ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಿದ್ದು, ವಾತಾವರಣ ಕೂಲ್ ಆಗಿದೆ. ಮಲ್ಲೇಶ್ವರಂ, ಶಾಂತಿನಗರ, ಶಿವಾಜಿನಗರ, ಹೆಬ್ಬಾಳ, ಜಯನಗರ ಸೇರಿದಂತೆ ನಸುಕಿನ ಜಾವದಿಂದ ಮಳೆ ಶುರುವಾಗಿದೆ. ಹಲವೆಡೆ ಮಂಜಿ ಹೊದಿಕೆ ಇದ್ದು, ದಿನವಿಡಿ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ನಾಲ್ಕು ದಿನ ಬೆಂಗಳೂರಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 17ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.
ಮಳೆಗೆ ರಸ್ತೆ ತಿರುವಿನಲ್ಲಿ ಟಿಟಿ ವಾಹನ ಪಲ್ಟಿ
ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ಘಟನೆ ನಡೆದಿದೆ. ಟಿಟಿ ವಾಹನದಲ್ಲಿ ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದರು. ಅನ್ನಪೂರ್ಣೇಶ್ವರಿ ದರ್ಶನ ಮುಗಿಸಿ ಹೊರಟಾಗ ಅವಘಡ ಸಂಭವಿಸಿದೆ. 15 ಜನ ಪ್ರಯಾಣಿಕರಲ್ಲಿ 9 ಜನರಿಗೆ ಗಾಯವಾಗಿದ್ದು ಕಳಸ, ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರದಲ್ಲೂ ಮಳೆಯಾಟ
ಬಂಗಾಳ ಕೊಲ್ಲಿ ಸೈಕ್ಲೋನ್ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ, ಆಂಧ್ರಪ್ರದೇಶದ ಗಡಿಗೆ ಹೊಂದಿರುವ ಕೋಲಾರದಲ್ಲಿ ಮಳೆಯಾಗುವ ಮುನ್ಸೂಚನೆ ಇದ್ದು, ಮಳೆ ಹೆಚ್ಚಾದರೆ ತೋಟಗಾರಿಕ ಬೆಳೆಗಳಾದ ಹೂ , ಬಿನ್ಸ್ ,ಟೊಮ್ಯಾಟೊ, ಜೋಳಕ್ಕೆ ಹಾನಿಯಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ