ಬೆಂಗಳೂರು ಗ್ರಾಮಾಂತರ: ಕಳೆದ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ (Karnataka Rain) ಬೆಂಗಳೂರು ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ನಾಲ್ಕೈದು ಗಂಟೆಗಳ ಕಾಲ ಸತತವಾಗಿ ಸುರಿದ ಮಳೆಗೆ (Bengaluru rain) ಬೆಂಗಳೂರು-ಹೊಸೂರು ಹೈವೆ ಕೆರೆಯಂತಾಗಿದೆ. ಬೆಂಗಳೂರು ಹೊಸೂರು ಹೆದ್ದಾರಿಯ ಸಿಲ್ಕ್ ಬೊರ್ಡ್ ಜಂಕ್ಷನ್‌ನಲ್ಲಿ ಮೂರ್ನಾಲ್ಕು ಅಡಿಗಳಷ್ಟು ಮಳೆ ನೀರು ನಿಂತಿದೆ.
ಜಲಾವೃತಗೊಂಡ ರಸ್ತೆಯ ನೀರಿನಲ್ಲಿಯೇ ಜನರು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೆದ್ದಾರಿ ಜಲಾವೃತದಿಂದಾಗಿ ಸೋಮವಾರ ಬೆಳಗ್ಗೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಜತೆಗೆ ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರು ಹೈರಾಣಾದರು. ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಳೆ ನೀರು ಹೊರಹೋಗಲು ಯಾವುದೇ ಸೂಕ್ತ ವ್ಯವಸ್ಥೆ ಇಲ್ಲ. ಇದರಿಂದಾಗಿ ರಸ್ತೆಯೆಲ್ಲ ಜಲಾವೃತಗೊಂಡಿತ್ತು. ಪ್ರತಿ ಬಾರಿ ಮಳೆ ಬಂದಾಗ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತಗೊಳ್ಳಲಿದೆ.
ಇದನ್ನೂ ಓದಿ: Heavy Rain: ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ; ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ
ಡ್ಯಾಡಿಸ್ ಗಾರ್ಡನ್ ಲೇಔಟ್‌ಗೆ ಜಲದಿಗ್ಬಂದನ
ಭಾರಿ ಮಳೆಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಕಮ್ಮಸಂದ್ರದ ಡ್ಯಾಡಿಸ್ ಗಾರ್ಡನ್ ಲೇಔಟ್‌ಗೆ ಜಲದಿಗ್ಬಂದನ ಹಾಕಲಾಗಿದೆ. ಕಳೆದ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ. ಮನೆಯಿಂದ ಹೊರಬರಲಾಗದೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಮನೆಗಳಿರುವ ಡ್ಯಾಡಿಸ್ ಗಾರ್ಡನ್ ಲೇಔಟ್‌ನಲ್ಲಿ ಮಳೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಅವಾಂತರವೇ ಸೃಷ್ಟಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ತಂಡ ದೌಡಾಯಿಸಿದ್ದು, ನಿವಾಸಿಗಳನ್ನು ಸುರಕ್ಷಿತವಾಗಿ ಮನೆಯಿಂದ ಹೊರಕರೆತರುತ್ತಿದ್ದಾರೆ.
ಕಾಲೇಜು ಆವರಣದಲ್ಲಿ ಜಲಾವೃತ
ಬೆಂಗಳೂರು ಗ್ರಾಮಾಂತರದ ಆನೇಕಲ್ ಪಟ್ಟಣದ ಗೋಪಾಲರಾಜು ಕಾಲೇಜು ಜಲಾವೃತಗೊಂಡಿದೆ. ಬೆಳಗಿನ ಜಾವ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪರದಾಡಿದರು. ಆನೇಕಲ್ ಪಟ್ಟಣದ ಏಕೈಕ ಸರ್ಕಾರಿ ಡಿಗ್ರಿ ಕಾಲೇಜು ಇದಾಗಿದ್ದು, ಮಳೆಗೆ ಕಾಲೇಜು ಒಳಗಡೆ ಹೋಗಲು ಆಗದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸಿದ್ದರು. ಪುರಸಭೆ ಅಧಿಕಾರಿಗಳು ಸರಿಪಡಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ