಿಪಡಿಸಿದ್ದಾರೆ. ಆನಂದ ಹೆರವಾಡಿ ಹೆಸ್ಕಾಂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಬಳಿ ಇರುವ ಸೇತುವೆ ಜಲಾವೃತಗೊಂಡಿದೆ. ಅಥಣಿ ಗೋಕಾಕ್ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಕೃಷ್ಣಾ ನದಿ ದಂಡೆಯ 20 ಗ್ರಾಮಗಳಿಗೆ ನದಿ ನೀರು ಕಂಟಕ ಎದುರಾಗಿದೆ.
ಹಾಸನದಲ್ಲಿ ಶಾಲೆ ಜಲಾವೃತ
ಹಾಸನದಲ್ಲಿ ಮಳೆಯ ಅವಾಂತರ ಮುಂದುವರಿದಿದೆ. ಅರಕಲಗೂಡು ತಾಲೂಕಿನ ಯಗಟಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯು ಸಂಪೂರ್ಣ ಜಲಾವೃತಗೊಂಡಿತ್ತು. ಭಾರಿ ಮಳೆಗೆ ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ. ಮಠಸಾಗದ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತ ಗೊಂಡಿರುವುದರಿಂದ ಜನರು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಠಸಾಗರ-ಕೃಷ್ಣಾಪುರ-ಸಕಲೇಶಪುರ ರಸ್ತೆ ಮುಳುಗಡೆಯಿಂದಾಗಿ ರಸ್ತೆ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು, ಗ್ರಾಮಸ್ಥರ ಪರದಾಡಿದರು.
ಬೇಲೂರು ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಭಾರಿ ಮಳೆಗೆ ರಸ್ತೆಯು ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಳ್ಳಕ್ಕಿ-ಮೈಲಹಳ್ಳಿ-ಆಲೂರು-ಬೇಲೂರು-ಕೋನೇರ್ಲು ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಟ್ ಆಗಿದೆ. ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದೆ.
ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬೆಟ್ಟಿಗೇರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೆ ಜರಿದು ಕಾಂಕ್ರೀಟ್ ರಸ್ತೆ ಕುಸಿದು ಬೀಳುವ ಹಂತದಲ್ಲಿದೆ. ಶ್ರೀರಾಮ ಮತ್ತು ಶ್ರೀದೇವಿ ದೇವಸ್ಥಾನದ ರಸ್ತೆಯ ಸಮೀಪ ಬರೆ ಕುಸಿದು ಮಣ್ಣೆಲ್ಲ ಕೆಳಭಾಗದ ಗದ್ದೆಗೆ ಬಂದು ನಿಂತಿದೆ. ನಾಟಿಗೆ ತಯಾರಾಗಿದ್ದ ಭತ್ತದ ಗದ್ದೆಗೆ ಮಣ್ಣು, ನೀರು ನುಗ್ಗಿ ಅಪಾರ ಹಾನಿಯಾಗಿದೆ. 30 ಮನೆಗಳಿರುವ ಗ್ರಾಮಕ್ಕೆ ತೆರಳುವ ರಸ್ತೆ ಇದೀಗ ಅಪಾಯದಲ್ಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ