ಬೆಂಗಳೂರು: ಬೆಂಗಳೂರಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ನಿರಂತರ ಮಳೆಗೆ (Karnataka Rain) ಜನರು ಕಂಗಲಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ (School Holidays) ನಾಳೆ (ಬುಧವಾರ) ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಡಿಸಿ ಜಗದೀಶ್ ಮಾಹಿತಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಳೆ ಒಂದು ದಿನ ರಜೆ ನೀಡಲು ನಿರ್ಧಾರ ಮಾಡಲಾಗಿದೆ. ಮಳೆಯ ಸ್ಥಿತಿಗತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು. ಖಾಸಗಿ ಹಾಗೂ ಸರ್ಕಾರಿ ಎರಡೂ ಶಾಲಾ ಕಾಲೇಜಿಗೆ ರಜೆ ನೀಡಲು ನಿರ್ಧಾರ ಮಾಡಲಾಗಿದೆ.
ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ. ವೈಟ್ ಫೀಲ್ಡ್, ಮಾರತಹಳ್ಳಿ, ಸರ್ಜಾಪುರ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಡ್ರೈನೇಜ್ ಪೈಪ್ ಹೊಡೆದು ರಸ್ತೆ ಮಧ್ಯೆ ಮೋರಿ ನೀರು ಹಾರಿಯುತ್ತಿದೆ. ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇತ್ತ ಹಲಸೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಗುಪ್ತ ಲೇಔಟ್‌ನಲ್ಲಿ ಮ್ಯಾನ್ ಹೋಲ್ ಉಕ್ಕಿ ಹರಿದಿದೆ. ಭಾರಿ ಮಳೆಗೆ ಬನಶಂಕರಿ ಸಿಂಡಿಕೇಟ್ ಕಾಲೋನಿ ಸಮೀಪ ಮರವೊಂದು ನೆಲಕ್ಕೆ ಉರುಳಿದೆ. ಅದೃಷ್ಟವಶಾತ್ ಮಳೆ ಕಾರಣಕ್ಕೆ ಜನರ ಓಡಾಟ ಇರಲಿಲ್ಲ ಹೀಗಾಗಿ ಅನಾಹುತ ಸಂಭವಿಸಿಲ್ಲ.
ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ
ಹಂಪಿ ನಗರ 26 ಮಿ.ಮೀ, ಕೆಂಗೇರಿ 25.5 ಮಿ.ಮೀ, ಮಾರುತಿ ಮಂದಿರ 25 ಮಿ.ಮೀ, ದೊರೆಸಾನಿಪಾಳ್ಯ 21.5 ಮಿ.ಮೀ, ರಾಜರಾಜೇಶ್ವರಿ ನಗರ 19.5 ಮಿ.ಮೀ, ನಾಯಂಡಹಳ್ಳಿ 17 ಮಿ.ಮೀ, ನಂದಿನಿ ಲೇಔಟ್ 16.5 ಮಿ.ಮೀ, ಬಿಟಿಎಂ ಲೇಔಟ್ 16.5 ಮಿ.ಮೀ ಮಳೆಯಾಗಿದೆ.
ಡಿಸಿ ಕಚೇರಿ ಆವರಣದಲ್ಲಿರುವ ಹೋಟೆಲ್‌ಗೆ ಮಳೆ ನೀರು ನುಗ್ಗಿದ್ದರೆ, ಗುಟ್ಟಹಳ್ಳಿ ಸರ್ಕಲ್ ಬಳಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಮಾನ್ಯತಾ ಟೆಕ್ ಪಾರ್ಕ್‌ನ ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ಟೆಕ್ ಪಾರ್ಕ್‌ನ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಕೋಟಿ ಕೋಟಿ ಬೆಲೆ ಬಾಳುವ ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ.
ಬೆಳ್ಳಂದೂರು ಲೇಕ್ ರಸ್ತೆಯಲ್ಲಿ ಕೆಸರು ಮಯವಾಗಿತ್ತು. ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಕೆಸರಿನ ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರು ಪರದಾಡಿದರು. ಸುತ್ತ 2 ಕಿಲೋ ಮೀಟರ್ ಸಂಚಾರ ಸಾಧ್ಯ ಆಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಿಗ್ಗೆಯಿಂದ ಹಲವು ವಾಹನಗಳು ಕೆಟ್ಟು ನಿಂತು ಫಜೀತಿ ಉಂಟಾಗಿತ್ತು. ಆಳವಾದ ಗುಂಡಿ ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ರಸ್ತೆಯಲ್ಲಿ 4 ಅಡಿಯಷ್ಟು ನೀರು ನಿಂತಿತ್ತು. ಕೆ.ಆರ್ ವಿಧಾನಸಭಾ ಕ್ಷೇತ್ರದ ವಡ್ಡರಪಾಳ್ಯದ ಸಾಯಿ ಲೇಔಟ್‌ಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನಿಂದ ಮನೆಗಳು ಜಲಾವೃತಗೊಂಡಿದ್ದವು.
ಬೆಂಗಳೂರಿನ ಶಿವಾಜಿನಗರದ, ಬ್ರಹ್ಮಕುಮಾರಿ ವೃತ್ತ , ಸೆಪ್ಪಿಂಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆಯಲ್ಲಿ ಮೊಣಕಾಲುದ್ದ ನೀರು ತುಂಬಿದ್ದು, ಅಂಗಡಿ ಮುಂಗಟ್ಟುಗಳಿಗೆ ದೇವಸ್ಥಾನಗಳಿಗೆ ನೀರು ನುಗ್ಗಿದೆ. ವಾಹನಗಳ ಇಂಜಿನ್‌ಗೆ ನೀರು ನುಗ್ಗಿ ವಾಹನಗಳು ಕೆಟ್ಟೋ ರಸ್ತೆಯಲ್ಲೇ ನಿಂತು ಹೋಗುತ್ತಿವೆ. ಪಾಟರಿ ಟೌನ್ ಬಳಿಯ ಗಾಂಧಿ ಗ್ರಾಮದ ರಸ್ತೆಯಿಂದ ಟ್ಯಾನಿರೋಡ್‌ಗೆ ಸಂಪರ್ಕಿಸುವ ರಸ್ತೆ ಕರೆಯಂತಾಗಿದೆ. ಯಲಹಂಕದಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಮತ್ತೆ ಜಲಾವೃತಗೊಂಡಿದೆ.